More

    ವೇಳೆಗೆ ಸರಿಯಾಗಿ ಬರುತ್ತಿಲ್ಲ, ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ

    ರಾಣೆಬೆನ್ನೂರ: ನಗರದ ಶಿಕ್ಷಕರ ಸಮುದಾಯ ಭವನದಲ್ಲಿ ಮಂಗಳವಾರ ತಾಪಂ ಸಾಮಾನ್ಯ ಸಭೆ ಜರುಗಿತು.

    ಭರಮಪ್ಪ ಊರ್ವಿು ಮಾತನಾಡಿ, ‘ತಾಲೂಕಿನ ದೇವರಗುಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ

    ಬರುತ್ತಿಲ್ಲ. ರೋಗಿಗಳಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ, ಔಷಧ ನೀಡುತ್ತಿಲ್ಲ. ದೇವರಗುಡ್ಡದ ಸುತ್ತಲೂ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಆರೋಗ್ಯ ಕೇಂದ್ರದಲ್ಲಿ ಸಕಾಲಕ್ಕೆ ವೈದ್ಯರು ಸಿಗದ ಕಾರಣ ಗಾಯಾಳುಗಳನ್ನು ಅನಿವಾರ್ಯವಾಗಿ ರಾಣೆಬೆನ್ನೂರಿಗೆ ಕರೆತರಬೇಕು. ಹೀಗಾಗಿ, ವೈದ್ಯರನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದರು.

    ಕರಿಯಪ್ಪ ತೋಟಗೇರ ಮಾತನಾಡಿ, ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿಯೊಂದು ಔಷಧವನ್ನು ಹೊರಗಡೆ ಬರೆದುಕೊಡಲಾಗುತ್ತಿದೆ. ಎಕ್ಸರೆ, ಡಯಾಲಿಸಿಸ್ ಘಟಕಗಳಿದ್ದರೂ ಬಳಸುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಸ್ಥಾಯಿ ಸಮಿತಿ ಅಧ್ಯಕ್ಷೆ ಜ್ಯೋತಿ ಗಂಜಾಮದ ಮಾತನಾಡಿ, ಹೆರಿಗೆ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಆರೋಪಿಸಿದರು.

    ಉತ್ತರಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ. ಕಾಂತೇಶ ಭಜಂತ್ರಿ, ದೇವರಗುಡ್ಡ ಕೇಂದ್ರದ ವೈದ್ಯರಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಆದರೂ ಅವರ ಬಗ್ಗೆ ದೂರು ಬಂದರೆ ಕ್ರಮ ಜರುಗಿಸಲಾಗುವುದು. ಎಕ್ಸರೆ ಹಾಗೂ ಡಯಾಲಿಸಿಸ್ ಘಟಕದಲ್ಲಿ ತಜ್ಞರ ಕೊರತೆಯಿದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಹೆರಿಗೆ ಆಸ್ಪತ್ರೆಯ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗುವುದು ಎಂದರು.

    ತನಿಖೆ ನಡೆಸಿ: ಜಿಲ್ಲಾ ಪಂಚಾಯಿತಿ ಇಂಜಿನಿಯರ್ ವಿಭಾಗದಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ 49.38 ಲಕ್ಷ ರೂಪಾಯಿ ವೆಚ್ಚದಲ್ಲಿ ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿದೆ. ಆದರೆ, ದೀಪ ಅಳವಡಿಕೆ ಕುರಿತು ಬೇರೆ ಬೇರೆ ರೀತಿಯಲ್ಲಿ ಖರ್ಚು ತೋರಿಸಲಾಗಿದೆ. ಗುತ್ತಿಗೆದಾರರು ಒಬ್ಬರೇ ಆದರೂ ಬಿಲ್​ನಲ್ಲಿ ಏಕೆ ವ್ಯತ್ಯಾಸ ? ಈ ಕುರಿತು ತನಿಖೆ ನಡೆಸಬೇಕು ಎಂದು ನೀಲಕಂಠಪ್ಪ ಕೂಸಗೂರ ಒತ್ತಾಯಿಸಿದರು.

    ಉತ್ತರಿಸಿದ ಎಇಇ ರಾಮಣ್ಣ, ಇದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿಯಿಲ್ಲ. ಬೇಕಾದರೆ ತನಿಖೆ ಮಾಡಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಿ ಎಂದರು.

    ಅಧ್ಯಕ್ಷೆ ಗೀತಾ ಲಮಾಣಿ, ಉಪಾಧ್ಯಕ್ಷೆ ಕಸ್ತೂರೆವ್ವ ಹೊನ್ನಾಳಿ, ಇಒ ಟಿ.ಆರ್. ಮಲ್ಲಾಡದ, ನಿರ್ದೇಶಕ ಅಶೋಕ ನಾರಜ್ಜಿ ಹಾಗೂ ತಾಲೂಕು ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು ಇದ್ದರು.

    ಜಾಗೃತಿ ಮೂಡಿಸಿ

    ಗ್ರಾಮೀಣ ಭಾಗದಲ್ಲಿ 24*7 ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿ ನಡೆಯುತ್ತಿದೆ. ಕೆಲವೆಡೆ ಹಳೇ ಪೈಪ್​ಗಳನ್ನೇ ಅಳವಡಿಸಲಾಗುತ್ತಿದೆ. ಹೀಗಾದರೆ ಮುಂದಿನ ದಿನದಲ್ಲಿ ಸಮಸ್ಯೆಯಾಗುತ್ತದೆ ಎಂದು ಕರಿಯಪ್ಪ ತೋಟಗೇರ ಹೇಳಿದರು. ಪ್ರತಿಕ್ರಿಯಿಸಿದ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಎಇಇ ಮಾಲತೇಶ, ಪೈಪ್​ಗಳು ಗಟ್ಟಿಯಾಗಿರುವ ಭಾಗದಲ್ಲಿ ಹಳೇ ಪೈಪ್​ಗಳನ್ನೇ ಬಳಸುತ್ತಿದ್ದೇವೆ. ಸಂಪೂರ್ಣ ಹಾಳಾದ ಭಾಗದಲ್ಲಿ ಹೊಸ ಪೈಪ್ ಹಾಕುತ್ತಿದ್ದೇವೆ ಆದರೆ, ಕೆಲ ಗ್ರಾಮಗಳಲ್ಲಿ ಹೊಸ ಪೈಪ್ ಹಾಕಿದರೆ ಮೀಟರ್ ಅಳವಡಿಸುತ್ತಾರೆ ಎಂಬ ಕಾರಣಕ್ಕೆ ಜನರೇ ವಿರೋಧ ಮಾಡುತ್ತಿದ್ದಾರೆ ಎಂದರು. ಹಾಗಾದರೆ ಕಾಮಗಾರಿ ಮುನ್ನವೇ ಜನರಲ್ಲಿ ಮೀಟರ್ ಬಗ್ಗೆ ಜಾಗೃತಿ ಮೂಡಿಸಿ ಎಂದು ಕರಿಯಪ್ಪ ಹೇಳಿದರು.

    ಧರಣಿಗೆ ಬೆಂಬಲ ಎಚ್ಚರಿಕೆ

    ತಾಲೂಕಿನ ಬೆನಕನ ಕೊಂಡ-ಹೆಡಿಯಾಲ ಸಂಪರ್ಕ ರಸ್ತೆ ನಿರ್ವಿುಸಿ ಒಂದೂವರೆ ತಿಂಗಳು ಕಳೆಯುವ ಮುನ್ನವೇ ಸಂಪೂರ್ಣ ಹಾಳಾಗಿ ಹೋಗಿದೆ. ರಸ್ತೆ ಸರಿಪಡಿಸದಿದ್ದರೆ ಧರಣಿ ನಡೆಸುವುದಾಗಿ ಜನ ಹೇಳುತ್ತಿದ್ದಾರೆ. ಕೂಡಲೆ ರಸ್ತೆ ದುರಸ್ತಿ ಪಡಿಸದಿದ್ದರೆ, ಜನರ ಜತೆಗೆ ನಾನೂ ಧರಣಿ ಮಾಡಬೇಕಾಗುತ್ತದೆ ಎಂದು ಮಂಗಳಾ ಹೊಟ್ಟಿಗೌಡ್ರ ಎಚ್ಚರಿಸಿದರು. ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಬ್ಯಾಡಗಿ ಎಇಇ ಕೆ. ರಾಜಪ್ಪ, ಮಳೆಯಿಂದ ರಸ್ತೆ ಹಾಳಾಗಿದೆ. ಸರಿಪಡಿಸಲು ಗುತ್ತಿಗೆದಾರರಿಗೆ ತಿಳಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts