More

    ಪಾಲ್ಗಾರ್​ನಲ್ಲಿ ನಡೆದ ಸಾಧುಗಳ ಗುಂಪು ಹತ್ಯೆ: ಬಂಧಿತರಾದ 101 ಜನರಲ್ಲಿ ಒಬ್ಬೇ ಒಬ್ಬ ಬೇರೆ ಧರ್ಮದವನೂ ಇಲ್ಲ ಎಂದ ಮಹಾ ಗೃಹಸಚಿವ

    ಮುಂಬೈ: ಮಹಾರಾಷ್ಟ್ರದ ಪಾಲ್ಗಾರ್ ಜಿಲ್ಲೆಯ ಗಡ್ಚಿಂಚಾಲೆಯಲ್ಲಿ ಇತ್ತೀಚೆಗೆ ಪೊಲೀಸರ ಎದುರಲ್ಲೇ ಇಬ್ಬರು ಸಾಧುಗಳು ಸೇರಿ ಮೂವರನ್ನು ಗ್ರಾಮಸ್ಥರು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ್ದರು. ಅವರನ್ನು ಮಕ್ಕಳ ಕಳ್ಳರೆಂದು ಭಾವಿಸಿದ ಜನರು ಈ ದುಷ್ಕೃತ್ಯ ನಡೆಸಿದ್ದರು.

    ದುರ್ಘಟನೆಯ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಬೆನ್ನಲ್ಲೇ ದೇಶದೆಲ್ಲೆಡೆಯಿಂದ ಖಂಡನೆ ವ್ಯಕ್ತವಾಗಿತ್ತು. ಘಟನೆಗೆ ಸಂಬಂಧಪಟ್ಟಂತೆ ವರದಿ ನೀಡುವಂತೆ ಕೇಂದ್ರ ಸರ್ಕಾರ ಮಹಾರಾಷ್ಟ್ರ ಸರ್ಕಾರವನ್ನು ಕೇಳಿತ್ತು.

    ಇದೀಗ ಈ ದೊಂಬಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸುಮಾರು 101 ಜನರನ್ನು ಬಂಧಿಸಲಾಗಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್​ ದೇಶ್​ಮುಖ್​ ತಿಳಿಸಿದ್ದಾರೆ.

    101 ಮಂದಿಯನ್ನು ಬಂಧಿಸಿ, ಪ್ರಕರಣ ದಾಖಲು ಮಾಡಲಾಗಿದೆ. ಈ ಹಲ್ಲೆಕೋರರಲ್ಲಿ ಒಬ್ಬೇ ಒಬ್ಬ ಅಲ್ಪಸಂಖ್ಯಾತ ಸಮುದಾಯದವನೂ ಇಲ್ಲ. ರಾಜ್ಯದ ಸಿಐಡಿ ಅಧಿಕಾರಿಗಳು ತನಿಖೆ ಪ್ರಾರಂಭ ಮಾಡಿದ್ದಾರೆ. ಆರೋಪಿಗಳ ಹೆಸರನ್ನು ಶೀಘ್ರದಲ್ಲೇ ಬಹಿರಂಗ ಪಡಿಸುತ್ತೇವೆ. ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.

    ಸಾಧುಗಳ ಹತ್ಯೆಗೆ ಕೆಲವು ರಾಜಕಾರಣಿಗಳು ಕೋಮು ಹಿಂಸಾಚಾರದ ರೂಪ ನೀಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಬಂಧಿತರಾದವರಲ್ಲಿ ಯಾರೊಬ್ಬರೂ ಬೇರೆ ಸಮುದಾಯದ, ಧರ್ಮದ ಜನರು ಇಲ್ಲ ಎಂದು ಸ್ಪಷ್ಟಪಡಿಸಿದ ಅನಿಲ್​ ದೇಶ್​ಮುಖ್​ ಪರೋಕ್ಷವಾಗಿ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

    ಮಹಾರಾಷ್ಟ್ರದ ಈ ದುರ್ಘಟನೆ ನಡೆದ ಬಳಿಕೆ ಅಲ್ಲಿನ ಪ್ರತಿಪಕ್ಷ ಬಿಜೆಪಿ, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತ್ತು. ಗೃಹ ಸಚಿವ ಅನಿಲ್​ ದೇಶ್​ಮುಖ್​ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿತ್ತು. ಏ.16ರಂದು ಕಲ್ಪವೃಕ್ಷ ಗಿರಿ (70), ಸುಶೀಲ್​ ಗಿರಿ (35) ಎಂಬ ಸಾಧುಗಳು ತಮ್ಮ ಗುರು ಮಹಾಂತ್​ ಶ್ರೀ ರಾಮ ಗಿರಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ಸಲುವಾಗಿ ಮುಂಬೈನಿಂದ ಸೂರತ್​ಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಅದರ ಚಾಲಕ ನೀಲೇಶ್​ ತೆಲ್ಗಾಡೆ (30).

    ಆದರೆ ಮಹಾರಾಷ್ಟ್ರದ ಪಾಲ್ಗಾರ್​​ನಿಂದ 110 ಕಿ.ಮೀ.ದೂರದಲ್ಲಿರುವ ಗಡ್ಚಿಂಚಾಲೆ ಎಂಬ ಗ್ರಾಮಕ್ಕೆ ಬಂದವರಿಗೆ ಭೀಕರ ಸನ್ನಿವೇಶ ಎದುರಾಯಿತು. ಅವರೆಲ್ಲ ಮಕ್ಕಳ ಕಳ್ಳರೆಂದು ಭಾವಿಸಿದ ಗ್ರಾಮಸ್ಥರು, ಮೂವರನ್ನೂ ಕಾರಿನಿಂದ ಬಲವಂತವಾಗಿ ಹಿಡಿದು, ಎಳೆದು ದೊಣ್ಣೆಯಿಂದ ಹೊಡೆದರು. ಪೊಲೀಸರು ಆಗಮಿಸಿದರೂ ಕೂಡ ಅವರ ರಕ್ಷಣೆ ಸಾಧ್ಯವಾಗಲಿಲ್ಲ. ಪೊಲೀಸರ ಎದುರಲ್ಲೇ ಮೂವರ ಪ್ರಾಣವೂ ಹೋಗಿತ್ತು. ಈ ಅಮಾನವೀಯ ಘಟನೆಗೆ ದೇಶವೇ ನಡುಗಿತ್ತು. (ಏಜೆನ್ಸೀಸ್​)

    ಕಪ್ಪು ಬಣ್ಣಕ್ಕೆ ತಿರುಗಿ ಶಾಕ್‌ ಮೂಡಿಸಿರುವ ಬಿಳಿ ವೈದ್ಯರು! ಕರೊನಾದಿಂದ ಗುಣವಾದರೂ ಕಾಡಲಿದೆಯೇ ಸಮಸ್ಯೆ- ವೈದ್ಯರ ಮುಂದಿದೆ ಭಾರಿ ಸವಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts