More

    ಕಪ್ಪು ಬಣ್ಣಕ್ಕೆ ತಿರುಗಿ ಶಾಕ್‌ ಮೂಡಿಸಿರುವ ಬಿಳಿ ವೈದ್ಯರು! ಕರೊನಾದಿಂದ ಗುಣವಾದರೂ ಕಾಡಲಿದೆಯೇ ಸಮಸ್ಯೆ- ವೈದ್ಯರ ಮುಂದಿದೆ ಭಾರಿ ಸವಾಲು

    ವುಹಾನ್‌: ದೇಹವನ್ನು ಹೊಕ್ಕಿ ನಾನಾ ರೂಪದಲ್ಲಿ ಹಿಂಸೆ ನೀಡುವ ಕರೊನಾ ವೈರಸ್‌ ಅನ್ನು ದೇಹದೊಳಗಿಂದ ವೈದ್ಯರು ಕಿತ್ತೆಸೆದರೂ, ರೋಗಿ ಗುಣಮುಖರಾದಂತೆ ಕಂಡರೂ ಪುನಃ ಸೋಂಕು ತಗುಲಿರುವ ಬಗ್ಗೆ ಅನೇಕ ವರದಿಗಳು ಬರುತ್ತಲೇ ಇವೆ. ಇದು ಸೋಂಕಿತರು ಮಾತ್ರವಲ್ಲದೇ ವೈದ್ಯ ಸಮೂಹದಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿರುವ ಬೆನ್ನಲ್ಲೇ, ಇನ್ನೊಂದು ಆಘಾತಕಾರಿ ವರದಿ ಕರೊನಾ ಸೋಂಕಿನ ತವರು ಚೀನಾದ ವುಹಾನ್‌ನಿಂದ ಹೊರಬಿದ್ದಿದೆ.

    ಸೋಂಕು ಪೀಡಿತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅನೇಕ ವೈದ್ಯರೂ ಇಲ್ಲಿ ಸೋಂಕಿಗೆ ಗುರಿಯಾಗಿದ್ದರು. ಆ ಪೈಕಿ ಇಬ್ಬರು ವೈದ್ಯರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಆದರೆ ಬಿಳಿ ಬಣ್ಣದ ತ್ವಚೆ ಹೊಂದಿದ್ದ ಈ ವೈದ್ಯರಿಬ್ಬರೂ ಈಗ ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿದ್ದಾರೆ. ಇವರ ಇಡೀ ದೇಹ ಕಪ್ಪು ಬಣ್ಣಕ್ಕೆ ತಿರುಗಿದ್ದು, ಇದೀಗ ಇಡೀ ವೈದ್ಯ ಸಮೂಹವನ್ನು ಬೆಚ್ಚಿ ಬೀಳಿಸಿದೆ. ಕರೊನಾ ಸೋಂಕಿನಿಂದ ಗುಣಮುಖರಾದ ಮೇಲೂ ದೇಹದಲ್ಲಿ ಏನೆಲ್ಲಾ ಸಮಸ್ಯೆಗಳು ತಲೆದೋರಬಹುದು ಎಂಬ ಬಗ್ಗೆ ಇಲ್ಲಿ ವೈದ್ಯಕೀಯ ವಲಯವೀಗ ಚರ್ಚಿಸುತ್ತಿದೆ.

    ಕಳೆದ ಜನವರಿಯಲ್ಲಿ ವುಹಾನ್‌ ಸೆಂಟ್ರಲ್‌ ಆಸ್ಪತ್ರೆಯಲ್ಲಿ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಡಾ. ಯಿ ಫ್ಯಾನ್‌ ಮತ್ತು ಡಾ. ಹು ವೈಫೆಂಗ್‌ ಎಂಬುವವರಿಗೆ ಸೋಂಕು ತಗುಲಿತ್ತು. ಉಸಿರಾಟದ ತೊಂದರೆ ಅನುಭವಿಸಿದ ಕಾರಣ, ಕೃತಕ ಉಸಿರಾಟದ ನೆರವಿನಿಂದ ಇಬ್ಬರೂ ಬದುಕುಳಿದಿದ್ದರು. ಇಬ್ಬರೂ ಗುಣಮುಖರಾಗಿದ್ದರು. ಆದರೆ ಅವರ ದೇಹದ ಚರ್ಮ ಕಪ್ಪು ಬಣ್ಣಕ್ಕೆ ತಿರುಗತೊಡಗಿತ್ತು. ಇದೀಗ ಸಂಪೂರ್ಣ ದೇಹ ಕಪ್ಪಾಗಿದೆ.

    ಕರೊನಾ ಸೋಂಕು ದೇಹವನ್ನು ಒಮ್ಮೆಲೆ ಹೊಕ್ಕರೆ ಅದರಿಂದ ಹೊರಬರಲು ಎಷ್ಟರಮಟ್ಟಿಗೆ ಪರಿತಪಿಸಬೇಕು ಎಂಬ ಕಠೋರ ಸತ್ಯವನ್ನು ಸೋಂಕು ಪೀಡಿತರು ಅನುಭವಿಸುತ್ತಿದ್ದಾರೆ. ಆದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೊಂದಿರುವವರು ಬಲು ಬೇಗನೇ ಗುಣಮುಖರಾದರೆ, ಕಡಿಮೆ ಶಕ್ತಿ ಹೊಂದಿರುವವರು ಗುಣಮುಖರಾಗಲು ವಿಳಂಬವಾಗುತ್ತದೆ. ಆದರೆ ವೈರಸ್‌ ಪೀಡಿತರು ಗುಣಮುಖರಾದರೂ ಅವರ ಆರೋಗ್ಯ ಸ್ಥಿತಿ ಮೊದಲಿನಂತೆಯೇ ಚೆನ್ನಾಗಿರುತ್ತದೆಯೇ ಅಥವಾ ಸೋಂಕಿನಿಂದ ಮುಕ್ತರಾಗಲು ಕೊಟ್ಟಿರುವ ಹೈಡೋಸೇಜ್‌ಗಳು ಇನ್ನೂ ಅನೇಕ ವರ್ಷ ದೇಹಕ್ಕೆ ತೊಂದರೆ ನೀಡುತ್ತವೆಯೋ ಎಂಬ ಬಗ್ಗೆ ಈ ವೈದ್ಯರನ್ನು ನೋಡಿದ ಬಳಿಕ ಚಿಂತೆಗೀಡು ಮಾಡಿದೆ ಎಂದಿದೆ ವೈದ್ಯ ಸಮೂಹ.

    ವೈರಾಣು ಶ್ವಾಸಕೋಶವನ್ನು ಹಾನಿಗೊಳಿಸಿರುವುದೇ ಚರ್ಮ ಕಪ್ಪಾಗಲು ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿದ್ದರೂ ಈ ನಿಟ್ಟಿನಲ್ಲಿ ಅಧ್ಯಯನ ಶುರುವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ವೈದ್ಯರು, ‘ಸೋಂಕಿಗೆ ತುತ್ತಾದ ಸಂದರ್ಭದಲ್ಲಿ ವೈರಾಣು ಶ್ವಾಸಕೋಶಕ್ಕೆ ತೀವ್ರ ಹಾನಿ ಮಾಡಿತ್ತು. ಇದರಿಂದ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾಗಿದೆ. ಇದರಿಂದ ಈ ರೀತಿ ಆಗಿದೆ. ಸೋಂಕಿತರ ಶ್ವಾಸಕೋಶಕ್ಕೆ ಆಗಿರುವ ಹಾನಿ ಗುಣವಾಗದೇ ಇದ್ದರೆ, ಸೋಂಕಿತರು ಗುಣ ಮುಖರಾದವರೂ ಪ್ರಾಣಾಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಇದರಿಂದ ತಿಳಿದಿದೆ’ ಎಂದಿದ್ದಾರೆ. (ಏಜೆನ್ಸೀಸ್‌)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts