More

    ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಆದ್ಯತೆ- ಸಚಿವ ಜಗದೀಶ ಶೆಟ್ಟರ್ ಹೇಳಿಕೆ

    ಕೊಪ್ಪಳ: ಕೈಗಾರಿಕೆಗಳೆಲ್ಲ ಬೆಂಗಳೂರು ಕೇಂದ್ರೀಕೃತವಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು. ತಾಲೂಕಿನ ಬಸಾಪುರ ಬಳಿಯ 104 ಎಕರೆ ಕೈಗಾರಿಕಾ ವಸಾಹತುವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

    ಕೈಗಾರಿಕೆಗಳಿಗೆ ನಮ್ಮ ಸರ್ಕಾರ ಆದ್ಯತೆ ನೀಡಿದ್ದು, ಬೆಂಗಳೂರು ಹೊರತುಪಡಿಸಿ ಇತರ ಜಿಲ್ಲೆಯಲ್ಲಿ ಕೈಗಾರಿಕೆ ಅಭಿವೃದ್ಧಿ ಮಾಡಲಾಗುವುದು. ಹೊಸ ಕೈಗಾರಿಕಾ ನೀತಿ ರೂಪಿಸಿದ್ದು, ಹಿಂದುಳಿದ ತಾಲೂಕುಗಳಿಗೆ ಆದ್ಯತೆ ನೀಡಲಾಗುವುದು. ಉದ್ಯಮಕ್ಕೆ ಸಂಬಂಧಿಸಿದಂತೆ ಸಭೆ, ವಿಚಾರ ಸಂಕಿರಣ ಸೇರಿ ಇತರ ಚಟುವಟಿಕೆ ಬೆಂಗಳೂರಿಗೆ ಸೀಮಿತವಾಗಿವೆ. ಹೀಗಾಗಿ ಹುಬ್ಬಳ್ಳಿಯಲ್ಲಿ ಫೆ.14ರಂದು ಹೂಡಿಕೆದಾರರ ಸಭೆ ನಡೆಸಲಾಗಿತ್ತು. ಉತ್ತಮ ಸ್ಪಂದನೆ ದೊರೆತಿದ್ದು, 72 ಸಾವಿರ ಕೋಟಿ ರೂ. ಬಂಡವಾಳ ಹೂಡಲು ಉದ್ಯಮಿಗಳು ಮುಂದೆ ಬಂದಿದ್ದಾರೆ. ಕಾರ್ಖಾನೆಗಳು ಸ್ಥಳೀಯರಿಗೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ. ಈ ಬಗ್ಗೆ ಸರ್ಕಾರ ಸಹ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಬಸಾಪುರದಲ್ಲಿ 104 ಎಕರೆಯಲ್ಲಿ ವಸಾಹತು ನಿರ್ಮಿಸಲಾಗಿದೆ. 74 ಅರ್ಜಿ ಬಂದಿದ್ದು, ಮತ್ತೊಮ್ಮೆ ಅರ್ಜಿ ಕರೆದು ಉದ್ದಿಮೆದಾರರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.

    ಸಂಸದ ಸಂಗಣ್ಣ ಕರಡಿ ಮಾತನಾಡಿ, ಕೃಷಿ ಚಟುವಟಿಕೆಯೊಡನೆ ಕೈಗಾರಿಕೆ ಅಭಿವೃದ್ಧಿ ಮಾಡಬೇಕಿದೆ. ನಾವು ಸ್ವಾವಲಂಬಿಗಳಾಗಬೇಕಾಗಿರುವುದರಿಂದ ನಮ್ಮದೇ ಕೈಗಾರಿಕೆಗಳನ್ನು ಬೆಳೆಸಬೇಕು. ಜಿಲ್ಲೆಯಲ್ಲಿ ಕೈಗಾರಿಕಾ ಅಭಿವೃದ್ಧಿ ನಿಗಮದ ಪ್ರಾದೇಶಿಕ ಕಚೇರಿ ಆರಂಭಿಸಬೇಕು. ನಮ್ಮಲ್ಲಿ ಕೌಶಲ ತರಬೇತಿ ಕೇಂದ್ರವಿದ್ದು, ಅದರ ಸದ್ಬಳಕೆಯಾಗಲು ಯೋಜನೆ ರೂಪಿಸಬೇಕು. ಜಿಲ್ಲೆಯಲ್ಲಿನ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುತ್ತಿಲ್ಲ. ಈ ಬಗ್ಗೆ ಸಚಿವರು ಗಮನಹರಿಸಿ, ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಒತ್ತಾಯಿಸಿದರು.

    ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ, ನಮ್ಮ ಭಾಗದಲ್ಲಿ ಹೆಚ್ಚು ಸ್ಟೀಲ್ ಕಾರ್ಖಾನೆಗಳಿದ್ದು, ಇಲ್ಲಿ ಸ್ಟೀಲ್ ಪಾರ್ಕ್ ಘೋಷಿಸಬೇಕೆಂದು ಒತ್ತಾಯಿಸಿದರು. ತಾಪಂ ಅಧ್ಯಕ್ಷ ಬಾಲಚಂದ್ರನ್, ಮುಖಂಡರಾದ ಅಮರೇಶ ಕರಡಿ, ಸಿ.ವಿ.ಚಂದ್ರಶೇಖರ್, ಡಿಸಿ ಪಿ.ಸುನಿಲ್‌ಕುಮಾರ್, ತಹಸೀಲ್ದಾರ್ ಜೆ.ಬಿ.ಮಜ್ಗಿ, ಕೆಎಸ್‌ಎಸ್‌ಐಡಿಸಿ ಮುಖ್ಯ ಅಭಿಯಂತ ಜಗದೀಶ, ಜಿಲ್ಲಾ ಕೈಗಾರಿಕೆ ಇಲಾಖೆ ಜೆಡಿ ಪ್ರಶಾಂತ ಸೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts