More

    ಉ.ಕ. ಭಾಗಕ್ಕೆ ಬೇಕಿದೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

    ಬೆಳಗಾವಿ: ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿ, ಕೃಷಿ, ಶಿಕ್ಷಣ, ವೈದ್ಯಕೀಯ ಹಾಗೂ ಕೈಗಾರಿಕೆ ಸೇರಿ ಇತರ ಕ್ಷೇತ್ರಗಳ ಸಮಗ್ರ ಹಿತ ದೃಷ್ಟಿಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ಒಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅವಶ್ಯಕತೆಯಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

    ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬಿಜೆಪಿ ಜಿಲ್ಲಾ ಘಟಕ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾದರಿಯಲ್ಲಿಯೇ ಉತ್ತರ ಕರ್ನಾಟಕ ಭಾಗದಲ್ಲಿ ಒಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಬೇಕು ಎಂಬ ಬೇಡಿಕೆಯಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ, ಸಂಬಂಧಿಸಿದ ಸಚಿವರ ಗಮನಕ್ಕೆ ತರಲಾಗಿದೆ ಎಂದರು.

    ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ವಾಣಿಜ್ಯ ವಹಿವಾಟು ಚಟುವಟಿಕೆಗಳ ಕೇಂದ್ರವಾಗಿರುವ ಹುಬ್ಬಳ್ಳಿ ಅಥವಾ ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಗಬೇಕು ಎಂದು ಬಹುದಿನಗಳ ಬೇಡಿಕೆಯಿದೆ. ಇದಕ್ಕೆ ಸಾವಿರಾರು ಎಕರೆ ಭೂಮಿ ಬೇಕು. ಜತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು.

    ಈಗಾಗಲೇ ಬೆಳಗಾವಿ ಜಿಲ್ಲೆಯ ಜನರು ರಾಷ್ಟ್ರೀಯ ಹೆದ್ದಾರಿ, ವಿಶ್ವವಿದ್ಯಾಲಯಗಳಿಗೆ, ಕೈಗಾರಿಕೆ ಪ್ರದೇಶಗಳಿಗೆ, ಸುವರ್ಣ ಸೌಧದ ನಿರ್ಮಾಣಕ್ಕೆ, ಸಾಂಬ್ರಾ ವಿಮಾನ ನಿಲ್ದಾಣ ವಿಸ್ತರಣೆ, ರೈಲ್ವೆ ಸೇರಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸಾವಿರಾರು ಎಕರೆ ಜಮೀನು ನೀಡಿದ್ದಾರೆ. ಇದೀಗ ಮತ್ತೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೂಮಿ ಕೇಳಿದರೆ ಜನರು ನಮ್ಮ ವಿರುದ್ಧ ಆಕ್ರೋಶಗೊಳ್ಳುತ್ತಾರೆ.

    ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿಯೇ ಸಾಕಷ್ಟು ಭೂಮಿ ಲಭ್ಯವಿದ್ದು, ಅಲ್ಲಿಯೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೂಕ್ತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಹಲವು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಬೆಳಗಾವಿ-ಧಾರವಾಡ ನೇರ ರೈಲು ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೂಮಿ ನೀಡುವುದಾಗಿ ಘೋಷಿಸಿರುವುದು ಸಂತೋಷದ ವಿಷಯ.

    ಬೆಳಗಾವಿ, ಹುಬ್ಬಳ್ಳಿ ಮತ್ತು ಧಾರವಾಡ ಮೂರು ನಗರಗಳಿಗೆ ಕೈಗಾರಿಕೆ ಕಾರಿಡಾರ್ ನಿರ್ಮಾಣ ಮಾಡಲಾಗುವುದು. ಇದರಿಂದ ಹಲವಾರು ವಾಣಿಜ್ಯ ಚಟುವಟಿಕಗಳು ಒಂದು ಪ್ರದೇಶದಲ್ಲಿ ಒಗ್ಗೂಡುತ್ತವೆ. ಆಗ ಸುತ್ತಲಿನ ಪ್ರದೇಶದಲ್ಲಿ ಕಚೇರಿ ಮತ್ತು ವಸತಿ ಕ್ಷೇತ್ರಗಳು ವೇಗವಾಗಿ ಪ್ರಗತಿ ಕಾಣುತ್ತವೆ. ಲಕ್ಷಾಂತರ ಜನರಿಗೆ ಉದ್ಯೋಗ ಅವಕಾಶಗಳು ಸಿಗುತ್ತವೆ.

    ಬೆಳಗಾವಿ-ದೆಹಲಿ ನಡುವೆ ನೇರ ವಿಮಾನ ನಿಲ್ದಾಣ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುತ್ತಿದ್ದು, ಶೀಘ್ರದಲ್ಲಿ ಕಾರ್ಯರೂಪಕ್ಕೆ ತರಲಾಗುವುದು ಎಂದು ಹೇಳಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ನಗರ ಘಟಕದ ಅಧ್ಯಕ್ಷ ಶಶಿ ಪಾಟೀಲ, ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಮಗದ ಅಧ್ಯಕ್ಷ ಮುಕ್ತಾರ ಪಠಾಣ, ಮಾಜಿ ಮೇಯರ್ ಶಿವಾಜಿ ಸುಂಟಕರ್, ಮಹೇಶ ಮೊಹಿತೆ ಇತರರು ಇದ್ದರು.

    ಮೇಕ್ ಇನ್ ಇಂಡಿಯಾಗೆ ಅವಕಾಶ

    ಜಗತ್ತಿನಲ್ಲಿ ಉತ್ಪಾದನೆ ಕ್ಷೇತ್ರ ಕುಸಿಯುತ್ತಿದ್ದು, ಇಂತಹ ಸಂದರ್ಭದಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯಡಿ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆ ಸ್ಥಾಪನೆ ಮಾಡುವವರಿಗೆ ಒಳ್ಳೆಯ ಅವಕಾಶಗಳಿವೆ. ಸ್ವಂತ ಉತ್ಪಾದನೆ ಮಾಡಿ ವಿದೇಶಗಳಿಗೆ ರಫ್ತು ಮಾಡಲು ಅವಕಾಶವಿದ್ದು, ಯುವ ಉದ್ದಿಮೆದಾರರು ಸದುಪಯೋಗ ಪಡಿಸಿಕೊಳ್ಳಬೇಕು. ಕೇಂದ್ರ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ ಎಂದು ಸಚಿವ ಸುರೇಶ ಅಂಗಡಿ ತಿಳಿಸಿದರು.

    ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ 2022ರ ವೇಳೆಗೆ ಬಡವರಿಗೆ ಸ್ವಂತ ಸೂರನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬಡವರು ವಾಸಿಸಲು ಸ್ವಂತ ಸೂರು ಕಲ್ಪಿಸಲಾಗುತ್ತಿದೆ.
    | ಸುರೇಶ ಅಂಗಡಿ, ರೈಲ್ವೆ ಖಾತೆ ರಾಜ್ಯ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts