More

    ಸಹಕಾರ ವ್ಯವಸ್ಥೆಗೆ ಅಧಿಕಾರಿಗಳಿಂದ ಅಸಹಕಾರ

    ಕೋಲಾರ: ಸಹಕಾರ ರಂಗದ ಸೌಲಭ್ಯಗಳನ್ನು ಸಮಾಜದ ಕಟ್ಟಕಡೇ ವ್ಯಕ್ತಿಗೂ ತಲುಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಆದರೆ ಅವರೇ ಇಡೀ ವ್ಯವಸ್ಥೆಯನ್ನು ಹದಗೆಡಿಸಿಟ್ಟಿದ್ದಾರೆ ಎಂದು ಅಪೆಕ್ಸ್​ ಬ್ಯಾಂಕ್​ ನಿರ್ದೇಶಕ ಬ್ಯಾಲಹಳ್ಳಿ ಗೋವಿಂದಗೌಡ ಅಸಮಾಧಾನವ್ಯಕ್ತಪಡಿಸಿದರು.

    ನಗರದ ಜಿಲ್ಲಾ ಸಹಕಾರಿ ಯೂನಿಯನ್​ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾ ಮಂಡಳಿ, ಸಹಕಾರಿ ಯೂನಿಯನ್​, ಡಿಸಿಸಿ ಬ್ಯಾಂಕ್​ ಹಾಗೂ ಸಹಕಾರ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಭಾನುವಾರ ಕೃಷಿಪತ್ತಿನ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಸಹಕಾರ ರಂಗ ರೈತರ ಕ್ಷೇತ್ರವಾಗಿದೆ. ಆದರೆ ಇಲ್ಲಿ ರೈತರನ್ನು ವಂಚಿಸುವ ಕೆಲಸ ಆಗಬಾರದು ಎಂದರು.
    ಸುಮಾರು 2 ಲಕ್ಷ ರೂ. ವೆಚ್ಚ ಮಾಡಿ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ ನಡೆಸಲಾಗುತ್ತಿದ್ದು, ಸಹಕಾರ ಇಲಾಖೆ ಅಧಿಕಾರಿಯಾಗಲಿ, ಡಿಸಿಸಿ ಬ್ಯಾಂಕ್​ ಅಧಿಕಾರಿಗಳಾಗಲಿ ಪಾಲ್ಗೊಂಡಿಲ್ಲ. ಅವರಿಗೆ ರೈತರ, ಬಡವರ ಬಗ್ಗೆ ಎಷ್ಟು ಮಾತ್ರ ಕಾಳಜಿ ಇದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಬಡವರು, ಮಹಿಳೆಯರ ಜೀವನಾಡಿಯಾದ ಸಹಕಾರಿ ವ್ಯವಸ್ಥೆ ಉಳಿಸಲು ಅಧಿಕಾರಿಗಳಿಗೆ ಆಸಕ್ತಿಯಿಲ್ಲವಾಗಿದೆ ಎಂದು ಅಸಮಾಧಾನಹೊರಹಾಕಿದರು.
    ಹೊಸ ಸಾಲ ನೀಡದ ಕಾರಣ ಪಡೆದಿರುವ ಸಾಲ ವಸೂಲಾತಿ ಆಗುತ್ತಿಲ್ಲ. ಸೊಸೈಟಿಗಳನ್ನು ಉಳಿಸಿಕೊಳ್ಳಲು ಪ್ಯಾಕ್ಸ್​ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಆದರೆ ಡಿಸಿಸಿ ಬ್ಯಾಂಕ್​ ಅಧಿಕಾರಿ, ಸಿಬ್ಬಂದಿಯಲ್ಲಿ ಆ ಭಯ ಕಾಣುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸಹಕಾರಿ ವ್ಯವಸ್ಥೆ ಉಳಿಸಲು ನೀವೇ ಕಾವಲುಗಾರರಾಗಿ ಕೆಲಸ ಮಾಡಿ ಎಂದು ಎಚ್ಚರಿಸಿದರು.
    ರಾಜ್ಯ ಸಹಕಾರ ಮಹಾ ಮಂಡಳಿ ನಿರ್ದೇಶಕ ಎಚ್​.ವಿ.ನಾಗರಾಜ್​ ಮಾತನಾಡಿ, 2014ರಲ್ಲಿ ಡಿಸಿಸಿ ಬ್ಯಾಂಕ್​ ಮುಳುಗಿಹೋಗಿತ್ತು. ಗೋವಿಂದಗೌಡರ ನೇತೃತ್ವದ ಆಡಳಿತ ಮಂಡಳಿಯ ಶ್ರಮದಿಂದ ಸುಧಾರಣೆಯಾಗಿ, ಎರಡೂ ಜಿಲ್ಲೆಯ ರೈತರ, ಮಹಿಳೆಯರ ಜೀವನಾಡಿಯಾಗಿದೆ. ಆದರೆ, ಇದೀಗ ಕೆಲವರ ರಾಜಕೀಯ ಹಿತಾಸಕ್ತಿಗಾಗಿ ಮತ್ತೆ ಬಲಿಕೊಡುವ ಕೆಲಸವಾಗುತ್ತಿದೆ ಎಂದು ಆತಂಕವ್ಯಕ್ತಪಡಿಸಿದರು.
    ಯೂನಿಯನ್​ ನಿರ್ದೇಶಕಿ ಆರ್​.ಅರುಣ ಮಾತನಾಡಿ, 2 ಲಕ್ಷ ಮಂದಿ ಮಹಿಳೆಯರ ಸ್ವಾವಲಂಬಿ ಬದುಕಿಗೆ ನೆರವಾಗಿದ್ದ ಡಿಸಿಸಿ ಬ್ಯಾಂಕ್​ ನಾಶ ಮಾಡಲು ರಾಜಕೀಯ ಕುತಂತ್ರ ನಡೆಯುತ್ತಿದೆ. ಇದನ್ನು ಮೆಟ್ಟಿನಿಂತು ಗೋವಿಂದಗೌಡರ ನೇತೃತ್ವದಲ್ಲಿ ಬೆಳೆದಿದ್ದ ಬ್ಯಾಂಕಿನ ಗತ ವೈಭವ ಮರುಸ್ಥಾಪನೆಯಾಗಬೇಕು. ಸಿಇಒಗಳು ಜಾಗೃತಿಯಿಂದ ಕೆಲಸ ಮಾಡಿದರೆ ಮಾತ್ರ ಸಾಧ್ಯ ಎಂದರು.
    ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಎಸ್​.ವಿ.ಬಸವರಾಜಪ್ಪ ಇತ್ತೀಚಿನ ಸಹಕಾರ ಸಂಘಗಳ ಕಾಯಿದೆಯ ತಿದ್ದುಪಡಿಗಳು , ಚುನಾವಣೆ ಕುರಿತು ಹಾಗೂ ನಬಾರ್ಡ್​ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ವೈ.ವಿ.ಗುಂಡೂರಾವ್ಸಹಕಾರ ಸಮಗ್ರ ಅಭಿವೃದ್ದಿ ಹಾಗೂ ಸಮಯ ಮತ್ತು ಒತ್ತಡ ನಿರ್ವಹಣೆ ಕುರಿತು ತರಬೇತಿ ನೀಡಿದರು.
    ರಾಜ್ಯ ಸಹಕಾರ ಮಹಾ ಮಂಡಳಿ ನಿರ್ದೇಶಕ ಎ.ಸಿ.ನಾಗರಾಜ್​, ಸಹಕಾರಿ ಯೂನಿಯನ್​ ಉಪಾಧ್ಯಕ್ಷ ಟಿ.ಕೆ.ಬೈರೇಗೌಡ, ಯೂನಿಯನ್​ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್, ನಿರ್ದೇಶಕರಾದ ಅ.ಮು.ಲಕ್ಷೀನಾರಾಯಣ, ಮುರಾಂಡಹಳ್ಳಿ ಡಾ.ಇ.ಗೋಪಾಲಪ್ಪ, ಎಸ್​.ವಿ.ಗೋವರ್ಧನರೆಡ್ಡಿ, ವಿ.ರಘುಪತಿರೆಡ್ಡಿ, ಎನ್​.ಶಂಕರನಾರಾಯಣಗೌಡ, ಎನ್​.ನಾಗರಾಜ್​, ಪಿ.ಎಂ.ವೆಂಕಟೇಶ್​, ಕೆ.ಎಂ.ಮಂಜುನಾಥ್​, ಕೆ.ಎಂ.ವೆಂಕಟೇಶಪ್ಪ, ಷೇಕ್​ ಅಹಮದ್​, ಸಿಇಒ ಭಾರತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts