More

    ಕರೊನಾದೊಂದಿಗೆ ಬದುಕಲು ಕಲಿಯಿರಿ, ಇನ್ನೆರಡು ವರ್ಷ ಲಸಿಕೆ ಅನುಮಾನ…!

    ನವದೆಹಲಿ: ಇನ್ನು ನಾಲ್ಕು ತಿಂಗಳಿಗೆ ಅಥವಾ ವರ್ಷಾಂತ್ಯಕ್ಕೆ ಕರೊನಾ ವೈರಸ್​ ನಿರ್ಮೂಲನೆಗೆ ಲಸಿಕೆ ಸಜ್ಜಾಗಲಿದೆ ಎಂದು ಹಲವು ಕಂಪನಿಗಳು ಭರವಸೆ ವ್ಯಕ್ತಪಡಿಸಿದ್ದವು. ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕೂಡ ಇದನ್ನೇ ಘೋಷಿಸಿದ್ದರು. ಆದರೆ, ವಸ್ತುಸ್ಥಿತಿಯೇ ಬೇರೆ ಇದ್ದಂತಿದೆ.

    ಹೌದು… ಇನ್ನೆರಡು ವರ್ಷ ಕರೊನಾ ಲಸಿಕೆ ತಯಾರಾಗುವುದು ಅನುಮಾನ ಎನ್ನಲಾಗಿದೆ. ಹೀಗೆ ಅನುಮಾನಿಸಿದ್ದು ಬೇರಾರೂ ಅಲ್ಲ, ಬ್ರಿಟಿಷ್​ ವೈದ್ಯ, ಸಾರ್ವಜನಿಕ ಆರೋಗ್ಯ ಕ್ಷೇತ್ರದ ತಜ್ಞ, ಎಲ್ಲಕ್ಕೂ ಮುಖ್ಯವಾಗಿ ವಿಶ್ವಸಂಸ್ಥೆಯಿಂದ ಕೋವಿಡ್​ ರಾಯಭಾರಿಯಾಗಿರುವ ಡೇವಿಡ್​ ನಬಾರ್ರೋ. ಸಂದರ್ಶನವೊಂದರಲ್ಲಿ ಈ ವಿಷಯ ತಿಳಿಸಿದ್ದಾರೆ.

    ಭಾರತದಲ್ಲಿ ಕರೊನಾ ಹರಡುವುದನ್ನು ನಿಯಂತ್ರಿಸಲು ಕೈಗೊಂಡಿರುವ ಮೊದಲ ಹಂತದಲ್ಲಿ ಕ್ರಮಗಳ ಬಗ್ಗೆ ನಬಾರ್ರೋ ಮೆಚ್ಚುಗೆ ವ್ಯಕ್ತಡಿಸಿದ್ದಾರೆ. ಎರಡನೇ ಹಂತದಲ್ಲಿ ಅದರಲ್ಲೂ ಸಮುದಾಯಿಕ ಹಂತದಲ್ಲಿ ಕರೊನಾ ವ್ಯಾಪಿಸುವುದನ್ನು ತಡೆಗಟ್ಟುವುದು ಸ್ಥಳೀಯಾಡಳಿತಗಳ ಸನ್ನದ್ಧತೆಯನ್ನು ಆಧರಿಸಿದೆ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ; ದೇಶೀಯವಾಗಿ ತಯಾರಾಯ್ತು ಕೋವಿಡ್​ ಪರೀಕ್ಷಾ ಕಿಟ್​

    ಲಾಕ್​ಡೌನ್​ ತೆರವಾದಂತೆ, ಕೆಲ ಪ್ರದೇಶಗಳಿಗೆ ಸೀಮಿತವಾಗಿರುವ ಸೋಂಕು ಇನ್ನಷ್ಟು ಕಡೆಗಳಲ್ಲಿ ಹಬ್ಬುವುದು ಅನಿವಾರ್ಯವೂ ಆಗಿದೆ. ನಮ್ಮ ಸುತ್ತಲಿನ ಪ್ರದೇಶದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸಬೇಕು. ಅದನ್ನು ನಿಭಾಯಿಸುವುದು ಹೇಗೆ ಎಂದು ತಿಳಿಸಬೇಕು ಎಂದಿದ್ದಾರೆ.

    ಸೋಂಕು ವ್ಯಾಪಿಸುವುದನ್ನು ತಡೆಗಟ್ಟುವುದು ಎಷ್ಟು ಮುಖ್ಯ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಜತೆಗೆ, ಪ್ರತಿ ಗ್ರಾಮ ಪಂಚಾಯತ್​, ಜಿಲ್ಲಾ ಪಂಚಾಯತ್​ಗಳು ಕರೊನಾ ನಿಗ್ರಹಕ್ಕೆ ಸಜ್ಜಾಗಬೇಕು. ಕರೊನಾದಿಂದಾಗಿ ಬಡವರು ಇನ್ನಷ್ಟು ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ. ಇದರಿಂದ ಅವರನ್ನು ರಕ್ಷಿಸುವ ಕಾರ್ಯದಲ್ಲಿ ಇಡೀ ದೇಶ ತೊಡಗಿಕೊಳ್ಳಬೇಕು ಎಂದು ನಬಾರ್ರೋ ಹೇಳುತ್ತಾರೆ.
    ಲಾಕ್​ಡೌನ್​ ನಂತರದ ಕೆಲ ವಾರ ಅಥವಾ ತಿಂಗಳು ಪರಿಸ್ಥಿತಿ ಕಷ್ಟಕರವಾಗಿರಲಿವೆ. ಆದರೆ, ಜೀವನ ಅಷ್ಟೊಂದು ದುರ್ಬರವಾಗಿರುವುದಿಲ್ಲ ಎಂಬ ಭರವಸೆಯನ್ನೂ ನೀಡುತ್ತಾರೆ.

    ಇದನ್ನೂ ಓದಿ; ಭಾರತದಲ್ಲೂ ಸಜ್ಜಾಗುತ್ತಿದೆ ಕೋವಿಡ್​19ಗೆ ರಾಮಬಾಣ

    ಭಾರತದಲ್ಲಿ ಕರೊನಾ ಪ್ರಕರಣಗಳು ದ್ವಿಗುಣಗೊಳ್ಳುತ್ತಿರುವ ಅವಧಿ 11 ದಿನಗಳಾಗಿರುವುದು ಉತ್ತಮ ನಿರ್ವಹಣೆ ಎಂದೇ ಹೇಳಬೇಕು. ಬೇರೆಡೆಗಳಲ್ಲಿ ಇದು 2 -3 ದಿನಗಳಲ್ಲಿ ಪ್ರಕರಣಗಳು ದ್ವಿಗುಣಗೊಳ್ಳುತ್ತಿವೆ. ಭಾರತದ ಈವರೆಗಿನ ನಿರ್ವಹಣೆ ಆಧಾರದಲ್ಲಿ ಹೇಳುವುದಾದರೆ, ಮುಂದಿನ ಹಂತವನ್ನು ಯಶಸ್ವಿಯಾಗಿ ನಿಭಾಯಿಸಲಿದೆ ಎಂಬ ವಿಶ್ವಾಸವನ್ನು ನಬಾರ್ರೋ ವ್ಯಕ್ತಪಡಿಸಿದ್ದಾರೆ.

    ಕರೊನಾ ​ ತಡೆಗೆ ಶ್ರಮಿಸದಿದ್ದಲ್ಲಿ, ಈ ವೈರಸ್ ಜಗತ್ತಿನಾದ್ಯಂತ ಭಾರಿ ಪ್ರಮಾಣದಲ್ಲಿ ಸಾವು- ನೋವುಗಳನ್ನು ಉಂಟುಮಾಡಲಿದೆ. ಈ ವೈರಸ್​ ಉಸಿರಾಟದ ತೊಂದರೆ ಮಾತ್ರವಲ್ಲದೆ, ಹಲವು ಅನಾರೋಗ್ಯಕ್ಕೆ ಕಾರಣವಾಗಿದೆ. ಈ ಎಲ್ಲ ವಿಷಯಗಳನ್ನು ಅರಿತುಕೊಂಡು ಇದರ ವಿರುದ್ಧ ಹೋರಾಡಬೇಕಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

    ಜನರನ್ನು ಕರೊನಾದಿಂದ ರಕ್ಷಿಸಲು ಇನ್ನೆರಡು ವರ್ಷಗಳವರೆಗೆ ಲಸಿಕೆ ಸಜ್ಜಾಗುವುದು ಅನುಮಾನ. ಹೀಗಾಗಿ ದೀರ್ಘಕಾಲದವರೆಗೆ ಈ ವೈರಸ್​ನೊಂದಿಗೆ ಬದುಕುವುದು ಹೇಗೆಂಬುದನ್ನು ಎಲ್ಲ ದೇಶಗಳ 780 ಕೋಟಿ ಜನರು ಕಲಿಯಬೇಕಿದೆ. ಇದೊಂದು ಸಾರ್ವತ್ರಿಕ ಕಲಿಕಾ ಪ್ರಕ್ರಿಯೆ ಎಂಬ ಎಚ್ಚರಿಕೆಯನ್ನೂ ನಬಾರ್ರೋ ನೀಡುತ್ತಾರೆ.

    ಒಂದು ಟ್ವಿಟ್​ನಿಂದಾಗಿ ಆತ ಕಳೆದುಕೊಂಡ ಮೊತ್ತ 22 ಸಾವಿರ ಕೋಟಿ ರೂ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts