More

    ಆತ್ರಾಡಿ ಗ್ರಾಪಂನಲ್ಲಿ ವಿ.ಎ ಇಲ್ಲ

    ಉಡುಪಿ: ಐದು ತಿಂಗಳಿನಿಂದ ಉಡುಪಿ ಜಿಲ್ಲೆ ಕಂದಾಯ ಸಂಬಂಧಿತ ಸೇವೆ ಮತ್ತು ಅರ್ಜಿ ವಿಲೇವಾರಿಯಲ್ಲಿ ರಾಜ್ಯಮಟ್ಟದಲ್ಲೇ ಪ್ರಥಮ ಸ್ಥಾನ ಕಾಯ್ದುಕೊಂಡಿದೆ. ಆದರೆ ಗ್ರಾಮೀಣ ಭಾಗದಲ್ಲಿ ಕಂದಾಯ ಸೇವೆ ಸಾರ್ವಜನಿಕರಿಗೆ ಸರಿಯಾಗಿ ಸಿಗುತ್ತಿಲ್ಲ ಎಂಬುದಕ್ಕೆ ಆತ್ರಾಡಿ-ಹಿರೇಬೆಟ್ಟು ಗ್ರಾಮ ಉದಾಹರಣೆ. ಆತ್ರಾಡಿ-ಹಿರೇಬೆಟ್ಟು ಗ್ರಾಮದಲ್ಲಿ ಒಂದು ವರ್ಷದಿಂದ ಗ್ರಾಮ ಲೆಕ್ಕಿಗರಿಲ್ಲದೆ ಜನರು ಸಾಕಷ್ಟು ಪರಿತಪಿಸುವಂತಾಗಿದೆ. ಗ್ರಾಮದಲ್ಲಿ ವಿ.ಎ ಇಲ್ಲದೆ ಸರಿಯಾಗಿ ಕಂದಾಯ ಸೇವೆ ಸಿಗುತ್ತಿಲ್ಲ ಎಂದು ಗ್ರಾಮಸ್ಥರು, ಸ್ಥಳೀಯ ಜನಪ್ರತಿನಿಧಿಗಳು ಅಳಲು ತೋಡಿಕೊಂಡಿದ್ದಾರೆ. ವರ್ಷದ ಹಿಂದೆ ಇಲ್ಲಿದ್ದ ವಿ.ಎ ಅವರನ್ನು ಉಡುಪಿ ತಹಸೀಲ್ದಾರ್ ಕಚೇರಿಗೆ ನಿಯೋಜಿಸಲಾಗಿದೆ. ಅದರ ಬೆನ್ನಲ್ಲೆ ಇಲ್ಲಿದ್ದ ಗ್ರಾಮ ಸಹಾಯಕರನ್ನು ತಹಸೀಲ್ದಾರ್ ಕಚೇರಿಗೆ ನಿಯೋಜಿಸಲಾಗಿತ್ತು. ಮೂರು ತಿಂಗಳಿನಿಂದ ಇಲ್ಲಿ ಗ್ರಾಮ ಸಹಾಯಕರೂ ಇಲ್ಲ.

    ತಿಂಗಳಲ್ಲಿ ಎರಡು ದಿನ ವಿ.ಎ ಲಭ್ಯ: ಗ್ರಾಮದ ವಿ.ಎ ಕಚೇರಿ ಬಾಗಿಲು ವರ್ಷವಿಡೀ ಮುಚ್ಚಿಕೊಂಡೇ ಇರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಕಚೇರಿ ಬಾಗಿಲಿನಲ್ಲಿ ಪ್ರತಿ ಶನಿವಾರ ವಿ.ಎ ಸಿಗುತ್ತಾರೆ ಮತ್ತು ಮೊಬೈಲ್‌ಗೆ ಸಂಪರ್ಕಿಸಿ ಎಂದು ಚೀಟಿ ಅಂಟಿಸಲಾಗಿದೆ. ಆದರೆ ತಿಂಗಳ ಎರಡನೇ ಶನಿವಾರ ಹಾಗೂ 4ನೇ ಶನಿವಾರ ಸರ್ಕಾರಿ ರಜೆಯಾಗಿದ್ದು, ಗ್ರಾಮಸ್ಥರಿಗೆ ವಿಎ ದರ್ಶನ ತಿಂಗಳಿಗೆ ಎರಡು ದಿನ ಮಾತ್ರ.

    ಸಂಕಷ್ಟದಲ್ಲಿ ಜನರು: ಜಾತಿ, ಆದಾಯ, ಜನನ, ಮರಣ ಪ್ರಮಾಣಪತ್ರಕ್ಕೆ ಸಂಬಂಧಿಸಿ ಜನರಿಗೆ ಸರಿಯಾದ ಸಮಯಕ್ಕೆ ಕೆಲಸ ಆಗುತ್ತಿಲ್ಲ. ಆಯುಷ್ಮಾನ್, ಸಂಧ್ಯಾ ಸುರಕ್ಷಾ, ಪಡಿತರ ಚೀಟಿ ಮೊದಲಾದ ಯೋಜನೆಗಳಿಗೆ ವಿಎ ಅವರಿಂದ ಆಗಬೇಕಾದ ಕೆಲಸ ಗ್ರಾಮದ ಜನರಿಗೆ ಲಭ್ಯವಾಗುತ್ತಿಲ್ಲ. ರಸ್ತೆ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಸಮೀಕ್ಷೆ ನಡೆಸಿ ಗ್ರಾಪಂ ವರದಿ ಕೊಡಲು ಒತ್ತಡದ ನಡುವೆ ವಿಎಗೆ ಸಾಧ್ಯವಾಗುತ್ತಿಲ್ಲ. ತಿಂಗಳಿಗೆ ಎರಡು ಶನಿವಾರ ಮಾತ್ರವೇ ವಿಎ ಕಚೇರಿಯಲ್ಲಿ ಸಿಕ್ಕರೆ ಯಾವ ಕೆಲಸವೂ ಸರಿಯಾಗಿ ಆಗುವುದಿಲ್ಲ. ಸಾಕಷ್ಟು ಜನರು ವಿಎ ಕಚೇರಿಯಲ್ಲಿ ಸೇರಿರುತ್ತಾರೆ. ಒತ್ತಡದಲ್ಲಿ ಯಾವ ಕೆಲಸವೂ ಸರಿಯಾಗುವುದಿಲ್ಲ ಎಂದು ಜನರ ಅಳಲು. ಅಲ್ಲದೆ ಹಣಕಾಸು ವರ್ಷ ಮುಗಿಯುತ್ತ ಬಂದಿದ್ದರೂ ಗ್ರಾಮ ವ್ಯಾಪ್ತಿಯ ಭೂ ಕಂದಾಯ ವಸೂಲಾತಿ ಸಮರ್ಪಕವಾಗಿ ನಡೆದಿಲ್ಲ ಎಂದು ಸ್ಥಳೀಯ ಜನಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಕಾಯಂ ವಿಎ ನಿಯೋಜಿಸಿ: ಗ್ರಾಮಕ್ಕೆ ಕಾಯಂ ವಿಎ ನೇಮಕ ಮಾಡುವಂತೆ ಮತ್ತು ಗ್ರಾಮ ಸಹಾಯಕರನ್ನು ನಿಯೋಜಿಸುವಂತೆ ಗ್ರಾಮಸ್ಥರು, ಪಂಚಾಯಿತಿ ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ. ಇತ್ತೀಚೆಗೆ ಪೆರ್ಡೂರಿನಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಇಲ್ಲಿನ ಪಂಚಾಯಿತಿ ಸದಸ್ಯರು ಜಿಲ್ಲಾಧಿಕಾರಿಗಳಲ್ಲಿ ಕಾಯಂ ವಿಎ ನೇಮಿಸುವಂತೆ ಮನವಿ ಮಾಡಿದ್ದಾರೆ. ಎಡಿಸಿ, ತಹಸೀಲ್ದಾರ್ ಅವರಲ್ಲೂ ವಿಎ ನೇಮಕ ಮಾಡಲು ವರ್ಷದಿಂದ ಮನವಿ ಮಾಡಿಕೊಂಡು ಬರುತ್ತಿದ್ದಾರೆ.

    10 ಕುಟುಂಬಗಳ ಬಿಪಿಎಲ್ ಕಾರ್ಡ್ ರದ್ದು: ಅಧಿಕಾರಿಗಳ ನಿರ್ಲಕ್ಷೃದಿಂದ ಹಿರೇಬೆಟ್ಟುವಿನ ಒಂದೇ ಗ್ರಾಮದ 10 ಬಡ ಕುಟುಂಬಗಳ ಬಿಪಿಎಲ್ ಪಡಿತರ ಚೀಟಿ ರದ್ದಾಗಿದೆ. ಮಕ್ಕಳಿಲ್ಲದ ಹಿರಿಯರು, ಅಂಗವಿಕಲ ಕುಟುಂಬ, ಇತರೆ ಆರ್ಥಿಕ ಸದೃಢ ಇಲ್ಲದ ಕುಟುಂಬಗಳು ಬಿಪಿಎಲ್ ಪಡಿತರ ಚೀಟಿ ಕಳೆದುಕೊಂಡಿದ್ದು, ಈ ಎಲ್ಲ್ಲ ಕುಟುಂಬಗಳ ಪಡಿತರ ಚೀಟಿ ಎಪಿಎಲ್ ಕಾರ್ಡ್‌ಗೆ ಪರಿವರ್ತನೆಗೊಂಡಿದೆ. ಇದರಿಂದ ಈ ಬಡ ಕುಟುಂಬಗಳು ದಿಕ್ಕೆ ತೋಚದೆ ತಾಲೂಕು ಕಚೇರಿ, ಗ್ರಾಪಂ ಅಲೆದಾಡುತಿದ್ದಾರೆ. ಈ ಬಗ್ಗೆ ಗ್ರಾಪಂ ಜನಪ್ರತಿನಿಧಿಗಳು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಸರಿಪಡಿಸಿಕೊಡುವುದಾಗಿ ಭರವಸೆ ಲಭಿಸಿದೆ.

    ಆತ್ರಾಡಿ-ಹಿರೇಬೆಟ್ಟು ಗ್ರಾಮದಲ್ಲಿ ಕಾಯಂ ವಿಎ ಇಲ್ಲದೆ ವರ್ಷ ಕಳೆಯುತ್ತ ಬಂದಿದೆ. ಕಂದಾಯ ಸಂಬಂಧಿತ ಸೇವೆಗಳು ಗ್ರಾಮದ ಜನರಿಗೆ ಸರಿಯಾಗಿ ಸಿಗುತ್ತಿಲ್ಲ. ಪ್ರತಿ ಶನಿವಾರ ಮಾತ್ರ ವಿಎ ಸಿಗುತ್ತಾರೆ. ಆದರೆ ಕಾಯಂ ವಿಎ ನಿಯೋಜನೆಗೊಂಡರೆ ಮಾತ್ರ ಜನರಿಗೆ ಅನುಕೂಲ.
    ಗುರುನಂದ ನಾಯಕ್, ಅಧ್ಯಕ್ಷ, ಆತ್ರಾಡಿ-ಹಿರೇಬೆಟ್ಟು ಗ್ರಾಪಂ

    ಆತ್ರಾಡಿ-ಹಿರೇಬೆಟ್ಟು ಗ್ರಾಮದಲ್ಲಿ ತಿಂಗಳಿಗೆ ಎರಡು ಶನಿವಾರ ಮಾತ್ರ ವಿಎ ಸಿಗುತ್ತಾರೆ. ಉಳಿದ ಶನಿವಾರ ‘ಸೆಕೆಂಡ್, ಫೋರ್ತ್ ಸಾಟರ್ಡೆ’ ರಜೆಯಲ್ಲಿ ಕಳೆದು ಹೋಗುತ್ತದೆ. ಈ ಎರಡು ದಿನದಲ್ಲಿ ಜನರಿಗೆ ಕಂದಾಯ ಸಂಬಂಧಿತ ಸೇವೆಗಳು ಸಿಗುವುದು ಹೇಗೆ ? ನಮ್ಮಲ್ಲಿ ಕಂದಾಯ ಸಂಬಂಧಿತ ಸೇವೆ ಸಂಪೂರ್ಣ ಸ್ಥಗಿತಗೊಂಡಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಕಾಯಂ ಆಗಿ ಗ್ರಾಮ ಲೆಕ್ಕಾಧಿಕಾರಿ ಮತ್ತು ಗ್ರಾಮ ಸಹಾಯಕರನ್ನು ನಿಯೋಜಿಸ ಬೇಕು.
    ಶ್ರೀಕಾಂತ್ ಕಾಮತ್, ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts