More

    ಬೀದಿಬದಿ ವ್ಯಾಪಾರ ವಲಯ ಪಾಳು

    ಮಂಗಳೂರು: ನಗರದ ಸ್ಟೇಟ್‌ಬ್ಯಾಂಕ್ ಸರ್ವೀಸ್ ಬಸ್ ನಿಲ್ದಾಣ ಬಳಿ ಬೀದಿ ಬದಿ ವ್ಯಾಪಾರಿಗಳಿಗೆ ಮೀಸಲಿಟ್ಟು ಅಭಿವೃದ್ಧಿಪಡಿಸಲಾದ ಜಾಗವಿಂದು ಪಾಳು ಬಿದ್ದಿದೆ. ಹುಲ್ಲು ಬೆಳೆದು ಒಣಗಿ ಹೋಗಿದ್ದು, ಬೆಂಕಿ ಬಿದ್ದರೆ ಅಪಾಯ ಖಚಿತ.

    ಹರಿನಾಥ್ ಅವರು ಪಾಲಿಕೆ ಮೇಯರ್ ಆಗಿದ್ದ ಅವಧಿಯಲ್ಲಿ ಅಂದರೆ ೨೦೧೬ರ ಡಿಸೆಂಬರ್‌ನಲ್ಲಿ ವ್ಯಾಪಾರ ವಲಯ ಉದ್ಘಾಟಿಸಲಾಗಿತ್ತು. ಉದ್ಘಾಟನೆಗೊಂಡು ಈಗ ಬರೋಬ್ಬರಿ ಮೂರು ವರ್ಷಗಳೇ ಕಳೆದಿದೆ. ಇಲ್ಲಿಯವರೆಗೆ ಒಂದು ಬಾರಿ ಹೊರತು ಪಡಿಸಿ ಬೀದಿಬದಿ ವ್ಯಾಪಾರಿಗಳು ವಲಯದತ್ತ ಮುಖ ಹಾಕಲೇ ಇಲ್ಲ. ಪರಿಣಾಮ ವಲಯ ಅನಾಥವಾಗಿದೆ. ಪ್ರಸುತ್ತ ವಲಯ ಹುಲ್ಲುಗಾವಲಾಗಿ ಮಾರ್ಪಟ್ಟಿದ್ದು, ಬೃಹತ್ ಪೊದೆಗಳ ರೀತಿಯಲ್ಲಿ ಹುಲ್ಲುಗಳು ಬೆಳೆದಿವೆ. ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳು ನಡೆಯುತ್ತವೆ.

    ಸುಸಜ್ಜಿತ ವಲಯವಾಗಿತ್ತು: ನಾಲ್ಕು ಸುತ್ತ ಆವರಣಗೋಡೆ, ನೆಲಕ್ಕೆ ಇಂಟರ್‌ಲಾಕ್, ಭದ್ರತೆಗಾಗಿ ಗೇಟ್ ಅಳವಡಿಸಿ ಸುಸಜ್ಜಿತವಾಗಿ ವಲಯ ನಿರ್ಮಿಸಲಾಗಿತ್ತು. ಸುಮಾರು ೪೦೦ ಮಂದಿ ಏಕಕಾಲದಲ್ಲಿ ವ್ಯಾಪಾರ ನಡೆಸಲು ಅವಕಾಶವಿದೆ. ವ್ಯಾಪಾರಿಗಳ ಬೇಡಿಕೆಯಂತೆ ವಲಯ ಅವರಣ ಗೋಡೆ ಎತ್ತರವನ್ನು ತಗ್ಗಿಸಿ ಗ್ರಾಹಕರಿಗೆ ಹೊರಗಿನಿಂದ ಕಾಣುವಂತೆ ಕಬ್ಬಿಣದ ಗ್ರಿಲ್ಸ್ ಅಳವಡಿಸಲಾಗಿತ್ತು. ಆದರೂ ವ್ಯಾಪಾರಿಗಳು ವಲಯಕ್ಕೆ ಬರಲೇ ಇಲ್ಲ.

    ಹೋರಾಟದ ಫಲ: ಪಾಲಿಕೆ ವತಿಯಿಂದ ಕಾರ್ಯಾಚರಣೆ ನಡೆಸಿ, ಫುಟ್‌ಪಾತ್‌ಗಳಲ್ಲಿರುವ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕೆಲಸಗಳು ನಿರಂತವಾಗಿ ನಡೆಯುತ್ತಿತ್ತು. ಆದ ಬೀದಿ ಬದಿ ವ್ಯಾಪಾರಿಗಳ ಸಂಘದವರು ತಮಗೆ ಪ್ರತ್ಯೇಕ ವಲಯ ನಿರ್ಮಿಸಬೇಕು ಎಂದು ಆಗ್ರಹಿಸಿದ್ದರು. ನಿರಂತರ ಹೋರಾಟದ ಫಲವಾಗಿ ಪಾಲಿಕೆ ವಲಯನ್ನು ನಿರ್ಮಿಸಿಕೊಟ್ಟಿತಾದರೂ, ವ್ಯಾಪಾರಿಗಳು ಗ್ರಾಹಕರು ಬರುವುದಿಲ್ಲ ಎನ್ನುವ ಕಾರಣ ನೀಡಿ ವಲಯವನ್ನು ನಿರಾಕರಿಸಿದ್ದಾರೆ.

    ತಾತ್ಕಾಲಿಕ ಮಾರುಕಟ್ಟೆಗೆ ಜಾಗ: ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮಂಗಳೂರಿನ ಕೇಂದ್ರ ಮಾರುಕಟ್ಟೆಯನ್ನು ಸುಸಜ್ಜಿತವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ವೇಳೆ ತಾತ್ಕಾಲಿಕ ಮಾರುಕಟ್ಟೆಗಾಗಿ ಫುಟ್ಬಾಲ್ ಮೈದಾನದ ಹಿಂಭಾಗ ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ನಿಗದಿಪಡಿಸಿದ ಜಾಗವನ್ನು ಉಪಯೋಗಿಸಲು ಸ್ಮಾರ್ಟ್ ಸಿಟಿ ಅಧಿಕಾರಿಗಳು ಉದ್ದೇಶಿಸಿದೆ. ೧.೬೫ ಎಕರೆ ಜಾಗದಲ್ಲಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಿಸಲಾಗುತ್ತಿದೆ. ಬೀದಿ ವ್ಯಾಪಾರಿಗಳು ವ್ಯಾಪಾರ ಆರಂಭಿಸದಿದ್ದರೆ, ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ ಖಚಿತವಾಗಲಿದೆ. ಸ್ಟೇಟ್‌ಬ್ಯಾಂಕ್ ಪರಿಸರದಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚಿದ್ದು, ಸ್ಥಳವನ್ನು ಖಾಲಿ ಬಿಡುವುದಕ್ಕಿಂತ ವಾಹನಗಳ ‘ಪೇ ಪಾರ್ಕಿಂಗ್‌ಗೆ’ ಅವಕಾಶ ನೀಡಿದರೆ ಪಾಲಿಕೆಗೆ ಸ್ವಲ್ಪ ಆದಾಯವಾದರೂ ಸಿಗುತ್ತದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

    ಬೀದಿ ವ್ಯಾಪಾರ ವಲಯ ಪಾಳುಬಿದ್ದಿದೆ. ಪಾಲಿಕೆ ಸೂಕ್ತ ವ್ಯವಸ್ಥೆ ಮಾಡಿದರೆ ಅಲ್ಲಿಗೆ ಹೋಗಬಹುದು. ಅಲ್ಲಿಗೆ ಹೋದ ಬಳಿಕ ಬೀದಿಬದಿಯಲ್ಲಿ ವ್ಯಾಪರ ಮಾಡಲು ಯಾರಿಗೂ ಅವಕಾಶ ನೀಡಬಾರದು. ಇಲ್ಲವಾದಲ್ಲಿ ಅಲ್ಲಿಗೆ ಗ್ರಾಹಕರು ಬರುವುದು ಕಡಿಮೆಯಾಗುತ್ತದೆ. ಈ ಹಿಂದೆ ವ್ಯಾಪಾರ ನಡೆಸಿದ ವೇಳೆ ಅಲ್ಲಿಗೆ ಯಾವ ಗ್ರಾಹಕರೂ ಭೇಟಿ ನೀಡಿರಲಿಲ್ಲ. ಇದರಿಂದ ಮತ್ತೆ ಬೀದಿಯಲ್ಲಿಯೇ ವ್ಯಾಪಾರ ನಡೆಸುತ್ತಿದ್ದೇವೆ.
    ಮಂಜುನಾಥ್ ಬೀದಿಬದಿ ವ್ಯಾಪಾರಿ, ಸೆಂಟ್ರಲ್ ಮಾರ್ಕೆಟ್

    ಬೀದಿ ವ್ಯಾಪಾರಿಗಳಿಗೆ ವಲಯದಲ್ಲೇ ವ್ಯಾಪಾರ ಮಾಡಿವಂತೆ ಮತ್ತೆ ಕಟ್ಟನಿಟ್ಟಿನ ಸೂಚನೆ ನೀಡಲಾಗುವುದು. ಈಗಾಗಲೇ ವ್ಯಾಪರಿಗಳಿಗೆ ಕಾರ್ಡ್ ವಿತರಿಸಲಾಗಿದ್ದು, ಕಾರ್ಡ್ ಇದ್ದವರು ಅಲ್ಲೇ ವ್ಯಾಪಾರ ಮಾಡಬೇಕು ಎಂದು ಈಗಾಲೇ ಆದೇಶಿಸಲಾಗಿದೆ. ಜನರಿಗೆ, ವಾಹನಗಳಿಗೆ ತೊಂದರೆಯಾಗುವಂತೆ ಬೀದಿಬದಿಯಲ್ಲಿ ವ್ಯಾಪಾರ ನಡೆಸಲು ಅವಕಾಶವಿಲ್ಲ.
    ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts