More

    ಪತ್ರ ಸಮರವೇನಿಲ್ಲ, ಎಲ್ಲವೂ ಊಹಾಪೋಹ: ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಸಮರ್ಥನೆ; ಲೆಟರ್ ಬರೆದಿದ್ದು ನಿಜ ಎಂದ ಶಾಸಕ ರಾಯರಡ್ಡಿ

    ಬೆಂಗಳೂರು: ಸಚಿವರ ವಿರುದ್ಧ ಶಾಸಕರ ಸಹಿ ಸಂಗ್ರಹ ಬರೀ ಊಹಾಪೋಹ. ಯಾರೂ, ಯಾವುದೇ ಪತ್ರ ಬರೆದಿಲ್ಲ. ಎಲ್ಲ ಸಚಿವರೂ ಶಾಸಕರ ಮಾತು ಕೇಳುತ್ತಿದ್ದಾರೆ. ಎಲ್ಲರೂ ಅವರವರ ಕೆಲಸ ಮಾಡುತ್ತಿದ್ದಾರೆ. ಯಾವುದೇ ಅಸಮಾಧಾನ ಇಲ್ಲ. ವರ್ಗಾವಣೆ ಅವಧಿ ಮುಗಿದಿದೆ. ಶಾಸಕರು ಅವರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಸಮರ್ಥನೆ ಮಾಡಿಕೊಂಡಿದ್ದಾರೆ. ಇನ್ನು ಶಾಸಕರ ಪತ್ರದ ಬಗ್ಗೆ ತಮಗೇನು ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಕೊಂಡಿದ್ದಾರೆ.

    ಶಾಸಕರೆಲ್ಲರೂ ಬಹಳ ಆಸೆಯಲ್ಲಿ ಇದ್ದಾರೆ. ಆ ಮಾತು ಕೊಟ್ಟಿದ್ದೇವೆ, ಈ ಮಾತು ಕೋಟಿದ್ದೇವೆ ಎನ್ನುತ್ತಿದ್ದಾರೆ. ಆದರೆ, ನನ್ನ ಇಲಾಖೆಯಲ್ಲಿ ಬೇಡಿಕೆಗಳನ್ನು ತಡೆ ಹಿಡಿಯಿರಿ ಎಂದು ಹೇಳಿದ್ದೇನೆ. ಶಾಸಕರು ಹತ್ತು ಕೋಟಿ, 100 ಕೋಟಿ, 300 ಕೋಟಿ ರೂ. ಕೆಲಸ ಕೇಳುತ್ತಿದ್ದಾರೆ. ಸದ್ಯಕ್ಕೆ ಆಗಲ್ಲ ಎಂದು ಹೇಳಿದ್ದೇವೆ. ವರ್ಗಾವಣೆ ಸಮಯ ಮುಗಿದಿದೆ. ಸಮಯದ ಮಿತಿಯಲ್ಲಿ ಮಾಡಲಾಗಿದೆ. ಇನ್ನು ಉಳಿದಿದ್ದು ಸಿಎಂಗೆ ಬಿಡಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಮಂಗಳವಾರ ಸ್ಪಷ್ಟಪಡಿಸಿದರು.

    ಆದರೆ, ಹೊಸಪೇಟೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕ ಬಸವರಾಜ ರಾಯರಡ್ಡಿ, ಸಚಿವರು ಹಾಗೂ ಶಾಸಕರ ನಡುವಿನ ಸಂವಹನ ಕೊರತೆ ತಪ್ಪಿಸಲು ಮತ್ತು ಸೌಹಾರ್ದ ಹೆಚ್ಚಿಸಲು ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಎಂದು ಒತ್ತಾಯಿಸಿ ಆಳಂದ ಶಾಸಕ ಬಿ.ಆರ್.ಪಾಟೀಲ ಮತ್ತಿತರರು ಪತ್ರ ಬರೆದಿದ್ದಾರೆ. ಆ ಪತ್ರಕ್ಕೆ ನಾನೂ ಸಹಿ ಹಾಕಿದ್ದೇನೆ. ಅದರಲ್ಲಿ ತಪ್ಪೇನಿದೆ? ಎಂದು ಸಮರ್ಥಿಸಿಕೊಂಡರು.

    ನಮ್ಮದೆ ಸರ್ಕಾರ ಅಧಿಕಾರಕ್ಕೆ ಬಂದಾಗ ಎಲ್ಲ ಶಾಸಕರಿಗೆ ವೈಯುಕ್ತಿಕ ಆಸೆಗಳು ಇದ್ದೇ ಇರುತ್ತವೆ. ನನಗೂ ಸಚಿವ ಸ್ಥಾನ ಸಿಕ್ಕಿಲ್ಲ. ಆದರೆ, ಅಸಮಾಧಾನವೂ ಇಲ್ಲ. ಸಮನ್ವಯದ ಕೊರತೆ ಸರಿಪಡಿಸಲು ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಎಂದು ಒತ್ತಾಯಿಸಿದ್ದೇವೆ ಎಂದರು.

    ವೈರಲ್ ಪತ್ರ ನನ್ನದಲ್ಲ

    ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಎಂದು ನಾವು ಮನವಿ ಮಾಡಿದ್ದೇವೆಯೇ ಹೊರತು, ಬೇರೇನೂ ಇಲ್ಲ. ಕಳೆದ ಬಾರಿ ಕೆಲ ಕಾರಣಗಳಿಂದಾಗಿ ಸಭೆ ರದ್ದಾಗಿತ್ತು. ಹೀಗಾಗಿ ಸಿಎಂಗೆ ಪತ್ರ ಬರೆದು ಸಭೆ ಕರೆಯುವಂತೆ ಕೋರಿದ್ದೇವೆ ಎಂದು ಆಳಂದ ಶಾಸಕ ಬಿ.ಆರ್. ಪಾಟೀಲ್ ಹೇಳಿದರು. ಸಚಿವ ಪ್ರಿಯಾಂಕ್ ಖರ್ಗೆ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ನಮ್ಮ ಕೋರಿಕೆಯಂತೆ ಮಂತ್ರಿಗಳು ವರ್ಗಾವಣೆ ಮಾಡಿದ್ದಾರೆ. ಸರ್ಕಾರ ಅಸ್ಥಿರಗೊಳಿಸುವ ಸಂಚಲ್ಲಿ ಯಾರೂ ಇಲ್ಲ. 20 ಶಾಸಕರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದೇವೆ. ರಾಯರಡ್ಡಿ ಇನ್ಯಾರ್ಯಾರ ಸಹಿ ಹಾಕಿಸಿದ್ದಾರೋ ಗೊತ್ತಿಲ್ಲ. ಆದರೆ, ನನ್ನ ಹೆಸರಿನ ಲೆಟರ್ ಹೆಡ್ ನಕಲಿಯಾಗಿದೆ. ಇದು ನಮಗಾಗದವರ ಸಂಚು. ನನ್ನ ಹೊಸ ಲೆಟರ್ ಹೆಡ್​ನಲ್ಲಿ ಕ್ರಮ ಸಂಖ್ಯೆಗಳಿವೆ. ಇದರಲ್ಲಿ ಇಲ್ಲ. ಅದು ಹಿಂದೆ ಶಾಸಕನಾಗಿದ್ದಾಗ ಇದ್ದ ವಿಳಾಸ. ನನ್ನ ಲೆಟರ್ ಹೆಡ್ ಬೇರೆ ಇದೆ ಎಂದು ಹೇಳಿದರು.

    ವರ್ಗಾವಣೆ ವಿಚಾರದಲ್ಲಿ ಕೆಲವೊಂದು ಸಲ ಸಮಸ್ಯೆ ಆಗುತ್ತದೆ. ಮಂತ್ರಿಗಳ ಕೋಟಾ ಇತಿಮಿತಿ, ಕಾನೂನು ನಿರ್ಬಂಧ ಇರುತ್ತದೆ. ಎಲ್ಲವನ್ನೂ ಅಂತಿಮವಾಗಿ ಸಿಎಂ ಪರಿಹರಿಸುತ್ತಾರೆ. ಗುರುವಾರ ಶಾಸಕಾಂಗ ಸಭೆ ಇದೆ.

    | ಸತೀಶ ಜಾರಕಿಹೊಳಿ, ಸಚಿವ

    ಶಾಸಕರು ಸಚಿವರ ವಿರುದ್ಧ ಬರೆದಿದ್ದಾರೆ ಎನ್ನಲಾದ ಪತ್ರದ ಕುರಿತು ನನಗೇನೂ ಗೊತ್ತಿಲ್ಲ. ಆದರೆ, ಶಾಸಕರ ಸಮಸ್ಯೆಗಳಿಗೆ ಸಚಿವರು ಸ್ಪಂದಿಸಬೇಕು.

    | ಕೃಷ್ಣ ಬೈರೇಗೌಡ, ಸಚಿವ

    ಸಹಿ ಸಂಗ್ರಹವೇಕೆ?

    • ಸರ್ಕಾರಿ ನೌಕರರ ವರ್ಗಾವಣೆ ವಿಷಯದಲ್ಲಿ ಹಲವು ಸಚಿವರು ಶಾಸಕರ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಲಿಲ್ಲ.
    • ಅನುದಾನ ವಿಷಯದಲ್ಲಿ ಸಚಿವರು ಶಾಸಕರ ಮನವಿಗಳಿಗೆ ಸ್ಪಂದಿಸುತ್ತಿಲ್ಲ. ಕ್ಷೇತ್ರದ ಜನರ ಬೇಡಿಕೆ ಈಡೇರಿಸದಿದ್ದರೆ ಕೆಟ್ಟ ಹೆಸರು ಬರುವ ಆತಂಕ.
    • ಗ್ಯಾರಂಟಿ ಸರ್ಕಾರ ಹಾಗೂ ಪಕ್ಷದ ವರ್ಚಸ್ಸು ಹೆಚ್ಚಿಸಬಹುದು. ಆದರೆ, ಜನರ ಬೇಡಿಕೆ ಈಡೇರಿಸಲು ವಿಶೇಷ ಅನುದಾನ ಕೊಡಲೇಬೇಕು.
    • ಪಕ್ಷಕ್ಕಾಗಿ ಹಲವು ವರ್ಷದಿಂದ ದುಡಿದು 3-4 ಬಾರಿ ಗೆದ್ದ ಶಾಸಕರಿಗೆ ಹೊಸ ಸಚಿವರು ಪ್ರಾಮುಖ್ಯತೆ ಕೊಡುತ್ತಿಲ್ಲ.

    ಡ್ಯಾಮೇಜ್ ಕಂಟ್ರೋಲ್​ಗೆ ಸಿಂಗಾಪುರ ಕಥೆ

    ಬೆಂಗಳೂರು: ಬಿ.ಕೆ. ಹರಿಪ್ರಸಾದ್ ಹೇಳಿಕೆಯಿಂದ ಸರ್ಕಾರಕ್ಕೆ ಆಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಡಿಸಿಎಂ ಡಿ.ಕೆ ಶಿವಕುಮಾರ್ ಸಿಂಗಾಪುರ ಕಾರ್ಯತಂತ್ರದ ಕಥೆ ಹೇಳಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಕಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಮೊದಲ ದಿನದಿಂದ ಎಲ್ಲವೂ ಸರಿ ಇಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಸ್ಪಷ್ಟ ಬಹುಮತ ಇದ್ದರೂ ಮುಖ್ಯಮಂತ್ರಿ ಆಯ್ಕೆ ಮಾಡಿರುವ ವಿಧಾನ, ಸಿಕ್ರೆಟ್ ಬ್ಯಾಲೆಟ್ ಬಳಕೆ ಮಾಡಿರುವುದು ಬಹುಮತ ಇದ್ದರೂ ಇಷ್ಟು ಸರ್ಕಸ್ ಮಾಡಿದ್ದು ಎಲ್ಲವೂ ಸರಿ ಇಲ್ಲ ಅಂತ ಆರ್ಥವಾಗುತ್ತದೆ ಎಂದು ಹೇಳಿದರು.

    ಸ್ವತಃ ಡಿ.ಕೆ ಶಿವಕುಮಾರ್ ಮುಂದೆ ಅವರು ಮಾಡುವ ಕಾರ್ಯತಂತ್ರದ ಬಗ್ಗೆ ಈಗ ಮಾತನಾಡುತ್ತಿದ್ದಾರೆ. ಇದು ಅವರಲ್ಲಿಯೇ ಸಮಾಧಾನ ಇಲ್ಲ ಎನ್ನುವುದು ತೋರಿಸಿದ್ದಾರೆ. ಬಿಜೆಪಿಯ ಹೈಕಮಾಂಡ್ ಈ ಸರ್ಕಾರ ಅಸ್ಥಿರಗೊಳಿಸುವ ಬಗ್ಗೆ ಆಲೋಚಿಸಿಲ್ಲ ಎಂದರು.

    ಕೋರಂ ಇಲ್ಲ: ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಇದೇ ವಿಚಾರವಾಗಿ ಮಾತನಾಡಿ, ಡಿಸಿಎಂ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಈಗ ಆ ಭಾವನೆ ಮೂಡುವಂತ ಕಾಲವೇ ಅಲ್ಲ. ಆ ಸಂದರ್ಭ ಬಂದಿಲ್ಲ, ಬರಲ್ಲ ಅಂತ ಭಾವಿಸಿದ್ದೇನೆ ಎಂದರು. ಕಾಂಗ್ರೆಸ್​ನವರು ಯಾರೂ ಬಿಟ್ಟು ಹೋಗುವುದಿಲ್ಲ. ಬಿಜೆಪಿ, ಜೆಡಿಎಸ್ ಒಟ್ಟಾಗಿ ಸೇರಿದರೂ ಅವರಿಗೆ ಕೋರಂ ಇಲ್ಲ. ಅಂಥ ಸಾಧ್ಯತೆಯೇ ಇಲ್ಲ ಎಂದು ಹೇಳಿದರು.

    ಸಿಂಗಾಪುರದಲ್ಲಿ ಸರ್ಕಾರವನ್ನು ಉರುಳಿಸಲು ಷಡ್ಯಂತ್ರ ನಡೆದಿರುವ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ಡಿ.ಕೆ.ಶಿವಕುಮಾರ್ ಅವರನ್ನೇ ಕೇಳಬೇಕು.

    | ಸಿದ್ದರಾಮಯ್ಯ, ಮುಖ್ಯಮಂತ್ರಿ

    ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸಲು ಕುಮಾರಸ್ವಾಮಿ ಪ್ರಯತ್ನ ಮಾಡುತ್ತಾರೆ ಎಂಬ ಬಗ್ಗೆ ನನ್ನನ್ನು ಏನೂ ಕೇಳಬೇಡಿ.

    |ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

    ಹರಿಪ್ರಸಾದ್​ಗೆ ನೋವಾಗಿದೆ: ಮುಖ್ಯಮಂತ್ರಿ ವಿರುದ್ಧ ಹರಿಪಸ್ರಾದ್ ಪರೋಕ್ಷ ಅಸಮಾಧಾನ ವಿಚಾರವಾಗಿ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಪ್ರತಿಕ್ರಿಯಿಸಿ, ಬಿ.ಕೆ ಹರಿಪ್ರಸಾದ್​ಗೆ ನೋವಾಗಿದೆ. ನಾವೆಲ್ಲರೂ ಅವರ ಜತೆಗೆ ಮಾತನ್ನಾಡಿದ್ದೇವೆ. 25 ವರ್ಷ ಪಕ್ಷದ ವರ್ಕಿಂಗ್​ ಕಮಿಟಿಯಲ್ಲಿದ್ದು ಕೆಲಸ ಮಾಡಿದವರು. ಕೆಲವೊಂದು ರಾಜಕೀಯ ಕಾರಣಗಳಿಗೆ ಹೀಗೆಲ್ಲ ಆಗಿದೆ ಎಂದರು.

    ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!

    ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts