More

    ವಿಶೇಷ ಶಿಕ್ಷಕರಿಗೆ ಸಿಗದ ವೇತನ: ಮೂರು ವರ್ಷಗಳಿಂದ ಈಡೇರದ ಬೇಡಿಕೆ

    ಭರತ್ ಶೆಟ್ಟಿಗಾರ್ ಮಂಗಳೂರು
    ವಿಶೇಷ ಮಕ್ಕಳ ಬೆಳವಣಿಗೆಯಲ್ಲಿ ಹೆತ್ತವರಿಗಿಂತಲೂ ಹೆಚ್ಚಿನ ಜವಾಬ್ದಾರಿ, ಕಾಳಜಿ ವಹಿಸುವವರು ಶಿಕ್ಷಕರು. ಆದರೆ ಇಂತಹ ವಿಶೇಷ ಶಾಲಾ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಇಂದು ಕನಿಷ್ಠ ವೇತನವೂ ಇಲ್ಲದೆ ಸಂಕಷ್ಟ ಸ್ಥಿತಿಯಲ್ಲಿದ್ದಾರೆ.

    ಶಿಶುಕೇಂದ್ರಿತ ಶಿಕ್ಷಣ ಸಹಾಯಧನ ಯೋಜನೆಯಲ್ಲಿ ರಾಜ್ಯದಲ್ಲಿ 178 ಸಂಸ್ಥೆಗಳು ಅನುದಾನ ಪಡೆಯುತ್ತಿವೆ. ಈ ಸಂಸ್ಥೆಗಳಲ್ಲಿ ಸೇವಾ ನಿರತ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಕೇಂದ್ರ ಸರ್ಕಾರ ಘೋಷಿಸಿರುವ ಕನಿಷ್ಠ ವೇತನನ್ನು ಇನ್ನೂ ಪಡೆಯುತ್ತಿಲ್ಲ. ಪ್ರಸ್ತತ ಶಿಕ್ಷಕರು 13,500 ರೂ.ಹಾಗೂ ಪರಿಚಾರಕಿಯರು ತಿಂಗಳಿಗೆ 8ರಿಂದ 9 ಸಾವಿರ ರೂ.ವೇತನ ಪಡೆಯುತ್ತಿದ್ದಾರೆ. ವೇತನ ದ್ವಿಗುಣ ಗೊಳಿಸಬೇಕೆಂದು ರಾಜ್ಯ ವಿಶೇಷ ಶಿಕ್ಷಕರು ಮತ್ತು ಶಿಕ್ಷಕೇತರ ಸಂಘ ಮೂರು ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದೆ. ಆದರೂ ರಾಜ್ಯ ಸರ್ಕಾರ ಶಿಕ್ಷಕರ ಕುರಿತು ಗಮನ ಹರಿಸದ ಕಾರಣ, ಡಿ.3ರಂದು (ವಿಶ್ವ ಅಂಗವಿಕಲ ದಿನ) ರಾಜ್ಯದ 17 ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲು ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟ ಮತ್ತು ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಸಂಘ ನಿರ್ಧರಿಸಿದೆ.

    ಇತರ ಶಿಕ್ಷಕರಿಗಿಂತ ಭಿನ್ನ: ರಾಜ್ಯದಲ್ಲಿ 2500 ವಿಶೇಷ ಶಿಕ್ಷಕರಿದ್ದಾರೆ. ಭಾರತೀಯ ಪುನರ್ವಸತಿ ಮಂಡಳಿ ಅನುಮೋದಿತ ಡಿಎಡ್ ಎಸ್‌ಇ-ಎಂಆರ್ (ಡಿಎಡ್ ಸ್ಪೆಷಲ್ ಎಜುಕೇಷನ್-ಮೆಂಟಲ್ ರಿಟಾರ್ಡೇಶನ್) ಕೋರ್ಸ್ ಮಾಡಿದವರು ಮಾತ್ರ ವಿಶೇಷ ಶಾಲೆಯಲ್ಲಿ ಶಿಕ್ಷಕರಾಗಲು ಸಾಧ್ಯ. ಇತರ ಶಾಲಾ ಶಿಕ್ಷಕರಿಗಿಂತ ಶಿಕ್ಷಕರ ಕೆಲಸ ಭಿನ್ನವಾಗಿದ್ದು, ಮಕ್ಕಳ ಸಂಪೂರ್ಣ ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ. ಸಂಪೂರ್ಣ ಸೇವಾ ಮನೋಭಾವದಿಂದ ಕೆಲಸ ಮಾಡಬೇಕಾದ ಅವಶ್ಯಕತೆ ಇರುವುದರಿಂದ ಇತ್ತೀಚಿನ ದಿನಗಳಲ್ಲಿ ವಿಶೇಷ ಶಾಲೆಗಳಿಗೆ ಶಿಕ್ಷಕರೂ ದೊರೆಯುವುದಿಲ್ಲ.

    ಮನೆಗೆ ತೆರಳಿ ತರಬೇತಿ: ಕೋವಿಡ್‌ನಿಂದಾಗಿ ಜೂನ್‌ನಿಂದ ಮೇ ತಿಂಗಳವರೆಗೆ ವಿಶೇಷ ಶಾಲೆಗಳೂ ಮುಚ್ಚಿತ್ತು. ಜೂನ್‌ನಿಂದ ಮತ್ತೆ ಆರಂಭವಾಗಿದ್ದು, ಶಿಕ್ಷಕರು ಮತ್ತು ಶಿಕ್ಷಕೇತರರು ಶಾಲೆಗಳಿಗೆ ಹಾಜರಾಗಿದ್ದಾರೆ. ಕೆಲವು ಶಾಲೆಗಳು ಆನ್‌ಲೈನ್ ಮೂಲಕ ಶಿಕ್ಷಣ ಮುಂದುವರಿಸಿದ್ದರೆ, ಇನ್ನು ಕೆಲವು ಶಿಕ್ಷಕರು ಗೃಹಾಧಾರಿತ ಶಿಕ್ಷಣ ಕ್ರಮದ ಮೂಲಕ ಮಕ್ಕಳ ಮನೆಗೇ ಹೋಗಿ ತರಬೇತಿ ಮುಂದುವರಿಸಿದ್ದಾರೆ.

    ಜೂನ್‌ನಿಂದ ವೇತನವೂ ಇಲ್ಲ: ಜೂನ್‌ನಿಂದ ಇಲ್ಲಿಯವರೆಗೆ ವಿಶೇಷ ಶಿಕ್ಷಕರಿಗೆ ಒಂದು ಪೈಸೆಯೂ ಸರ್ಕಾರದಿಂದ ಬಿಡುಗಡೆಯಾಗಿಲ್ಲ. ಕೋವಿಡ್ ಸಂಕಷ್ಟದ ಸಮಯದಲ್ಲಿ ಇದು ಶಿಕ್ಷಕರಿಗೆ ಹೊರೆ. ಈ ಕುರಿತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಿಂದಿನ ನಿರ್ದೇಶಕರಿಗೆ ಶಿಕ್ಷಕರು ಮತ್ತು ಶಿಕ್ಷಕೇತರ ಸಂಘದಿಂದ ಮನವಿ ಸಲ್ಲಿಸಲಾಗಿದ್ದರೂ, ಇಲ್ಲಿವರೆಗೆ ವೇತನ ಬಿಡುಗಡೆಯಾಗಿಲ್ಲ. ಇದರಿಂದ ಶಿಕ್ಷಕರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಹೊಸದಾಗಿ ನೇಮಕವಾಗಿರುವ ನಿರ್ದೇಶಕರ ಗಮನಕ್ಕೆ ಇದನ್ನು ತರಲಾಗಿದ್ದು, ಶೀಘ್ರ ಬಿಡುಗಡೆಯ ಭರವಸೆ ಸಿಕ್ಕಿದೆ ಎನ್ನುತ್ತಾರೆ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ವಸಂತ ಕುಮಾರ್ ಶೆಟ್ಟಿ.

    ಹಲವು ವರ್ಷಗಳಿಂದ ವೇತನ ಹೆಚ್ಚಿಸುವಂತೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ, ಇನ್ನೂ ಈಡೇರಿಲ್ಲ. ಆದ್ದರಿಂದ ಇತ್ತೀಚೆಗೆ ರಾಜ್ಯ ವಿಶೇಷ ಶಾಲಾ ಮುಖ್ಯಸ್ಥರ ಸಭೆಯಲ್ಲಿ ಡಿ.3ರಂದು ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ಬಹಿಷ್ಕರಿಸಿ, ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.
    ಡಾ.ಕಾಂತಿ ಹರೀಶ್ ಅಧ್ಯಕ್ಷೆ, ರಾಜ್ಯ ವಿಶೇಷ ಶಿಕ್ಷಕರು ಮತ್ತು ಶಿಕ್ಷಕೇತರರ ಸಂಘ

    ವಿಶೇಷ ಶಾಲಾ ಶಿಕ್ಷಕರ ವೇತನ ದ್ವಿಗುಣ ನಿಟ್ಟಿನಲ್ಲಿ ಸಚಿವರಿಗೆ ಮನವಿ ನೀಡಿರುವ ಮಾಹಿತಿ ಇಲ್ಲ. ಇಲಾಖೆಗೆ ಆದೇಶ ಬಂದಿಲ್ಲ. ಜೂನ್‌ನಿಂದ ವೇತನ ಬಾಕಿ ಇರುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.
    ಮುನಿರಾಜು ನಿರ್ದೇಶಕರು, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಬೆಂಗಳೂರು

    ಫೋಟೋ………………..ಎಂಎನ್‌ಜಿ-ಆಕ್ಟ್30-ಡಾ.ಕಾಂತಿ ಹರೀಶ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts