More

    ಕಾಪು ಬೀಚ್ ಪ್ರವಾಸೋದ್ಯಮಕ್ಕೆ ಹಿನ್ನಡೆ

    ಹೇಮನಾಥ್ ಪಡುಬಿದ್ರಿ
    ಕರೊನಾದಿಂದ ಕಳೆದ ಕೆಲ ತಿಂಗಳಿನಿಂದ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದ್ದ ಕಾಪು ತಾಲೂಕಿನ ಕಡಲತೀರದ ಪ್ರವಾಸೋದ್ಯಮ ಅನ್‌ಲಾಕ್ ಆಗಿ ಚೇತರಿಸಿಕೊಳ್ಳುತ್ತಿದ್ದಂತೆ ಪ್ರಾಕೃತಿಕ ವಿಕೋಪ ಮತ್ತೆ ಹೊಡೆತ ನೀಡಿದೆ.

    ಕೆಲ ದಿನಗಳ ಹಿಂದೆ ಸುರಿದ ಮಳೆಯಬ್ಬರಕ್ಕೆ ಕಾಪು ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಲೈಟ್‌ಹೌಸ್(ದ್ವೀಪಸ್ತಂಭ) ಸಂಪರ್ಕಿಸುವ ಕಾಲು ದಾರಿ ಕಡಿತಗೊಂಡರೆ, ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿಗೊಂಡ ಪಡುಬಿದ್ರಿ ಕಡಲತೀರ ಕಳೆದ ಆಗಸ್ಟ್‌ನಲ್ಲಿ ಉಂಟಾದ ಕಡಲ್ಕೊರೆತಕ್ಕೆ ನಲುಗಿ ಸೌಂದರ್ಯವನ್ನೇ ಕಳೆದುಕೊಂಡಿದೆ. ಪಡುಬಿದ್ರಿ ಬೀಚ್ ಶೌಚಗೃಹ ಸೇರಿದಂತೆ ಹಿಂದೆ ನಿರ್ಮಿಸಿದ ಸುಮಾರು 1.5 ಕೋಟಿ ರೂ. ಅಭಿವೃದ್ಧಿ ಯೋಜನೆಗಳು ಕಡಲ್ಕೊರೆತಕ್ಕೆ ಹಾನಿಗೊಳಗಾಗಿದೆ. ಮಳೆ ಕಡಿಮೆಯಾದರೂ ಸಂಪರ್ಕ ಕಡಿತಗೊಂಡಿರುವ ಲೈಟ್‌ಹೌಸ್ ಬಂಡೆಗೆ ಏರಲಾಗದೆ ಪ್ರವಾಸಿಗರು ನಿರಾಶರಾಗುತ್ತಿದ್ದಾರೆ.

    ಹೋಂ ಸ್ಟೇಗಳ ಆರಂಭ: ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ 2017ರಿಂದ ಖಾಸಗಿ ಸಹಭಾಗಿತ್ವದಲ್ಲಿ ಹೋಮ್‌ಸ್ಟೇಗಳಿಗೆ ಅನುಮತಿ ನೀಡಲಾಗಿದ್ದು, ಕಾಪು ತಾಲೂಕಿನಲ್ಲಿ 5 ಹೋಂ ಸ್ಟೇಗಳಿಗೆ ಪರವಾನಗಿ ನೀಡಲಾಗಿತ್ತು. ಇನ್ನೆರಡು ಅರ್ಜಿಗಳು ಬಾಕಿ ಇವೆ. 2 ವರ್ಷಗಳ ಹಿಂದೆ ಕಾಪು ಲೈಟ್ ಹೌಸ್ ಪಕ್ಕ ಸ್ಕೂಬಾ ಡೈವಿಂಗ್ ಆರಂಭಿಸಲಾಗಿದ್ದು, ಮಳೆಗಾಲ ಹಾಗೂ ಕರೊನಾ ಪರಿಣಾಮ ಅದೂ ಸ್ಥಗಿತವಾಗಿದೆ.

    ಬ್ಲೂ ಫ್ಲಾೃಗ್ ಬೀಚ್ ಮೆರುಗು: ಕಾಮಿನಿ ನದಿ ಸಮುದ್ರ ಸೇರುವ ಪಡುಬಿದ್ರಿ ಎಂಡ್ ಪಾಯಿಂಟ್ ಬಳಿ ಕಾರ್ಯಗತವಾಗಿರುವ ಬ್ಲೂಫ್ಲಾೃಗ್ ಬೀಚ್ ಅಭಿವೃದ್ಧಿ ಕಾಮಗಾರಿ ಮುಕ್ತಾಯ ಹಂತ ತಲುಪಿದ್ದು, ಕೇಂದ್ರ ನಿರ್ಣಾಯಕರ ಮಂಡಳಿ ಬೀಚ್‌ಗೆ ಈಗಾಗಲೇ ವಿಶೇಷ ಪರಿಕಲ್ಪನೆಯ ಸ್ವಚ್ಛ ಹಾಗೂ ಸೊಗಸಾದ ಬೀಚ್ ಎಂಬ ಪ್ರಶಂಸೆಯನ್ನೂ ನೀಡಿದೆ. ಅಂತಾರಾಷ್ಟ್ರೀಯ ನಿರ್ಣಾಯಕ ಮಂಡಳಿ ಪರಿಶೀಲನೆ ಬಳಿಕ ಬ್ಲೂ ಫ್ಲಾ್ಲೃಗ್ ಬೀಚ್ ಮಾನ್ಯತೆ ದೊರೆಯುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ ಈ ಬೀಚ್ ಪ್ರವಾಸಿಗಳ ಆಕರ್ಷಿಸುವ ತಾಣವಾಗಲಿದೆ.

    ಈಗಾಗಲೇ ಶೌಚಗೃಹದವರೆಗೆ ಕಾಲುದಾರಿ ನಿರ್ಮಿಸಲಾಗಿದೆ. ಅಲ್ಲಿಂದ ಲೈಟ್ ಹೌಸ್ ಸಂಪರ್ಕಿಸಲು ನದಿ ಹಾಗೂ ಕಡಲು ನೀರು ಹಾದು ಹೋಗುವಂತೆ ಕಿರುಸೇತುವೆ ಹಾಗೂ ಕಾಲುದಾರಿ ನಿರ್ಮಿಸಲಾಗುವುದು.
    ಲಾಲಾಜಿ ಆರ್.ಮೆಂಡನ್, ಕಾಪು ಶಾಸಕ

    ಕಾಪು ಬೀಚ್ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ಮೂಲಕ 3.5 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದ್ದು, ಲೈಟ್‌ಹೌಸ್ ಡಿಪಾರ್ಟ್‌ಮೆಂಟ್‌ನಿಂದಲೂ 8 ಕೋಟಿ ರೂ. ಯೋಜನೆ ಸಿದ್ಧಪಡಿಸಲಾಗಿದೆ. ಹಾನಿಗೊಂಡ ಪಡುಬಿದ್ರಿ ಬೀಚ್‌ನ ಅಂದಾಜುಪಟ್ಟಿ ತಯಾರಿಸಿ ವರದಿ ನೀಡುವಂತೆ ಕೆಐಆರ್‌ಡಿಎಲ್‌ಗೆ ಸೂಚಿಸಿದ್ದು, ಬಳಿಕ ಪ್ರಸ್ತಾವನೆ ಸಿದ್ಧಪಡಿಸಲಾಗುವುದು. ಬ್ಲೂಫ್ಲಾೃಗ್ ಬೀಚ್ ಬಳಿಯ ಕುದ್ರು ಅಭಿವೃದ್ಧಿಗೆ 6 ಕೋಟಿ ರೂ.ಪ್ರಸ್ತಾವನೆ ಸಲ್ಲಿಸಲಾಗಿದೆ.
    ಡಾ.ಚಂದ್ರಶೇಖರ ನಾಯಕ್ ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts