More

    ಹೊಸ ಇಂಜಿನಿಯರಿಂಗ್​ ಕಾಲೇಜುಗಳಿಗೆ ಅನುಮತಿ ಕೊಡದಿರಲು ನಿರ್ಧಾರ; ಯಾಕೆ? ಇಲ್ಲಿದೆ ಮಾಹಿತಿ…

    | ದೇವರಾಜ್ ಕನಕಪುರ ಬೆಂಗಳೂರು

    ರಾಜ್ಯದಲ್ಲಿ ಹೊಸ ಇಂಜಿನಿಯರಿಂಗ್ ಕಾಲೇಜುಗಳು ತಲೆ ಎತ್ತುವಂತಿಲ್ಲ! ಪ್ರತಿ ಬಾರಿ ಇಂಜಿನಿಯರಿಂಗ್ ಸೀಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಉಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಕಾಲೇಜು ಆರಂಭಕ್ಕೆ ಮಾನ್ಯತೆ ನೀಡದಿರಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ನಿರ್ಧರಿಸಿದೆ. ಇನ್ನು ಮುಂದೆ ರಾಜ್ಯದಲ್ಲಿ ಹೊಸ ಇಂಜಿನಿಯರಿಂಗ್ ಕಾಲೇಜುಗಳು ಪ್ರಾರಂಭವಾಗುವುದಿಲ್ಲ. ಇದರಿಂದಾಗಿ ಹಾಲಿ ಇರುವ ಇಂಜಿನಿಯರಿಂಗ್ ಕಾಲೇಜುಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯಲಿ ಎಂಬುದು ವಿಟಿಯು ಆಲೋಚನೆಯಾಗಿದೆ.

    ಅಲ್ಲದೆ, ಈ ರೀತಿಯ ನಿರ್ಧಾರದಿಂದಾಗಿ ರಾಜ್ಯದಲ್ಲಿರುವ ಇಂಜಿನಿಯರಿಂಗ್ ಕಾಲೇಜುಗಳು ಮೂಲಸೌಕರ್ಯದ ಕಡೆ ಹೆಚ್ಚಿನ ಗಮನ ನೀಡಲಿವೆ ಎಂಬುದು ವಿಟಿಯು ಈ ರೀತಿ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ. ಸದ್ಯ ರಾಜ್ಯದಲ್ಲಿ ವಿಟಿಯು ವ್ಯಾಪ್ತಿಯಲ್ಲಿ 219 ಇಂಜಿನಿಯರಿಂಗ್ ಕಾಲೇಜುಗಳಿವೆ. 3.25 ಲಕ್ಷ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

    ಕಾಲೇಜು ಮುಚ್ಚಿ: ಇಂಜಿನಿಯರಿಂಗ್ ಕೋರ್ಸ್​ಗೆ ಅತಿ ಹೆಚ್ಚು ಬೇಡಿಕೆ ಇದ್ದಂತಹ ವೇಳೆಯಲ್ಲಿ ಪ್ರತಿ ವರ್ಷ 6-8 ಹೊಸ ಕಾಲೇಜುಗಳು ಮಾನ್ಯತೆ ಕೋರಿ ಅರ್ಜಿ ಸಲ್ಲಿಸುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಹಾಲಿ ಇರುವ ಕಾಲೇಜುಗಳಲ್ಲಿನ ಸೀಟುಗಳೇ ಭರ್ತಿಯಾಗದೆ ಇರುವುದರಿಂದ ಕಾಲೇಜುಗಳೇ ಸ್ವಹಿತಾಸಕ್ತಿಯಿಂದ ಬಂದ್ ಮಾಡುವುದಕ್ಕೆ ಅನುಮತಿ ಕೋರಿ ವಿಟಿಯುಗೆ ಪತ್ರ ಬರೆಯುತ್ತಿವೆ. ಹೀಗಾಗಿ ಈ ವರ್ಷ ಯಾವುದೇ ಹೊಸ ಕಾಲೇಜುಗಳು ಅರ್ಜಿ ಸಲ್ಲಿಸಿಲ್ಲವೆಂದು ತಿಳಿದು ಬಂದಿದೆ.

    ಕಳೆದ ವರ್ಷ ಆರು ಇಂಜಿನಿಯರಿಂಗ್ ಕಾಲೇಜುಗಳು ಬಾಗಿಲು ಹಾಕಿವೆ. ಇದರಲ್ಲಿ ಬೆಂಗಳೂರಿನಲ್ಲೇ ಮೂರು ಕಾಲೇಜುಗಳಿದ್ದವು. ಕಳೆದ ಎರಡು ವರ್ಷದಲ್ಲಿ 12 ಕಾಲೇಜುಗಳಿಗೆ ವಿಟಿಯು ಬೀಗ ಜಡಿದಿದೆ. ಕಾಲೇಜುಗಳಲ್ಲಿ ಅಗತ್ಯ ಮೂಲ ಸೌಕರ್ಯ ಇಲ್ಲದಿರುವುದೇ ಕಾಲೇಜು ಮುಚ್ಚುವುದಕ್ಕೆ ಕಾರಣ ಎಂದು ವಿಟಿಯು ತಿಳಿಸಿದೆ.

    5 ವರ್ಷದಲ್ಲೇ ಹೆಚ್ಚು: ಈ ಬಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ 23 ಸಾವಿರ ಸೀಟುಗಳು ಬಾಕಿ ಉಳಿದಿವೆ. ಕಳೆದ ಐದು ವರ್ಷಕ್ಕೆ ಹೋಲಿಕೆ ಮಾಡಿದರೆ, ಅತಿ ಹೆಚ್ಚು ಸಂಖ್ಯೆಯಲ್ಲಿ ಉಳಿಕೆಯಾಗಿರುವುದು ಕಂಡು ಬಂದಿದೆ. ಅದರಲ್ಲೂ, ಕೆಲವು ಕಾಲೇಜುಗಳಲ್ಲಿ ಸೀಟುಗಳೇ ಭರ್ತಿಯಾಗಿಲ್ಲ. 57 ಕಾಲೇಜುಗಳಲ್ಲಿ 50ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

    ಈ ಬಾರಿ ದ್ವೀತಿಯ ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾಡಲಿಲ್ಲ. ಬದಲಾಗಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಎಲ್ಲರನ್ನೂ ಉತ್ತೀರ್ಣ ಎಂದು ಘೋಷಿಸಿದ ಹಿನ್ನೆಲೆಯಲ್ಲಿ 2021ರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕೋರ್ಸ್ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ, ನಿರೀಕ್ಷೆಯಂತೆ ಸೀಟುಗಳು ಭರ್ತಿಯಾಗಲಿಲ್ಲ.

    ಎಐಸಿಟಿಇ ದಾರ: ತಾಂತ್ರಿಕ ಕೋರ್ಸ್​ಗಳನ್ನು ನಿಯಂತ್ರಿಸುವ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು(ಎಐಸಿಟಿಇ) ಇಂಜಿನಿಯರಿಂಗ್ ಕಾಲೇಜುಗಳ ಗುಣಮಟ್ಟ ಕಾಯ್ದುಕೊಳ್ಳಲು ವಿಟಿಯುಗೆ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ. ರಾಜ್ಯದಲ್ಲಿರುವ ಇಂಜಿನಿಯರಿಂಗ್ ಕಾಲೇಜುಗಳ ಪಟ್ಟಿಯಲ್ಲಿ ಬೆಂಗಳೂರು ಭಾಗದಲ್ಲೇ ಅತಿ ಹೆಚ್ಚು ಕಾಲೇಜುಗಳಿವೆ.

    ನಾಯಿ ಕೊಡೆ ರೀತಿಯಲ್ಲಿ ಇಂಜಿನಿಯರಿಂಗ್ ಕಾಲೇಜುಗಳು ಬೆಳೆಯುವುದಕ್ಕೆ ಬಿಡುವುದಿಲ್ಲ. ಈ ಹಿನ್ನೆಲೆಯಲ್ಲಿ ಹೊಸ ಕಾಲೇಜುಗಳ ಆರಂಭಕ್ಕೆ ಅನುಮತಿ ನೀಡುತ್ತಿಲ್ಲ. ಇರುವ ಕಾಲೇಜುಗಳಲ್ಲೇ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡುವಂತೆ ಸೂಚಿಸಲಾಗಿದೆ.

    |ಪ್ರೊ.ಕರಿಸಿದಪ್ಪ ಕುಲಪತಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts