ಟಾಯ್ಲೆಟ್​ ಹಣಕ್ಕೂ ಕೈಚಾಚಿದ ಟೀಚರ್; ಎಸಿಬಿ ಬಲೆಗೆ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿ

Abeeda
Published on

ಬಳ್ಳಾರಿ: ಶೌಚಗೃಹ ನಿರ್ಮಾಣದ ಹಣಕ್ಕೂ ಕೈ ಚಾಚಿದ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿಯೊಬ್ಬರು ಭ್ರಷ್ಟಾಚಾರ ವಿರೋಧಿ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ. ಬಳ್ಳಾರಿಯ ರೇಡಿಯೋ ಪಾರ್ಕ್ ಬಳಿ ಇರುವ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಅಬೀದಾ ಬೇಗಂ ಲಂಚಕ್ಕೆ ಬೇಡಿಕೆ ಇಟ್ಟು ಸಿಕ್ಕಿಬಿದ್ದವರು.

ಶಾಲೆಯಲ್ಲಿ ವಿಕಲಚೇತನ ಮಕ್ಕಳಿಗಾಗಿ ಶೌಚಗೃಹ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿರುವ ಕುರಿತು ದೃಢೀಕರಣ ಪತ್ರ ನೀಡಲು ಬಳ್ಳಾರಿಯ ಜಯನಗರ ಬಡಾವಣೆ ನಿವಾಸಿ, ಗುತ್ತಿಗೆದಾರ ಮೊಹಮ್ಮದ್​ ಜುಲ್ಫೀಕರ್​ ಎಂಬುವವರ ಬಳಿ ಅಬೀದಾ ಬೇಗಂ 10 ಸಾವಿರ ರೂ. ಲಂಚ ಕೇಳಿದ್ದರು.

ಈ ಕುರಿತು ಮೊಹಮ್ಮದ್​ ಜುಲ್ಫೀಕರ್​ ಎಸಿಬಿಗೆ ದೂರು ನೀಡಿದ್ದರು. ಬಳಿಕ ಅಬೀದಾಗೆ ಹಣ ನೀಡುವ ಸಂದರ್ಭ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಎಸಿಬಿ ಎಸ್​ಪಿ ಶ್ರೀಹರಿ ಬಾಬು ಮಾರ್ಗದರ್ಶನದಲ್ಲಿ ಡಿವೈಎಸ್​​ಪಿ ಸೂರ್ಯನಾರಾಯಣ ರಾವ್​ ಹಾಗೂ ತಂಡ ದಾಳಿ ನಡೆಸಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net