More

    ಪ್ರವಾಹ ಕುರಿತು ಆತಂಕ ಪಡುವ ಅವಶ್ಯಕತೆಯಿಲ್ಲ; ಡಿಸಿ ಟಿ.ಭೂಬಾಲನ್ ಅಭಯ

    ವಿಜಯಪುರ: ಜಿಲ್ಲೆಯಲ್ಲಿ ಸದ್ಯ ಪ್ರವಾಹ ಪರಿಸ್ಥಿತಿ ಇಲ್ಲ. ಅದಾಗ್ಯೂ ಜಿಲ್ಲಾಡಳಿತ ಸಕಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.

    ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಬುಧವಾರ ಸಂಜೆ ಮುಖ್ಯಮಂತ್ರಿಗಳೊಂದಿಗೆ ನಡೆದ ವಿಡಿಯೋ ಸಂವಾದದ ಬಳಿಕ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ವಿಪತ್ತು ನಿರ್ವಹಣೆಗಾಗಿ ಮುಖ್ಯಮಂತ್ರಿಗಳು ಸೂಕ್ತ ನಿರ್ದೇಶನ ನೀಡಿದ್ದು, ಮಳೆ ಹಾನಿಯಿಂದಾಗುವ ಜೀವ, ಜಾನುವಾರು ಹಾಗೂ ಮನೆ ಹಾನಿಗಳನ್ನು ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

    ನದಿ ಅಥವಾ ಸೇತುವೆಗಳ ಬಳಿ ಜನರು ಹೋಗದಂತೆ ಕಟ್ಟೆಚ್ಚರ ವಹಿಸಬೇಕು. ಪ್ರವಾಹ ಉಂಟಾಗಬಹುದಾದ ಗ್ರಾಮಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಪದೇ ಪದೇ ಪ್ರವಾಹಕ್ಕೊಳಗಾಗುವ ಗ್ರಾಮಗಳಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದರು.

    ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಕ್ರಮ ವಹಿಸಬೇಕು. ದುರಸ್ತಿಗೊಳಪಡುವ ಶಾಲಾ-ಅಂಗನವಾಡಿ, ಸಮುದಾಯ ಆರೋಗ್ಯ ಕೇಂದ್ರ ಕಟ್ಟಡಗಳನ್ನು ಗುರುತಿಸಿ, ತಕ್ಷಣ ದುರಸ್ತಿಗೆ ಕ್ರಮ ವಹಿಸಬೇಕು ಎಂದು ಹೇಳಿದರು.

    ಭೀಮಾ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿಗೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲಾಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿಕೊಂಡು ಸಮರ್ಥ ನಿರ್ವಹಣೆಗೆ ಮುಖ್ಯಮಂತ್ರಿಗಳು ಸೂಚಿಸಿದ ಹಿನ್ನೆಲೆಯಲ್ಲಿ ಈ ಕುರಿತು ಅಧಿಕಾರಿಗಳು ಸನ್ನದ್ಧರಾಗಿ ಅಗತ್ಯ ಕ್ರಮಕ್ಕೆ ಮುಂದಾಗಬೇಕು ಎಂದು ಹೇಳಿದರು.

    ನದಿ ಪಾತ್ರಗಳಲ್ಲಿ ಹೆಚ್ಚಿನ ನಿಗಾ ವಹಿಸಿ, ಯಾವುದೇ ಅನಾಹುತಗಳು ಸಂಭವಿಸದಂತೆ ನೋಡಿಕೊಳ್ಳಬೇಕು. ಬರಗಾಲ-ಪ್ರವಾಹ ಪರಿಸ್ಥಿತಿಯಲ್ಲಿ ರೈತರ ಸಾಲ ವಸೂಲಾತಿಗೆ ಒತ್ತಾಯಿಸದಂತೆ ಸಂಬಂಧಿಸಿದವರಿಗೆ ಸೂಚಿಸಲಾಯಿತು.

    ಪರಿಸ್ಥಿತಿಯ ಕುರಿತು ತೀವ್ರ ನಿಗಾ ಇಡಬೇಕು. ಜಿಲ್ಲೆಯಲ್ಲಿ ಪ್ರತಿದಿನ ಮಳೆಯ ವರದಿ, ಪ್ರಕೃತಿ ವಿಕೋಪದಿಂದ ಉಂಟಾಗಿರುವ ಮಾನವ-ಜಾನುವಾರು ಹಾನಿ, ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿ ಮತ್ತು ಮಳೆಯಿಂದ ಹಾನಿಗೊಳಗಾದ ಮನೆಗಳ ವರದಿಯನ್ನು ತಕ್ಷಣವೇ ಸಿದ್ಧಪಡಿಸಿ, ಪ್ರತಿದಿನ ವರದಿ ಸಲ್ಲಿಸುವಂತೆ ಅವರು ಸೂಚನೆ ನೀಡಿದರು.

    ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಯಾವುದೇ ಅವಘಡಗಳು ಸಂಭವಿಸಿದ್ದಲ್ಲಿ ತಕ್ಷಣವೇ ಸಂಬಂಧಿಸಿದ ತಹಸೀಲ್ದಾರ್, ಕಂದಾಯ ನೀರಿಕ್ಷಕರು, ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಆಸ್ತಿ-ಪಾಸ್ತಿ, ಜನ-ಜಾನುವಾರು ಜೀವಹಾನಿಗಳಿಗೆ 24 ಗಂಟೆಯೊಳಗಾಗಿ ನಿಯಮಾನುಸಾರ ಪರಿಹಾರ ವಿತರಣೆಗೆ ಕ್ರಮ ವಹಿಸಬೇಕು. ಪ್ರಕೃತಿ ವಿಕೋಪದ ಕುರಿತು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಹಾಗೂ ಸಲಹೆ ಸೂಚನೆಗಳನ್ನು ನೀಡಬೇಕು ಎಂದರು.

    ಎಸ್‌ಪಿ ಎಚ್.ಡಿ. ಆನಂದಕುಮಾರ, ಜಿಪಂ ಸಿಇಒ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ವಿಜಯಪುರ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ, ಇಂಡಿ ಉಪವಿಭಾಗಾದಿಕಾರಿ ಆಬಿದ್ ಗದ್ಯಾಳ, ಲೋಕೋಪಯೋಗಿ ಇಲಾಖೆ ಅಭಿಯಂತರ ರಾಜು ಮುಜುಮದಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಲ್.ರೂಪಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಿದ್ರಾಮಯ್ಯ ಬರಗಿಮಠ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts