More

    ಎಷ್ಟೇ ಎಫ್‌ಐಆರ್ ಹಾಕಿದರೂ ಹೆದರಲ್ಲ: ಈಶ್ವರಪ್ಪ ಗುಡುಗು

    ಶಿವಮೊಗ್ಗ: ಯುವ ಬ್ರಿಗೇಡ್‌ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಶಿವಮೊಗ್ಗ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿರುವುದು ಸಹ ರಾಜ್ಯ ಸರ್ಕಾರದ ಮುಸ್ಲಿಂ ತುಷ್ಟೀಕರಣ ನೀತಿ. ಅವರು ಎಷ್ಟೇ ಎಫ್‌ಐಆರ್ ದಾಖಲಿಸಿದರೂ ನಾವು ಹೆದರುವುದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಗುಡುಗಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ಸಂಸದ ಡಿ.ಕೆ.ಸುರೇಶ್ ದಕ್ಷಿಣ ಭಾರತವನ್ನು ವಿಭಜಿಸುವ ಹೇಳಿಕೆ ನೀಡಿದ್ದಾರೆ. ವಿನಯ್ ಕುಲಕರ್ಣಿ, ಡಿ.ಕೆ.ಶಿವಕುಮಾರ್ ಬೆಂಬಲ ನೀಡಿದ್ದಾರೆ. ಆದರೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಇದನ್ನು ಖಂಡಿಸಿದ್ದಾರೆ. ಅವರು ಕೇಸ್ ಹಾಕಲಿ ಎಂದು ಆಗ್ರಹಿಸುತ್ತೇನೆ. ಆಗ ಕೋರ್ಟ್‌ಗೆ ಮಲ್ಲಿಕಾರ್ಜುನ ಖರ್ಗೆ ಕೂಡ ಬರಬೇಕಾಗುತ್ತದೆ. ನ್ಯಾಯಾಲಯ ದೇಶದ್ರೋಹಿಗಳಿಗೆ ಮನ್ನಣೆ ನೀಡುತ್ತದೆಯೋ? ರಾಷ್ಟ್ರಭಕ್ತರಿಗೆ ಮನ್ನಣೆ ನೀಡುತ್ತದೆಯೋ ಎಂಬುದು ಗೊತ್ತಾಗುತ್ತದೆ. ಕೋರ್ಟ್ ಯಾರಿಗೆ ಛೀಮಾರಿ ಹಾಕುತ್ತದೆ ಎಂಬುದು ತಿಳಿಯುತ್ತದೆ ಎಂದು ಹೇಳಿದರು.
    ಈ ದೇಶದಲ್ಲಿ ಹನುಮ ಧ್ವಜ ಹಾರಿಸಲಿಕ್ಕೂ ಅವಕಾಶ ಇಲ್ಲವಲ್ಲ ಎಂದು ಬೇಸರವಾಗುತ್ತಿದೆ. ಮುಂದೆ ಇದಕ್ಕೆ ಜನರೇ ಉತ್ತರ ನೀಡುತ್ತಾರೆ. ನಾನು ದಾವಣಗೆರೆಯಲ್ಲಿ ಹೇಳಿದ ಮಾತಿಗೆ ಈಗಲೂ ಬದ್ಧ ಎಂದರು.
    ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಾಂಗ್ರೆಸ್ ಏಜೆಂಟ್ ಎಂದು ಈ ಮೊದಲೇ ನಾನು ಹೇಳಿದ್ದೆ. ಅವರು ಇದೀಗ ಮತ್ತೊಮ್ಮೆ ಕಮಿಷನ್ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಯಾವ ಇಲಾಖೆಯಲ್ಲಿ ಯಾವ ಅಧಿಕಾರಿಗಳು, ಸಚಿವರು ಕಮಿಷನ್ ಕೇಳಿದ್ದಾರೆ ಎಂದು ಬಹಿರಂಗಪಡಿಸಲಿ. ತಾವು ಕಾಂಗ್ರೆಸ್ ಏಜೆಂಟ್ ಎಂಬ ಆರೋಪದಿಂದ ತಪ್ಪಿಸಿಕೊಳ್ಳಲು ಅವರು ಈಗ ನಾಟಕ ಮಾಡುತ್ತಿದ್ದಾರೆ. ಅವರ ಬಳಿ ದಾಖಲೆ ಇದ್ದರೆ ಸರ್ಕಾರ ಮತ್ತು ಆಯೋಗಕ್ಕೆ ನೀಡಲಿ. ಒಂದೊಮ್ಮೆ ದಾಖಲೆ ನೀಡಿದರೂ ಅದು 10 ವರ್ಷ ಕಳೆದರೂ ತನಿಖೆ ಆಗುವುದಿಲ್ಲ ಎಂದು ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.

    ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ ಕುರಿತು ಶ್ವೇತಪತ್ರ ಹೊರಡಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಆದರೆ ಈವರೆಗೆ ಅದನ್ನು ಅವರು ಹೊರಡಿಸಿಲ್ಲ. ಹೊರಡಿಸುವುದೂ ಇಲ್ಲ. ಶ್ವೇತಪತ್ರ ಬಿಡುಗಡೆ ಮಾಡಿದರೆ ವಾಸ್ತವಾಂಶ ತಿಳಿಯುತ್ತದೆ. ಅವರು ಹೇಳುತ್ತಿರುವುದು ಸುಳ್ಳು ಎಂದು ಜನರಿಗೆ ಗೊತ್ತಾಗುತ್ತದೆ. ಸಿದ್ದರಾಮಯ್ಯ ಯಾವ ಕಾರಣಕ್ಕೂ ಶ್ವೇತಪತ್ರ ಹೊರಡಿಸುವುದಿಲ್ಲ.
    ಕೆ.ಎಸ್.ಈಶ್ವರಪ್ಪ,ಮಾಜಿ ಡಿಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts