More

  ಆರ್‌ಡಿಪಿಆರ್ ಕಚೇರಿಯಲ್ಲೂ ಕಡತ ನಾಪತ್ತೆ

  ಬೆಂಗಳೂರು: ಕೆಪಿಎಸ್‌ಸಿ ಕಚೇರಿಯಲ್ಲಿ ಕಡತ ನಾಪತ್ತೆ ಬೆನ್ನಲ್ಲೆ ಇದೀಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲೂ (ಆರ್‌ಡಿಪಿಆರ್) ನೇಮಕಾತಿ ಸಂಬಂಧ ದಾಖಲೆಗಳು ಕಳವಾಗಿರುವುದು ಬೆಳಕಿಗೆ ಬಂದಿದ್ದು, ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಆರ್‌ಡಿಪಿಆರ್ ಅಧೀನ ಕಾರ್ಯದರ್ಶಿ ಬಿ. ನವೀನ್‌ಕುಮಾರ್, ಈ ಕುರಿತು ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕು ಭಾರತೀಪುರ ಕ್ರಾಸ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಿನೇಶ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಗ್ರಾಮ ಪಂಚಾಯಿತಿ ಶಾಖೆಯ 2016ರಲ್ಲಿ 273 ಹುದ್ದೆಗಳು ಮತ್ತು 2017ರಲ್ಲಿ 606 ಹುದ್ದೆಗಳ ನೇಮಕಾತಿ ಹಾಗೂ ವೈದ್ಯಕೀಯ ಕಾರಣಗಳ ಹಿನ್ನೆಲೆಯಲ್ಲಿ ಮತ್ತು ಅನುಕಂಪದ ಆಧಾರದ ಮೇಲೆ ಸರ್ಕಾರಿ ಹುದ್ದೆಯನ್ನು ನೀಡಿರುವ ಸಂಬಂಧಪಟ್ಟ ಕಡತಗಳು ನಾಪತ್ತೆಯಾಗಿದ್ದವು. 2018ರ ಮೇ 31ರಂದು ಆರ್‌ಡಿಪಿಆರ್ ಆಪ್ತ ನಿರ್ದೇಶಕರ ಕಚೇರಿಯಲ್ಲಿ ಕಡತಗಳನ್ನು ಸ್ವೀಕರಿಸುವ ಮಾಹಿತಿ ಉಲ್ಲೇಖವಾಗಿದೆ. ಆನಂತರ ಕಡತಗಳು ನಾಪತ್ತೆಯಾಗಿವೆ.

  ಈ ಸಮಯದಲ್ಲಿ ನಿರ್ದೇಶಕರ ಆಪ್ತ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದಿನೇಶ್‌ಕುಮಾರ್‌ಗೆ 2023ರ ಮಾರ್ಚ್ 15ರಂದು ನೋಟಿಸ್ ಕೊಟ್ಟು ಕಡತ ನಾಪತ್ತೆ ಕುರಿತು ಮಾಹಿತಿ ಕೋರಲಾಗಿತ್ತು. ಆದರೆ, ಇಲ್ಲಿಯವರೆಗೂ ನೋಟಿಸ್‌ಗೆ ಉತ್ತರ ಕೊಟ್ಟಿಲ್ಲ ಎಂದು ದೂರಿನಲ್ಲಿ ನವೀನ್‌ಕುಮಾರ್ ಆರೋಪಿಸಿದ್ದಾರೆ. ಇದರ ಮೇರೆಗೆ ದಿನೇಶ್ ಕುಮಾರ್ ವಿರುದ್ಧ ಕೇಸ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts