More

    ಜನರೇಟರ್ ಇಲ್ಲದೆ ದುಸ್ಥಿತಿಯಲ್ಲಿ ವಿಟ್ಲ ಪಿಎಚ್‌ಸಿ

    ನಿಶಾಂತ್ ಬಿಲ್ಲಂಪದವು ವಿಟ್ಲ
    ಎಲ್ಲ ವ್ಯವಸ್ಥೆಗಳಿದ್ದರೂ ವಿದ್ಯುತ್ ಇಲ್ಲದಿದ್ದರೆ ಎಲ್ಲವೂ ಸ್ಥಗಿತವಾಗುವ ಪರಿಸ್ಥಿತಿ… ಮನವಿ ಸಲ್ಲಿಸಿದರೂ ಈಡೇರದ ಬೇಡಿಕೆ… ತುರ್ತು ಪರಿಸ್ಥಿತಿಯಲ್ಲಿ ಅಗತ್ಯ ಸೇವೆ ಅನುಮಾನ.

    ಇದು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಸದ್ಯದ ದುಸ್ಥಿತಿ. ಇಲ್ಲಿ ಕೆಲವು ವರ್ಷಗಳ ಹಿಂದೆ ರಾತ್ರಿ ರೋಗಿಯೊಬ್ಬರ ನಿಧನವಾಗಿದ್ದು, ಈ ಸಂದರ್ಭ ವಿದ್ಯುತ್ ಇಲ್ಲದ ಕಾರಣ ಸಾರ್ವಜನಿಕರು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಆವಾಗ ಆಗಿನ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಸುಳ್ಯದಲ್ಲಿದ್ದ ಜನರೇಟರ್ ಒಂದನ್ನು ವಿಟ್ಲಕ್ಕೆ ತರಿಸಿದ್ದರು.

    ವಿದ್ಯುತ್ ಇಲ್ಲ ಎಂದರೆ ಜನರೇಟರ್ ಸರಿ ಇಲ್ಲ ಎಂಬ ವಾಕ್ಯ ಮಾತ್ರ ಆಸ್ಪತ್ರೆಯಲ್ಲಿ ತಪ್ಪಿಲ್ಲ. ಸ್ಕಾೃನಿಂಗ್ ಇತ್ಯಾದಿ ಅಗತ್ಯ ಸೇವೆಗಳಿಗೆ ನಿರಂತರ ವಿದ್ಯುತ್ ಬೇಕಿದ್ದು, ಜನರೇಟರ್ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಜನ ನಿತ್ಯ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್‌ಗಾಗಿ ಕಾದು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
    ಕರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಜತೆಗೆ ಮಳೆಗಾಲವೂ ಆಗಮಿಸುತ್ತಿದ್ದು, ವಿದ್ಯುತ್ ಇಲ್ಲದಾಗ ಜನರೇಟರ್ ಸರಿಯಾಗದೆ ಹೋದಲ್ಲಿ ರೋಗಿಗಳಿಗೆ ಸಮಸ್ಯೆಯಾಗುವುದು ನಿಶ್ಚಿತ. ಆಸ್ಪತ್ರೆಗೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಗಮನ ಹರಿಸದೇ ಹೋದಲ್ಲಿ ಮುಂದೆ ಬಹುದೊಡ್ಡ ಸಮಸ್ಯೆ ಎದುರಿಸಬೇಕಾಗಬಹುದೆನ್ನುತ್ತಾರೆ ಸ್ಥಳೀಯರು.

    ಆಕ್ಸಿಜನ್ ಸರಬರಾಜಿಗೆ ವಿದ್ಯುತ್ ಅವಶ್ಯ: ಕೋವಿಡ್ ಸೋಂಕಿತ ರೋಗಿಗಳಿಗಾಗಿ 12 ಹಾಸಿಗೆಯನ್ನು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾದಿರಿಸಿದ್ದು, ಇದರಲ್ಲಿ 6ಕ್ಕೆ ಆಕ್ಸಿಜನ್ ಸರಬರಾಜು ಇದೆ ಎಂದು ಆರೋಗ್ಯ ಇಲಾಖೆ ಹೇಳಿಕೊಂಡಿದೆ. 24 ಆಕ್ಸಿಜನ್ ಸಿಲಿಂಡರ್ ಇಡುವ ವ್ಯವಸ್ಥೆ ಇದ್ದರೂ, ಕೇವಲ ಎರಡು ಆಕ್ಸಿಜನ್ ಸಿಲಿಂಡರ್ ಮಾತ್ರ ಇಲ್ಲಿದೆ. ಇದರ ಸರಬರಾಜಿಗೂ ನಿರಂತರ ವಿದ್ಯುತ್‌ನ ಅವಶ್ಯಕತೆ ಇದೆ. ಕೋವಿಡ್ -19 ಗಂಭೀರ ಪರಿಸ್ಥಿತಿಯ ಸಂದರ್ಭ ತಾಲೂಕು -ಜಿಲ್ಲಾ ಕೇಂದ್ರಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ವಿಟ್ಲದ ಜನರದು. ಐಸಿಯು ಸಹಿತ ಅಗತ್ಯ ವ್ಯವಸ್ಥೆ ಕಲ್ಪಿಸಲು ಬೇಕಾದ ಸ್ಥಳ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ್ದು. ಐಸಿಯು ಆದರೆ ಜಿಲ್ಲಾಕೇಂದ್ರದ ಮೇಲೆ ಒತ್ತಡ ತಗ್ಗಿಸಬಹುದು.

    ವಿವಿಧ ಕಡೆಗಳಿಗೆ ನೂತನ ಜನರೇಟರ್ ವ್ಯವಸ್ಥೆಗಾಗಿ ಮನವಿ ಸಲ್ಲಿಸಲಾಗಿದೆ. ಅಗತ್ಯದ ಸಂದರ್ಭ ಪಟ್ಟಣ ಪಂಚಾಯಿತಿ ಕಡೆಯಿಂದ ಬಾಡಿಗೆಗೆ ಜನರೇಟರ್ ವ್ಯವಸ್ಥೆ ಮಾಡುವ ಬಗ್ಗೆ ಹೇಳಿದ್ದಾರೆ.
    ಡಾ.ವೇದಾವತಿ ವೈಧ್ಯಾಧಿಕಾರಿ, ವಿಟ್ಲ ಸಮುದಾಯ ಆರೋಗ್ಯ ಕೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts