More

    ಸರ್ಕಾರ ವಿವಿಧ ವಸತಿ ಮನೆ ನಿರ್ಮಾಣಕ್ಕೆ ಇಲ್ಲ ಹಣ ; ಮುಂದುವರಿದ ಗುಡಿಸಲು ವಾಸ

    ಬೂದಿಕೋಟೆ: ಗುಡಿಸಲು ಮುಕ್ತ ಕರ್ನಾಟಕ ನಿರ್ಮಾಣ ಮಾಡಲು ಸರ್ಕಾರ ವಿವಿಧ ವಸತಿ ಯೋಜನೆಗಳಡಿ ಫಲಾನುಭವಿಗಳಿಗೆ ಮನೆ ಮಂಜೂರಾದರೂ ಕಾಮಗಾರಿಗೆ ಹಣ ಬಿಡುಗಡೆಯಾಗದೆ ಸಾವಿರಾರು ಮನೆಗಳ ನಿರ್ಮಾಣದ ಕೆಲಸ ಅರ್ಧಕ್ಕೆ ನಿಂತಿದ್ದು, ಜನರು ಗುಡಿಸಲಿನಲ್ಲೇ ವಾಸಿಸುವಂತಾಗಿದೆ.

    ಸರ್ಕಾರ ಮನೆಯಿಲ್ಲದ ಬಡವರಿಗೆ ಸೂರು ಕಲ್ಪಿಸಲು ಬಸವ ವಸತಿ ಯೋಜನೆ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ ಸೇರಿ ಅನೇಕ ವಸತಿ ಯೋಜನೆಗಳನ್ನು ಜಾರಿಗೆ ತಂದು ಸ್ವಂತ ಮನೆಯಿಲ್ಲದ ಫಲಾನುಭವಿಗಳಿಗೆ ಮನೆ ಮಂಜೂರು ಮಾಡಿದೆ. ಮನೆ ಮಂಜೂರಾದರೂ ನಿರ್ಮಿಣ ಕಾಮಗಾರಿಗೆ ಮಾತ್ರ ಸರ್ಕಾರ ಅನುದಾನ ಬಿಡುಗಡೆ ಮಾಡಲೇ ಇಲ್ಲ. ಅನುದಾನ ಬರದಿದ್ದರೂ ಫಲಾನುಭವಿಗಳು ಸಾಲ ಮಾಡಿ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಮನೆ ನಿರ್ಮಿಸಿಕೊಂಡಿದ್ದು, ಅನುದಾನಕ್ಕಾಗಿ ಕಚೇರಿಯಿಂದ ಕಚೇರಿಗೆ ಪ್ರತಿನಿತ್ಯ ಅಲೆದಾಡುವಂತಾಗಿದೆ.

    1428 ಮನೆಗಿಲ್ಲ ಹಣ: ಬಂಗಾರಪೇಟೆ ತಾಲೂಕಿನಲ್ಲಿ 2015ರಿಂದ 2017ರ ವರೆಗೆ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ 302, ಬಸವ ವಸತಿ ಯೋಜನೆಯಡಿ 265 ಮತ್ತು ಹೆಚ್ಚುವರಿ 861 ಮನೆ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಹೀಗೆ ವಿವಿಧ ವಸತಿ ಯೋಜನೆಗಳಲ್ಲಿ ಮಂಜೂರಾದ 1428ಕ್ಕೂ ಹೆಚ್ಚಿನ ಮನೆಗಳಿಗೆ ಹಣ ಬಿಡುಗಡೆಯಾಗದೆ ಫಲಾನುಭವಿ ಸಂಕಷ್ಟದಲ್ಲಿದ್ದಾರೆ. 2020 ಏಪ್ರಿಲ್ 1ರಿಂದ ಸೆಪ್ಟೆಂಬರ್ ತನಕ ತಳಪಾಯದ ಹಂತದಲ್ಲಿ 93, ಗೋಡೆಯ ಹಂತದಲ್ಲಿ 292, ಛಾವಣಿ ಹಂತದಲ್ಲಿ 305 ಹಾಗೂ ಪೂರ್ಣಗೊಂಡಿರುವ 326 ಮನೆಗಳು ಸೇರಿ ಒಟ್ಟು 1016 ಮನೆಗಳಿಗೆ ಹಣ ಬಿಡುಗಡೆೆಯಾಗಿಲ್ಲ.

    ಬಿಎಸ್‌ವೈ ಸಿಎಂ ಆದ ಬಳಿಕ ಸ್ಥಗಿತ: ಕಳೆದ ಒಂದು ವರ್ಷದಿಂದ ಬಹುತೇಕ ಫಲಾನುಭವಿಗಳಿಗೆ ಕೇವಲ ತಳಪಾಯ ಹಾಗೂ ಗೋಡೆಯ ಹಂತಕ್ಕೆ ಮಾತ್ರ ಅನುದಾನ ಬಿಡುಗಡೆಯಾಗಿದೆ. ನಂತರದ ಹಂತಗಳಿಗೆ ಹಣ ಬಿಡುಗಡೆಯಾಗದ ಕಾರಣ ಫಲಾನುಭವಿ ಮನೆ ನಿರ್ಮಾಣ ಕಾರ್ಯ ನಿಲ್ಲಿಸಿದ್ದಾರೆ. ಜತೆಗೆ ಬಿ.ಎಸ್.ಯಡಿಯೂರಪ್ಪ ಸಿಎಂ ಆದ ಮೇಲೆ ಮಂಜೂರಾಗಿರುವ ಮನೆಗಳ ನಿರ್ಮಾಣ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿದೆ.

    ಸಾಲದ ಹೊರೆ: ಅನುದಾನ ಬಿಡುಗಡೆಯಾಗದಿದ್ದರೂ ಕೆಲವರು ಸಾಲ ಮಾಡಿ ಮನೆ ನಿರ್ಮಿಸಿಕೊಂಡಿದ್ದಾರೆ. ಹೀಗೆ ಮನೆ ನಿರ್ಮಿಸಿಕೊಂಡು ಹಲವು ತಿಂಗಳು ಉರುಳಿದರೂ ಅನುದಾನ ಬರದೆ ಸಾಲಗಾರರ ಕಪಿಮುಷ್ಠಿಯಲ್ಲಿ ಸಿಕ್ಕಿಹಾಕಿಕೊಂಡು ನಲುಗುವಂತಾಗಿದೆ. ನಿನ್ನು ಕೆಲವರು ಹಣವಿಲ್ಲದೇ ಮನೆ ನಿರ್ಮಾಣದ ಕಾರ್ಯ ಅರ್ಧಕ್ಕೆ ಮೊಟಕುಗೊಳಿಸಿದ್ದು, ಅರ್ಧಂಬರ್ಧ ನಿರ್ಮಾಣವಾಗಿರುವ ಮನೆ ಮಳೆ ಹಾಗೂ ಬಿಸಿಲಿನಿಂದ ಶಿಥಿಲಗೊಳ್ಳುವ ಹಂತಕ್ಕೆ ತಲುಪುತಿವೆ.

    ಈಡೇರದ ಸಚಿವರ ಭರವಸೆ: ವಸತಿ ಸಚಿವ ವಿ.ಸೋಮಣ್ಣ ಒಂದು ವಾರದಲ್ಲಿ ಫಲಾನುಭವಿಗಳಿಗೆ ವಸತಿ ಯೋಜನೆಯ ಹಣ ಬಿಡುಗಡೆ ಮಾಡುವುದಾಗಿ ಇತ್ತೀಚೆಗೆ ತಿಳಿಸಿದ್ದರು ಹಾಗೂ ಹೊಸದಾಗಿ 1.25 ಲಕ್ಷ ಮನೆ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿ ಹಲವು ತಿಂಗಳುಗಳೇ ಕಳೆದರೂ ಭರವಸೆ ಮಾತ್ರ ಈಡೇರಿಲ್ಲ.

    ಹಣ ಸರ್ಕಾರಕ್ಕೆ ವಾಪಸ್: ಫಲಾನುಭವಿ ಖಾತೆಗೆ ಸರ್ಕಾರದಿಂದ ಬಂದ ಹಣ ವಾಪಸ್ ಹೋಗಿ 2 ವರ್ಷವಾಗಿದೆ. ಹಣವಿಲ್ಲದೇ ಮನೆ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಿರುವ ಫಲಾನುಭವಿ, ಪಂಚಾಯಿತಿ ಅಧಿಕಾರಿಗಳನ್ನು ವಿಚಾರಿಸಿದರೆ ಬ್ಯಾಂಕ್ ಖಾತೆಯಲ್ಲಿ ಲೋಪವಿದ್ದು, ನಿಮ್ಮದೇ ಮತ್ತೊಂದು ಖಾತೆಯನ್ನು ಸರ್ಕಾರಕ್ಕೆ ನೀಡಲಾಗಿದೆ. ಅದಕ್ಕೆ ಹಣ ಜಮಾ ಆಗುತ್ತದೆ ಎಂಬ ಸಮಜಾಯಿಸಿ ನೀಡುತ್ತಿದ್ದಾರೆ.
    ಗ್ರಾಮಗಳನ್ನು ಗುಡಿಸಲು ಮುಕ್ತಗೊಳಿಸುವುದಾಗಿ ಹೇಳುತ್ತಾ ಸರ್ಕಾರಗಳೇ ಬದಲಾಗುತ್ತಿವೆಯಾದರೂ, ಹಳ್ಳಿಗಳಲ್ಲಿ ಇಂದಿಗೂ ಗುಡಿಸಲು ಮನೆಗಳಲ್ಲೇ ಜನ ಜೀವನ ನಡೆಸುತ್ತಿವೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಶೀಘ್ರ ಹಣ ಬಿಡುಗಡೆ ಮಾಡಿ ಜನರಿಗೆ ಸೂರು ಕಲ್ಪಿಸಲು ನೆರವಾಗಬೇಕಿದೆ.

    2017-2018ರ ಬಸವ ಯೋಜನೆಯಡಿ ಮನೆ ಮಂಜೂರಾಗಿದೆ. ಸಾಲ ಮಾಡಿ ಅಡಿಪಾಯದೊಂದಿಗೆ, ಗೋಡೆ ಮತ್ತು ಛಾವಣಿ ನಿರ್ಮಾಣ ಮಾಡಿದ್ದೇವೆ. ನಂತರ ಹಣವಿಲ್ಲದೆ ನಿರ್ಮಾಣ ಕಾರ್ಯ ನಿಲ್ಲಿಸಿದ್ದೇವೆ. 2018 ಸೆಪ್ಟೆಂಬರ್ 19ರಂದು ನನ್ನ ಖಾತೆಗೆ ಕೇವಲ ಒಂದು ರೂ. ಜಮೆ ಆಗಿದ್ದು ಬಿಟ್ರೆ ನಯಾಪೈಸೆ ಬಂದಿಲ್ಲ. ಎರಡು ವರ್ಷದಿಂದ ಕಚೇರಿಗಳಿಗೆ ಅಲೆದಾಡುತ್ತಿದ್ದೇನೆ.
    ಪಾಪಮ್ಮ, ಬಸವ ಯೋಜನೆಯ ಫಲಾನುಭವಿ, ಬೊಮ್ಮಗಾನಹಳ್ಳಿ

    ವಿವಿಧ ವಸತಿ ಯೋಜನೆಗಳ ಫಲಾನುಭವಿಗಳಿಗೆ ಸರ್ಕಾರದಿಂದ ನೇರವಾಗಿ ಅವರವರ ಖಾತೆಗೆ ಹಣ ಜಮಾ ಆಗುತ್ತದೆ. ಕಾರಣಾಂತರಗಳಿಂದ ಸರ್ಕಾರದ ಅನುದಾನ ಬಿಡುಗಡೆಯಾಗಿಲ್ಲ.
    ಎನ್.ವೆಂಕಟೇಶಪ್ಪ ಇಒ ತಾಪಂ ಬಂಗಾರಪೇಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts