More

    ಅಭಿವೃದ್ಧಿಗೆ ದುಡ್ಡಿಲ್ಲ, ಶಾಸಕರ ಖರೀದಿಗೆ ಹಣವಿದೆ!: ರಾಜ್ಯ ಸರ್ಕಾರವನ್ನು ಕುಟುಕಿದ ಸಿದ್ದರಾಮಯ್ಯ

    ಉಳ್ಳಾಲ: ಅಭಿವೃದ್ಧಿ ಯೋಜನೆಗೆ ದುಡ್ಡಿಲ್ಲ ಎಂದು ಹೇಳುವ ರಾಜ್ಯದ ಬಿಜೆಪಿ ಸರ್ಕಾರದ ಬಳಿ ಶಾಸಕರ ಖರೀದಿಗೆ ದುಡ್ಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
    ಉಳ್ಳಾಲ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್ ಶನಿವಾರ ಕಲ್ಲಾಪುವಿನಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

    ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್, ಶಾದಿ ಭಾಗ್ಯ, ಕೃಷಿ ಭಾಗ್ಯ, ವಿದ್ಯಾರ್ಥಿವೇತನವನ್ನು ಪ್ರಸ್ತುತ ಸರ್ಕಾರ ನೀಡುತ್ತಿಲ್ಲ. ಹಾಸ್ಟೆಲ್‌ಗಳಿಗೆ ಬರುತ್ತಿದ್ದ ಅನುದಾನವನ್ನೂ ಕಡಿಮೆಗೊಳಿಸಲಾಗಿದೆ. ಗಂಗಾಕಲ್ಯಾಣ ಯೋಜನೆ ಒಂದೆರೆಡು ಶಾಸಕರಿಗೆ ಮಾತ್ರ ಸಿಗುತ್ತಿದೆ. ಅನ್ನಭಾಗ್ಯ ಯೋಜನೆಯ ಅಕ್ಕಿಯ ಪ್ರಮಾಣ ಕಡಿಮೆಯಾಗಿದೆ. ಎಲ್ಲ ದುಡ್ಡನ್ನೂ ಕೋವಿಡ್‌ಗೆ ಖರ್ಚು ಮಾಡಿದ್ದೇವೆ ಎನ್ನುತ್ತಾರೆ. ಇದೊಂದು ಮರ್ಯಾದೆಯಿಲ್ಲದ ಸರ್ಕಾರ ಎಂದರು.

    ಕಳೆದೆರಡು ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಭ್ರಷ್ಟಾಚಾರದ ಆರೋಪವೇ ಇರಲಿಲ್ಲ. ಅನುದಾನದಲ್ಲಿ ಶೇ.40 ಅನ್ನು ಸರ್ಕಾರಕ್ಕೆ ಲಂಚವಾಗಿ ನೀಡಬೇಕು ಎಂದು ಗುತ್ತಿಗೆದಾರರ ಸಂಘ ಅಧ್ಯಕ್ಷ ಕೆಂಪಣ್ಣ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಈ ಸರ್ಕಾರವನ್ನು ಒದ್ದೋಡಿಸುವ ದಿನ ಬರಲಿದೆ. ಆಗ ಅವರ ಭ್ರಷ್ಟಾಚಾರವನ್ನು ಬೆಳಕಿಗೆ ತರುತ್ತೇವೆ ಎಂದರು.

    ಶಾಸಕ ಯು.ಟಿ.ಖಾದರ್, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಉಳ್ಳಾಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಜಿಲ್ಲಾ ಕಾಂಗ್ರೆಸ್ ಸದಸ್ಯ ಸುರೇಶ್ ಭಟ್ನಗರ, ಹಿಂದುಳಿದ ವರ್ಗಗಳ ವಿಭಾಗ ಅಧ್ಯಕ್ಷ ದಿನೇಶ್ ಕುಂಪಲ, ಬಂಟ್ವಾಳ ತಾಪಂ ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಮೋನು, ಜಿಪಂ ಮಾಜಿ ಸದಸ್ಯೆ ಮಮತಾ ಗಟ್ಟಿ, ತಾಪಂ ಸದಸ್ಯ ಮುಸ್ತಫಾ ಮಲಾರ್ ಇನ್ನಿತರರು ಉಪಸ್ಥಿತರಿದ್ದರು.

    ಕಾರ್ಯಕರ್ತರ ಒತ್ತಡಕ್ಕೆ ಮಣಿದ ಮಾಜಿ ಸಿಎಂ: ಕಲ್ಲಾಪುವಿನಲ್ಲಿ ಸಿದ್ದರಾಮಯ್ಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಅವರು ವೇದಿಕೆಗೆ ಬಂದು ‘ಮಾತನಾಡಲು ಸಮಯವಿಲ್ಲ’ ಎಂದಾಗ, ಎರಡು ನಿಮಿಷವಾದರೂ ಮಾತನಾಡಿ ಎಂದು ಕಾರ್ಯಕರ್ತರು ಒತ್ತಾಯಿಸಿದರು. ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದೇನೆ. ಇನ್ನೊಮ್ಮೆ ಮಂಗಳೂರಿಗೆ ಬಂದು ಬಿಜೆಪಿ ಸರ್ಕಾರದ ಅಕ್ರಮವನ್ನು ನಿಮ್ಮ ಮುಂದೆ ಇಡಲಿದ್ದೇನೆ ಎಂದು ಮಾತು ಆರಂಭಿಸಿದ ಸಿದ್ದರಾಮಯ್ಯ ನಂತರ ಹತ್ತು ನಿಮಿಷಕ್ಕೂ ಹೆಚ್ಚು ಹೊತ್ತು ಮಾತನಾಡಿ ನಿರ್ಗಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts