More

    ಕುಸಿವ ಹಂತದಲ್ಲಿ ಶಾಲಾ ಕಟ್ಟಡ

    ಪಾವೂರು: ಈ ಶಾಲಾ ಕಟ್ಟಡಕ್ಕೆ 89ರ ಹರೆಯ. ಹಳೇ ಕಟ್ಟಡದ ಗೋಡೆಗಳೂ ಸಂಪೂರ್ಣ ಬಿರುಕು ಬಿಟ್ಟು ಈಗಲೋ, ಆಗಲೋ ಬೀಳುವ ಸ್ಥಿತಿಯಲ್ಲಿದೆ. ರೀಪು, ಪಕ್ಕಾಸು, ಬಾಗಿಲು, ಕಿಟಕಿ ಮುರಿದು ಬೀಳುತ್ತಿವೆ. ಇಂಥ ಸ್ಥಿತಿಯಲ್ಲಿರುವ ಪಾವೂರು ಸರ್ಕಾರಿ ಪ್ರಾಥಮಿಕ ಶಾಲೆಯನ್ನು ದುರಸ್ತಿ ಮಾಡಿ ಮಾಡಿ ಎಸ್‌ಡಿಎಂಸಿಯೂ ಬೇಸತ್ತಿದೆ.

    1931ರಲ್ಲಿ ಪಾವೂರು ಗ್ರಾಮದ ಗಾಡಿಗದ್ದೆ ಎಂಬಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆರಂಭಗೊಂಡಿತ್ತು. ಇದು ಗ್ರಾಮದ ಪ್ರಥಮ ಪ್ರಾಥಮಿಕ ಶಾಲೆಯಾಗಿದ್ದು, ಆರಂಭದಲ್ಲೇ ಕೇಂದ್ರ ಶಾಲೆ ಎಂಬ ಹೆಸರು ಹೊಂದಿತ್ತು. ಸರ್ಕಾರಿ ದಾಖಲೆಗಳ ಪ್ರಕಾರ ಹಿರಿಯ ಪ್ರಾಥಮಿಕ ಶಾಲೆ ಪಾವೂರು ಎಂಬ ಹೆಸರು ಹೊಂದಿದೆ. ಆ ದಿನಗಳಲ್ಲಿ ಗ್ರಾಮಕ್ಕಿದ್ದ ಏಕೈಕ ಶಾಲೆಯಾಗಿದ್ದರಿಂದ ವಿದ್ಯಾರ್ಥಿಗಳ ಸೇರ್ಪಡೆಗೆ ನೂಕುನುಗ್ಗಲು ಇತ್ತು. ಇಲ್ಲಿ ಕಲಿತವರು ದೊಡ್ಡ ಸ್ಥಾನ, ಹುದ್ದೆ ಕಂಡುಕೊಂಡಿದ್ದಾರೆ. ಆದರೆ ಆಂಗ್ಲ ಭಾಷೆಯ ವ್ಯಾಮೋಹ ಎಲ್ಲೆಡೆ ಇರುವಂತೆ ಈ ಭಾಗಕ್ಕೂ ತಟ್ಟಿದ್ದು, ವಿವಿಧ ಶಾಲೆಗಳ ವಾಹನಗಳು ಬರುವುದರಿಂದ ಅಲ್ಲದೆ ಗ್ರಾಮದಲ್ಲೇ ಇನ್ನೆರಡು ಸರ್ಕಾರಿ ಮತ್ತು ಪಕ್ಕದ ಗ್ರಾಮದಲ್ಲಿ ಅನುದಾನಿತ ಶಾಲೆಗಳು ಆರಂಭಗೊಂಡ ಬಳಿಕ ಗಾಡಿಗದ್ದೆ ಶಾಲೆಗೆ ಮಕ್ಕಳ ದಾಖಲಾತಿ ಸಂಖ್ಯೆ ಕಡಿಮೆಯಾಗಿದೆ. ಆದರೆ ಶಿಕ್ಷಣದ ಗುಣಮಟ್ಟ ಕುಂಠಿತವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

    ಶಾಲೆಗೆ 1.35 ಎಕರೆ ಜಮೀನು ಇದ್ದು, 1-7 ತರಗತಿ, 6+1 ಕೊಠಡಿ, ಪ್ರಸ್ತುತ 63 ಮಕ್ಕಳು ವಿದ್ಯಾರ್ಜನೆ ಪಡೆಯುತ್ತಿದ್ದಾರೆ. ನಾಲ್ವರು ಶಿಕ್ಷಕರು ಇದ್ದು, ಮುಖ್ಯ ಶಿಕ್ಷಕ ಹುದ್ದೆಗೂ ನೇಮಕಾತಿ ನಡೆದಿದೆ.

    ಶಾಲಾಭಿವೃದ್ಧಿಗೆ ಕೈಜೋಡಿಸಿದ ಸ್ಥಳೀಯರು!; ತಾವು ಕಲಿತ ಗ್ರಾಮದ ಪ್ರಥಮ ಶಾಲೆಯನ್ನು ಅಭಿವೃದ್ಧಿಪಡಿಸಲು ಶಾಲಾಭಿವೃದ್ಧಿ ಸಮಿತಿ ಮುಂದಾದಾಗ ಸ್ಥಳೀಯ ಶಿಕ್ಷಣ ಪ್ರೇಮಿಗಳು, ಹಳೇ ವಿದ್ಯಾರ್ಥಿಗಳು, ಗ್ರಾಮ ಪಂಚಾಯಿತಿ ಕೈಜೋಡಿಸಿದೆ. ಇದರ ಫಲವಾಗಿ ಶಾಲೆಯ ಅಂಗಳವನ್ನೇ ತಲುಪಲು ರಸ್ತೆ ನಿರ್ಮಾಣವಾಗಿದ್ದು, ಕಾಡು, ಕಮರಿಯಿಂದ ಆವೃತ್ತವಾಗಿರುವ ಶಾಲಾ ಆವರಣ ಸಮತಟ್ಟುಗೊಳಿಸುವ ಕೆಲಸ ನಡೆಯುತ್ತಿದೆ. ಇದೆಲ್ಲ ಆದರೂ ಶಾಲಾ ಶಿಥಿಲ ಕಟ್ಟಡಕ್ಕೆ ಭೀತಿ ತಪ್ಪಿಲ್ಲ.

    ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಕಟ್ಟಡ!: ಈ ಶಾಲೆ ಹಿಂದಿನ ಕಾಲದ ಕಲ್ಲಿನ ಗೋಡೆ, ಮಣ್ಣಿನ ಸಾರಣೆ ಹೊಂದಿದೆ. ಹಳೇ ಕಟ್ಟಡದ ಗೋಡೆಗಳೆಲ್ಲ ಬಿರುಕು ಬಿಟ್ಟು ಬೀಳುವ ಸ್ಥಿತಿಯಲ್ಲಿದೆ. ಇನ್ನು ರೀಪು, ಪಕ್ಕಾಸು, ಬಾಗಿಲು, ಕಿಟಕಿ ಒಂದೊಂದಾಗಿ ಮುರಿದು ಬೀಳುತ್ತಿವೆ. ಮಳೆ ಬರುವಾಗ ಗೋಡೆಯಲ್ಲೆಲ್ಲ ನೀರು ಇಳಿಯುತ್ತದೆ. ಜೋರಾದ ಗಾಳಿ ಬಂದರೆ ಮೇಲ್ಛಾವಣಿಯೇ ಅಲುಗಾಡುತ್ತದೆ. ಈ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಮಕ್ಕಳನ್ನು ಸ್ಥಳಾಂತರಿಸುವುದು ಶಿಕ್ಷಕ ವೃಂದಕ್ಕೆ ಸಾಮಾನ್ಯ ವಿಚಾರ ಆಗಿಬಿಟ್ಟಿದೆ. ಹಲವು ಬಾರಿ ದುರಸ್ತಿಗೊಂಡ ಕಾರಣ ಮುಂದಕ್ಕೆ ಅಂಥ ಕೆಲಸದಿಂದ ಪ್ರಯೋಜನ ಶೂನ್ಯ ಎಂದರಿತ ಶಾಲಾಭಿವೃದ್ಧಿ ಸಮಿತಿ ಹೊಸ ಕಟ್ಟಡ ನಿರ್ಮಾಣಕ್ಕೆ ನಿರ್ಣಯ ಕೈಗೊಂಡಿದೆ.

    ಮಳೆ ಹಾನಿ ಅನುದಾನ ಗೊಂದಲ!: ಈ ಕಟ್ಟಡ ಗುಡ್ಡ ಮತ್ತು ಮರಗಳಿಂದಾವೃತ್ತ ಇಳಿಜಾರು ಪ್ರದೇಶದಲ್ಲಿ ಇರುವುದರಿಂದ ಈವರೆಗೆ ಉಳಿದಿದೆ. ಮುಂದಕ್ಕೂ ಇಂಥ ಪವಾಡ ನಡೆಯುವುದು ನಿರೀಕ್ಷಿಸುವಂತಿಲ್ಲ. ಶಾಲೆಗೆ ಹೊಸ ಕಟ್ಟಡ ನಿರ್ಮಿಸಲು ಪಂಚಾಯಿತಿ, ಶಾಲಾಭಿವೃದ್ಧಿ ಸಮಿತಿ ಸರ್ವ ಸಿದ್ಧತೆ ನಡೆಸುತ್ತಿದೆ. ಆದರೆ ಸರ್ಕಾರದಿಂದ ಕಟ್ಟಡ ದುರಸ್ತಿಗಾಗಿ ಮಳೆ ಹಾನಿ ಯೋಜನೆಯ 10 ಲಕ್ಷ ರೂ. ಅನುದಾನ ಬಂದಿದೆ. ಕಟ್ಟಡ ದುರಸ್ತಿಪಡಿಸಿದರೆ ಸರ್ಕಾರದ ಅನುದಾನ ನೀರಿನಲ್ಲಿ ಹೋಮ ಇಟ್ಟಂತೆ ಆಗಬಹುದೇ ಹೊರತು, ಪ್ರಯೋಜನ ಶೂನ್ಯ. ಇದರಿಂದ ಹಣ ಏನು ಮಾಡಬೇಕು ಎಂಬ ಗೊಂದಲದಲ್ಲಿದೆ ಶಾಲಾಭಿವೃದ್ಧಿ ಸಮಿತಿ.

    ಆಂಗ್ಲ ಮಾಧ್ಯಮಕ್ಕೆ ಅವಕಾಶ ಬೇಡಿಕೆ: ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಶಿಕ್ಷಕ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿ ವಿಶೇಷ ಯೋಜನೆ ರೂಪಿಸಿದೆ. ಕಳೆದ ವರ್ಷ ರಾಜ್ಯ ಸರ್ಕಾರದಿಂದ ಹಲವು ಕಡೆ ಆಂಗ್ಲಮಾಧ್ಯಮ ಶಾಲೆ ಆರಂಭಕ್ಕೆ ಮನ್ನಣೆ ದೊರೆತಿದೆ. ಪಾವೂರು ಗ್ರಾಮದಲ್ಲಿ ಮೂರು ಪ್ರಾಥಮಿಕ ಸರ್ಕಾರಿ ಶಾಲೆಗಳಿದ್ದು, ಒಂದು ಶಾಲೆಗೂ ಇಂಥ ಮಾನ್ಯತೆ ಸಿಕ್ಕಿಲ್ಲ. ಗ್ರಾಮದ ಮೊದಲ ಶಾಲೆ ಎಂಬ ಕೀರ್ತಿ ಹೊಂದಿರುವ ಗಾಡಿಗದ್ದೆ ಶಾಲೆಗೆ ಈ ವರ್ಷ ಮಾನ್ಯತೆ ಸಿಕ್ಕರೆ ಮಕ್ಕಳ ಸಂಖ್ಯೆ ಹೆಚ್ಚಿಸುವ ಸಮಿತಿಯ ಯೋಜನೆಗೆ ಇನ್ನಷ್ಟು ಬಲ ಬರುವ ಜತೆಗೆ ಗ್ರಾಮೀಣ ಭಾಗದ ಮಕ್ಕಳಿಗೂ ಒಂದನೇ ತರಗತಿಯಲ್ಲೇ ಎಬಿಸಿಡಿ ಭಾಗ್ಯ ಸಿಗಲಿದೆ.

    ಕಟ್ಟಡ ಯಾವುದೇ ರೀತಿ ದುರಸ್ತಿಪಡಿಸಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದೆ. ತಗ್ಗು ಪ್ರದೇಶದಲ್ಲಿ ಕಟ್ಟಡ ಇದ್ದ ಕಾರಣ ಈವರೆಗೂ ಉಳಿದಿದೆ. ಈಗಾಗಲೇ ಕಟ್ಟಡ ಕೆಡವಲು ಶಾಲಾಭಿವೃದ್ಧಿ ಸಮಿತಿ ಮನವಿಯಂತೆ, ಗ್ರಾಮ ಪಂಚಾಯಿತಿ ಸಭೆಯಲ್ಲೂ ನಿರ್ಣಯ ಕೈಗೊಂಡು ತಾಲೂಕು ಪಂಚಾಯಿತಿಗೆ ಕಳುಹಿಸಲಾಗಿದೆ.
    ಫಿರೋಜ್ ಮಲಾರ್ ಪಾವೂರು ಗ್ರಾಪಂ ಅಧ್ಯಕ್ಷ

    ಜೋರಾದ ಮಳೆ, ಗಾಳಿ ಬರುವಾಗ ತರಗತಿ ನಡೆಸಲು ಭಯವಾಗುವುದರಿಂದ ಮಕ್ಕಳನ್ನು ಸುರಕ್ಷಿತ ಕಟ್ಟಡಕ್ಕೆ ವರ್ಗಾಯಿಸುತ್ತ ಬರಲಾಗಿದೆ. ಮುಂದಿನ ಸಾಲಿಗೆ ಒಟ್ಟು 100 ಮಕ್ಕಳನ್ನು ಸೇರಿಸುವ ಗುರಿ ಹೊಂದಲಾಗಿದೆ. ಶಾಲೆ, ಮೈದಾನದ ಅಭಿವೃದ್ಧಿಗೆ ಶಿಕ್ಷಣ ಪ್ರೇಮಿಗಳು, ಹಳೇ ವಿದ್ಯಾರ್ಥಿಗಳ ಸಂಘ ಹಾಗೂ ಶಾಲಾಭಿವೃದ್ಧಿ ಸಮಿತಿ ಕೈಜೋಡಿಸಿದ್ದು, ಆಂಗ್ಲ ಮಾಧ್ಯಮಕ್ಕೆ ಬೇಡಿಕೆ ಸಲ್ಲಿಸಲಾಗಿದೆ.
    ಅಬ್ದುಲ್ ಮಜೀದ್ ಮಲಾರ್ ಸಹಶಿಕ್ಷಕ

    ಶಾಲಾ ಕಟ್ಟಡಕ್ಕೆ ಹಲವಾರು ವರ್ಷಗಳಾಗಿರುವುದರಿಂದ ಪ್ರಸ್ತುತ ಸಂಪೂರ್ಣ ಶಿಥಿಲಗೊಂಡು ಅಪಾಯಕಾರಿ ಮಟ್ಟದಲ್ಲಿದೆ. ದುರಸ್ತಿಗಾಗಿ ಮಳೆಹಾನಿಯಿಂದ ಅನುದಾನ ಬಂದಿದ್ದರೂ ದುರಸ್ತಿಪಡಿಸಿದರೆ ಪ್ರಯೋಜನವಾಗದು. ಹೊಸಕಟ್ಟಡ ನಿರ್ಮಿಸುವ ಬಗ್ಗೆ ಸಮಿತಿಯಲ್ಲಿ ತೀರ್ಮಾನಿಸಲಾಗಿದ್ದು, ಇಲಾಖೆ ಅನುಮತಿಗೆ ಕಾಯಲಾಗುತ್ತಿದೆ.
    ಸುರೇಶ್ ಪೂಜಾರಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts