More

    ಸವಾರರಿಗಿಲ್ಲ ದಂಡದ ಭಯ

    ರಾಣೆಬೆನ್ನೂರ: ವಾಣಿಜ್ಯ ನಗರಿ ರಾಣೆಬೆನ್ನೂರಲ್ಲಿ ದಿನೇ ದಿನೆ ವಾಹನ ದಟ್ಟಣೆ ಹೆಚ್ಚುತ್ತದೆ. ಜತೆಗೆ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಆದರೆ, ಇಂಥವರ ವಿರುದ್ಧ ಸಂಚಾರ ಠಾಣೆ ಪೊಲೀಸರು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.

    ನಗರದಲ್ಲಿ ಬಹುತೇಕ ಬೈಕ್ ಸವಾರರು ಹೆಲ್ಮೆಟ್ ಧರಿಸುತ್ತಿಲ್ಲ. ಎಚ್​ಎಸ್​ಆರ್​ಪಿ (ಹೈ ಸೆಕುರಿಟಿ ರಜಿಸ್ಟ್ರೇಷನ್ ನಂಬರ್ ಪ್ಲೇಟ್) ಅಳವಡಿಸುವ ಬದಲು ಫ್ಯಾಷನೇಬಲ್ ನಂಬರ್ ಪ್ಲೇಟ್ ಅಳವಡಿಸಲಾಗಿದೆ. ಇನ್ನೂ ಕೆಲವರು ನಂಬರ್ ಪ್ಲೇಟ್ ಮೇಲೆ ನಾನಾ ಹೆಸರು ಬರೆದಿದ್ದಾರೆ. ರಾತ್ರಿ ವೇಳೆ ಮದ್ಯ ಸೇವಿಸಿ ಬೈಕ್ ಚಲಾಯಿಸುವವರ ಸಂಖ್ಯೆಯೂ ಅಧಿಕವಾಗಿದೆ. ಅಲ್ಲದೆ, ವಿಪರೀತ ಹೊಗೆ ಉಗುಳುತ್ತ ಪರಿಸರಕ್ಕೆ ಹಾನಿ ಉಂಟು ಮಾಡುವ ವಾಹನಗಳ ಸಂಖ್ಯೆಯಂತೂ ಲೆಕ್ಕಕ್ಕಿಲ್ಲ. ನಗರದ ಶಾಲೆ-ಕಾಲೇಜ್​ಗಳ ಎದುರು ಬೈಕ್​ಗಳ ಸೈಲೆನ್ಸರ್ ತೆಗೆದು ಕರ್ಕಶ ಶಬ್ಧ ಮಾಡುತ್ತ ಓಡಾಡುವ ಪಡ್ಡೆ ಹುಡುಗರೂ ಹೆಚ್ಚಾಗಿದ್ದಾರೆ. ಇಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾದ ಸಂಚಾರ ಠಾಣೆ ಪೊಲೀಸರು, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಹಾಗೂ ನಗರದ ಕೋರ್ಟ್ , ಹಲಗೇರಿ ವೃತ್ತದಲ್ಲಿ ಕಾಣಸಿಗುವ ಕೆಲ ವಾಹನಗಳಿಗೆ ದಂಡ ವಿಧಿಸಲು ಮಾತ್ರ ಸೀಮಿತರಾಗಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

    ಬೆರಳೆಣಿಕೆಯಷ್ಟು ಪ್ರಕರಣ: 2019ರಲ್ಲಿ ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿದ್ದ 7480 ಸವಾರರಿಗೆ, 233 ಡಿಫಾಲ್ಟ್ ನಂಬರ್ ಪ್ಲೇಟ್ ವಾಹನಗಳಿಗೆ, ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದ 34 ಜನರಿಗೆ ದಂಡ ವಿಧಿಸಲಾಗಿದೆ. ಹೆಚ್ಚು ಹೊಗೆ ಉಗುಳುವ ಪ್ರಕರಣಕ್ಕೆ ಸಂಬಂಧಿಸಿ ಕೇವಲ ಒಂದು ವಾಹನಕ್ಕೆ ದಂಡ ವಿಧಿಸಲಾಗಿದೆ. 2020ರಲ್ಲಿ ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿದ್ದ 1237 ಸವಾರರಿಗೆ , 342 ಡಿಫಾಲ್ಟ್ ನಂಬರ್ ಪ್ಲೇಟ್ ವಾಹನಗಳಿಗೆ, ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದ 12 ಜನರಿಗೆ ಹಾಗೂ ಹೆಚ್ಚು ಹೊಗೆ ಉಗುಳುವ 77 ವಾಹನಗಳಿಗೆ ದಂಡ ವಿಧಿಸಲಾಗಿದೆ.

    ರಾಜಕಾರಣಿಗಳೇ ಅಡ್ಡಿ

    ವಾಹನ ಹಿಡಿದ ಕೂಡಲೆ ಸ್ಥಳೀಯರಲ್ಲದೆ, ಜಿಲ್ಲೆಯ ಪ್ರಮುಖ ರಾಜಕಾರಣಿಗಳಿಗೆ ಫೋನ್ ಮಾಡಿ ಕೊಡುತ್ತಾರೆ. ದಿನಕ್ಕೆ 100 ವಾಹನ ಹಿಡಿದರೆ ಅದರಲ್ಲಿ 70 ವಾಹನದವರು ರಾಜಕಾರಣಿಗಳಿಗೆ ಫೋನ್ ಮಾಡುವವರೆ ಆಗಿರುತ್ತಾರೆ ಎಂದು ಹೆಸರು ಹೇಳಲಿಚ್ಛಸದ ಪೊಲೀಸ್ ಅಧಿಕಾರಿಯೊಬ್ಬರು ‘ವಿಜಯವಾಣಿ’ ಎದುರು ಬೇಸರ ವ್ಯಕ್ತಪಡಿಸಿದರು. ಇದರಿಂದಾಗಿ ಸ್ಥಳೀಯ ವಾಹನ ಸವಾರರಿಗೆ ಸಂಚಾರ ಠಾಣೆ ಪೊಲೀಸರೆಂದರೆ ಭಯವಿಲ್ಲದ ವಾತಾವರಣ ನಿರ್ವಣವಾಗಿದೆ.

    ಮದ್ಯ ಸೇವಿಸಿ ವಾಹನ ಚಲಾಯಿಸುವವರ ಹಾಗೂ ಡಿಫಾಲ್ಟ್ ನಂಬರ್ ಪ್ಲೇಟ್ ಹಾಕಿಕೊಂಡಿರುವ ವಾಹನ ಸವಾರರ ವಿರುದ್ಧ ಕಾರ್ಯಾಚರಣೆ ನಡೆಸಿ ಕ್ರಮ ಜರುಗಿಸುವ ಸಲುವಾಗಿ ಎಲ್ಲ ಸಿಬ್ಬಂದಿಯೊಂದಿಗೆ ಸಭೆ ಮಾಡಿದ್ದೇವೆ. ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ತ್ವರಿತವಾಗಿ ಕ್ರಮ ಕೈಗೊಳ್ಳಲಾಗುವುದು.
    | ಟಿ.ವಿ. ಸುರೇಶ, ಡಿವೈಎಸ್ಪಿ

    ನಗರದಲ್ಲಿ ಸಾಮಾನ್ಯ ಜನರಿಗಿಂತಲೂ ರಾಜಕಾರಣಿಗಳೇ ಹೆಚ್ಚಾಗಿ ನಿಯಮ ಉಲ್ಲಂಘಿಸುತ್ತಿದ್ದಾರೆ. ಅವರ ವಾಹನಗಳಿಗೆ ಮೊದಲು ದಂಡ ವಿಧಿಸಬೇಕು. ಕರ್ಕಶ ಶಬ್ಧ ಮಾಡುವ ವಾಹನ ಸವಾರರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಇಂಥವರ ಬಗ್ಗೆ ಕೂಡಲೆ ಸೂಕ್ತ ಕ್ರಮ ಜರುಗಿಸಬೇಕು.
    | ಹನುಮಂತಪ್ಪ ಕೆ., ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts