More

    14 ಗ್ರಾಪಂಗಳಿಗಿಲ್ಲ ಸದ್ಯಕ್ಕೆ ಚುನಾವಣೆ!

    ಹಾವೇರಿ: ಜಿಲ್ಲೆಯಲ್ಲಿರುವ 223 ಗ್ರಾಪಂಗಳ ಪೈಕಿ 14 ಗ್ರಾಪಂಗಳ ಅವಧಿ ಮುಗಿಯದ ಕಾರಣ ಸದ್ಯಕ್ಕೆ ಚುನಾವಣೆ ಘೊಷಣೆಯಾಗಿಲ್ಲ. ಜಿಲ್ಲೆಯ 8 ತಾಲೂಕುಗಳಲ್ಲಿ 223 ಗ್ರಾಪಂಗಳಿವೆ. ಸದ್ಯ 209 ಗ್ರಾಪಂಗಳ ಅಧಿಕಾರಾವಧಿ ಮುಕ್ತಾಯಗೊಂಡಿರುವುದರಿಂದ ಚುನಾವಣೆ ಘೊಷಣೆಯಾಗಿದೆ. ಅವಧಿ ಮುಗಿಯದ ಶಿಗ್ಗಾಂವಿ ತಾಲೂಕಿನ 1, ಹಾನಗಲ್ಲ ಹಾಗೂ ಬ್ಯಾಡಗಿ ತಾಲೂಕಿನ ತಲಾ 3, ರಾಣೆಬೆನ್ನೂರ ತಾಲೂಕಿನ 7 ಗ್ರಾಪಂಗಳಿಗೆ ಸದ್ಯ ಚುನಾವಣೆ ನಡೆಯುತ್ತಿಲ್ಲ.

    ಇದೇ ರೀತಿ ಒಟ್ಟಾರೆಯಾಗಿ ರಾಜ್ಯದಲ್ಲಿ 5 ವರ್ಷದ ಅಧಿಕಾರಾವಧಿ ಮುಕ್ತಾಯಗೊಳ್ಳದೆ ಇರುವ ಒಟ್ಟು 162 ಹಾಗೂ ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿರುವ 6 ಹಾಗೂ ನಗರ ಸ್ಥಳೀಯ ಸಂಸ್ಥೆಗಳಾಗಿ ಮೇಲ್ದರ್ಜೆಗೇರಿರುವ 74 ಗ್ರಾಪಂಗಳು ಸೇರಿ ಒಟ್ಟು 242 ಗ್ರಾಪಂಗಳಿಗೆ ಸದ್ಯಕ್ಕೆ ಚುನಾವಣೆ ನಡೆಯುವುದಿಲ್ಲ. ರಾಜ್ಯದಲ್ಲಿ 6,004 ಗ್ರಾಪಂಗಳ ಪೈಕಿ 5,762 ಗ್ರಾಪಂಗಳಿಗೆ ಮಾತ್ರ ಆಯೋಗ ಚುನಾವಣೆ ಘೊಷಿಸಿದೆ.

    ಚುನಾವಣೆ ಘೊಷಣೆಯಾಗದಿರುವ ಗ್ರಾಪಂಗಳು: ಶಿಗ್ಗಾಂವಿ ತಾಲೂಕಿನ ಹನುಮರಹಳ್ಳಿ, ಹಾನಗಲ್ಲ ತಾಲೂಕಿನ ಹುಲ್ಲತ್ತಿ, ಹಾವಣಗಿ, ಕೂಡಲ, ಬ್ಯಾಡಗಿ ತಾಲೂಕಿನ ತಡಸ, ಕಾಗಿನೆಲೆ, ಕೆರವಡಿ, ರಾಣೆಬೆನ್ನೂರ ತಾಲೂಕಿನ ಅಂತರವಳ್ಳಿ, ಕುಪ್ಪೇಲೂರ, ಬಿಲ್ಲಹಳ್ಳಿ, ಮಾಳನಾಯಕನಹಳ್ಳಿ, ಸುಣಕಲ್ಲಬಿದರಿ, ತುಮ್ಮಿನಕಟ್ಟಿ, ಜೋಯಿಸರಹರಳಹಳ್ಳಿ.

    ಮತದಾರರ ಸಂಖ್ಯೆಯಲ್ಲಿ ಹೆಚ್ಚಳ

    2015ರ ಮೇ ತಿಂಗಳಲ್ಲಿ ಜಿಲ್ಲೆಯ ಒಟ್ಟು 206 ಗ್ರಾಪಂಗಳಿಗೆ ಚುನಾವಣೆ ನಡೆದಿತ್ತು. ಈ ಸಮಯದಲ್ಲಿ ಒಟ್ಟು 8,39,712 ಮತದಾರರಿದ್ದರು. ಈ ಬಾರಿ 209 ಗ್ರಾಪಂಗಳಿಗೆ ಚುನಾವಣೆ ಘೊಷಣೆಯಾಗಿದ್ದು, ಒಟ್ಟು ಮತದಾರರು 9,12,281 ರಷ್ಟಿದ್ದಾರೆ. ಹಿಂದಿನ ಚುನಾವಣೆಗೆ ಹೋಲಿಸಿದರೆ 72,569ರಷ್ಟು ಮತದಾರರು ಹೆಚ್ಚಳವಾಗಿದ್ದಾರೆ. ಹಿಂದಿನ ಚುನಾವಣೆಯಲ್ಲಿ 4,42,271 ಪುರುಷ ಮತದಾರರಿದ್ದರೆ, ಈ ಬಾರಿ ಆ ಸಂಖ್ಯೆ 4,73,254ರಷ್ಟಿದೆ. 30,983ರಷ್ಟು ಪುರುಷ ಮತದಾರರ ಹೆಚ್ಚಳವಾಗಿದ್ದಾರೆ. ಮಹಿಳಾ ಮತದಾರರು ಹಿಂದಿನ ಚುನಾವಣೆಯಲ್ಲಿ 3,97,441ರಷ್ಟಿದ್ದರು. ಈ ಚುನಾವಣೆಯಲ್ಲಿ 4,39,000ರಷ್ಟಿದ್ದಾರೆ. 41,559ರಷ್ಟು ಮಹಿಳಾ ಮತದಾರರು ಹೆಚ್ಚಳವಾಗಿದ್ದಾರೆ. ಪುರುಷರಿಗೆ ಹೋಲಿಸಿದರೆ ಮಹಿಳಾ ಮತದಾರರ ಸಂಖ್ಯೆ ಹಿಂದಿನ ಚುನಾವಣೆಗಿಂತ ಈ ಬಾರಿ ಹೆಚ್ಚಳವಾಗಿದೆ.

    ಮತಗಟ್ಟೆಗಳ ಸಂಖ್ಯೆಯೂ ಅಧಿಕ

    ಹಿಂದಿನ ಗ್ರಾಪಂ ಚುನಾವಣೆಯಲ್ಲಿ 1,065 ಮೂಲ ಹಾಗೂ 40 ಹೆಚ್ಚುವರಿ ಮತಗಳು ಸೇರಿ ಒಟ್ಟು 1,105 ಮತಗಟ್ಟೆಗಳಿದ್ದವು. ಈ ಬಾರಿ 1,067 ಮೂಲ ಹಾಗೂ 313 ಹೆಚ್ಚುವರಿ ಮತಗಟ್ಟೆಗಳು ಸೇರಿ ಒಟ್ಟು 1,380 ಮತಗಟ್ಟೆ ರಚಿಸಲಾಗಿದೆ. 1,136 ವಾರ್ಡ್​ಗಳಿಗೆ ಚುನಾವಣೆ ನಡೆಯಲಿದೆ.

    ಅವಧಿ ಮುಕ್ತಾಯವಾಗದ 14 ಗ್ರಾಪಂ ಬಿಟ್ಟು ಇತರ ಗ್ರಾಪಂಗಳಿಗೆ ಚುನಾವಣೆ ಘೂಷಣೆಯಾಗಿದೆ. ಇತರ ಚುನಾವಣೆಗಳಿಗೆ ಅನ್ವಯಿಸುವ ಮಾದರಿ ನೀತಿ ಸಂಹಿತೆ ಗ್ರಾಪಂ ಚುನಾವಣೆಗೂ ಅನ್ವಯಿಸುತ್ತದೆ. ಗ್ರಾಮಾಂತರ ಪ್ರದೇಶದಲ್ಲಿ ಮಾತ್ರ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಚುನಾವಣೆಗೆ ವೆಚ್ಚದ ಮಿತಿ ಇರುವುದಿಲ್ಲ. ಆದರೆ, ಯಾವುದೇ ಆಮಿಷ, ವಸ್ತು ಹಾಗೂ ಹಣದ ಆಮಿಷ ತೋರಿಸಿದರೆ ಕ್ರಮ ವಹಿಸಲಾಗುವುದು. ಚುನಾವಣೆ ಆಯೋಗದ ಮಾರ್ಗಸೂಚಿ ಪ್ರಕಾರ ಕೋವಿಡ್ ಎಸ್​ಒಪಿಯನ್ನು ಕಡ್ಡಾಯವಾಗಿ ಅನ್ವಯಿಸಲಾಗುತ್ತದೆ. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಭ್ಯರ್ಥಿಯು 5 ಜನಕ್ಕಿಂತ ಹೆಚ್ಚು ಜನರೊಂದಿಗೆ ಸೇರಿ ಪ್ರಚಾರ ನಡೆಸುವಂತಿಲ್ಲ.
    | ಸಂಜಯ ಶೆಟ್ಟಣ್ಣವರ, ಜಿಲ್ಲಾಧಿಕಾರಿ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts