More

    ವೈನ್‌ಶಾಪ್‌ಗಳಲ್ಲಿ ವೈನ್‌ಗಿಲ್ಲ ಡಿಮಾಂಡ್, ಹೆಸರಿಗಷ್ಟೇ ಸೀಮಿತವಾದ ವೈನ್

    ಮಂಗಳೂರು: ಆದಾಯ ಹೆಚ್ಚುವ ನಿರೀಕ್ಷೆಯಲ್ಲಿ ಸರ್ಕಾರವೇನೋ ಮದ್ಯಮಾರಾಟಕ್ಕೆ ಅನುಮತಿ ನೀಡಿದೆ. ಆದರೆ, ವೈನ್ ಶಾಪ್ ಹೆಸರಿರುವ ಅಂಗಡಿಗಳಲ್ಲಿ ಮದ್ಯ ಮಾರಾಟವಾಗುತ್ತಿದೆಯೇ ಹೊರತು ವೈನ್ ಮಾರಾಟವಾಗುತ್ತಿಲ್ಲ. ಸರ್ಕಾರದಿಂದ ಬಂದಿರುವ ಆದೇಶದಲ್ಲೂ ಮದ್ಯ ಮಾರಾಟಕ್ಕೆ ಅವಕಾಶವಿದೆ, ಆದರೆ ವೈನ್ ಮಾತ್ರವೇ ಮಾರಾಟ ಮಾಡುವ ಅಂಗಡಿಗಳಿಗೆ ಅನುಮತಿಯಿಲ್ಲ.

    ದ.ಕ.ಜಿಲ್ಲೆಯಲ್ಲಿ ಲಿಕ್ಕರ್ ಮಾರಾಟಗಾರರಿಗೆ ವೈನ್‌ಗಿಂತ ಮದ್ಯ, ಬಿಯರ್ ಮಾರಾಟದಲ್ಲಿ ಹೆಚ್ಚು ಆದಾಯ, ಲಾಭಾಂಶ. ಹಾಗಾಗಿ ವೈನ್ ಮಾರಾಟಕ್ಕೆ ಆಸಕ್ತಿ ಇಲ್ಲ. ಹಿಂದೆ ಹೆಚ್ಚಿನ ಪ್ರಮಾಣದಲ್ಲಿ ವೈನ್ ಮಾರಾಟ ಆಗುತ್ತಿತ್ತು, ಮಹಿಳೆಯರೂ ಸೇವಿಸುತ್ತಿದ್ದರು, ಈಗ ಮಹಿಳೆಯರು ಮುಕ್ತವಾಗಿ ಬಿಯರ್, ಮದ್ಯ ಸೇವಿಸುತ್ತಾರೆ, ವೈನ್ ಬಗ್ಗೆ ಹಿಂದಿನ ಆಸಕ್ತಿ ಇಲ್ಲ ಎನ್ನುವುದು ಮದ್ಯ ಮಾರಾಟಗಾರರೊಬ್ಬರ ಅಭಿಮತ.

    ದ.ಕ ಜಿಲ್ಲೆಯಲ್ಲಿ ವೈನ್ ಮಾರಾಟ ಒಟ್ಟು ಲಿಕ್ಕರ್ ಮಾರಾಟದ ಶೇ.5ರಷ್ಟೇ ಇರಬಹುದು, ಪ್ರತ್ಯೇಕವಾಗಿ ಅದನ್ನು ಲೆಕ್ಕ ಹಾಕಿಲ್ಲ, ಐಎಂಎಲ್ ಜೊತೆಗೇ ಸೇರಿಸಲಾಗುತ್ತದೆ ಎನ್ನುತ್ತವೆ ಅಬಕಾರಿ ಇಲಾಖೆ ಮೂಲಗಳು. ಪ್ರಸ್ತುತ ಕೇಂದ್ರ, ರಾಜ್ಯ ಸರ್ಕಾರದಿಂದ ಬಂದಿರುವ ಸೂಚನೆಯಂತೆ ಮದ್ಯದಂಗಡಿಗಳಿಗೆ ಮಾತ್ರವೇ ಮದ್ಯ ಮಾರಾಟದ ಅನುಮತಿ. ವೈನ್ ಅಂಗಡಿಗಳಿಗೆ ವೈನ್ ಮಾರಾಟದ ಅನುಮತಿ ಇಲ್ಲ. ಜಿಲ್ಲೆಯಲ್ಲಿ ಬಹುತೇಕ ಮದ್ಯದಂಗಡಿಗಳಿಗೆ ವೈನ್‌ಶಾಪ್ ಎಂಬ ಹೆಸರಿದೆ, ಇಲ್ಲಿ ಮದ್ಯ ಮಾರಾಟದ ಪರವಾನಿಗೆಯನ್ನೂ ಪಡೆದು ಮದ್ಯವನ್ನೇ ಹೆಚ್ಚಾಗಿ ಮಾರಲಾಗುತ್ತದೆ. ಹಾಗಾಗಿ ಹೆಸರಿಗಷ್ಟೇ ವೈನ್‌ಶಾಪ್ ಹೊರತು ಮಾರಾಟವಿಲ್ಲ.

    ದ್ರಾಕ್ಷಿ ಬೆಳೆಗಾರರಿಗೆ ಪ್ರಯೋಜನ: ವೈನ್ ಮಾರಾಟ ಹೆಚ್ಚಾದರೆ ರಾಜ್ಯದ ದ್ರಾಕ್ಷಿ ಬೆಳೆಗಾರರಿಗೆ ಅದರಿಂದ ಪ್ರಯೋಜನವಾಗುತ್ತಿತ್ತು. ಬೆಳೆಗಾರರು ಬೆಳೆದ ದ್ರಾಕ್ಷಿಗೆ ಬೇಡಿಕೆ ಹೆಚ್ಚಾಗಿ ಆದಾಯ ಹೆಚ್ಚಾಗುತ್ತಿತ್ತು. ಈ ಬಗ್ಗೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತಂದರೆ ಉತ್ತಮ ಎನ್ನುವುದು ಅಧಿಕಾರಿಯವರೊಬ್ಬರ ಸಲಹೆ.

    ಕರಗಿದ ‘ಮದ್ಯ’ ಸಾಲು: ದ.ಕ, ಉಡುಪಿ ಜಿಲ್ಲೆಗಳಲ್ಲಿ ಮದ್ಯದಂಗಡಿಗಳ ಮುಂದಿನ ಸಾಲು ಎರಡನೇ ದಿನ ಕರಗಿದೆ. ಬೇಕಾದಷ್ಟೂ ಮದ್ಯವನ್ನು ಜನರು ಕೊಂಡು ಹೋಗಿರುವ ಸಾಧ್ಯತೆ ಇದೆ, ಮೊದಲ ದಿನ ಮದ್ಯದಂಗಡಿ ತೆರೆಯುವ ಮೊದಲೇ ಸರತಿ ಸಾಲಿನಲ್ಲಿ ನಿಂತಿದ್ದರೆ ಮಂಗಳವಾರ ಎಲ್ಲೂ ಉದ್ದದ ಸಾಲು ಕಾಣಲಿಲ್ಲ. ದೈಹಿಕ ಅಂತರವನ್ನೂ ಕಾಯ್ದುಕೊಳ್ಳಲಾಗಿತ್ತು. ಸಂಜೆ ವೇಳೆ ಒಂದಷ್ಟು ಮಂದಿ ಮದ್ಯದಂಗಡಿ ಮುಂದೆ ಕಂಡು ಬಂದರು. ಕೆಲವು ಮದ್ಯದಂಗಡಿಗಳಲ್ಲಿ ಸೋಮವಾರ ಸ್ಟಾಕ್ ಖಾಲಿಯಾಗಿದ್ದು, ಮಂಗಳವಾರ ಮಧ್ಯಾಹ್ನದವರೆಗೂ ಪೂರೈಕೆಯಾಗಿರಲಿಲ್ಲ.

    ದ.ಕ. ಇಳಿಕೆ, ಉಡುಪಿ ಏರಿಕೆ: ದ.ಕ ಜಿಲ್ಲೆಯಲ್ಲಿ ಮದ್ಯಮಾರಾಟದಲ್ಲಿ ಮೊದಲ ದಿನ 7 ಕೋಟಿ ರೂ. ಸಂಗ್ರಹವಾಗಿದ್ದರೆ ಎರಡನೇ ದಿನ 4,61,64,250 ರೂ.ಗೆ ಇಳಿಕೆಯಾಗಿದೆ. 43,724 ಲೀಟರ್ ಮದ್ಯ ಹಾಗೂ 25,281 ಲೀಟರ್ ಬೀಯರ್ ಮಾರಾಟವಾಗಿದೆ ಎಂದು ಅಬಕಾರಿ ಡಿಸಿ ಶೈಲಜಾ ಕೋಟೆ ತಿಳಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಸೋಮವಾರ 1.50 ಕೋಟಿ ರೂ. ವಹಿವಾಟು ನಡೆದಿತ್ತು. ಮಂಗಳವಾರ 2,05,54,766 ರೂ. ತಲುಪಿದೆ. 56775 ಲೀಟರ್ ಮದ್ಯ, 26823 ಲೀ. ಬಿಯರ್ ಮಾರಾಟವಾಗಿದೆ ಎಂದು ಇಲಾಖೆ ತಿಳಿಸಿದೆ. ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನದವರೆಗೆ ಮಾತ್ರ ಅವಕಾಶ ಇತ್ತು, ಮಂಗಳವಾರದಿಂದ ಇದು ಸಾಯಂಕಾಲ 7 ಗಂಟೆಯವರೆಗೆ ವಿಸ್ತರಣೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts