More

    ಕಾಮಗಾರಿಗೆ ಸಿಗದ ಸಿಆರ್​ಜಡ್ ಅನುಮತಿ

    ಭಟ್ಕಳ: ತಾಲೂಕಿನ ಮಾವಿನಕುರ್ವೆ ಬಂದರಿನಲ್ಲಿ ಹೂಳೆತ್ತುವ ಕಾಮಗಾರಿ ಸಿಆರ್​ಜಡ್ ಅನುಮತಿ ಸಿಗದ ಕಾರಣ ಈವರೆಗೂ ಆರಂಭಗೊಂಡಿಲ್ಲ. ಇದರಿಂದ ಈ ವರ್ಷವಾದರೂ ನೆಮ್ಮದಿಯಿಂದ ಮೀನುಗಾರಿಕೆ ನಡೆಸಬಹುದೆಂಬ ಮೀನುಗಾರರ ಆಸೆ ಈಡೇರುತ್ತಿಲ್ಲ.

    ಮೀನುಗಾರಿಕೆ ಇಲಾಖೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಆಶ್ರಯದಲ್ಲಿ ಭಟ್ಕಳ ಮೀನುಗಾರಿಕೆ ಬಂದರಿನಲ್ಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿ ಶಿಲಾನ್ಯಾಸ ಸಮಾರಂಭ ಜ. 14ರಂದು ನಡೆದಿತ್ತು.

    ಕಾಮಗಾರಿ ಆರಂಭಕ್ಕೆ ಅಗತ್ಯವಿರುವ ಎಲ್ಲ ಪ್ರಕ್ರಿಯೆಗಳು ಮುಗಿದು ಹೂಳೆತ್ತುವ ಯಂತ್ರವೂ ಆಗಮಿಸಿದೆ. ಆದರೆ, ಸಿಆರ್​ಜಡ್ ಅನುಮತಿ ದೊರೆಯದ ಕಾರಣ ಕಾಮಗಾರಿ ಮಾತ್ರ ಆರಂಭಗೊಂಡಿಲ್ಲ.

    ಬಂದರಿನಲ್ಲಿ ಶೇಖರಣೆಯಾಗಿರುವ ಹೂಳಿನಿಂದಾಗಿ ಈಗಾಗಲೆ ಹಲವು ಬೋಟ್​ಗಳು ಹಾಳಾಗಿವೆ. ಇನ್ನೇನು ಕಾಮಗಾರಿ ಆರಂಭವಾಗುತ್ತದೆ, ಮೀನುಗಾರರ ಒಂದು ಸಮಸ್ಯೆಯಾದರೂ ಪರಿಹಾರ ಆಗುತ್ತದೆ ಎಂದು ಸ್ಥಳೀಯರು ಭಾವಿಸಿದ್ದರು. ಈಗ ಅದು ಕೂಡಾ ಈಡೇರುವ ಲಕ್ಷಣ ಕಾಣಿಸುತ್ತಿಲ್ಲ. ಇನ್ನು 2-3 ತಿಂಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಮುಂದಿನ ವರ್ಷವೂ ಮತ್ತದೇ ಸಮಸ್ಯೆ ಅನುಭವಿಸಬೇಕು ಎಂದು ಮೀನುಗಾರರು ಪರಿತಪಿಸುತ್ತಿದ್ದಾರೆ.

    ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆಯಲ್ಲಿ ಬೋಟ್​ಗಳಿಗೆ ಹಾನಿಯಾಗುವ ಘಟನೆಗಳು ನಡೆಯುತ್ತಿರುತ್ತವೆ. ಎಷ್ಟೋ ಬಾರಿ ಬೋಟ್​ಗಳಿಗೆ ಬೋಟ್ ತಾಗಿ ಮೀನುಗಾರರು ಅಪಾರ ಹಾನಿ ಅನುಭವಿಸಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ಬೋಟ್ ಮುಳುಗಿದ್ದು, ಇದು ಬೋಟ್ ಮಾಲೀಕರ ಆತಂಕ ಹೆಚ್ಚಿಸಿತ್ತು. ಇವೆಲ್ಲದರ ನಡುವೆ 5 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಮಂಜೂರಾಗಿದ್ದು, ಮೀನುಗಾರರ ಉತ್ಸಾಹ ಹೆಚ್ಚಿಸಿತ್ತು.

    ಮೀನುಗಾರಿಕೆ ಇಲಾಖೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಆಶ್ರಯದಲ್ಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ಭಟ್ಕಳ ಮೀನುಗಾರಿಕೆ ಬಂದರಿನ ಹೂಳೆತ್ತುವ ಕಾಮಗಾರಿಗೆ ಮಂಜೂರಿ ದೊರೆತಿದೆ. 220 ಮೀ., 160 ಮೀ. ಟ್ರೈಂಗ್ಲರ್ ಮಾದರಿಯಲ್ಲಿ ಡ್ರೆಜ್ಜಿಂಗ್ ನಡೆಯಲಿದೆ. ಬಂದರಿನಲ್ಲಿ 2.5 ಮೀಟರ್ ಆಳದಲ್ಲಿ ಹೂಳು ತೆಗೆದರೆ ಸಮುದ್ರ ಸೇರುವ ಸ್ಥಳದಲ್ಲಿ 3. ಮೀಟರ್ ಹೂಳು ತೆಗೆಯಲಾಗುವುದು. ಆದರೆ, ಸಿಆರ್​ಜಡ್ ಅನುಮತಿ ಸಿಗದ ಕಾರಣ ಕಾಮಗಾರಿ ವಿಳಂಬವಾಗುತ್ತಿದೆ.

    -ರಾಮದಾಸ ಆಚಾರಿ, ಬಂದರು ಇಲಾಖೆ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts