More

    ಉಡುಪಿ ಜಿಲ್ಲೆಯಲ್ಲಿ ಕರೊನ ಸೊಂಕಿಲ್ಲ

    ಉಡುಪಿ: ಜಿಲ್ಲಾಸ್ಪತ್ರೆ ಐಸೊಲೇಶನ್ ವಾರ್ಡ್‌ಗೆ ದಾಖಲಾಗಿದ್ದ ಕಾಪು ಯುವಕನಲ್ಲಿ ಕೊರೊನಾ ಸೊಂಕು ಪತ್ತೆಯಾಗಿಲ್ಲ ಎಂಬುದನ್ನು ಪ್ರಾಯೋಗಾಲಯ ವರದಿ ದೃಢಪಡಿಸಿದ್ದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ. ಈ ಮೂಲಕ ಮಣಿಪಾಲ ಕೆಎಂಸಿ ಹಾಗೂ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಶಂಕಿತ ಕರೊನಾ ವೈರಸ್ ಲಕ್ಷಣದಿಂದ ದಾಖಲಾದ ಎಲ್ಲ ವರದಿಗಳೂ ನೆಗೆಟಿವ್ ಬಂದಂತಾಗಿದ್ದು, ಜನರ ಆತಂಕ ದೂರವಾಗಿದೆ.
    ಜಿಲ್ಲೆಯಲ್ಲಿ ಫೆ.29ರಿಂದ ಇಲ್ಲಿವರೆಗೆ 90 ಮಂದಿ ವಿದೇಶದಿಂದ ಆಗಮಿಸಿದ್ದು, ಇವರಿಗೆ ಕರೊನಾ ಲಕ್ಷಣಗಳಿಲ್ಲ. ಆದರೆ ಮನೆಯಲ್ಲೆ ನಿರ್ಬಂಧನದಲ್ಲಿದ್ದು, ಆರೋಗ್ಯ ಇಲಾಖೆ ನಿಗಾ ವಹಿಸಿದೆ. ಜರ್ಮನಿಯಿಂದ ಇತ್ತೀಚೆಗೆ ಊರಿಗೆ ಬಂದಿದ್ದ ಕಾಪು ನಿವಾಸಿ ಯುವಕ ಶೀತ, ಕೆಮ್ಮು ಬಾಧೆಯಿಂದ ಬಳಲುತ್ತಿದ್ದರು. ಆಸ್ಪತ್ರೆಯ ಐಸೊಲೇಶನ್ ವಾರ್ಡ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಅವರ ವರದಿಯು ನೆಗೆಟಿವ್ ಬಂದಿದೆ. ಮಣಿಪಾಲ ಕೆಎಂಸಿಗೆ ದಾಖಲಾಗಿದ್ದ 68 ವರ್ಷದ ಮಹಿಳೆ ಮತ್ತು ಮೂವರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಕರೊನಾ ಸೋಂಕು ದೃಢಪಟ್ಟಿಲ್ಲ. ಮಹಿಳೆಯ ಮಾದರಿಯನ್ನು ಮೂರನೇ ಬಾರಿಗೆ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮೂರು ಸಲವೂ ನೆಗೆಟಿವ್ ವರದಿ ಬಂದಿದೆ. ಜಿಲ್ಲಾಸ್ಪತ್ರೆಯಲ್ಲಿ 5, ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ 4 ಶಂಕಿತ ಪ್ರಕರಣ ಸೇರಿದಂತೆ ಒಟ್ಟು 9 ಪ್ರಕರಣಗಳ ವರದಿಗಳೂ ನೆಗೆಟಿವ್ ಬಂದಿದ್ದು, ಜಿಲ್ಲೆಯಲ್ಲಿ ಕರೊನ ಸೊಂಕಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಭಾನುವಾರವೂ ಇಲಾಖೆ ಕಾರ್ಯನಿರ್ವಹಣೆ: ಉಡುಪಿ ಜಿಲ್ಲಾ ಆರೋಗ್ಯ ಇಲಾಖೆ ಕಚೇರಿ ಎರಡನೇ ಶನಿವಾರ ಮತ್ತು ಭಾನುವಾರ ರಜೆ ದಿನಗಳಲ್ಲಿಯೂ ಕರ್ತವ್ಯ ನಿರ್ವಹಿಸಿದೆ. ಕರೊನಾ ಸಂಬಂಧಿಸಿದ ಅನುಷ್ಠಾನಾಧಿಕಾರಿಗಳು, ಸಂಬಂಧಪಟ್ಟ ತಜ್ಞ ವರ್ಗ, ವೈದ್ಯರು, ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದಾರೆ. ಡಿಎಚ್‌ಒ, ತಾಲೂಕು ಆರೋಗ್ಯ ಅಧಿಕಾರಿಗಳು ತುರ್ತು ಕರ್ತವ್ಯ ನಿರ್ವಹಣೆಯಲ್ಲಿದ್ದರು.

    ಮನೆಗೆ ಅನಧಿಕೃತ ವ್ಯಕ್ತಿಗಳು ಬರುತ್ತಾರೆ ಎಚ್ಚರ: ಆರೋಗ್ಯ ಇಲಾಖೆ ಸಿಬ್ಬಂದಿಯಾಗಿದ್ದು, ಆರೋಗ್ಯದ ಕುರಿತು ಮಾಹಿತಿ ಸಂಗ್ರಹಿಸಲು ಮನೆ ಮನೆಗೆ ಭೇಟಿ ನೀಡುತ್ತೇ ವೆಂದು ಬರುವ ಅನಧಿಕೃತ ವ್ಯಕ್ತಿಗಳಿಗೆ ಮಾಹಿತಿ ನೀಡದಂತೆ ಹಾಗೂ ಮನೆಯೊಳಗೆ ಪ್ರವೇಶ ನೀಡದಂತೆ ಡಿಎಚ್‌ಒ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ. ಭಾನುವಾರ ಬನ್ನಂಜೆ ವೃದ್ಧ ದಂಪತಿಯೊಬ್ಬರ ಮನೆಗೆ ಬಂದ ಅಪರಿಚಿತರು ಮಾಹಿತಿ ಕೋರಿದ್ದು, ದಂಪತಿ, ಆರೋಗ್ಯ ಇಲಾಖೆ ಗುರುತಿನ ಚೀಟಿ, ದಾಖಲಾತಿ ಕೇಳಿದರು. ಆ ವ್ಯಕ್ತಿಗಳು ಮಾಹಿತಿ ನೀಡದೆ ತೆರಳಿರುವ ಬಗ್ಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಜಿಲ್ಲಾ ಆರೋಗ್ಯ ಇಲಾಖೆ ಆರೋಗ್ಯದ ಮಾಹಿತಿ ಸಂಗ್ರಹಿಸಲು ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಇವರಿಗೆ ಇಲಾಖೆ ವತಿಯಿಂದ ಸಮವಸ್ತ್ರ, ಗುರುತಿನ ಚೀಟಿ, ಅಧಿಕೃತ ಆದೇಶ ಪತ್ರ ನೀಡಲಾಗಿದೆ. ಇವರನ್ನು ಹೊರತುಪಡಿಸಿ ಇತರರು ಮಾಹಿತಿ ಕೇಳಿದರೆ, ತಕ್ಷಣ ಆರೋಗ್ಯ ಇಲಾಖೆ 9449843066 ಅಥವಾ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಕರೊನಾ ವೈರಸ್ ಸಂಬಂಧಪಟ್ಟಂತೆ ಉಡುಪಿ ಜಿಲ್ಲೆಯಲ್ಲಿ ಇದುವರೆಗಿನ ಎಲ್ಲ ಶಂಕಿತ ಪ್ರಕರಣಗಳ ವರದಿ ನೆಗೆಟಿವ್ ಬಂದಿದೆ. ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಜಾಗೃತರಾಗಿ, ಶುಚಿತ್ವ ಕಾಪಾಡಿಕೊಳ್ಳಬೇಕು. ವಿದೇಶದಿಂದ ಬಂದವರು ಆನಾರೋಗ್ಯಕ್ಕೆ ಒಳಗಾಗಿದ್ದರೆ, ತಕ್ಷಣ ಸಂಪರ್ಕಿಸಿ ಮಾಹಿತಿ ನೀಡಬೇಕು.
    -ಡಾ.ಸುಧೀರ್ ಚಂದ್ರ ಸೂಡ, ಡಿಎಚ್‌ಒ, ಉಡುಪಿ ಜಿಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts