More

    ನಾವಿಕನಿಲ್ಲದೇ ನೂರಾರು ಕಿಮೀ ಸಾಗಿದ ಬೋಟ್​ಗಳು!

    ಕಾರವಾರ: ಆ. 1 ಹಾಗೂ 2ರಂದು ಭಟ್ಕಳ ಭಾಗದಲ್ಲಿ ಅರಬ್ಬಿ ಸಮುದ್ರದ ಕಡೆಯಿಂದ ಭಾರಿ ಗಾಳಿ ಬೀಸಿತ್ತು. ಮೇಘ ಸ್ಪೋಟವಾಗಿ ಅಪರಿಮಿತ ಮಳೆಯಾಗಿತ್ತು. ಭಟ್ಕಳ ಜಲಪಾತ್ರೆಯಂತಾಗಿತ್ತು. ಅಂದು ನಾಪತ್ತೆಯಾದ ಬೋಟ್​ಗಳು ನೂರಾರು ಕಿಲೋಮೀಟರ್​ಗಳಾಚೆ ಪತ್ತೆಯಾಗುತ್ತಿವೆ!

    ಭಟ್ಕಳ ತಾಲೂಕಿನ ಮುಂಡಳ್ಳಿ, ಬೆಳ್ಣಿ, ಬಂದರು, ಶಿರಾಲಿ, ತೆಂಗಿನಗುಂಡಿ ಮುಂತಾದ ಕಡೆಗಳಲ್ಲಿ ಸಮುದ್ರ ದಂಡೆ, ಅಳಿವೆಗಳ ಪಕ್ಕ ಕಟ್ಟಿ ಇಡಲಾಗಿದ್ದ 30ಕ್ಕೂ ಹೆಚ್ಚು ಬೋಟ್​ಗಳು ತೇಲಿ ಹೋಗಿ, ನಾಪತ್ತೆಯಾಗಿವೆ.

    ಆ.3ರಂದು ಮೀನುಗಾರರು ಬೋಟ್​ಗಳಿಗಾಗಿ ಸಮುದ್ರದಲ್ಲಿ ಹತ್ತಾರು ಕಿಮೀ ತೆರಳಿ ಅದೆಷ್ಟೇ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಈಗ ನಾಲ್ಕು ದಿನಗಳ ನಂತರ ಉಡುಪಿ ಜಿಲ್ಲೆಯ ವಿವಿಧ ಭಾಗದಲ್ಲಿ ಬೋಟ್​ಗಳು ಶಿಥಿಲ ಸ್ಥಿತಿಯಲ್ಲಿ ಪತ್ತೆಯಾಗುತ್ತಿವೆ.

    ಭಟ್ಕಳ ಬೆಳ್ನಿಯ ಮಂಜಮ್ಮ ದುರ್ಗಪ್ಪ ಮೊಗೇರ ಅವರ ಮೋಟರ್ ಹೊಂದಿದ ಪಾತಿ ದೋಣಿ ಸುಮಾರು 110 ಕಿಮೀ ದೂರದ ಉಡುಪಿ ಜಿಲ್ಲೆ ಹೆಜಮಾಡಿಯಲ್ಲಿ ಪತ್ತೆಯಾಗಿದೆ. ಮುಂಡಳ್ಳಿಯ ರಾಮಾ ತಿಮ್ಮಪ್ಪ ಮೊಗೇರ ಅವರ ನಾಗಶ್ರೀ ಹೆಸರಿನ ಪಾತಿ ದೋಣಿ ಉಡುಪಿಯ ಉದ್ಯಾವರದ ಪಡುಕೆರೆ ಸಮೀಪ ಪತ್ತೆಯಾಗಿದೆ. ಶಿರಾಲಿಯ ರಾಮಚಂದ್ರ ತಿಮ್ಮಯ್ಯ ಮೊಗೇರ ಅವರ ದೋಣಿ ಕುಂದಾಪುರದಲ್ಲಿ ಪತ್ತೆಯಾಗಿದೆ. ಆದರೆ, ಎಲ್ಲ ದೋಣಿಗಳೂ ಬಹಳಷ್ಟು ಹಾನಿಯಾಗಿದ್ದು, ಮತ್ತೆ ಬಳಕೆಗೆ ಬರುವ ಸ್ಥಿತಿಯಲ್ಲಿಲ್ಲ.

    ತಾಂತ್ರಿಕ ಸಮಸ್ಯೆ: ಆಗಸ್ಟ್ 1 ಮತ್ತು 2ರ ಮಹಾ ಮಳೆಗೆ 122 ಯಾಂತ್ರಿಕ ಮತ್ತು ಪಾತಿ ದೋಣಿಗಳಿಗೆ ಸಂಪೂರ್ಣ ಹಾಗೂ 75 ದೋಣಿ, ಬಲೆ ಮತ್ತು ಇಂಜಿನ್​ಗಳು ಸಂಪೂರ್ಣ ಹಾನಿಯಾಗಿದೆ. ಸುಮಾರು 2.5 ಕೋಟಿ ರೂ. ಹಾನಿಯಾಗಿದೆ ಎಂದು ಮೀನುಗಾರಿಕೆ ಇಲಾಖೆ ವರದಿ ತಯಾರಿಸಿದೆ. ಆದರೆ, ಹಾನಿಯ ಪ್ರಮಾಣದಲ್ಲಿ ಪರಿಹಾರ ನೀಡಲು ಇಲಾಖೆಗೆ ತಾಂತ್ರಿಕ ಸಮಸ್ಯೆ ಇದೆ. ಸರ್ಕಾರ ವಿಶೇಷ ಪರಿಹಾರ ಘೋಷಿಸಿದರೆ ಮಾತ್ರ ಪರಿಹಾರ ದೊರೆಯಲಿದೆ.

    ಎನ್​ಡಿಆರ್​ಎಫ್ ನಿಯಮಾವಳಿಯ ಪ್ರಕಾರ ಒಂದು ದೋಣಿ ಸಂಪೂರ್ಣ ಹಾನಿಯಾದಲ್ಲಿ ಗರಿಷ್ಠ 13,500 ರೂ. ಮಾತ್ರ ಪರಿಹಾರ ನೀಡಲು ಸಾಧ್ಯ. ಭಾಗಶಃ ಹಾನಿಯಾದರೆ, 6300 ರೂ. ನೀಡಬಹುದು. ಸಂಪೂರ್ಣ ಹಾನಿ ಎಂದು ವರದಿ ನೀಡಿದರೆ, ದೋಣಿಯನ್ನು ಮತ್ತೆ ಬಳಸುವಂತಿಲ್ಲ ಎನ್ನುತ್ತದೆ ನಿಯಮ. ಇದರಿಂದ ನಿಯಮಾವಳಿಯಂತೆ ಪರಿಹಾರ ಒದಗಿಸಲು ಕಷ್ಟವಾಗುತ್ತಿದೆ.

    ಸಾಮಾನ್ಯವಾಗಿ ಫೈಬರ್ ಪಾತಿ ದೋಣಿಗೆ 25 ಸಾವಿರ ರೂ. ಬೆಲೆ ಇದೆ. ಬಲೆ, ಇತರ ವೆಚ್ಚ ಎಲ್ಲ ಸೇರಿ ಸುಮಾರು 50 ಸಾವಿರ ರೂ. ಖರ್ಚಾಗಿರುತ್ತದೆ. ಯಾಂತ್ರೀಕೃತ ಪಾತಿ ದೋಣಿ ಹಾಗೂ ಬಲೆಗಳು ಸೇರಿ ಸುಮಾರು 7 ಲಕ್ಷ ರೂ. ಖರ್ಚಾಗುತ್ತದೆ. ಭಾಗಶಃ ಹಾನಿ ಎಂದರೂ ಅದನ್ನು ರಿಪೇರಿ ಮಾಡಲು ಕನಿಷ್ಠ 50 ಸಾವಿರ ರೂ. ಬೇಕಾಗುತ್ತದೆ. ಇದರಿಂದ ಸರ್ಕಾರದ ಪರಿಹಾರ ಎಲ್ಲೂ ಸಾಲದು ಎಂಬುದು ಮೀನುಗಾರರ ಅಳಲು.

    ಈಗಾಗಲೇ ನಾವು ದೋಣಿ, ಬಲೆಗಳ ಹಾನಿಯ ಕುರಿತು ಸರ್ವೆ ಕಾರ್ಯ ನಡೆಸಿದ್ದೇವೆ. ನಾಪತ್ತೆಯಾದ, ಹಾನಿಯಾದ ಬಗ್ಗೆ ಅರ್ಜಿಗಳನ್ನು ಪಡೆಯಲಾಗುತ್ತಿದೆ. ಎಲ್ಲವನ್ನೂ ಒಟ್ಟುಗೂಡಿಸಿ ಶೀಘ್ರದಲ್ಲಿ ಸರ್ಕಾರಕ್ಕೆ ಹಾನಿಯ ವರದಿ ಸಲ್ಲಿಸಲಾಗುವುದು.

    ಚೇತನ್, ಭಟ್ಕಳ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts