More

    ಲೈಟ್ ಫಿಶಿಂಗ್ ನಿರಂತರ!

    ಶ್ರವಣ್‌ಕುಮಾರ್ ನಾಳ, ಪುತ್ತೂರು
    ಮೀನಿನ ಸಂತತಿ ರಕ್ಷಣೆಗಾಗಿ ಸಾಂಪ್ರದಾಯಿಕವಲ್ಲದ ಲೈಟ್ ಫಿಶಿಂಗ್ ವಿಧಾನವನ್ನು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೇಂದ್ರ ಸರ್ಕಾರ 2017ರಲ್ಲೇ ನಿಷೇಧಿಸಿದ್ದರೂ, ಕರಾವಳಿ ಭಾಗದಲ್ಲಿ ಈ ರೀತಿ ಮೀನುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ.
    ಖಚಿತ ಮಾಹಿತಿ ಮೇಲೆ ಕಳೆದ ವಾರ ವಿಜಯವಾಣಿ ಪ್ರತಿನಿಧಿ ಸುಮಾರು 4 ಗಂಟೆ ಕಾಲ ಸಮುದ್ರದಲ್ಲಿ ಪ್ರಯಾಣಿಸಿದಾಗ ಲೈಟ್ ಫಿಶಿಂಗ್ ನಡೆಯುತ್ತಿರುವುದು ಸ್ಪಷ್ಟವಾಯಿತು.

    ಕೇರಳದ ಕಡಲ್ಗಡಿಯಿಂದ ಗೋವಾವರೆಗೆ ರಾಜ್ಯದ ಜಲಭಾಗವಿದ್ದು, ಸುಮಾರು 500ಕ್ಕಿಂತ ಅಧಿಕ ಬೋಟ್‌ಗಳು ಪ್ರತೀದಿನ ಲೈಟ್ ಫಿಶಿಂಗ್(ಬೆಳಕಿನ ಸಹಾಯದಿಂದ ನಡೆಸಲಾಗುವ ಅಕ್ರಮ ಮೀನುಗಾರಿಕಾ ವಿಧಾನ) ನಡೆಸುತ್ತಿದ್ದು, ಕಡಲುಗಳ್ಳರ ನಿರಂತರ ಮಾಫಿಯಾಗೆ ಜಿಲ್ಲಾಳಿತಗಳು ಮೌನವಹಿಸುತ್ತಿದೆ.ಇದು ನಿತ್ಯನಿರಂತರವಾಗಿರುವ ಕಾರಣ ಕಡಲ ತೀರದ ನಾಡದೋಣಿ ಮೀನುಗಾರರು ಮೀನು ಸಿಗದೆ, ಕೆಲಸವೂ ಇಲ್ಲದೆ ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದ್ದಾರೆ.

    ಏನಿದು ಲೈಟ್ ಫಿಶಿಂಗ್?: ಸಮುದ್ರ ತೀರದಿಂದ 40 ನಾಟಿಕಲ್ ಮೈಲ್ ದೂರದಲ್ಲಿ 2-3 ಪರ್ಸಿನ್ ಬೋಟ್‌ಗಳು ಲಂಗರು ಹಾಕಿ ಅಧಿಕ ಸಾಮರ್ಥ್ಯದ ಲೈಟ್‌ಗಳ ಮೂಲಕ ಮೀನುಗಳನ್ನು ಆಕರ್ಷಿಸಿ ನಡೆಸುವ ಮೀನುಗಾರಿಕೆಯಿದು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರಿನ ನಾಡದೋಣಿ ಮೀನುಗಾರು 40 ನಾಟಿಕಲ್ ದೂರದ ಸಮುದ್ರದಲ್ಲಿ ನಡೆಯುವ ಲೈಟ್ ಫಿಶಿಂಗ್ ಬಗ್ಗೆ ವಿಜಯವಾಣಿ ತಂಡಕ್ಕೆ ಸಮಗ್ರ ಮಾಹಿತಿ ನೀಡಿದ್ದಾರೆ. ಸುಮಾರು 4 ಗಂಟೆಗಳ ಸಮುದ್ರಯಾನದ ಬಳಿಕ ಸಮುದ್ರದ ಮಧ್ಯೆ ಅಕ್ರಮ ನಡೆಯುತ್ತಿರುವ ಸ್ಥಳದಿಂದ ಪ್ರಖರವಾದ ಬೆಳಕು ಕಣ್ಣಿಗೆ ನಾಟುತ್ತಿತ್ತು. ಬೆಳಕಿನ ಜಾಡನ್ನೇ ಹುಡುಕಿ ಮತ್ತೆ ಒಂದು ಗಂಟೆಗಳ ಕಾಲ ದೂರ ಹೋದಾಗ ವಿಜಯವಾಣಿಗೆ ಕಂಡಿದ್ದು, ಬಹುದೊಡ್ಡ ಅಕ್ರಮ, ಮತ್ಸ್ಯ ಸಂಕುಲಕ್ಕೇ ವಿನಾಶಕಾರಿ ಬೇಟೆ! ಸಮುದ್ರ ಮಧ್ಯೆ 2-3 ಪರ್ಸಿನ್ ಬೋಟ್‌ಗಳು ಲಂಗರು ಹಾಕಿ ಬೃಹತ್ ಸಾಮರ್ಥ್ಯದ, ಅಧಿಕ ವೋಲ್ಟೇಜಿನ ಲೈಟ್ ಅಳವಡಿಸಲಾಗುತ್ತದೆ. ಕೊರಿಯನ್ ಹೆಸರಿನ ಈ ಒಂದು ಲೈಟ್‌ನ ಬೆಲೆ 3 ಲಕ್ಷ ರೂ.ಕ್ಕೂ ಅಧಿಕ. ಇಂತಹ ಹತ್ತು ಲೈಟ್‌ಗಳನ್ನು ಲಂಗರು ಹಾಕಿದ್ದ ಬೋಟ್‌ಗಳಿಗೆ ಅಳವಡಿಸಿದಾಗ ಸುತ್ತಲಿನ ಹತ್ತು ಕೀ.ಮೀ ವ್ಯಾಪ್ತಿಗೆ ಬೆಳಕು ಪಸರಿಸುತ್ತದೆ. ಲೈಟ್‌ನ ಪ್ರಖರತೆಗೆ 15-20 ಕಿ.ಮೀ ದೂರದ ಮೀನುಗಳು ಬೆಳಕಿನ ಆಕರ್ಷಣೆಗೊಳಗಾಗಿ ಲಂಗರು ಹಾಕಿದ ಪರ್ಸಿನ್ ಬೋಟ್ ಬಳಿ ಬಂದಾಗ ಒಮ್ಮೇಲೆ ಆ ಮೀನುಗಳಿಗೆ ಬೃಹತ್ ಬಲೆ ಬೀಸಲಾಗುತ್ತದೆ.

    ಲೈಟ್‌ಫಿಶಿಂಗ್ ತಡೆಯಲು ಮೀನುಗಾರಿಕಾ ಇಲಾಖೆ ಕೆಎಸ್‌ಆರ್‌ಪಿ, ಕೋಸ್ಟ್‌ಗಾರ್ಡ್ ಬಲದ ಮೂಲಕ ಕಾರ್ಯಾಚರಣೆ ನಡೆಸುತ್ತಿದೆ. ಲೈಟ್‌ಫಿಶಿಂಗ್ ಹಾಗೂ ಬುಲ್‌ಟ್ರಾಲ್ ಪ್ರಕರಣ ದಾಖಲಾದರೆ ಅಂತಹ ಬೋಟ್ ಮಾಲೀಕರಿಗೆ ಕೇವಲ 5 ಸಾವಿರ ರೂ. ದಂಡ ಹಾಕಲಾಗುತ್ತದೆ. ಬಹುತೇಕ ಸಂದರ್ಭ ಕೋಸ್ಟ್‌ಗಾರ್ಡ್‌ನಲ್ಲಿ ಲೈಟ್ ಫಿಶಿಂಗ್ ತಡೆಯಲು ಸಾಧನಗಳಿಲ್ಲ.
    – ಆನಂದ ಖಾರ್ವಿ ಅಧ್ಯಕ್ಷ, ಉಡುಪಿ ಜಿಲ್ಲಾ ನಾಡದೋಣಿ ಮೀನುಗಾರ ಸಂಘ

    ಲೈಟ್‌ಫಿಶಿಂಗ್ ನಿಷೇಧವಿದ್ದರೂ ಕೇರಳದ ಕಡಲ್ಗಡಿಯಿಂದ ಗೋವಾದ ಕಡಲಗಡಿಯವರೆಗೆ ಪ್ರತೀ ದಿನ 500ಕ್ಕೂ ಅಧಿಕ ಬೋಟ್‌ಗಳ ಮೂಲಕ ಲೈಟ್‌ಫಿಶಿಂಗ್ ನಡೆಯುತ್ತಿದೆ ಎಂದು ಜನಜಾಗೃತಿ ವೇದಿಕೆಗೆ ದೂರು ಬಂದಿದೆ. ಲೈಟ್‌ಫಿಶಿಂಗ್ ನಡೆಸುವ ಬೋಟ್ ಮಾಲೀಕರ ಮೇಲೆ ಹಾಕುವ ದಂಡದ ಮೊತ್ತವನ್ನು 5 ಲಕ್ಷ ರೂ.ಗೆ ಏರಿಸಿದರೆ ಲೈಟ್‌ಫಿಶಿಂಗ್‌ಗೆ ಕಡಿವಾಣ ಹಾಕಬಹುದು.
    ರಾಜರತ್ನ ಸನೀಲ್
    ರಾಜ್ಯಾಧ್ಯಕ್ಷ, ಜನಜಾಗೃತಿ ವೇದಿಕೆ

    ಕಳೆದ ಡಿಸೆಂಬರ್‌ನಲ್ಲಿ ಲೈಟ್‌ಫಿಶಿಂಗ್ ಪರಿಕರ ಇದ್ದ ಬೋರ್ಟ್‌ಗಳಿಂದ ಒಟ್ಟು 5 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. 5 ನಾಟಿಕಲ್ ದೂರದವರೆಗೆ ಕರಾವಳಿ ಕಾವಲು ಪಡೆ, 5ರಿಂದ 12 ನಾಟಿಕಲ್ ದೂರದವರೆಗೆ ಕೋಸ್ಟ್‌ಗಾರ್ಡ್‌ನವರ ವ್ಯಾಪ್ತಿಯಾಗಿದ್ದರಿಂದ ಈ ಬಗ್ಗೆ ಅವರು ಜವಾಬ್ದಾರಿ ವಹಿಸುತ್ತಿದ್ದಾರೆ.
    ಕವಿತಾ, ಸಹಾಯಕ ನಿರ್ದೆಶಕರು, ಮೀನುಗಾರಿಕಾ ಇಲಾಖೆ ಮಂಗಳೂರು

    ಲೈಟ್‌ಫಿಶಿಂಗ್ ತಡೆಯಲು ಕಾವಲು ಪಡೆ, ಕೋಸ್ಟ್‌ಗಾರ್ಡ್‌ನಂತಹ ಸ್ವತಂತ್ರ ತಂಡವನ್ನು ಮೀನುಗಾರಿಕಾ ಇಲಾಖೆ ನೀಡುವುದು, ಈಗಿರುವ ಲೈಟ್‌ಫಿಶಿಂಗ್ ದಂಡ ಮೊತ್ತವನ್ನು 50 ಪಟ್ಟು ಹೆಚ್ಚಿಸುವುದು ಸೇರಿದಂತೆ ಪ್ರಮುಖ ಯೋಜನೆ ಸರ್ಕಾರದ ಹಂತದಲ್ಲಿದ್ದು, ಬಾಹ್ಯ ಅನುಮೋದನೆ ಲಭಿಸಿದೆ. ಈ ಬಗ್ಗೆ ಕೆಲವೇ ತಿಂಗಳಲ್ಲಿ ಅಧಿಕೃತ ಆದೇಶ ಬರುವ ಸಾಧ್ಯತೆ ಇದೆ.
    ಸದಾಶಿವ ಪ್ರಭು, ಉಡುಪಿ ಅಪರ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts