More

    ಕರೊನಾ ಲ್ಯಾಬ್ ವಿಳಂಬ?

    ಉಡುಪಿ: ಜಿಲ್ಲೆಯಲ್ಲಿ ಕರೊನಾ ವೈರಸ್ ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸಲು ಜಿಲ್ಲಾಡಳಿತ ತಯಾರಿ ನಡೆಸುತ್ತಿದ್ದರೂ, ಸದ್ಯ ಆಸ್ಪತ್ರೆಯಲ್ಲಿ ಮೂಲಸೌಕರ್ಯ ಇಲ್ಲದ ಕಾರಣ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
    ಕರೊನಾ ಭೀತಿ ಆರಂಭವಾದ ದಿನಗಳಿಂದಲೂ ಜಿಲ್ಲೆಗೆ ಕೋವಿಡ್-19 ಪರೀಕ್ಷಾ ಪ್ರಯೋಗಾಲಯ ಮಂಜೂರು ಮಾಡಬೇಕೆಂಬ ಕೂಗು ಸಾರ್ವಜನಿಕರಿಂದ ಕೇಳಿಬರುತ್ತಿತ್ತು. ಮೇ 23ರಂದು ಉಡುಪಿ ಜಿಲ್ಲೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ಎಸ್‌ಡಿಆರ್ ನಿಧಿಯಿಂದ ಜಿಲ್ಲಾಸ್ಪತ್ರೆಯಲ್ಲಿ ಶೀಘ್ರ ಪ್ರಯೋಗಾಲಯ ತೆರೆಯುವ ಆಶ್ವಾಸನೆ ನೀಡಿದ್ದರು.

    ಮುಂದೆ ಹೆಚ್ಚಲಿದೆ ಒತ್ತಡ: ಲಾಕ್‌ಡೌನ್ ಸಡಿಲಿಕೆ ಬಳಿಕ ಹೊರರಾಜ್ಯ ಹಾಗೂ ಹೊರಜಿಲ್ಲೆಯಿಂದ ಜಿಲ್ಲೆಗೆ ಸಾವಿರಾರು ಜನ ಬರುವ ನಿರೀಕ್ಷೆ ಇದ್ದು, ಹೆಚ್ಚೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಸದ್ಯ ಜಿಲ್ಲೆಯ ಎಲ್ಲ ಮಾದರಿಗಳು ಮಂಗಳೂರು ಲ್ಯಾಬ್‌ನಲ್ಲಿ ಪರೀಕ್ಷೆ ಮಾಡುತ್ತಿರುವ ಕಾರಣ ಪ್ರತೀ ವರದಿ ಬರಬೇಕಾದರೆ 3-4 ದಿನ ಕಳೆಯುತ್ತಿದೆ. ಸಮಯದ ಜತೆಗೆ ಸಾಕಷ್ಟು ಹಣವೂ ವ್ಯಯವಾಗುತ್ತಿದೆ. ಜತೆಗೆ ಮಂಗಳೂರಿನ ಲ್ಯಾಬ್ ಮೇಲೆಯೂ ಒತ್ತಡ ಹೆಚ್ಚಾಗುತ್ತದೆ.

    ಲ್ಯಾಬ್‌ಗೆ ಏನೇನು ಬೇಕು?: ಕೋವಿಡ್ ಪರೀಕ್ಷೆ ಉಪಕರಣಗಳು ಸಾಕಷ್ಟು ವೆಚ್ಚದಾಯಕ. ಪ್ರಯೋಗಾಲಯ ಸ್ಥಾಪಿಸಲು ಅಂದಾಜು 1.25 ಕೋಟಿ ರೂ. ಅನುದಾನ ಅವಶ್ಯಕತೆ ಇದೆ. ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸುತ್ತಿದ್ದು, ಉಪಕರಣ ಖರೀದಿಗೂ ಮುಂದಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಈ ಪ್ರಯೋಗಾಲಯಕ್ಕಾಗಿ ಪ್ರತ್ಯೇಕ ಕೋಣೆ ಗುರುತಿಸಲಾಗಿದ್ದು, ದುರಸ್ತಿ ನಡೆಯುತ್ತಿದೆ. ಉಪಕರಣಗಳು ಬರಲು ಒಂದು ತಿಂಗಳಾದರೂ ಬೇಕು. ಪ್ರಯೋಗಾಲಯಕ್ಕೆ ಸಿಬ್ಬಂದಿ ನೇಮಕಾತಿಯೂ ನಡೆಯಬೇಕಿದೆ. ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಅವರಿಗೆ ತರಬೇತಿ ನೀಡಬೇಕು. ಹೀಗೆ ಪ್ರಕ್ರಿಯೆ ಮುಗಿಸಿ ಪ್ರಯೋಗಾಲಯ ಸಜ್ಜುಗೊಳಿಸಲು 30ರಿಂದ 40 ದಿನಗಳೇ ಆಗಬಹುದು ಎನ್ನುತ್ತಾರೆ ಅಧಿಕಾರಿಗಳು.

    ಕರೊನಾ ಪರೀಕ್ಷೆಯಲ್ಲಿ ಮುಂಚೂಣಿ: ಕರೊನಾ ವೈರಸ್ ಪತ್ತೆ ಸ್ಯಾಂಪಲ್ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿತ್ತು. 1 ಲಕ್ಷ ಮಂದಿಯಲ್ಲಿ 100ಕ್ಕೂ ಅಧಿಕ ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಮೂಲಕ ಜಿಲ್ಲೆ ಮಾದರಿ ಪರೀಕ್ಷೆಯಲ್ಲಿ ಮುಂಚೂಣಿ ಸ್ಥಾನದಲ್ಲಿದೆ. ಇದೇ ರೀತಿ ಇನ್ನಷ್ಟು ವೇಗದಲ್ಲಿ ಮಾದರಿ ಪರೀಕ್ಷೆ ಮಾಡಬೇಕಾದರೆ ಜಿಲ್ಲೆಗೆ ಪರೀಕ್ಷಾ ಪ್ರಯೋಗಾಲಯ ಅಗತ್ಯ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು. ಈ ಮಧ್ಯೆ ಎಲ್ಲ ರೀತಿಯ ಸೌಲಭ್ಯ ಹೊಂದಿರುವ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕೋವಿಡ್ ಪರೀಕ್ಷಾ ಪ್ರಯೋಗಾಲಯ ಮಂಜೂರು ಮಾಡಿಸುವ ಪ್ರಯತ್ನಗಳು ನಡೆಯುತ್ತಿವೆ.

    ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಲ್ಯಾಬ್ ತೆರೆಯುವ ಪ್ರಯತ್ನ ನಡೆಯುತ್ತಿದೆ. ಉಪಕರಣಗಳ ಖರೀದಿಗೆ ಮುಂದಾಗಿದ್ದೇವೆ. ಜಿಲ್ಲಾಸ್ಪತ್ರೆಯಲ್ಲಿ ಲ್ಯಾಬ್ ತೆರೆಯಲು ಗುರುತಿಸಲಾಗಿರುವ ಕೋಣೆಯ ದುರಸ್ತಿ ಮಾಡಲಾಗುತ್ತಿದೆ. ಲ್ಯಾಬ್‌ನ ಉಪಕರಣಗಳು ಬರಲು ಮೂರು ವಾರವಾದರೂ ಬೇಕಾಗಬಹುದು. ಸಿಬ್ಬಂದಿ ನೇಮಕಾತಿ, ತರಬೇತಿಗೆ ಕನಿಷ್ಠ ಒಂದು ತಿಂಗಳು ಆಗಬಹುದು.
    ಜಿ.ಜಗದೀಶ್ ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts