More

    ಇನ್ನೊಂದು ವಾರ ಕಾಸರಗೋಡಿಗೆ ಬಸ್ ಇಲ್ಲ

    ನೆರೆಯ ಕೇರಳದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ಕಾಸರಗೋಡಿಗೆ ಸಂಚರಿಸುವ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳನ್ನು ಆ.1ರಿಂದ ಒಂದು ವಾರ ಸ್ಥಗಿತಗೊಳಿಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

    ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೋವಿಡ್-19 ಸೋಂಕು ನಿಯಂತ್ರಣ ಸಂಬಂಧಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಕರೊನಾ ಪಾಸಿಟಿವಿಟಿ ದರ ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿಯೂ ಹೆಚ್ಚಾಗುತ್ತಿದ್ದು, ಗಡಿಭಾಗದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸೋಂಕು ಹರಡದಂತೆ ಕ್ರಮ ತೆಗೆದುಕೊಳ್ಳುವುದರೊಂದಿಗೆ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ ಎಂದರು. ಕೇರಳದಿಂದ ಜಿಲ್ಲೆಗೆ ಬರುವ ವಿದ್ಯಾರ್ಥಿಗಳಲ್ಲಿ ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ಇರಬೇಕು, ಮುಖ್ಯವಾಗಿ ಅಲ್ಲಿನ ವಿದ್ಯಾರ್ಥಿಗಳು ಮಂಗಳೂರಿನ ವಿದ್ಯಾರ್ಥಿನಿಲಯಗಳಲ್ಲಿಯೇ ಒಂದು ವಾರ ಹೋಂ ಕ್ವಾರಂಟೈನ್‌ನಲ್ಲಿಯೇ ಇರಬೇಕು, ಅವರ ಮೇಲೆ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾಧಿಕಾರಿ ಡಾ.ರಾಜೇಂದ್ರ.ಕೆ.ವಿ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ತಪಾಸಣೆಗೆ ಮತ್ತಷ್ಟು ಕ್ರಮಕೈಗೊಳ್ಳಬೇಕು, ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸಬೇಕು, ಸೋಂಕಿತರು ಅನಗತ್ಯವಾಗಿ ಓಡಾಡುವುದು ಕಂಡುಬಂದರೆ ಎಫ್‌ಐಆರ್ ದಾಖಲಿಸಬೇಕು, ಒಂದೇ ಕುಟುಂಬದಲ್ಲಿ 2ಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬಂದರೆ ಮನೆಯನ್ನು ಮೈಕ್ರೋ ಕಂಟೇನ್ಮೆಂಟ್ ಜೋನ್ ಎಂದು ಪರಿಗಣಿಸಬೇಕು ಎಂದರು.

    ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ, ಜಿಪಂ ಸಿಇಒ ಡಾ.ಕುಮಾರ್, ಜಿಲ್ಲಾ ಎಸ್ಪಿ ಋಷಿಕೇಶ್ ಸೋನಾವಣೆ ಹಾಗೂ ಮನಪಾ ಆಯುಕ್ತ ಅಕ್ಷಿ ಶ್ರೀಧರ್ ವೇದಿಕೆಯಲ್ಲಿದ್ದರು. ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಸೇರಿದಂತೆ ಅಪರ ಜಿಲ್ಲಾಧಿಕಾರಿ ಪ್ರಜ್ಞಾ ಅಮ್ಮೆಂಬಳ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್ ಕುಮಾರ್ ಸೇರಿದಂತೆ ಉಪವಿಭಾಗಾಧಿಕಾರಿ, ತಹಶೀಲ್ದಾರರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಭಾಗವಹಿಸಿದರು.

    10ರ ತನಕ ಸಮಾರಂಭಕ್ಕಿಲ್ಲ ಅವಕಾಶ
    ಸಭೆ-ಸಮಾರಂಭಗಳು, ರಾಜಕೀಯ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಆ.10ರವರೆಗೆ ನಡೆಸದಂತೆ ಕ್ರಮ ಕೈಗೊಳ್ಳಬೇಕು ಎಂದು ಡಿಸಿ ತಿಳಿಸಿದರು. ಮದುವೆ ಕಾರ್ಯಕ್ರಮಗಳನ್ನು 50 ಜನರಿಗೆ ಸೀಮಿತಗೊಳಿಸಲಾಗಿದೆ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದಲ್ಲಿ ಕಲ್ಯಾಣ ಮಂಟಪಗಳ ಮಾಲೀಕರ ಮೇಲೆ ಎಫ್‌ಐಆರ್ ದಾಖಲಿಸಲು ತಿಳಿಸಿ, ನಿಗಾ ವಹಿಸಲು ಹೋಂ ಗಾರ್ಡ್‌ಗಳನ್ನು ನಿಯೋಜಿಸಬೇಕೆಂದರು. ಮಾಸ್ಕ್ ಧರಿಸದೆ ಓಡಾಡುವ ಸಾರ್ವಜನಿಕರ ಮೇಲೆ ದಂಡ ವಿಧಿಸಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts