More

    ರೈತರಿಗೆ, ಕಾರ್ಮಿಕರಿಗೆ ಬಂಪರ್​ ಗಿಫ್ಟ್: ಹಣಕಾಸು ನೆರವು ಘೋಷಿಸಿದ ನಿರ್ಮಲಾ ಸೀತಾರಾಮನ್

    ನವದೆಹಲಿ: ಕರೊನಾ ಲಾಕ್​ಡೌನ್​ನಿಂದ ಸಂಕಷ್ಟದಲ್ಲಿರುವ ರೈತರಿಗೆ ಹೆಚ್ಚುವರಿ ಸಾಲ ಸೌಲಭ್ಯದ ಮೂಲಕ ಹಣಕಾಸಿನ ನೆರವು ನೀಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ತಿಳಿಸಿದರು.

    ಮಹಾಮಾರಿ ಕರೊನಾ ವೈರಸ್ ತಡೆಗಟ್ಟಲು ಹೇರಲಾಗಿರುವ ಲಾಕ್​ಡೌನ್​ನಿಂದ ಪಾತಾಳಕ್ಕೆ ಕುಸಿದಿರುವ ಆರ್ಥಿಕತೆಗೆ ಉತ್ತೇಜನ ತುಂಬಲು ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್​ ಘೋಷಣೆ ಮಾಡಿದ್ದು, ನಿನ್ನೆ ಕೆಲವು ಕ್ಷೇತ್ರಗಳಿಗೆ ಇದರ ಪ್ರಯೋಜನ ವಿವರಿಸಿದ್ದ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಇಂದು ಇತರೆ ಕ್ಷೇತ್ರಗಳಿಗೆ ಏನು ಸಿಗಲಿದೆ ಎಂಬುದನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

    ಇಂದಿನ ಸುದ್ದಿಗೋಷ್ಠಿಯಲ್ಲಿ ವಲಸೆ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಸಣ್ಣ ಉದ್ಯಮದಾರರು, ಸ್ವಯಂ ಉದ್ಯೋಗಿಗಳು ಮತ್ತು ಸಣ್ಣ ಹಿಡುವಳಿ ರೈತರನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಯೋಜನೆಗಳನ್ನು ಘೋಷಣೆ ಮಾಡಿದರು. ಗ್ರಾಮೀಣ ಭಾಗದ ಜನತೆಗೆ ಬಂಪರ್​ ಕೊಡುಗೆ ನೀಡಿದ ವಿತ್ತ ಸಚಿವೆ, ಗ್ರಾಮೀಣಾಭಿವೃದ್ಧಿಗೆ 4200 ಕೋಟಿ ರೂ. ಹಾಗೂ ಕೃಷಿ ಉತ್ಪಾದನೆ ಹೆಚ್ಚಳಕ್ಕೆ 6700 ಕೋಟಿ ರೂ. ವಿಶೇಷ ಪ್ಯಾಕೇಜ್​ ಘೋಷಿಸಿದರು.

    ವಲಸೆ ಕಾರ್ಮಿಕರಿಗೆ ಆಶ್ರಯ ತಾಣ ನಿರ್ಮಿಸಿ ಅವರಿಗೆ ಆಹಾರ ಮತ್ತು ನೀರು ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ಪೂರೈಸಲು ರಾಜ್ಯ ವಿಪತ್ತು ನಿರ್ವಹಣಾ ನಿಧಿ ಬಳಸಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ವಲಸಿಗರ ವಿಚಾರದಲ್ಲಿ ನಾವು ಪ್ರಜ್ಞೆಯನ್ನು ಹೊಂದಿದ್ದು, ಎಲ್ಲಾ ಮಾರ್ಗದಲ್ಲೂ ಅವರಿಗೆ ನೆರವು ನೀಡುತ್ತಿದ್ದೇವೆ ಎಂದು ವಿತ್ತ ಸಚಿವೆ ಹೇಳಿದರು.

    ನಗರದ ವಸತಿ ರಹಿತರಿಗೆ ಮೂರು ಹೊತ್ತಿನ ಊಟ, ವಲಸೆ ಕಾರ್ಮಿಕರಿಗಾಗಿ ಸ್ವಸಹಾಯ ಸಂಘಗಳ ಸ್ಥಾಪನೆ ಹಾಗೂ ನರೇಗಾ ಅಡಿಯಲ್ಲಿ ಉದ್ಯೋಗ ಸೇರಿದಂತೆ ವಲಸೆ ಕಾರ್ಮಿಕರಿಗೆ 11,000 ಕೋಟಿ ರೂ. ವಿಶೇಷ ಆರ್ಥಿಕ ನೆರವು ಘೋಷಣೆ ಮಾಡಿದರು. ಪೈಸಾ ಪೋರ್ಟಲ್​ ಮೂಲಕ ವಲಸೆ ಕಾರ್ಮಿಕರಿಗೆ ನೆರವು ನೀಡಲಾಗುವುದು ಎಂದು ತಿಳಿಸಿದರು. ಉದ್ಯೋಗ ಖಾತ್ರಿ ಕೂಲಿಯನ್ನು 182 ರೂ.ನಿಂದ 202ಕ್ಕೆ ಏರಿಸಿದರು.

    ವೇತನ ಅಸಮತೋಲನ ನಿವಾರಣೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ನಿರ್ಮಲಾ ಸೀತಾರಾಮನ್​ ಅವರು ಎಲ್ಲ ಕಾರ್ಮಿಕರಿಗೆ ಸಾಮೂಹಿಕ ಕನಿಷ್ಠ ಸಮಾನ ವೇತನ ಜಾರಿ, 10ಕ್ಕಿಂತ ಹೆಚ್ಚು ನೌಕರರಿದ್ದರೆ ಇಎಸ್ಐ ಕಡ್ಡಾಯ, ಎಲ್ಲಾ ಕಾರ್ಮಿಕರಿಗೆ ವೈದ್ಯಕೀಯ ತಪಾಸಣೆ ಕಡ್ಡಾಯವೆಂದು ಹೇಳಿದರು.

    ಕರೊನಾ ವೈರಸ್​ ಲಾಕ್​ಡೌನ್​ ಸಮಯದಲ್ಲಿ 12 ಸಾವಿರ ಸ್ವಸಹಾಯ ಗುಂಪುಗಳು 3 ಕೋಟಿಗೂ ಅಧಿಕ ಮಾಸ್ಕ್​ ಹಾಗೂ 1.2 ಲಕ್ಷ ಸ್ಯಾನಿಟೈಸರ್​ಗಳನ್ನು ತಯಾರಿಸಿದ್ದಾರೆ. ಗ್ರಾಮೀಣ ಭಾಗದ ಬಡವರಿಗಾಗಿ 7200 ಹೊಸ ಸ್ವಸಹಾಯ ಗುಂಪುಗಳನ್ನು ಕಳೆದ ಎರಡು ತಿಂಗಳಿನಿಂದ ರಚಿಸಲಾಗಿದೆ ಎಂದರು.

    ದೇಶಾದ್ಯಂತ ಒಂದೇ ದೇಶ ಒಂದೇ ವೇತನ, ಯಾರು ಕೆಲಸ ಕಳೆದುಕೊಂಡಿದ್ದಾರೋ ಅಂತವರಿಗೆ ಮತ್ತೆ ಕೆಲಸ ನೀಡುವುದು ಹಾಗೂ ನೌಕರರ ಗ್ರ್ಯಾಚುಟಿ ಅವಧಿಯನ್ನು 5 ವರ್ಷಗಳಿಂದ 1 ವರ್ಷಕ್ಕೆ ಇಳಿಕೆ ಸೇರಿದಂತೆ ಎಲ್ಲ ಉದ್ಯೋಗಗಳಲ್ಲಿಯೂ ಮಹಿಳೆಯರಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

    ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ವಯ ಪಡಿತರ ಚೀಟಿ ಇಲ್ಲದವರಿಗೂ ಹಾಗೂ ವಲಸೆ ಕಾರ್ಮಿಕರಿಗೂ ಉಚಿತ ಆಹಾರ ಧಾನ್ಯ ಪೂರೈಸಲಾಗುವುದು. ಪ್ರತಿ ವ್ಯಕ್ತಿಗೆ 5 ಕೆ.ಜಿ. ಅಕ್ಕಿ ಹಾಗೂ 5 ಕೆ.ಜಿ ಗೋಧಿ ನೀಡಲಾಗುವುದು. ಒಂದು ಕುಟುಂಬಕ್ಕೆ 1 ಕೆ.ಜಿ ಬೇಳೆ ವಿತರಿಸಲಾಗುವುದು. ಮುಂದಿನ ಎರಡು ತಿಂಗಳು ಉಚಿತವಾಗಿ ವಿತರಣೆ ಮಾಡಲಾಗುವುದು. ಇದಕ್ಕಾಗಿ 3500 ಕೋಟಿ ರೂ. ಮೀಸಲು ಇಡಲಾಗುವುದು. ಒಂದು ದೇಶ ಒಂದು ರೇಷನ್​ ಕಾರ್ಡ್​ ಜಾರಿಗೆ ತಂದು ಎಲ್ಲಿ ಬೇಕಾದರೂ ರೇಷನ್​ ಪಡೆಯಲು ಅನುಮತಿ ನೀಡಲಾಗುವುದು ಎಂದರು.

    ನಗರಗಳಲ್ಲಿ ಕೇಂದ್ರ ಸರ್ಕಾರ ಕಟ್ಟಿದ ಕಟ್ಟಡಗಳಲ್ಲಿ ವಲಸೆ ಕಾರ್ಮಿಕರಿಗೆ ಹಾಗೂ ಬಡವರಿಗೆ ಕೈಗೆಟಕುವ ಬಾಡಿಗೆ ದರದಲ್ಲಿ ವಸತಿ ವ್ಯವಸ್ಥೆ ಮಾಡಲಾಗುವುದು. ವಲಸಿಗರಿಗೆ ವಸತಿ ಸೌಲಭ್ಯ ಒದಗಿಸುವ ಕೈಗಾರಿಕೆಗಳಿಗೆ ಅಗತ್ಯ ನೆರವು ನೀಡಲಾಗುವುದು. ಪ್ರಧಾನ ಮಂತ್ರಿ ಆವಾಸ್​ ಯೋಜನೆಯಡಿ ಕೈಗೆಟಕುವ ದರದಲ್ಲಿ ಮನೆ ನಿರ್ಮಾಣ ವ್ಯವಸ್ಥೆ ಮಾಡಲಾಗುವುದೆಂದು ತಿಳಿಸಿದರು.

    ಬೀದಿಬದಿ ವ್ಯಾಪಾರಿಗಳಿಗೆ ವಿಶೇಷ ನೆರವು ಘೋಷಿಸಿದ ನಿರ್ಮಲಾ ಸೀತಾರಾಮನ್, ವಿಶೇಷ ಸಾಲ ಯೋಜನೆ ಮೂಲಕ ತಲಾ ಒಬ್ಬರಿಗೆ 10 ಸಾವಿರ ರೂ. ನೀಡಲಾಗುವುದು. ಇದಕ್ಕಾಗಿ 5 ಸಾವಿರ ಕೋಟಿ ರೂ. ವೆಚ್ಚವಾಗಲಿದ್ದು, 50 ಲಕ್ಷ ಬೀದಿ ಬದಿ ವ್ಯಾಪಾರಿಗಳಿ ನೆರವಾಗಲಿದೆ ಎಂದರು.

    ಮಧ್ಯಮ ವರ್ಗಕ್ಕೂ(6 ರಿಂದ 18 ಲಕ್ಷ ಆದಾಯ) ಗಿಫ್ಟ್​ ನೀಡಿದ ಸರ್ಕಾರ, ಬಡತನ ರೇಖೆಗಿಂತ ಮೇಲ್ಪಟ್ಟವರಿಗೆ ಮಾರ್ಚ್​ 2021ರವರೆಗೂ ಕ್ರೆಡಿಟ್​ ಲಿಂಕ್ಡ್​ ಸಬ್ಸಿಡಿ ಯೋಜನೆಯನ್ನು ವಿಸ್ತರಿಸಿತು. ಮಧ್ಯಮ ಆದಾಯ ಹೊಂದಿರುವ 2.5 ಲಕ್ಷ ಮಂದಿ 2020-21ನೇ ಅವಧಿಯಲ್ಲಿ ಯೋಜನೆಯ ಅನುಕೂಲ ಪಡೆಯಲಿದ್ದಾರೆಂದು ತಿಳಿಸಿದರು.

    ದೇಶದ ಬೆನ್ನೆಲುಬು ರೈತರಿಗೆ ವಿಶೇಷ ಹಣಕಾಸು ನೆರವು ಘೋಷಿಸಿದ ನಿರ್ಮಲಾ ಸೀತಾರಾಮನ್, ರೈತರಿಗೆ ಕೇಂದ್ರದಿಂದ ಹೆಚ್ಚುವರಿ ಸಾಲ ಸೌಲಭ್ಯ ಒದಗಿಸಲಾಗುವುದು. 2.5 ಕೋಟಿ ರೈತರಿಗೆ ಕಿಸಾನ್​ ಕ್ರೆಡಿಟ್​ ಕಾರ್ಡ್​ ಮೂಲಕ ಕೋ ಆಪರೇಟಿವ್​ ಹಾಗೂ ಗ್ರಾಮೀಣ ಬ್ಯಾಂಕ್​ಗಳ ಮುಖೇನ ಸಾಲದ ನೆರವು ಒದಗಿಸಲಾಗುವುದು. ಇದಕ್ಕಾಗಿ 30 ಸಾವಿರ ಕೋಟಿ ರೂ. ತುರ್ತು ಹಣಕಾಸು ನೀಡಲಾಗುವುದು. ಈ ಯೋಜನೆಯಿಂದ ಸಣ್ಣ ರೈತರಿಗೆ ಲಾಭವಾಗಲಿದೆ ಎಂದರು.

    ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ

    ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ

    Dighvijay News – ದಿಗ್ವಿಜಯ ನ್ಯೂಸ್ ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಮೇ 14, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts