More

    ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಸುದ್ದಿಗೋಷ್ಠಿ: ರಾಜ್ಯಗಳ ಸಾಲ ಪಡೆಯುವ ಮಿತಿ ಶೇ. 60ಕ್ಕೆ ಹೆಚ್ಚಳ

    ನವದೆಹಲಿ: ಮಹಾಮಾರಿ ಕರೊನಾ ವೈರಸ್ ತಡೆಗಟ್ಟಲು ಹೇರಲಾಗಿರುವ ಲಾಕ್​ಡೌನ್​ನಿಂದ ಪಾತಾಳಕ್ಕೆ ಕುಸಿದಿರುವ ಆರ್ಥಿಕತೆಗೆ ಉತ್ತೇಜನ ತುಂಬಲು ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್​ ಘೋಷಣೆ ಮಾಡಿದ್ದು, ಕಳೆದ ನಾಲ್ಕು ದಿನಗಳಿಂದ ಕೆಲವು ಕ್ಷೇತ್ರಗಳಿಗೆ ಇದರ ಪ್ರಯೋಜನ ವಿವರಿಸಿದ್ದ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್​, ಇಂದು ನರೇಗಾ ಸೇರಿದಂತೆ 7 ವಲಯಗಳಿಗೆ ಏನು ಸಿಗಲಿದೆ ಎಂಬುದನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

    ಇಂದು ಕೊನೆಯ ಹಂತದ ವಿಶೇಷ ಪ್ಯಾಕೇಜ್ ಘೋಷಣೆಯಾಗಿದ್ದು, ಆರಂಭದಲ್ಲಿ ನಿರ್ಮಲಾ ಸೀತಾರಾಮನ್​ ಅವರು ಪ್ರಧಾನಿ ಮೋದಿ ಅವರ ಆತ್ಮ ನಿರ್ಭರ್​ ಮಾತನ್ನು ಸ್ಮರಿಸಿದರು. ನಾವೆಲ್ಲ ಒಗ್ಗಟ್ಟಾಗಿ ಹೋರಾಡುವ ಸಮಯ ಇದು ಎಂದು ಪ್ರಧಾನಿ ಹೇಳಿದ್ದರು. ಹೀಗಾಗಿ ಇಂದು ಕೆಲ ಪ್ರಮುಖ ನಿರ್ಧಾರಗಳನ್ನು ಪ್ರಕಟ ಮಾಡಲಿದ್ದೇನೆ ಎಂದರು.​

    ದೇಶ ಇಂದು ಸಂಕಷ್ಟದಲ್ಲಿದೆ. ಈ ಬಿಕ್ಕಟ್ಟನ್ನು ಅವಕಾಶವಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ದೊಡ್ಡಮಟ್ಟದ ದುರಂತವೂ ಸಹ ಅವಕಾಶ ಮಾಡಿಕೊಟ್ಟಿದೆ. ಆಹಾರ ವಲಯದಲ್ಲಿ ಸುಧಾರಣೆಯ ಅಗತ್ಯವಿದೆ. ಹೀಗಾಗಿಯೇ ಹೆಚ್ಚುವರಿ ಪಡಿತರ ವಿತರಣೆ ಮಾಡಲಾಗಿದೆ. ಈಗಾಗಲೇ ಅನೇಕ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಜೀವ ಇದ್ದರೆ ಜೀವನ, ಹೀಗಾಗಿ ಎಲ್ಲರಿಗೂ ಆಹಾರ ವಿತರಣೆ ಆಗುತ್ತಿದೆ ಎಂದು ತಿಳಿಸಿದರು.

    ಪಿಎಂ ಕಿಸಾನ್​ ಸಮ್ಮಾನ್​ ಅಡಿ ರೈತರಿಗೆ ಹಣ ನೀಡಲಾಗಿದೆ. ತಲಾ 2 ಸಾವಿರೂ ಜಮೆಯಾಗಿದೆ. 8.19 ಕೋಟಿ ರೈತರು ಇದರ ಉಪಯೋಗ ಪಡೆದುಕೊಂಡಿದ್ದಾರೆ. 20 ಕೋಟಿ ಮಹಿಳೆಯರ ಜನ್​ಧನ್​ ಖಾತೆಗೆ 10.025 ಕೋಟಿ ರೂ. ಜಮೆ ಮಾಡಲಾಗಿದೆ. ಕೆಲವರ ಖಾತೆಗೆ ಹಣ ಜಮೆ ತಾಂತ್ರಿಕ ತೊಂದರೆಯಿಂದ ತಡವಾಗಿದೆ. 6.81 ಕೋಟಿ ಮಂದಿ ಅಡುಗೆ ಸಿಲಿಂಡರ್​ ಪಡೆದುಕೊಂಡಿದ್ದಾರೆ. 12 ಲಕ್ಷ ಮಂದಿ ಮುಂಗಡವಾಗಿ ಇಪಿಎಫ್​ಒ ಹಣವನ್ನು ಪಡೆದುಕೊಂಡಿದ್ದಾರೆ ಎಂದರು.

    ವಲಸೆ ಕಾರ್ಮಿಕರಿಗೆ ಉಚಿತವಾಗಿ ಪಡಿತರ ವಿತರಣೆ ಮಾಡಲಾಗಿದೆ. ಕಾರ್ಮಿಕರ ಪ್ರಯಾಣಕ್ಕಾಗಿ ವಿಶೇಷ ಶ್ರಮಿಕ ರೈಲನ್ನು ಸರ್ಕಾರ ಅನುವು ಮಾಡಿಕೊಟ್ಟಿದೆ. ಕರೊನಾ ಸಂಕಷ್ಟ ಸ್ಥಿತಿಯಲ್ಲಿ ಎಲ್ಲ ರಾಜ್ಯ ಸರ್ಕಾರಗಳು ಚೆನ್ನಾಗಿ ಕಾರ್ಯನಿರ್ವಹಿಸುತ್ತಿವೆ. ಬಡವರಿಗೆ ಇನ್ನು ಎರಡು ತಿಂಗಳು ಉಚಿತವಾಗಿ ಪಡಿತರವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

    ಇಂದು ನರೇಗಾ ಸೇರಿದಂತೆ 7 ಯೋಜನೆಗಳನ್ನು ಘೋಷಣೆ ಮಾಡುತ್ತೇವೆ. ಆರೋಗ್ಯ, ಶಿಕ್ಷಣ, ಉದ್ಯೋಗ, ಗ್ರಾಮೀಣಾಭಿವೃದ್ಧಿ, ನರೇಗಾ, ನಗರಾಭಿವೃದ್ಧಿ ಹಾಗೂ ರಾಜ್ಯ ಸರ್ಕಾರದ ಸಂಪನ್ಮೂಲಗಳಿಗೆ ವಿಶೇಷ ಹಣಕಾಸಿನ ನೆರವು ಘೋಷಿಸುತ್ತೇವೆ ಎಂದು ಹೇಳಿದರು.

    ಆರೋಗ್ಯ ಕ್ಷೇತ್ರಕ್ಕೆ 15 ಸಾವಿರ ಕೋಟಿ ರೂ. ನೀಡಲಾಗಿದ್ದು, ರಾಜ್ಯಗಳಿಗೆ 4113 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಟೆಲಿ ಮೆಡಿಸಿನ್​-ಇ-ಸಂಜೀವಿನಿ ಜಾರಿಗೆ ವಿಶೇಷ ಅನುದಾನ ನೀಡಲಾಗುವುದು. ಕರೊನಾ ವಾರಿಯರ್ಸ್​ಗೆ 50 ಲಕ್ಷ ರೂ. ವಿಮೆ ಒದಗಿಸಲಾಗುವುದು. ಟೆಸ್ಟಿಂಗ್​ ಲ್ಯಾಬ್​ ಮತ್ತು ಕಿಟ್​ಗಳಿಗೆ 550 ಕೋಟಿ ರೂ., ನೀಡಲಾಗಿದೆ ಎಂದರು.

    ಇ-ಪಾಠಾಶಾಲೆಯನ್ನು ಆರಂಭಿಸಲಾಗುವುದು. ಆನ್​ಲೈನ್​ ಶಿಕ್ಷಣವನ್ನು ದೊಡ್ಡಮಟ್ಟದಲ್ಲಿ ಕೈಗೊಳ್ಳಲಾಗುತ್ತದೆ. ಇ-ಪಾಠಾಶಾಲೆ ಮೂಲಕ ತಜ್ಞರಿಂದ ಪಾಠ ಪ್ರವಚನ ಮಾಡಲಾಗುವುದು. ಆನ್​ಲೈನ್​ ಶಿಕ್ಷಣಕ್ಕಾಗಿ 3 ಪ್ರತ್ಯೇಕ ಚಾನಲ್​ ಈಗಾಗಲೇ ಕಾರ್ಯಾರಂಭ ಮಾಡಿವೆ. ಡಿಟಿಎಚ್​, ಏರ್ಟೆಲ್​ ಹಾಗೂ ಟಾಟಾ ಸ್ಕೈ ಮೂಲಕ ಆನ್​ಲೈನ್ ಶಿಕ್ಷಣ ನಡೆಯಲಿದೆ. ಪ್ರತಿ 4 ಗಂಟೆ ಶಿಕ್ಷಣ ದೊರಕಲಿದೆ. ಸ್ಕೈಪ್​ ಮೂಲಕವು ವಿದ್ಯಾರ್ಥಿಗಳಿಗೆ ಪಾಠ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

    ಮನ್ರೇಗಾಗೆ ಬಜೆಟ್​ನಲ್ಲಿ 61 ಸಾವಿರ ಕೋಟಿ ರೂ. ಇಡಲಾಗಿತ್ತು. ಇದೀಗ ಹೆಚ್ಚುವರಿಯಾಗಿ 40 ಸಾವಿರ ಕೋಟಿ ರೂ. ನೀಡಲಾಗುವುದು. ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ಒತ್ತು ನೀಡಲಾಗುವುದು. ಆರೋಗ್ಯ ಸುಧಾರಣೆಗೆ ಹೆಚ್ಚುವರಿ ಹಣ ಒದಗಿಸಲಾಗುವುದು. ಪ್ರತಿ ಜಿಲ್ಲೆಗಳಲ್ಲಿ ಹೆಲ್ತ್​ ಆ್ಯಂಡ್​ ವೆಲ್​ನೆಸ್​ ಕೇಂದ್ರದ ಜತೆಗೆ ಸಾಂಕ್ರಾಮಿಕ ನಿರೋಧಕ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ರೋಗಗಳಿಗೆ ಸಂಬಧಿಸಿದ ಹೆಚ್ಚಿನ ಸಂಶೋಧನೆಗೆ ಕ್ರಮ, ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲ್ಯಾಬ್​ಗಳ ನಿರ್ಮಾಣ ಮಾಡಲಾಗುವುದು ಎಂದರು.

    ಕೋವಿಡ್​ನಿಂದಾಗಿ ಹಲವು ವಲಯಗಳಿಗೆ ಸಮಸ್ಯೆಯಾಗಿದೆ. ಬ್ಯಾಂಕಿಂಗ್​ ವಲಯ ಕೂಡ ಸಮಸ್ಯೆ ಎದುರಿಸುತ್ತಿದೆ. ಇದಕ್ಕಾಗಿ ಬ್ಯಾಂಕಿಂಗ್​ ಸಂಹಿತೆ ಜಾರಿ ಮಾಡಲಾಗುವುದು. ಐಬಿಸಿ ನಿಯಮದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಸಾಲ ಮರುಪಾವತಿಯಲ್ಲಿ ಕೆಲವು ಬದಲಾವಣೆ ಮಾಡಲಾಗುವುದ. ಸಾಲ ಮರುಪಾವತಿ ಮಾಡದಿದ್ದರೆ, ಸುಸ್ತಿದಾರ ಎಂದು ಪರಿಗಣಿಸುವುದಿಲ್ಲ. ಎಂಎಸ್​ಎಂಇಗಳಿಗೆ ವಿಶೇಷ ರಿಯಾಯಿತಿ ನೀಡಲಾಗಿದ್ದು, ದಿವಾಳಿ ಎಂದು ಘೋಷಿಸಿಕೊಳ್ಳಲು ಒಂದು ವರ್ಷ ಅವಧಿ ನೀಡಲಾಗುವುದು ಎಂದು ತಿಳಿಸಿದರು.

    ಕಂಪನಿ ಕಾನೂನುಗಳಲ್ಲಿಯೂ ಕೆಲ ಬದಲಾವಣೆ ತರಲಾಗುವುದು. ಕಂಪನಿ ಆಧಾರಿತ ಅಪರಾಧಗಳು ಕಾನೂನು ಬಾಹಿರವಲ್ಲ. 5 ರೀತಿಯ ಅಪರಾಧ ವಿಚಾರಣೆಗಳಲ್ಲಿ ಬದಲಾವಣೆ ತರಲಾಗುವುದು. ಇದಕ್ಕಾಗಿ ಆಂತರಿಕ ವಿಚಾರಣಾ ಸಮಿತಿ ರಚನೆ ಮಾಡಲಾಗುವುದು ಎಂದರು.

    ರಾಜ್ಯಗಳ ಆದಾಯ ಸಂಗ್ರಹದಲ್ಲೂ ಭಾರಿ ಕುಸಿತವಾಗಿದೆ. ರಾಜ್ಯಗಳು ಕೋವಿಡ್​ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿವೆ. ತೆರಿಗೆ, ಬಜೆಟ್​ ಎಂದಿನಂತೆಯೇ ಇರಲಿದೆ. ರಾಜ್ಯ ಸರ್ಕಾರಗಳಿಗೆ ಈವರೆಗೆ 46,038 ಕೋಟಿ ರೂ. ಅನ್ನು ತೆರಿಗೆ ನಷ್ಟ ಪರಿಹಾರ ರೂಪದಲ್ಲಿ ನೀಡಲಾಗಿದೆ. ಏಪ್ರಿಲ್​, ಮೇ ನಲ್ಲಿ 12, 390 ಕೋಟಿ ರೂಗಳನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ನಿಧಿಗೆ ಏಪ್ರಿಲ್​ ಮೊದಲ ವಾರದಲ್ಲಿ 11,092 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ರಾಜ್ಯಗಳ ಸಾಲ ಪಡೆಯುವ ಮಿತಿಯನ್ನು ಶೇ. 60ಕ್ಕೆ ಹೆಚ್ಚಳ ಮಾಡಲಾಗಿದೆ. ರಾಜ್ಯಗಳ ಓವರ್​ ಡ್ರಾಫ್ಟ್​ 21 ದಿನಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

    Dighvijay News Live at 10.57pm

    Dighvijay News Live at 10.57pm

    Dighvijay News – ದಿಗ್ವಿಜಯ ನ್ಯೂಸ್ ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶನಿವಾರ, ಮೇ 16, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts