More

    ಕರ್ನಾಟಕದ ರಾಗಿಗೆ ಜಾಗತಿಕ ಬ್ರ್ಯಾಂಡಿಂಗ್​​ ವ್ಯವಸ್ಥೆ: ನಿರ್ಮಲಾ ಸೀತಾರಾಮನ್​

    ನವದೆಹಲಿ: ಕೃಷಿ ಮೂಲ ಸೌಕರ್ಯ ಅಭಿವೃದ್ಧಿಗೆ ಒಂದು ಲಕ್ಷ ಕೋಟಿ ರೂ. ಮೀಸಲಿಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಶುಕ್ರವಾರ ತಿಳಿಸಿದರು.

    ಮಹಾಮಾರಿ ಕರೊನಾ ವೈರಸ್ ತಡೆಗಟ್ಟಲು ಹೇರಲಾಗಿರುವ ಲಾಕ್​ಡೌನ್​ನಿಂದ ಪಾತಾಳಕ್ಕೆ ಕುಸಿದಿರುವ ಆರ್ಥಿಕತೆಗೆ ಉತ್ತೇಜನ ತುಂಬಲು ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್​ ಘೋಷಣೆ ಮಾಡಿದ್ದು, ನಿನ್ನೆ ಹಾಗೂ ಮೊನ್ನೆ ಕೆಲವು ಕ್ಷೇತ್ರಗಳಿಗೆ ಇದರ ಪ್ರಯೋಜನ ವಿವರಿಸಿದ್ದ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್​, ಇಂದು ಇತರೆ ಕ್ಷೇತ್ರಗಳಿಗೆ ಏನು ಸಿಗಲಿದೆ ಎಂಬುದನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

    ಇಂದು  11 ಮಾನದಂಡಗಳನ್ನು ಘೋಷಿಸಲಿದ್ದು, ಇದರಲ್ಲಿ 8 ಮೂಲಭೂತ ಸೌಕರ್ಯ ಬಲವರ್ಧನೆ, ಸಾಮರ್ಥ್ಯ ಮತ್ತು ಉತ್ತಮ ಲಾಜಿಸ್ಟಿಕ್ಸ್ ಅನ್ನು ನಿರ್ಮಿಸುವುದಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಉಳಿದ ಮೂರು ಸರ್ಕಾರಿ ಆಡಳಿತ ಸುಧಾರಣೆಗೆ ಸಂಬಂಧಿಸಿದ್ದಾಗಿದೆ ಎಂದರು.

    ಕೇಂದ್ರದಿಂದ ರೈತರ ಖಾತೆಗೆ ನೇರ ನಗದು ಜಮಾ ಮಾಡಲಾಗಿದೆ. ಈಗಾಗಲೇ 18,700 ಕೋಟಿ ರೂ. ಜಮೆಯಾಗಿದೆ. ಕಳೆದ 2 ತಿಂಗಳಲ್ಲಿ ಕೃಷಿ ಅಭಿವೃದ್ಧಿಗೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕಿಸಾನ್​ ಸಮ್ಮಾನ್​ ಯೋಜನೆಯಡಿ ನೆರವು ನೀಡಲಾಗಿದೆ ಎಂದು ತಿಳಿಸಿದರು.

    ಕೃಷಿ ಮೂಲ ಸೌಕರ್ಯ ಅಭಿವೃದ್ಧಿಗೆ ಒಂದು ಲಕ್ಷ ಕೋಟಿ ರೂ. ಮೀಸಲಿಡಲಾಗುವುದು. ಕೃಷ ಪತ್ತಿನ ಸಹಕಾರ ಸಂಘಗಳಿಗೆ ಸಾಲ ಹಾಗೂ ಕೃಷಿ ಸಂಬಂಧಿತ ಸ್ಟಾರ್ಟ್​ ಅಪ್​ಗಳಿಗೂ ಸಾಲ ಸೌಲಭ್ಯ ಒದಗಿಸಲಾಗುವುದು. ಸ್ಥಳೀಯ ಉತ್ಪನ್ನಗಳ ಉತ್ಪಾದನೆಗೆ ಹೆಚ್ಚಿನ ಒತ್ತು ಸೇರಿದಂತೆ ಆಹಾರ ಘಟಕಗಳಿಗೆ ಉತ್ತೇಜನ ನೀಡಲಾಗುವುದು ಎಂದರು.

    ಲಾಕ್​ಡೌನ್​ ಸಮಯದಲ್ಲಿ ಹಾಲಿನ ಬೇಡಿಕೆ ಶೇ. 20 ರಿಂದ 25ಕ್ಕೆ ಕುಸಿದಿದೆ. ಹೀಗಾಗಿ ಅದರ ಉತ್ತೇಜನಕ್ಕಾಗಿ 2020-21ರವರೆಗೆ ಡೈರಿ ಸಹಕಾರಿ ಸಂಸ್ಥೆಗಳಿಗೆ ವಾರ್ಷಿಕ ಶೇ. 2 ರಷ್ಟು ಬಡ್ಡಿ ದರದಲ್ಲಿ ಆರ್ಥಿಕ ಸಹಾಯ ನೀಡುವ ಹೊಸ ಯೋಜನೆ ಜಾರಿಗೆ ತರಲಾಗುವುದು. ಇದಕ್ಕಾಗಿ ಹೆಚ್ಚುವರಿ 5000 ಕೋಟಿ ರೂ. ಅನ್ನು ಮೀಸಲಿಡಲಾಗಿದ್ದು, 2 ಕೋಟಿ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

    ಸಣ್ಣ ಆಹಾರ ಉದ್ಯಮಗಳ ಉತ್ತೇಜನಕ್ಕಾಗಿ 10000 ಕೋಟಿ ರೂ. ವಿಶೇಷ ಯೋಜನೆಯನ್ನು ಪರಿಚಯಿಸಲಾಗುವುದು. ಸ್ಥಳೀಯ ವಸ್ತುಗಳನ್ನು ಜಾಗತಿಕ ಬ್ರ್ಯಾಂಡ್​ ಮಾಡುವ ಪ್ರಧಾನಿ ಮೋದಿ ಆಶಯವನ್ನು ಈ ಮೂಲಕ ನೆರವೇರಿಸಲಾಗುವುದು ಎಂದು ತಿಳಿಸಿದರು.

    ಸಮುದ್ರ ಮೀನುಗಾರಿಕೆಗೆ ಮತ್ತಷ್ಟು ಪ್ರೋತ್ಸಾಹ ನೀಡಲಾಗುವುದು. ಬೋಟ್​ ಉಪಕರಣ ಖರೀದಿಗೆ ಬೆಂಬಲವಾಗಿ ಸಾಲ ಸೌಲಭ್ಯ ಒದಗಿಸಲಾಗುವುದು. 55 ಲಕ್ಷ ಮೀನುಗಾರರಿಗೆ ಉದ್ಯೋಗ ಸೃಷ್ಟಿ ಮಾಡಲಾಗುವುದು. ವಿಶೇಷ ಬೋಟ್​ಗಳ ವಿತರಣೆ, ವಿಮೆ ಸೌಲಭ್ಯವನ್ನು ಪೂರೈಸಲಾಗುವುದು. ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ 20 ಸಾವಿರ ಕೋಟಿ ರೂ. ಮೀಸಲಿಡಲಾಗುವುದು ಎಂದರು.

    ಪಶುಸಂಗೋಪನೆ ಹಾಗೂ ಹೈನುಗಾರಿಕೆಗೆ ಉತ್ತೇಜನ ನೀಡಲಾಗುವುದು. ಪಶು ಆಹಾರ ಉತ್ಪಾದನೆಗೆ ಅಗತ್ಯ ನೆರವು ಒದಗಿಸಲಾಗುವುದು. ಬೆಣ್ಣೆ ತುಪ್ಪ, ಪೇಡ ಸೇರಿದಂತೆ ಇತರೆ ಉತ್ಪನ್ನಗಳಿಗೆ ಬೆಂಬಲ ನೀಡಲಾಗುವುದು. ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿಗಾಗಿ 15 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ ಎಂದು ಹೇಳಿದರು.

    ಔಷಧೀಯ ಸಸಿಗಳ ವ್ಯವಸಾಯಕ್ಕೆ ಪ್ರೋತ್ಸಾಹ ನೀಡಲು 4 ಸಾವಿರ ಕೋಟಿ ವಿನಿಯೋಗಿಸಲಾಗಿದೆ. ಮುಂದಿನ 2 ವರ್ಷದಲ್ಲಿ 10 ಲಕ್ಷ ಹೆಕ್ಟೇರ್​ ಅನ್ನು ಕವರ್​ ಮಾಡಲಾಗುವುದು. ಔಷಧೀಯ ಸಸಿಗಳ ವ್ಯವಸಾಯದಿಂದ 5 ಸಾವಿರ ಕೋಟಿ ರೂ. ಆದಾಯದ ನಿರೀಕ್ಷೆ ಇದೆ ಎಂದು ತಿಳಿಸಿದರು.

    ಸಮಗ್ರ ಜೇನುಸಾಕಣೆ ಅಭಿವೃದ್ಧಿ ಕೇಂದ್ರಗಳು, ಜೇನು ಸಂಗ್ರಹಣೆ, ಮಾರುಕಟ್ಟೆ ಮತ್ತು ಶೇಖರಣಾ ಕೇಂದ್ರಗಳು, ಸುಗ್ಗಿಯ ನಂತರದ ಮತ್ತು ಮೌಲ್ಯವರ್ಧನೆ ಸೌಲಭ್ಯಗಳಿಗೆ ಸಂಬಂಧಿಸಿದ ಮೂಲಸೌಕರ್ಯ ಅಭಿವೃದ್ಧಿಗಾಗಿ ಸರ್ಕಾರ 500 ಕೋಟಿ ರೂ. ಯೋಜನೆಯನ್ನು ಅನುಷ್ಠಾನಗೊಳಿಸಲಿದ್ದು, ಇದು 2 ಲಕ್ಷ ಜೇನುಸಾಕಣೆದಾರರ ಆದಾಯ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ನಿರ್ಮಲಾ ಸೀತಾರಾಮನ್​ ಹೇಳಿದರು.

    ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆ ಒದಗಿಸಲು ಕಾನೂನು ಜಾರಿ, ಗುಣಮಟ್ಟದ ಬೆಳೆಗಳಿಗೆ ಸೂಕ್ತ ಬೆಲೆಗೆ ಕ್ರಮ, ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಕ್ರಮ ಸೇರಿದಂತೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುವುದು. ಕೃಷಿ ಉತ್ಪನ್ನ ಸಾಗಾಟಕ್ಕೆ 10 ಸಾವಿರ ಕೋಟಿ ರೂ. ಮೀಸಲಿಡಲಾಗುವುದು. ಬೇರೆ ರಾಜ್ಯಗಳಲ್ಲಿ ಮಾರಾಟ ಮಾಡಲು ಅನುವು ಮಾಡಿಕೊಡಲಾಗುವುದು. ಉತ್ತಮ ಬೆಲೆ ಸಿಗುವ ಮಾರಾಟ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.

    ಬೆಳೆಗಳ ಸಾಗಾಟಕ್ಕೆ ನೆರವು ನೀಡಲಾಗುವುದು. ಸಾಗಟಕ್ಕೆ ಶೇ 20 ರಷ್ಟು ಸಬ್ಸಿಡಿ ನೀಡಲಾಗುವುದು. ಕರ್ನಾಟಕದ ರಾಗಿಗೆ ಜಾಗತಿಕ ಬ್ರ್ಯಾಂಡಿಂಗ್​​ ವ್ಯವಸ್ಥೆ ಮಾಡಲಾಗುವುದು. ಟಮ್ಯಾಟೋ, ಈರುಳ್ಳಿ ಮತ್ತು ಆಲೂಗೆಡ್ಡೆ ಸಾಗಾಟಕ್ಕೆ ನೆರವು ನೀಡಲಾಗುವುದು. ಅಂತಾರಾಜ್ಯ ಮಾರಾಟಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಎಪಿಎಂಸಿಯಲ್ಲೇ ಮಾರಾಟ ಮಾಡಬೇಕೆಂದೇನಿಲ್ಲ. ತಮಗಿಷ್ಟ ಆದವರಿಗೆ ಮಾರಾಟ ಮಾಡಬಹುದು ಎಂದು ತಿಳಿಸಿದರು.

    ನಿರ್ಮಲಾ ಸೀತಾರಾಮನ್​​​ ಪ್ರೆಸ್​​ಮೀಟ್

    ನಿರ್ಮಲಾ ಸೀತಾರಾಮನ್​​​ ಪ್ರೆಸ್​​ಮೀಟ್

    Dighvijay News – ದಿಗ್ವಿಜಯ ನ್ಯೂಸ್ ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶುಕ್ರವಾರ, ಮೇ 15, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts