More

    ಭಗವಂತನಲ್ಲಿದೆ ನಿರ್ಗುಣ, ಶುದ್ಧ ಚೈತನ್ಯ ಶಕ್ತಿ

    ಶೃಂಗೇರಿ: ವಿಷ್ಣು ಸಹಸ್ರನಾಮದಲ್ಲಿ ಭಗವಂತನ ವರ್ಣನೆ ಇದೆ. ಭಗವಂತನಲ್ಲಿ ನಿರ್ಗುಣ, ಶುದ್ಧ ಚೈತನ್ಯ ಶಕ್ತಿ ಇದೆ ಎಂದು ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
    ಶ್ರೀಮಠದ ಗುರುಭವನದಲ್ಲಿ ಮಂಗಳವಾರ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾಸಭಾ ಏರ್ಪಡಿಸಿದ್ದ ವಿಷ್ಣು ಸಹಸ್ರನಾಮ ಸಮರ್ಪಣೆ ಹಾಗೂ ಪರಮಪುರುಷ ಆರಾಧನೆ ಪೂರ್ಣಾಹುತಿ ನಂತರ ಆಶೀರ್ವಚನ ನೀಡಿದರು.
    ವಿಷ್ಣು ಸಹಸ್ರನಾಮವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಶ್ರೀ ಶಂಕರಾಚಾರ್ಯರು ಭಾಷ್ಯ ಬರೆದಿದ್ದಾರೆ. ವಿಷ್ಣು ಸಹಸ್ರನಾಮ ಪಠಣದೊಂದಿಗೆ ಅದರ ಅರ್ಥವನ್ನು ತಿಳಿದುಕೊಳ್ಳಬೇಕು. ಭಗವಂತನಿಗೆ ವಿಶ್ವಂ ಎಂದು ಹೇಳಲಾಗಿದೆ. ದೇವರು ಎಲ್ಲೆಡೆ ವ್ಯಾಪಿಸಿದ್ದಾನೆ. ಭಗವಂತನೇ ಪ್ರಪಂಚವನ್ನು ಸೃಷ್ಟಿ ಮಾಡಿದ್ದು, ಕಣ ಕಣದಲ್ಲೂ ದೇವರಿದ್ದಾನೆ. ಜ್ಞಾನ ನಮಗೆ ಬೆಳಕು ತೋರಿದರೆ ಅಜ್ಞಾನ ವಾಸ್ತವವನ್ನು ಕತ್ತಲಲ್ಲಿ ಇಡುತ್ತದೆ. ಜ್ಞಾನದಿಂದ ಮೋಕ್ಷ ಸಾಧ್ಯವಾಗುತ್ತದೆ. ಗುರುವಿನಿಂದ ಉಪದೇಶ ಪಡೆದು ಜೀವನದಲ್ಲಿ ಸತ್ಯಮಾರ್ಗದಲ್ಲಿ ನಡೆಯಬೇಕು ಎಂದರು.
    ವಿಷ್ಣು ಸಹಸ್ರನಾಮವನ್ನು ಸುಲಭವಾಗಿ ಎಲ್ಲರೂ ಸ್ಮರಣೆ ಮಾಡಬಹುದಾಗಿದೆ. ನಿಯಮ ಹಾಕಿಕೊಂಡು ಭಗವಂತನ ಧ್ಯಾನ ಮಾಡಬೇಕು. ವಿಷ್ಣು ಸಹಸ್ರನಾಮ ಅಭಿಯಾನದ ಸಮರ್ಪಣೆಯು ಪರಮಪುರುಷ ಆರಾಧನೆಯಾಗಿದೆ. ಲೌಕಿಕ ಜೀವನದೊಂದಿಗೆ ಧಾರ್ಮಿಕ ಆಚರಣೆಯನ್ನು ಮಾಡಬೇಕು ಎಂದು ತಿಳಿಸಿದರು.
    ಶ್ರೀಮಠದ ನೂತನ ಆಡಳಿತಾಧಿಕಾರಿ ಪಿ.ಎ.ಮುರಳಿ ಅವರನ್ನು ಮಹಾಸಭಾದಿಂದ ಅಭಿನಂದಿಸಲಾಯಿತು. ಮಹಾಸಭಾ ಉಪಾಧ್ಯಕ್ಷ ಹೆಬ್ಬಿಗೆ ಗಣೇಶ್, ಶಂಕರನಾರಾಯಣ, ದೀಪಕ್, ಧಾರ್ಮಿಕ ಸಮಿತಿ ಸಂಚಾಲಕ ಸತ್ಯನಾರಾಯಣ, ಗೌರವಾಧ್ಯಕ್ಷ ಜಿ.ಸಿ.ಗೋಪಾಲಕೃಷ್ಣ, ಎ.ಎಂ.ಶ್ರೀಧರ ರಾವ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts