More

    ಕೊಲ್ಲೂರಿನಲ್ಲಿ ಬೃಹತ್ ಶಿಲಾಯುಗದ ನಿಲ್ಸ್‌ಕಲ್ ಪತ್ತೆ, ಮೂಕಾಸುರ ಸ್ಮಾರಕಶಿಲೆ ಶಂಕೆ

    ಉಡುಪಿ: ಭಾರತದ ಪ್ರಖ್ಯಾತ ಶಾಕ್ತ ಆರಾಧನಾ ಕೇಂದ್ರ ಕೊಲ್ಲೂರಿನ ಮೂಕಾಂಬಿಕೆಯ ದೇವಾಲಯಕ್ಕೆ ಸಮೀಪದಲ್ಲಿರುವ ಮೂಕಾಸುರನ ಬೆಟ್ಟದ ಬುಡದಲ್ಲಿ ಬೃಹತ್ ಶಿಲಾಯುಗ ಕಾಲದ ನಿಲ್ಸ್‌ಕಲ್ ಸ್ಮಾರಕಶಿಲೆ, ಕಲ್ಗುಳಿ, ಮುರಕಲ್ಲಿನಲ್ಲಿ ಕೊರೆದು ಮಾಡಿರುವ ಬಾವಿ ಮತ್ತು ಮಡಕೆಯ ಅವಶೇಷಗಳು ಪುರಾತತ್ವ ಅನ್ವೇಷಣೆಯಲ್ಲಿ ಪತ್ತೆಯಾಗಿವೆ.

    ಕೊಲ್ಲೂರಿನ ಬೃಹತ್ ಶಿಲಾಯುಗ ನಿವೇಶನದ ಶೋಧವು ಕೊಲ್ಲೂರು ಮತ್ತು ಕೊಲ್ಲೂರಿನ ಮೂಕಾಂಬಿಕೆಯ ಪ್ರಾಚೀನತೆಯನ್ನು ಸುಮಾರು ಕ್ರಿ.ಪೂ. 1000 ವರ್ಷ ಪ್ರಾಚೀನ ಪರಂಪರೆ ಎಂಬುದನ್ನು ದೃಢೀಕರಿಸಲಿದೆ. ದೇವಿ ಪುರಾಣದ ಪ್ರಕಾರ ಮೂಕಾಸುರನನ್ನು ದೇವಿ ವಧಿಸಿದ್ದರಿಂದ ಮೂಕಾಂಬಿಕೆ ಎಂಬ ಅಭಿದಾನ ಪಡೆದು ಕೊಲ್ಲೂರಿನಲ್ಲಿ ನೆಲೆಸಿದ್ದಾಳೆ. ಬಹುಶಃ ಮೂಕಾಸುರನ ಸಮಾಧಿಯ ಸಮೀಪ, ಆತನ ಸ್ಮಾರಕವಾಗಿ ಈ ಶಿಲೆಯನ್ನು ನಿಲ್ಲಿಸಿರಬಹುದು ಎಂದು ಸಂಶೋಧಕ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಸಹ ಪ್ರಾಧ್ಯಾಪಕ ಪ್ರೊ.ಟಿ.ಮುರುಗೇಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಕೊಲ್ಲೂರಿಗೆ ಸಮೀಪದಲ್ಲಿರುವ ಹೊಸನಗರ ತಾಲೂಕಿನ ಬೈಸೆ, ನಿಲ್ಸ್‌ಕಲ್ ಮತ್ತು ಹೆರಗಲ್‌ನಲ್ಲಿ ಸುಮಾರು 40 ನಿಲ್ಸ್‌ಕಲ್ ಮಾದರಿ ಸ್ಮಾರಕಶಿಲೆಗಳು ವಿಶೇಷವಾಗಿ ಕಂಡುಬಂದಿವೆ. ಜಿಲ್ಲೆಯ ಸುಭಾಸ್‌ನಗರದ ಬಗ್ಗಡಿಕಲ್ ಸಮೀಪ ನಾಲ್ಕು, ನಿಟ್ಟೂರಿನ ಅಡ್ಕದಕಟ್ಟೆಯಲ್ಲಿ ಒಂದು ಹಾಗೂ ಬುದ್ಧನಜೆಡ್ಡುವಿನಲ್ಲಿ ಒಂದು, ಕೊಡಗಿನ ಅರಸಿಣಗುಪ್ಪೆಯಲ್ಲಿ ಒಂದು ಹಾಗೂ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಮೂರು ನಿಲ್ಸ್‌ಕಲ್ ಮಾದರಿ ಸ್ಮಾರಕಶಿಲೆಗಳನ್ನು ಸಂಶೋಧಿಸಲಾಗಿದೆ. ಈಗ ಸಿಕ್ಕಿರುವುದು ಜಿಲ್ಲೆಯಲ್ಲಿ ಏಳನೆಯ ಶೋಧವಾಗಿದೆ.

    ನಿಲ್ಸ್‌ಕಲ್ ಎಂದರೆ ಏನು?: ಬೃಹತ್ ಶಿಲಾಯುಗ ಕಾಲದ ಸಮಾಧಿಗಳ ಸಮೀಪದಲ್ಲಿ ಮೃತ ವ್ಯಕ್ತಿಗಳ ನೆನಪಿಗಾಗಿ ನೆಟ್ಟಿರುವ ಸ್ಮಾರಕಶಿಲೆಗಳಿವು. 1.5ರಿಂದ 3 ಮೀ. ಎತ್ತರದ ಕಲ್ಲುಗಳನ್ನು ಬಹುತೇಕ ಪೂರ್ವದ ದಿಕ್ಕಿಗೆ ಸ್ವಲ್ಪ ವಾಲಿದಂತೆ ನಿಲ್ಲಿಸಲಾಗಿರುತ್ತದೆ. ಕೊಲ್ಲೂರಿನಲ್ಲಿ ಪತ್ತೆಯಾಗಿರುವ ನಿಲ್ಸ್‌ಕಲ್ ಮಾನವ ಚಟುವಟಿಕೆಯಿಂದಾಗಿ ನೆಲದ ಮೇಲೆ ಬಿದ್ದಿದೆ. ಇದು ಸುಮಾರು 2.10 ಮೀ. ಎತ್ತರವಿದ್ದು, ಬುಡದಲ್ಲಿ 0.65 ಮೀ, ತುದಿಯಲ್ಲಿ 0.55 ಮೀ. ಅಗಲವಾಗಿದೆ. ಸ್ಥಳೀಯವಾಗಿ ದೊರೆಯುವ ಗ್ರಾನೈಟ್ ಶಿಲೆಯನ್ನೇ ಈ ನಿಲ್ಸ್‌ಕಲ್‌ಗಾಗಿ ಬಳಸಲಾಗಿದೆ. ಬೃಹತ್ ಶಿಲಾಯುಗದ ಜನ ದಕ್ಷಿಣ ಭಾರತದಾದ್ಯಂತ ಗ್ರಾನೈಟ್ ಶಿಲೆಯನ್ನೇ ಸಮಾಧಿಗಳ ರಚನೆಗಾಗಿ ಬಳಸಿರುವುದು ಆ ಸಂಸ್ಕೃತಿಯ ವೈಶಿಷ್ಟ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts