More

    ನಿಖಿಲ್ ರಾಜಕೀಯ ಭವಿಷ್ಯಕ್ಕೆ ಹೊಸ ಆಯಾಮ: ಮೊಮ್ಮಗನಿಗಾಗಿ ದೊಡ್ಡಗೌಡರಿಂದ ರಾಮನಗರ ಆಯ್ಕೆ

    ರಾಮನಗರ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೇ ಮೊಮ್ಮಗ ರಾಮನಗರದಿಂದ ಕಣಕ್ಕೆ ಇಳಿಯುವ ಬಗ್ಗೆ ಸುಳಿವು ನೀಡುವ ಮೂಲಕ ನಿಖಿಲ್ ರಾಜಕೀಯ ಭವಿಷ್ಯಕ್ಕೆ ಹೊಸ ಆಯಾಮ ನೀಡಲು ಮುಂದಾಗಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಕಣಕ್ಕೆ ಇಳಿದು ಸುಮಲತಾ ಎದುರು ಸೋಲು ಕಂಡಿದ್ದ ನಿಖಿಲ್ ಅವರ ರಾಜಕೀಯ ಭವಿಷ್ಯ ಮುಗಿದೇ ಹೋಯಿತು ಎನ್ನುವ ಚರ್ಚೆಗಳು ಈಗಲೂ ನಡೆಯುತ್ತಿರುವ ಹೊತ್ತಿನಲ್ಲಿ, ದೇವೇಗೌಡರು ಮೊಮ್ಮಗನಿಗೆ ರಾಮನಗದಿಂದ ರಾಜಕೀಯ ಪುರ್ನಜನ್ಮ ನೀಡುವ ಗುಟ್ಟು ಬಿಟ್ಟುಕೊಟ್ಟಿದ್ದಾರೆ.

    ಯಾವಾಗಲೂ ಕೈ ಹಿಡಿದಿದೆ: ದೇವೇಗೌಡರ ರಾಜಕೀಯ ಹಾಸನದಿಂದ ಆರಂಭಗೊಂಡರೂ ಮರು ಹುಟ್ಟು ನೀಡಿದ್ದು ರಾಮನಗರ. ಕುಮಾರಸ್ವಾಮಿ ಅವರ ರಾಜಕೀಯ ಎಂಟ್ರಿ ಸಾತನೂರಿನಿಂದ ಆಗಿದೆಯಾದರೂ ಅವರಿಗೆ ಗಟ್ಟಿನೆಲೆ ಒದಗಿಸಿಕೊಟ್ಟಿದ್ದು ಇದೇ ರಾಮನಗರ. ಇದೀಗ ಮೊಮ್ಮಗನ ರಾಜಕೀಯ ಭವಿಷ್ಯಕ್ಕಾಗಿ ದೇವೇಗೌಡರು ಅದೃಷ್ಟದ ಭೂಮಿ ರಾಮನಗರವನ್ನು ಆಯ್ಕೆ ಮಾಡಿಕೊಂಡಿರುವುದು ಅಚ್ಚರಿಯೇನಲ್ಲ.

    ಸೋಲಿನ ರುಚಿಯನ್ನೂ ಸವಿದಿದ್ದಾರೆ: 1989ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ದೇವೇಗೌಡರು ಸಮಾಜವಾದಿ ಜನತಾ ಪಕ್ಷದಿಂದ ಕನಕಪುರ ಮತ್ತು ಹಾಸನದ ಹೊಳೆನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಿ ಎರಡೂ ಕಡೆ ಸೋತಿದ್ದರು. ಕನಕಪುರದಲ್ಲಿ ಪಿಜಿಆರ್ ಸಿಂಧ್ಯಾ ಅವರ ಎದುರು ಸೋಲು ಕಂಡಿದ್ದರು. 1994ರಲ್ಲಿ ನಡೆದ ಚುನಾವಣೆಯಲ್ಲಿ ಜನತಾದಳದಿಂದ ರಾಮನಗರದಿಂದ ಸ್ಪರ್ಧಿಸಿದ್ದ ದೇವೇಗೌಡರು ಸಿ.ಎಂ.ಲಿಂಗಪ್ಪ ವಿರುದ್ಧ ಗೆಲುವು ಸಾಧಿಸಿ ರಾಜಕೀಯ ಮರುಹುಟ್ಟು ಪಡೆದಿದ್ದರು. ನಂತರ ಮುಖ್ಯಮಂತ್ರಿಯಾಗಿ, ಪ್ರಧಾನಿಯೂ ಆದರೂ 1999ರ ಲೋಕಸಭೆ ಚುನಾವಣೆಯಲ್ಲಿ ಹಾಸನದಲ್ಲಿ ಸೋಲು ಕಂಡರು. ಆದರೆ 2002ರಲ್ಲಿ ಅಂದಿನ ಕನಕಪುರ ಲೋಕಸಭೆ ಕ್ಷೇತ್ರದ ಸದಸ್ಯರಾಗಿದ್ದ ಎಂ.ಚಂದ್ರಶೇಖರಮೂರ್ತಿ ಅವರ ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ದೇವೇಗೌಡರು, ಡಿ.ಕೆ.ಶಿವಕುಮಾರ್ ಎದುರು ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಮೂಲಕ ಮತ್ತೊಮ್ಮೆ ದೇವೇಗೌಡರಿಗೆ ರಾಮನಗರ ಜಿಲ್ಲೆ ರಾಜಕೀಯದ ಅದೃಷ್ಟದ ಭೂಮಿ ಆಯಿತು.

    ಎಚ್‌ಡಿಕೆಗೆ ಕರ್ಮ ಭೂಮಿ: 1998ರಲ್ಲಿ ನಡೆದ ಲೋಕಸಭೆ ಚುನಾವಣೆ ಮತ್ತು 1999ರಲ್ಲಿ ನಡೆದ ವಿಧಾನಸಭೆ ಚುನಾವಣೆ ಎರಡರಲ್ಲೂ ಎಚ್.ಡಿ. ಕುಮಾರಸ್ವಾಮಿ ಸೋಲು ಕಂಡಿದ್ದರು. 1998ರಲ್ಲಿ ಕನಕಪುರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಎಂ. ಶ್ರೀನಿವಾಸ್ ಎದುರು ಸೋಲು ಅನುಭವಿಸಿದರೆ, 1999ರಲ್ಲಿ ಎಂ.ವಿ. ಚಂದ್ರಶೇಖರಮೂರ್ತಿ ಎದುರು ಪರಾಭವಗೊಂಡಿದ್ದರು. 1999ರಲ್ಲಿ ಸಾತನೂರು ವಿಧಾನಸಭೆ ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್ ಎದುರು ಸೋಲುಂಡಿದ್ದರು. ಆದರೆ, 2004ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧೆ ಮಾಡಿ ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶಿಸಿದ್ದಲ್ಲದೇ, ಮುಖ್ಯಮಂತ್ರಿಯೂ ಆದರು.

    ಮಗನ ಭವಿಷ್ಯಕ್ಕೆ ಮದುವೆ ವೇದಿಕೆ: ಮಗನ ಮದುವೆಗೂ ರಾಜಕೀಯ ಪ್ರವೇಶಕ್ಕೂ ಸಂಬಂಧವಿಲ್ಲ. ಇಲ್ಲಿನ ಜನರ ಋಣ ತೀರಿಸಲು ಇಲ್ಲಿ ಮದುವೆ ಮಾಡುತ್ತಿದ್ದೇನೆ ಎಂದು ಎಚ್‌ಡಿಕೆ ಹೇಳಿದರೂ, ದೇವೇಗೌಡರು ಬೇರೆಯದ್ದೇ ಧಾಟಿಯಲ್ಲಿ ಮಾತನಾಡಿ, ಮದುವೆಗೆ ನಿಖಿಲ್ ರಾಜಕೀಯ ಪ್ರವೇಶದ ಟಚ್ ಕೊಟ್ಟಿದ್ದಾರೆ. ಇದರ ಜತೆಗೆ ಜೆಡಿಎಸ್ ವಲಯದಲ್ಲಿಯೂ ಸಹ ನಿಖಿಲ್ ರಾಜಕೀಯ ಪ್ರವೇಶದ ಕಾರಣಕ್ಕಾಗಿಯೇ ಮದುವೆಗಾಗಿ ರಾಮನಗರ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವ ಚರ್ಚೆಗಳು ನಡೆದಿವೆ.

    ಅನಿತಾ ಎಲ್ಲಿಗೆ?: ಒಂದು ವೇಳೆ ನಿಖಿಲ್ ರಾಮನಗರದಿಂದ ರಾಜಕೀಯ ಮರು ಪ್ರವೇಶ ಮಾಡುವುದು ಖಚಿತವೇ ಆದರೆ, ಅನಿತಾ ಅವರು ಮಗನಿಗಾಗಿ ಕ್ಷೇತ್ರವನ್ನು ಬಿಟ್ಟುಕೊಡಬೇಕಾದ ಅನಿವಾರ್ಯತೆ ಹುಟ್ಟಿಕೊಳ್ಳಲಿದೆ. ಮತ್ತೊಂದೆಡೆ ನಿಖಿಲ್‌ಗೆ ರಾಮನಗರ ಬಿಟ್ಟುಕೊಟ್ಟು, ಅನಿತಾ ಚನ್ನಪಟ್ಟಣಕ್ಕೆ ಮತ್ತು ಪತ್ನಿಗೆ ಚನ್ನಪಟ್ಟಣ ಬಿಟ್ಟುಕೊಟ್ಟು ಎಚ್‌ಡಿಕೆ ಮಾಗಡಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನುವ ಚರ್ಚೆಗಳೂ ನಡೆದಿವೆ. ಒಟ್ಟಾರೆಯಾಗಿ ನಿಖಿಲ್ ಮದುವೆ ಕೇವಲ ಮದುವೆಯಾಗಿರದೇ ದೇವೇಗೌಡರ ಕುಟುಂಬದ ರಾಜಕೀಯ ಚಿತ್ರಣವನ್ನೂ ಬದಲಿಸುವ ವೇದಿಕೆಯೂ ಆಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts