More

    ದೇಶದ ವಿಚಾರದಲ್ಲಿ ಮುನ್ಸಿಪಾಲ್ಟಿ ಪೊಲಿಟಿಕ್ಸ್ ಮಾಡೊಕ್ಕಾಗುತ್ತಾ? ಮೋದಿ ನಾಯಕತ್ವದಲ್ಲಿ ಸುಭದ್ರ ಸ್ಥಿತಿ: ಎಚ್.ಡಿ.ದೇವೇಗೌಡ


    ಶಿವಾನಂದ ತಗಡೂರು, ಬೆಂಗಳೂರು
    ಅಲ್ರಿ, ದೇಶದ ವಿಚಾರದಲ್ಲಿ ಮುನ್ಸಿಪಾಲ್ಟಿ ಪೊಲಿಟಿಕ್ಸ್ ಮಾಡೊಕ್ಕಾಗುತ್ತಾ? ನಾ ಅಂಥ ದರ್ಟಿ ಪೊಲಿಟಿಕ್ಸ್ ಮಾಡಲ್ಲ ಎಂದು ಖಡಕ್ಕಾಗಿ ಹೇಳಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಇವತ್ತಿನ ಸನ್ನೀವೇಶದಲ್ಲಿ ಈ ದೇಶಕ್ಕೆ ಮೋದಿ ನಾಯಕತ್ವ ಅನಿವಾರ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
    ಲೋಕಸಭೆ ಚುನಾವಣೆ ಸಂದರ್ಭದಲ್ಲಿ ತಮ್ಮ ಇಳಿ ವಯಸ್ಸಿನಲ್ಲಿಯೂ ಉತ್ಸಾಹದಿಂದ ಪ್ರವಾಸ ಮಾಡುತ್ತಿರುವ ದೇವೇಗೌಡರ ಜತೆಗೆ ವಿಜಯವಾಣಿ ನಡೆಸಿದ ಸಂದರ್ಶನ ಇಲ್ಲಿದೆ.

    *ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು ಏಕೆ?
    -ರಾಜಕಾರಣದಲ್ಲಿ ಅಂಥದೊಂದು ಅನಿವಾರ್ಯತೆ ಸೃಷ್ಟಿಯಾಯಿತು. ನಮ್ಮ ಪಕ್ಷವನ್ನೇ ಮುಗಿಸಬೇಕು ಎಂದು ಹೊರಟವರ ಮುಂದೆ ನಾವು ಸುಮ್ಮನಿರಲು ಸಾಧ್ಯವೇ? ರಾಜ್ಯದಲ್ಲಿ ಈ ಕಾಂಗ್ರೆಸ್ ಸರ್ಕಾರ ಬಂದ ಮೇಲೆ, ಅಧಿಕಾರದ ದರ್ಪದಿಂದ ಮೆರೆಯಲು ಹೊರಟವರು ಜೆಡಿಎಸ್ ಪಕ್ಷಕ್ಕೆ ಏನೆಲ್ಲ ಕುತ್ತು ತರಲು ಮುಂದಾಗಿದ್ದರು ಎನ್ನುವುದು ಜನರಿಗೆ ಗೊತ್ತಿದೆ. ಅದಕ್ಕಾಗಿ ನಾನೇ ಮೈತ್ರಿ ರಾಜಕಾರಣದ ಪ್ರಸ್ತಾಪ ಮಾಡಿ ಪ್ರಧಾನಿ ಮೋದಿ ಅವರ ಜತೆಯಲ್ಲಿ ಮಾತನಾಡಿದೆ.

    *ಕೋಮುವಾದಿಗಳ ಜತೆಗೆ ಜೆಡಿಎಸ್ ಕೈ ಜೋಡಿಸಿದೆ ಎನ್ನುವ ಆರೋಪವಿದೆಯಲ್ಲ?
    -ಮಾತನಾಡುವವರು ಮಾತನಾಡಿಕೊಳ್ಳಲಿ ಬಿಡ್ರಿ. ಆದರೆ ಅವರಿಗೆ ಒಂದು ಗೊತ್ತಿರಲಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಸ್ಥಾನ 5ಕ್ಕೆ ಏರಿದೆ. ದೇಶದ ಸ್ಥಿತಿ ಎಷ್ಟು ಎತ್ತರಕ್ಕೆ ಹೋಗಿದೆ ಇವರಿಗೆ ಗೊತ್ತಿದೆಯಾ? ಈ ದೇಶದ ಭದ್ರತೆಯ ವಿಷಯದಲ್ಲಿ ಮೊದಲ ಆದ್ಯತೆ ನೀಡಿದ್ದು ಮೋದಿ. ಅಂತಾರಾಷ್ಟ್ರೀಯ ಮಾನ್ಯತೆ ಹೆಚ್ಚುವಂತೆ ಮಾಡಿದ್ದು ಮೋದಿ. ಅತ್ತ ಚೀನಾ, ಇತ್ತ ಪಾಕಿಸ್ತಾನ. ಶತ್ರು ರಾಷ್ಟ್ರಗಳಿಂದ ರಕ್ಷಿಸಿಕೊಳ್ಳಲು ಈ ಭದ್ರತೆಯ ವಿಷಯ ಮಹತ್ವದ್ದಾಗಿತ್ತು. ಆ ಕೆಲಸವನ್ನು ಬಹಳ ಜವಾಬ್ದಾರಿಯಿಂದ ಮೋದಿ ಮಾಡಿದ್ದಾರೆ. ಮೊದಲು ನಮಗೆ ದೇಶ ಮುಖ್ಯವಾಗಬೇಕು. ಇದಕ್ಕಾಗಿಯೇ ಅವರ ಜೊತೆ ಹೋಗಿದ್ದೇವೆ.

    *ಚೊಂಬು ಜಾಹೀರಾತು ಮಟ್ಟಕ್ಕೆ ರಾಜ್ಯದ ರಾಜಕಾರಣ ಬಗ್ಗೆ ಏನನ್ನುತ್ತೀರಿ?
    -ಕಾಂಗ್ರೆಸ್ ಕೊಟ್ಟ ಚೊಂಬನ್ನು ಅಕ್ಷಯ ಪಾತ್ರೆ ಮಾಡಿಕೊಟ್ಟಿದ್ದು ಮೋದಿ ಎನ್ನುವುದು ನಾಡಿನ ಜನರಿಗೆ ಗೊತ್ತಿದೆ. ದೇಶದ ವಿಷಯದಲ್ಲಿ ಈ ಕಾಂಗ್ರೆಸ್‌ನವರ ಜತೆಗೆ ಮುನ್ಸಿಪಾಲ್ಟಿ ರಾಜಕೀಯ ಮಾಡಿಕೊಂಡು ಕೂರಕ್ಕಾಗುತ್ತಾ? ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಏನೇನು ಮಾಡುತ್ತಿದ್ದಾರೆ ಎನ್ನುವುದು ನನಗೆ ತಿಳಿದಿದೆ. ಮುಂದೆ ಮಾತನಾಡುತ್ತೇನೆ.

    *ಮೋದಿ ನೆರಳಲ್ಲಿ ಗೌಡರು ಹೊರಟಿದ್ದಾರೆ ಎನ್ನುತ್ತಾರಲ್ಲ?
    -ಯಾವುದು ಸರಿ, ಯಾವುದು ತಪ್ಪು ಎನ್ನುವುದು ನಮಗೆ ಗೊತ್ತಿಲ್ಲವೇನ್ರಿ? ಮೋದಿ ಅವಧಿಯಲ್ಲಿ ದೇಶದಲ್ಲಿ ಆಗಿರುವ ಅಭಿವೃದ್ಧಿಯನ್ನು ಜನರು ಮರೆಯುವುದಿಲ್ಲ. 85 ಕೋಟಿ ಜನರಿಗೆ 21 ರೂ.ಗೆ ಕೆ.ಜಿ.ಅಕ್ಕಿ ಕೊಡ್ತಿಲ್ಲವಾ? ಸಾಮಾನ್ಯರಲ್ಲಿ ಸಾಮಾನ್ಯ ಜನರಿಗೂ ಗ್ಯಾಸ್ ಸಂಪರ್ಕ ಕೊಡಿಸಲ್ಲವಾ? ಜನೋಪಕಾರ ಕೆಲಸಗಳನ್ನು ಮಾಡಿಕೊಂಡು ಬಂದಿಲ್ಲವೇ? ಸುಮ್ನೆ ಬುದ್ದಿ ಇಲ್ಲದೆ ಕೆಲವರು ಮಾತನಾಡುತ್ತಾರೆ. ಜನರು ಉತ್ತರ ಕೊಡ್ತಾರೆ ಬಿಡಿ.

    *ಯುಪಿಎಗಿಂತ ಎನ್‌ಡಿಎ ಹೇಗೆ ಭಿನ್ನ?
    ಯುಪಿಎ ಮೈತ್ರಿಕೂಟದ ರಾಜಕಾರಣದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಏನೇನಾಗಿದೆ ಎನ್ನುವ ವಿವರಕ್ಕೆ ಹೋಗುವುದಿಲ್ಲ. 2ಜಿ ಸ್ಟೆಕ್ರಂ ಹಗರಣದಿಂದ ಹಿಡಿದು ನ್ಯಾಶನಲ್ ಗೇಮ್ಸ್ ಹಗರಣ ತನಕ ಏನೇನಾಗಿದೆ ಎನ್ನುವುದು ಗೊತ್ತಿದೆ. ಅಂಥಹ ಹಗರಣಗಳನ್ನು ಮಾಡಿದ ಯುಪಿಎ ಜತೆಗೆ ಹೋಗಬೇಕಾ? ಯಾವುದೇ ಹಗರಣಗಳಿಲ್ಲದ ಎನ್‌ಡಿಎ ಜೊತೆಗೆ ಹೋಗಬೇಕಾ? ಹೇಳಿ?

    *ಬಿಜೆಪಿ-ಜೆಡಿಎಸ್ ಮೈತ್ರಿಯ ಬಗ್ಗೆ ಜನರು ಏನನ್ನುತ್ತಿದ್ದಾರೆ?
    -ಯಾವುದೇ ಮೈತ್ರಿಯಾದರೂ ತಳಮಟ್ಟದಲ್ಲಿ ಹೊಂದಾಣಿಕೆ ಬಹಳ ಮುಖ್ಯ. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಸಹೋದರರಂತೆ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ನಮ್ಮ ಮೈತ್ರಿ ಅಭ್ಯರ್ಥಿ ಗೆಲ್ಲಿಸಲು ಹಗಲಿರಳು ಹೋರಾಡುತ್ತಿದ್ದಾರೆ. ಎಲ್ಲೂ ಏನು ಸಮಸ್ಯೆ ಇಲ್ಲ. ಎಲ್ಲವೂ ಸರಿ ಹೋಗಿದೆ.

    *ರಾಜ್ಯ ಸರ್ಕಾರದ 10 ತಿಂಗಳ ಆಡಳಿತ ಬಗ್ಗೆ ಏನನ್ನುತ್ತೀರಿ?
    -ಈ ಸರ್ಕಾರ ಕೇವಲ 10 ತಿಂಗಳಿಗೆ ಹೆಸರು ಹೆಸರು ಕೆಡಿಸಿಕೊಳ್ಳುವುದು ಎಂದು ನಾನು ಎಣಿಸಿರಲಿಲ್ಲ. ರಾಜ್ಯದ ಆರ್ಥಿಕ ಸ್ಥಿತಿಯೇ ಅಧೋಗತಿಗೆ ಬಂದು ನಿಂತಿದೆ. ಏನ್ರಿ ಇದು ನಿಗಮ ಮಂಡಳಿ ಹೆಸರಿನಲ್ಲಿ 95 ಜನರಿಗೆ ಕ್ಯಾಬಿನೆಟ್ ರ‌್ಯಾಂಕ್ ಕೊಟ್ಟಿದ್ದಾರೆ ಎಂದರೆ ಈ ಸರ್ಕಾರದ ಸ್ಥಿತಿ ಯಾವ ಲೆವಲ್ಲಿಗೆ ಬಂದು ನಿಂತಿದೆ ಎನ್ನುವುದನ್ನು ಲೆಕ್ಕ ಹಾಕಿ. ಇವರಿಗೆ ಮಾನ ಮರ್ಯಾದೆ ಇದೆಯೇನ್ರಿ? ಸಾರ್ವಜನಿಕ ಹಣ ಲೂಟ್ ಮಾಡಲು ಹೊರಟಿದ್ದಾರೆ. ಮೊದಲು ಈ ಭ್ರಷ್ಟ ಸರ್ಕಾರವನ್ನು ರಾಜ್ಯದಿಂದ ಮೊದಲು ತೊಲಗಿಸಬೇಕು.

    *ಗ್ಯಾರಂಟಿಗಳನ್ನು ಕೊಟ್ಟಿದ್ದಾರಲ್ಲ?
    -ಯಾವ ಗ್ಯಾರಂಟಿರೀ? ಗ್ಯಾರಂಟಿ ಕೊಟ್ಟ ಸರ್ಕಾರಗಳೆಲ್ಲ ಏನೇನಾಗಿದೆ ಏನ್ನುವುದನ್ನು ನೋಡಿಲ್ಲವೇ? ಕಳೆದ ವಿಧಾನಸಭೆ ಚುನಾವಣೆಯಲ್ಲಿ ಛತ್ತೀಸ್‌ಗಡ, ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಯಾಕೆ ಗ್ಯಾರಂಟಿ ಕೆಲಸ ಮಾಡಲಿಲ್ಲ? ಪಶ್ಚಿಮ ಬಂಗಾಲದಲ್ಲಿ ಮಮತಾ ಬ್ಯಾನರ್ಜಿ, ಬಿಹಾರದಲ್ಲಿ ನವೀನ್ ಪಾಟ್ನಾಯಕ್ ಗ್ಯಾರಂಟಿ ಕೊಟ್ಟಿದ್ದಾರಾ? ಈ ಗ್ಯಾರಂಟಿಗಳು ಕ್ಷಣಿಕ ಭರವಸೆ ಮಾತ್ರ. ರಾಜ್ಯದ ಗ್ಯಾರಂಟಿಗಳು ಈಗ ಮಾನ್ಯತೆ ಕಳೆದುಕೊಂಡಿದೆ.

    *ಕಾಂಗ್ರೆಸ್ ಬಗ್ಗೆ ಯಾಕೆ ಅಷ್ಟೊಂದು ಬೇಸರ?
    -ಕಳೆದ ಲೋಕಸಭೆ ಚುನಾವಣೆಯಲ್ಲಿ ಈ ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಂಡಿರಲಿಲ್ಲವಾ? ಆಗ ಇದೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಏನೇನು ಮಾಡಿದ್ರು ಅಂತ ಗೊತ್ತಿದೆ. ನಂಬಿಸಿ ಮೋಸ ಮಾಡಿದ್ರು. ನನ್ನನ್ನು ತುಮಕೂರಿನಲ್ಲಿ ಸೋಲಿಸಲಿಲ್ಲವಾ? ವಿವರಕ್ಕೆ ಹೋಗುವುದಿಲ್ಲ. ಮೋಸ ಮಾಡಿದ ಕಾಂಗ್ರೆಸ್ ಜತೆಗೆ ಮತ್ತೆ ಹೋಗಬೇಕಾ? ನೋ…

    *ದೇಶದಲ್ಲಿ ಲೋಕಸಭೆ ಚುನಾವಣೆ ಹೇಗಿದೆ?
    -ಮೋದಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟವೇ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ದೇಶ ಮತ್ತು ಮೋದಿ ನೋಡಿ ಜನ ತೀರ್ಮಾನ ಮಾಡುತ್ತಾರೆ. ಕಾಂಗ್ರೆಸ್‌ನಲ್ಲಿ ಯಾರು ನಾಯಕರಿದ್ದಾರೆ ಹೇಳಿ? ರಾಹುಲ್‌ಗಾಂಧಿ ಜನ ಒಪ್ಪುತ್ತಾರಾ? ಈ ಬಗ್ಗೆ ಯಾವ ತರ್ಕ ಬೇಡ. ನಮ್ಮ ವಿಚಾರ ಹಾಗಿರಲಿ. ಹಿಂದೆ ನಡೆದ 2 ಲೋಕಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಪಕ್ಷದ ನಾಯಕನ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಈ ಬಾರಿಯಾದರೂ, ಕಾಂಗ್ರೆಸ್‌ಗೆ ವಿರೋಧ ಪಕ್ಷದ ನಾಯಕ ಸ್ಥಾನ ಪಡೆಯುವಷ್ಟು ಸ್ಥಾನವಾದರೂ ಬರಲಿ ಎಂದು ಹಾರೈಸುತ್ತೇನೆ.

    *ರಾಜ್ಯದಲ್ಲಿ ಚುನಾವಣೆ ಹೇಗಿದೆ?
    -ಸಿದ್ದರಾಮಯ್ಯ ಅವರ ತವರು ಕ್ಷೇತ್ರ ಮೈಸೂರಿನಲ್ಲಿ ಗೆಲ್ಲಲಿ ನೋಡೋಣ. ಬೆಂಗಳೂರು ಗ್ರಾಮಾಂತರ ಏನಾಗುತ್ತೆ ನೋಡ್ತಾ ಇರಿ? ಅಧಿಕಾರದ ಮದದಿಂದ ಮೆರೆಯುವವರು ಏನಾಗುತ್ತಾರೆ ನೋಡಿ. ಸುಮ್ನೆ ಮಾತನಾಡಿ ಏನು ಪ್ರಯೋಜನ. ಅವರುಗಳ ಮಟ್ಟಕ್ಕೆ ನಾನು ಇಳಿಯಲು ಹೋಗುವುದಿಲ್ಲ. ಜನರು ಪ್ರಭುದ್ಧರಿದ್ದಾರೆ. ಮೈತ್ರಿ ಕೂಟದಲ್ಲಿ 3 ಜೆಡಿಎಸ್ ಸೇರಿ 28ಕ್ಕೆ 28 ಸ್ಥಾನ ಗೆಲ್ಲುವ ವಿಶ್ವಾಸ ನಮಗಿದೆ.

    *ದೇವೇಗೌಡ-ಯಡಿಯೂರಪ್ಪ ಒಟ್ಟಿಗೆ ಹೋಗುತ್ತಿರುವುದು ರಾಜಕೀಯ ಧ್ರುವೀಕರಣವೆ?
    -ರಾಜ್ಯ ರಾಜಕಾರಣದಲ್ಲಿ ಹಿಂದೆ ಸಾಕಷ್ಟು ರಾಜಕೀಯ ದ್ರುವೀಕರಣಗಳು ಆಗಿವೆ. ಯಡಿಯೂರಪ್ಪ ಅವರು ಒಬ್ಬ ಅಪ್ಪಟ ಹೋರಾಟಗಾರರು. ಅನುಭವಿ ರಾಜಕಾರಿಣಿ. ನಾವಿಬ್ಬರು ಮೈತ್ರಿಕೋಟದ ಪರವಾಗಿ ಮತಯಾಚನೆ ಮಾಡುತ್ತಿದ್ದೇವೆ. ಪ್ರಧಾನಿ ಮೋದಿ ಅವರ ಸಮ್ಮುಖದಲ್ಲಿಯೇ ಅವರ ಆಶಯದಂತೆ ಹೆಜ್ಜೆ ಇಟ್ಟಿದ್ದೇವೆ. ಎಲ್ಲ ಕಡೆಯಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕಾಯ್ದು ನೋಡೋಣ.

    *ಈ ಇಳಿ ವಯಸ್ಸಿನಲ್ಲಿಯೂ ಇಷ್ಟೊಂದು ಪ್ರವಾಸ?

    -ಇದೆಲ್ಲ ದೇವರ ಇಚ್ಛೆ. ಚುನಾವಣೆ ಘೋಷಣೆಯಾದ ಮೇಲೆ ಓಡಾಡುತ್ತಲೇ ಇದ್ದೀನಿ. ಜನರು ಬಿಡುವುದಿಲ್ಲ. ನನ್ನ ಮೈಯಲ್ಲಿ ಶಕ್ತಿ ಇರುವ ತನಕ ಓಡಾಡ್ತಿನಿ. ಇನ್ನೊಂದು ಎರಡು ಮೂರು ವರ್ಷ ಇದೆಲ್ಲ ಆಗಬಹುದೇನೊ. ನಾನೂ ಮನುಷ್ಯ ಅಲ್ಲವಾ? ಈ ದೇಹಕ್ಕೆ ವಯಸ್ಸಾಗುತ್ತಿದೆ. ಎಲ್ಲಿಯ ತನಕ ಸಾಧ್ಯವೋ ಅಲ್ಲಿಯ ತನಕ ಹೋರಾಟ ಮಾಡ್ತೀನಿ.

    —–

    ಎಚ್.ಡಿ.ದೇವೇಗೌಡರು ಹೇಳಿದ್ದು…

    -ಯುಪಿಎ ಸರ್ಕಾರದಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರಿಗೆ ಅಭಿವೃದ್ಧಿ ಬಗ್ಗೆ ಕೇಳಲಾಗಿದ್ದ ಪ್ರಶ್ನೆಗೆ ನೋಟುಗಳ ಮರ ಹಾಕಿದ್ದೇವಾ? ಮರಗಳಿಂದ ನೋಟು ಕಿತ್ತುಕೊಂಡು ತರಕ್ಕಾಗುತ್ತಾ? ಎಂದು ಉತ್ತರ ಕೊಟ್ಟಿದ್ದರು. ಅವರ ಪೇಪರ್ ಸ್ಟೇಟ್‌ಮೆಂಟ್ ಈಗಲೂ ನನ್ನ ಬಳಿ ಇದೆ. ಹಾಗಾದರೆ ಈಗ ಮೋದಿ ದೇಶದ ಅಭಿವೃದ್ಧಿಗೆ ಗಣನೀಯವಾಗಿ ಮಾಡಲಿಲ್ಲವೇ? ಅವರೇನು ನೋಟು ಮರದಲ್ಲಿ ಉದುರಿಸಿಕೊಂಡು ಬಂದ್ರಾ?

    -ಐಟಿ, ಇಡಿ, ಸಿಬಿಐ ದಾಳಿ ಎಂದು ಯಾಕ್ರಿ ಬೊಂಬಡ ಬಜಾಯಿಸುತ್ತೀರಿ? ಮೋದಿ ಅಧಿಕಾರಕ್ಕೆ ಬಂದ ಮೇಲೆ ಈ ಸಂಸ್ಥೆಗಳು ಬಂದಿದ್ದಾ? ಇವರ ಕಾಲದಲ್ಲಿ ಇರಲಿಲ್ಲವಾ? ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ತಪ್ಪು ಮಾಡದವರಿಗೆ ಭಯ ಯಾಕೆ?

    • ಚುನಾವಣಾ ಬಾಂಡ್ ಬಗ್ಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಲಿಲ್ಲವಾ? ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಬಂಧನ ಸರಿಯಲ್ಲ ಎನ್ನುವುದಾದರೆ ಸುಪ್ರೀಂ ಕೋರ್ಟ್ ನಿರ್ಧರಿಸುತ್ತದೆ. ಮೋದಿ ಸರ್ಕಾರ ತಪ್ಪು ಮಾಡಿದರೂ ಸುಪ್ರೀಂ ಕೋರ್ಟ್ ಇಲ್ಲವಾ? ಜನ ದಡ್ಡರಲ್ಲ. ಎಲ್ಲವನ್ನೂ ನೋಡ್ತಾರೆ.

    -ಪಕ್ಷ ನಿಷ್ಠೆ ಎನ್ನುವುದು ಹೋಗಿದೆ. ಯಾರು ಏನು ಸಹಾಯ ಮಾಡಿದರು? ಎನ್ನುವುದನ್ನು ಬಹಳ ಬೇಗ ಮರೆಯುತ್ತಾರೆ. ಇದೇ ರಮೇಶ್ ಬಾಬು ಅವರನ್ನು ನಾನು ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಿದೆ. ಈಗ ಅವರು ನಮ್ಮ ಬಿಟ್ಟು, ಕಾಂಗ್ರೆಸ್ ಸೇರಿ ಅಲ್ಲೇನೋ ನಿಗಮ ಮಂಡಳಿ ಸ್ಥಾನ ಹಿಡಕೊಂಡಿದ್ದಾರೆ. ಇಂಥ ಉದಾಹರಣೆಗಳು ಬಹಳಷ್ಟಿವೆ.

    -ಈ ದೇಶದಲ್ಲಿ ಕಾಂಗ್ರೆಸ್‌ಗೆ ಅಧಿಕೃತ ವಿರೋಧ ಪಕ್ಷದ ಸ್ಥಾನ ಪಡೆಯುವಷ್ಟು ಸಂಸತ್ ಸದಸ್ಯ ಸ್ಥಾನಗಳಾದರೂ ಬರಲಿ ಎಂದು ನಾನು ಶುಭ ಹಾರೈಸುತ್ತೇನೆ.

    -ನಾವೇ ಅಧಿಕಾರದಲ್ಲಿದ್ದರೂ, ನನ್ನ ಅಳಿಯ ಅಂತ ನಾನು ಜಯದೇವ ಹೃದ್ರೋಗ ಆಸ್ಪತ್ರೆಗೆ ಡಾ.ಸಿ.ಎನ್.ಮಂಜುನಾಥ್ ಅವರನ್ನು ನಿರ್ದೇಶಕರನ್ನಾಗಿ ಮಾಡಲಿಲ್ಲ. ಆಗ ಪ್ರಭುದೇವ್ ಅವರನ್ನು ಮಾಡಿಸಿದ್ದೆ. ಅವರು ರಾಜೀನಾಮೆ ನೀಡಿದ್ದರಿಂದ ಮೆರಿಟ್ ಮೇಲೆ ಮಂಜುನಾಥ್ ಆ ಸ್ಥಾನಕ್ಕೆ ಬಂದರು. ಐಎಎಸ್ ಅಧಿಕಾರಿ ಡಾ.ದಾಸ್ ೈಲ್‌ನಲ್ಲಿ ಏನು ಮಿನಿಟ್ ಬರೆದಿದ್ದರು ಗೊತ್ತಾ? ಎಲ್ಲವೂ ೈಲ್ ರೆಕಾರ್ಡ್‌ನಲ್ಲಿದೆ. ಯಾರ ಬೇಕಾದರೂ ನೋಡಬಹುದು ಆಗ ಇದೇ ಡಿ.ಕೆ.ಶಿವಕುಮಾರ್ ಏನು ಮಾಡಿದರೂ ಎನ್ನುವುದು ನನಗೆ ಗೊತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts