More

    ಗ್ರಾಮಾಭಿವೃದ್ಧಿ ಯೋಜನೆಗೆ ಸಹಕರಿಸಿ

    ವಿಜಯಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಅನೇಕ ಜನೋಪಕಾರಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಗ್ರಾಮಾಭಿವೃದ್ಧಿಪಡಿಸಬೇಕೆಂದು ಯೋಜನೆಯ ಜಿಲ್ಲಾ ನಿರ್ದೇಶಕ ಶ್ರೀನಿವಾಸ ಪಿ. ಹೇಳಿದರು.
    ತಾಲೂಕಿನ ನಿಡೋಣಿ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ಥಳೀಯ ರಾಮೇಶ್ವರ ಕೆರೆ ಅಭಿವೃದ್ಧಿ ಸಮಿತಿ ಮತ್ತು ಗ್ರಾಪಂ ನಿಡೋಣಿ ಇವರ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ನಮ್ಮೂರ ಕೆರೆ ಪುನಃಶ್ಚೇತನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

    2016ರಿಂದ ನಮ್ಮೂರ ಕೆರೆ ಯೋಜನೆಯ ಮೂಲಕ ಪ್ರತಿವರ್ಷ ಪ್ರತಿ ತಾಲೂಕಿಗೆ ಒಂದರಂತೆ ಕೆರೆ ಹೂಳೆತ್ತುವ ಮೂಲಕ ಜಲ ಸಂರಕ್ಷಣೆಗೆ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗಡೆ ಮುಂದಾಗಿರುವರು. ಸ್ಥಳೀಯ ನಾಗರಿಕರ ಸಹಕಾರದೊಂದಿಗೆ ಈ ಕಾರ್ಯ ಉತ್ತಮವಾಗಿ ನಡೆಯುತ್ತಿದೆ. ಎಲ್ಲರೂ ಸೇರಿ ಈ ಕೆರೆಯನ್ನು ಮಾದರಿ ಕೆರೆಯಾಗಿ ರೂಪಿಸೋಣ ಎಂದರು.
    ಸಂಸ್ಥೆಯ ಕ್ಷೇತ್ರ ಯೋಜನಾಧಿಕಾರಿ ಪಿ. ನಾಗರಾಜ್ ಮಾತನಾಡಿ, ಎಲ್ಲವನ್ನು ಸ್ವಚ್ಛಗೊಳಿಸಲು ನೀರು ಅಗತ್ಯ. ಆದರೆ, ಆ ನೀರನ್ನೇ ಮಲೀನಗೊಳಿಸಲು ನಾವು ಮುಂದಾಗಿರುವುದು ದುರಂತ. ಈ ಹಿಂದೆ ರಾಜ ಮಹಾರಾಜರು ಜನತೆಗಾಗಿ ಕೆರೆ, ಕಟ್ಟೆಗಳನ್ನು ಧಾರಾಳವಾಗಿ ಕಟ್ಟಿಸಿ ಇಡೀ ಜೀವ ಸಂಕುಲದ ರಕ್ಷಣೆ ಮಾಡಲು ಹೆಣಗುತ್ತಿದ್ದರು. ಆದರೆ, ಇಂದು ನಾವು ನಮ್ಮ ಸ್ವಾರ್ಥಕ್ಕಾಗಿ ಕೆರೆಗಳನ್ನೇ ಅತಿಕ್ರಮಿಸಿ ಮನೆ, ವಾಣಿಜ್ಯ ವ್ಯಾಪಾರೀಕರಣಕ್ಕೆ ಮುಂದಾಗುತ್ತಿದ್ದೇವೆ. ಗ್ರಾಮೀಣ ಜನರ ಜೀವನಾಧಾರಕ್ಕೆ ಬಾವಿ, ಕೆರೆಗಳು ಅವಶ್ಯಕ. ಆದ್ದರಿಂದ ಕೆರೆಗಳ ರಕ್ಷಣೆಗೆ ಸರ್ಕಾರವನ್ನು ಅವಲಂಬಿಸದೆ ಶ್ರಮದಾನದ ಮೂಲಕ ಕೆರೆಗಳನ್ನು ಉಳಿಸಿಕೊಳ್ಳಲು ಕಾಳಜಿ ವಹಿಸಬೇಕು ಎಂದರು.
    ಸಿದ್ಧಲಿಂಗ ಮಹಾಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಶ್ರೀಶೈಲಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ದ್ರಾಕ್ಷಾಯಣಿ ಶಾಪೂರ, ಕೆರೆ ಸಮಿತಿ ಕಾರ್ಯದರ್ಶಿ ರಾಚನಗೌಡ ಬಿರಾದಾರ, ಕೆರೆ ಸಮಿತಿ ಸದಸ್ಯರಾದ ಕೆಂಚಪ್ಪ ಕನಮಡಿ, ಶಿವಗೊಂಡ ಕೋಟ್ಯಾಳ, ಸೋಮಶೇಖರ ಕೋಟ್ಯಾಳ ಇದ್ದರು. ಮೇಲ್ವಿಚಾರಕಿ ಶಾಂತಾ ಸ್ವಾಗತಿಸಿದರು. ಶಿಕ್ಷಕ ಎಸ್.ಜಿ. ಆಲಗೂರ ನಿರೂಪಿಸಿದರು. ಕೃಷಿ ಮೇಲ್ವಿಚಾರಕ ಎಸ್.ಕೆ. ಮಲ್ಲಪ್ಪ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts