More

    ಚುನಾವಣಾ ಜಾಗೃತಿ ಅಭಿಯಾನಕ್ಕೆ ಎನ್​ಜಿಒ ಸಾಥ್; ​ಸಮುದ್ರ ತೀರ, ರೈಲು, ಬಸ್ಸು, ಸಂತೆಗಳಲ್ಲಿ ಮತದಾರರಿಗೆ ಮನವರಿಕೆ

    ವಿಲಾಸ ಮೇಲಗಿರಿ
    ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ತಡೆಗಟ್ಟಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಅನೇಕ ಕಟ್ಟುನಿಟ್ಟಿನ ಹಾಗೂ ತಂತ್ರಜ್ಞಾನ ಆಧಾರಿತ ಹಾಗೂ ಮಾಹಿತಿಪೂರ್ಣ ಉಪಕ್ರಮಗಳನ್ನು ಕೈಗೊಂಡಿದೆ. ಅದಕ್ಕೆ ರಾಜ್ಯದ ನಾನಾ ಕಡೆಗಳಲ್ಲಿ ಸ್ವಯಂಸೇವಾ ಸಂಸ್ಥೆಗಳು ಕೂಡ ಕೈಜೋಡಿಸಿದ್ದು, ವಿನೂತನ ರೀತಿಯ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿವೆ.

    ವಿವಿಧ ಸಂಘ ಸಂಸ್ಥೆಗಳು, ತಾಲೂಕು ಮತ್ತು ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ ನಾನಾ ಪ್ರದೇಶಗಳಲ್ಲಿ ಪ್ರಮುಖವಾಗಿ ಯುವಜನರು, ಮಹಿಳೆಯರು ಮತ್ತು ಕೆಳ ವರ್ಗದವರನ್ನು ಕೇಂದ್ರೀಕರಿಸಿ ಜಾಗೃತಿ ಮೂಡಿಸುತ್ತಿವೆ. ಸಮುದ್ರ ತೀರಕ್ಕೆ ಬರುವ ಪ್ರವಾಸಿಗರು, ರೈಲು, ಬಸ್ಸು ಪ್ರಯಾಣಿಕರು, ಸಂತೆಗಳಲ್ಲಿ ಚಿಲ್ಲರೆ ವ್ಯಾಪಾರ ಮಾಡುವವರನ್ನು ಭೇಟಿ ಮಾಡಿ ಅವರಿಗೆ ಮತದಾನದ ಮಹತ್ವವನ್ನು ಮನವರಿಕೆ ಮಾಡಿಕೊಡುತ್ತಿವೆ. ಪಕ್ಷಾತೀತವಾಗಿ ನೈಜ ಪ್ರಜಾಪ್ರಭುತ್ವದ ಸಾಕಾರಕ್ಕೆ ಪ್ರತಿಯೊಬ್ಬ ಮತದಾರರ ಪಾತ್ರದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

    ಇದನ್ನೂ ಓದಿ: ವಂಚನೆಗೆ ಕಡಿವಾಣ: ಚೀನೀ ಲೋನ್ ಆ್ಯಪ್​ ಜಾಲ

    ತಮ್ಮ ಸಾಂವಿಧಾನಿಕ ಹಕ್ಕನ್ನು ಗೌರವಯುತವಾಗಿ ಅಭಿಮಾನದಿಂದ ಚಲಾಯಿಸುವ ಅಗತ್ಯದ ಬಗ್ಗೆ ಸಮುದಾಯದೊಡನೆ ಚರ್ಚೆ ನಡೆಸಲಾಗುತ್ತಿದೆ. ರಾಜ್ಯದ ಅಭಿವೃದ್ಧಿಗಾಗಿ ತಮ್ಮ ಪ್ರತಿನಿಧಿಗಳ ಆಯ್ಕೆ ಮಾಡುವ ಈ ಪ್ರಜಾತಂತ್ರದ ಸಂಭ್ರಮದಲ್ಲಿ ಯುವಜನರು, ಮಹಿಳೆಯರು, ಸಮುದಾಯದ ಮಹತ್ತರ ಜವಾಬ್ದಾರಿಯುತ ಪಾತ್ರದ ಬಗ್ಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ.

    ಜನರ ಪ್ರತಿನಿಧಿಗಳಾಗಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯಲು ಚುನಾವಣಾ ಕಣಕ್ಕಿಳಿದಿರುವ ಅಭ್ಯರ್ಥಿಗಳನ್ನು ಜನಾಭಿವೃದ್ಧಿಗೆ, ಜನಪರ ಆಡಳಿತಕ್ಕೆ, ಜನತಂತ್ರ ವ್ಯವಸ್ಥೆಗೆ ಬದ್ಧತೆ ಕೇಳುವಂತೆ ಪ್ರೋತ್ಸಾಹಿಸಲಾಗುತ್ತದೆ. ಚುನಾವಣೆ ನಂತರ ಆಯ್ಕೆಯಾದವರ ಜವಾಬ್ದಾರಿಗಳಿಗೆ ಅವರನ್ನು ಉತ್ತರದಾಯಿಗಳನ್ನಾಗಿಸುವ ನಿಟ್ಟಿನಲ್ಲೂ ಸ್ವಯಂಸೇವಾ ಸಂಸ್ಥೆಗಳು ದೃಢ ಹೆಜ್ಜೆ ಇಟ್ಟಿವೆ.

    ನಾವು, ನಮ್ಮ ಮತ ಮಾರಾಟಕ್ಕಿಲ್ಲ

    “ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ’ ಅಭಿಯಾನ ನಡೆಸಿ ಮತದಾನದ ಪಾವಿತ್ರ್ಯತೆ, ಹಕ್ಕು ಚಲಾವಣೆಯ ಅಗತ್ಯತೆಯ ಬಗ್ಗೆ ಅರಿವು ಮೂಡಿಸಲು ಮನೆ, ಬೀದಿಯ ಗೋಡೆ, ವಾಹನಗಳಿಗೆ ಸ್ಟಿಕರ್​ ಅಂಟಿಸಲಾಗುತ್ತಿದೆ. ಜನರಿಗೆ ಬ್ಯಾಡ್ಜ್​ ಹಾಕಲಾಗುತ್ತಿದೆ. ಗ್ರಾಮೀಣ ಪ್ರದೇಶದ ಸಮುದಾಯ, ವಲಸೆ ಕಾರ್ಮಿಕರು, ವಿವಿಧ ಸಂಘ ಸಂಸ್ಥೆಗಳು, ಪದವಿ ಕಾಲೇಜುಗಳು, ಮಹಿಳಾ ಸ್ವಸಹಾಯ ಗುಂಪು, ಯುವಜನರ ಗುಂಪುಗಳನ್ನು ಕೇಂದ್ರೀಕರಿಸಿ ಅಭಿಯಾನ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಗ್ರಾಪಂ ಹಕ್ಕೊತ್ತಾಯ ಆಂದೋಲನ ಮುಂಚೂಣಿಯಲ್ಲಿದೆ.

    ಅಭಿಯಾನದ ಕಾರ್ಯತಂತ್ರಗಳು

    ಮತದಾನ ನಮ್ಮ ಸಾಂವಿಧಾನಿಕ ಹಕ್ಕು, ನೈಜ ಪ್ರಜಾಪ್ರಭುತ್ವವನ್ನು ಸಾಕಾರಗೊಳಿಸುವಲ್ಲಿ ಚೊಕ್ಕ ಚುನಾವಣೆ, ನೈತಿಕ ಮತದಾನದ ಮಹತ್ವ, ಪ್ರತಿಯೊಬ್ಬರ ಮತವೂ ಅಮೂಲ್ಯ, ಸಂಘಟಿತ ಧ್ವನಿಯ ಮೌಲ್ಯ, ಭ್ರಷ್ಟಾಚಾರರಹಿತ ಚುನಾವಣೆಯ ಅಗತ್ಯ ಇತ್ಯಾದಿ ವಿಷಯಗಳ ಬಗ್ಗೆ ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚು ಚರ್ಚೆ, ಸಂವಾದ ನಡೆಸಲಾಗಿದೆ.

    ಇದನ್ನೂ ಓದಿ: ರಾಷ್ಟ್ರೀಯ, ರಾಜ್ಯ ಪಕ್ಷಗಳ ಸ್ಥಾನಮಾನ ಬದಲಾಗಿದ್ದೇಕೆ?

    ಬೀದಿ ನಾಟಕ, ಸನ್ನಿವೇಶ ರೂಪಕ

    ಜನರಿಗೆ ಸರಳವಾಗಿ ಮತದಾರರ ಹಕ್ಕನ್ನು ತಿಳಿಸಲು ಬೀದಿನಾಟಕ, ಸನ್ನಿವೇಶ ರೂಪಕ, ಕಥೆ ಹೇಳಿ-ಕಥೆ ಕೇಳಿ, ಚಿತ್ರ ಬರೆ-ಚಿತ್ರಣ ನೀಡಿ, ಜಾಗೃತಿ ಹಾಡು… ಹೀಗೆ ವಿವಿಧ ರೂಪದಲ್ಲಿ ಚುನಾವಣೆಯ ಮಹತ್ವ, ಮತದಾನದ ಅಗತ್ಯ, ಮತದಾರರ ಜವಾಬ್ದಾರಿ ಮತ್ತು ಪಾತ್ರಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

    ಹಕ್ಕೊತ್ತಾಯದ ಪ್ರಣಾಳಿಕೆಗೆ ಪ್ರಯತ್ನ

    ಮಕ್ಕಳು, ದುಡಿಯುವ ಮಕ್ಕಳು, ಯುವಜನರು, ಸ್ಥಳಿಯ ಸರ್ಕಾರದ ಚುನಾಯಿತ ಪ್ರತಿನಿಧಿಗಳು, ವಲಸೆ ಕಾರ್ಮಿಕರು, ಮಹಿಳೆಯರು, ತುಳಿತಕ್ಕೊಳಗಾದ ವರ್ಗದವರು ಹೀಗೆ ವಿವಿಧ ವರ್ಗದವರು ತಮ್ಮ ಅಗತ್ಯಗಳಿಗೆ ಪೂರಕವಾಗಿ ಅಭ್ಯರ್ಥಿಗಳಿಗೆ ತಮ್ಮದೇ ಆದ ಜನರ ಹಕ್ಕೊತ್ತಾಯದ ಪ್ರಣಾಳಿಕೆಗಳನ್ನು ನೀಡುವಂತೆ ಒತ್ತಾಯಿಸುವ ಕೆಲಸವೂ ನಡೆಯುತ್ತಿದೆ.

    ಇದನ್ನೂ ಓದಿ: ರಾಜ್ಯ ರಾಜಕೀಯ: ಅತೃಪ್ತಿ ಆಪತ್ತು, ರಾಜಿ ಸಂಧಾನದ ಕಸರತ್ತು

    ಯುವಕರ ಜತೆ ಚರ್ಚೆ/ಸಂವಾದ

    ಕಾಲೇಜುಗಳಲ್ಲಿ ವಿದ್ಯಾರ್ಥಿ/ ವಿದ್ಯಾರ್ಥಿನಿಯರು, ಯುವಜನ ಗುಂಪುಗಳಿಗೆ, ಮಹಿಳಾ ಗುಂಪುಗಳಿಗೆ, ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ ಎಂಬ ಟ್ಯಾಗ್​ಲೈನ್​ ಅಡಿಯಲ್ಲಿ ಚರ್ಚೆ, ಸಂವಾದ ನಡೆಸಲಾಗುತ್ತಿದೆ.

    ನಮ್ಮ ಸಂಸ್ಥೆ ಉಡುಪಿ, ವಿಜಯನಗರ, ಬೆಂಗಳೂರು ಮತ್ತಿತರ ಕಡೆ ಮತದಾರರ ಜಾಗೃತಿ ಅಭಿಯಾನ ನಡೆಸುತ್ತಿದೆ. ಗ್ರಾಮ ಪಂಚಾಯಿತಿಯಿಂದ ಲೋಕಸಭೆ ಚುನಾವಣೆವರೆಗೆ ನಾವು ಈ ರೀತಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುತ್ತೇವೆ. ನಾವು, ನಮ್ಮ ಮತ ಮಾರಾಟಕ್ಕಿಲ್ಲ ಎಂಬುದು ನಮ್ಮ ಟ್ಯಾಗ್​ಲೈನ್​. ನಾವು ಜನರಿಗೆ ನೀಡುವ ಸ್ಟಿಕರ್​ಗಳೇ ಮತದ ಮಹತ್ವವನ್ನು ಸಾರುತ್ತವೆ. ಸ್ಥಳಿಯ ಆಡಳಿತಗಳ ಸಹಭಾಗಿತ್ವದಲ್ಲಿ ನಾವು ಈ ಅಭಿಯಾನ ನಡೆಸುತ್ತೇವೆ. ಹಿಂದೆಂದಿಗಿಂತಲೂ ಜನರಲ್ಲಿ ಪ್ರಶ್ನಿಸುವ ಮನೋಭಾವ ಬೆಳೆದಿರುವುದು ಕಾಣಿಸುತ್ತದೆ.

    -ಎಂ.ಎಂ. ಕೃಪಾ, ಕಾರ್ಯಾಲಯ ಸದಸ್ಯೆ, ಗ್ರಾಪಂ ಹಕ್ಕೊತ್ತಾಯ ಆಂದೋಲನ

    ಹೈಸ್ಕೂಲ್​, ಜೂನಿಯರ್​ ಕಾಲೇಜುಗಳಲ್ಲಿರುವ ಸಾಕ್ಷರತಾ ಸಂಘಗಳ ಮೂಲಕ ಚುನಾವಣಾ ಆಯೋಗ ಕೂಡ ಜನರನ್ನು ಮತದಾನ ಮಾಡಲು ಮನವೊಲಿಸುತ್ತಿದ್ದೇವೆ. ಸೋಷಿಯಲ್​ ಮೀಡಿಯಾ, ಹೋರ್ಡಿಂಗ್ಸ್​, ರೇಡಿಯೋ ಮತ್ತಿತರ ಮಾಧ್ಯಮಗಳ ಮೂಲಕವೂ ಜನರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದೇವೆ. ಈ ಬಾರಿ ಮತದಾನ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ.

    -ಪಿ.ಎಸ್​. ವಸ್ತ್ರದ್​, ರಾಜ್ಯ ನೋಡಲ್​ ಅಧಿಕಾರಿ, ಸ್ವೀಪ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts