More

    ಸೃಷ್ಟಿಯಲ್ಲಿ ನವಚೇತನ; ಯುಗಾದಿ ಕುರಿತ ಲೇಖನ

    | ಮೋಹನ್ ಗೌಡ

    ಸನಾತನ ಹಿಂದೂ ಧರ್ಮದಲ್ಲಿ ಯುಗಾದಿ ಹಬ್ಬಕ್ಕೆ ವಿಶೇಷ ಮಹತ್ವ ಇದೆ. ಯುಗಾದಿಯ ಅರ್ಥ ‘ಯುಗದ ಆದಿ’. ಯುಗವೆಂದರೆ ಸೃಷ್ಟಿಯ ಕಾಲಮಾನ. ಅರ್ಥಾತ್ ಹೊಸ ವರ್ಷ; ಆದಿ ಎಂದರೆ ಆರಂಭ. ಈ ಹಬ್ಬವನ್ನು ಭಾರತದ ವಿವಿದ ರಾಜ್ಯಗಳಲ್ಲಿ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಕರ್ನಾಟಕದಲ್ಲಿ ಯುಗಾದಿ, ಮಹಾರಾಷ್ಟ್ರದಲ್ಲಿ ಗುಢಿಪಾಡವಾ, ಆಂಧಪ್ರದೇಶ ಹಾಗೂ ತಮಿಳುನಾಡಿನಲ್ಲಿ ಹೊಸ ವರ್ಷದ ಹಬ್ಬ, ಉತ್ತರ ಭಾರತದಲ್ಲಿ ಬೈಸಾಖಿ ಎಂದು ಕರೆಯುತ್ತಾರೆ. ಹೊಸ ವರ್ಷದ ಪ್ರಾರಂಭದ ಸಂಕೇತವಾದ ಯುಗಾದಿಯನ್ನು ಬಡವ-ಬಲ್ಲಿದರೆಂಬ ತಾರತಮ್ಯವಿಲ್ಲದೆ ಎಲ್ಲ ಹಿಂದೂಗಳೂ ಆಚರಿಸುತ್ತಾರೆ. ರೈತರು ಎತ್ತುಗಳನ್ನು ಶೃಂಗರಿಸಿ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ವ್ಯಾಪಾರಿಗಳು ಹಾಗೂ ಇನ್ನಿತರರು ಕೂಡ ಅಂದಿನ ದಿನವೇ ಶುಭಕಾರ್ಯ ಆರಂಭಿಸುತ್ತಾರೆ. ಯುಗಾದಿ ಹಬ್ಬ ಪೌರಾಣಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳನ್ನು ಹೊಂದಿದೆ.

    ನೈಸರ್ಗಿಕ ಕಾರಣಗಳು: ಪ್ರತಿಪದೆ ಸಮಯದಲ್ಲಿ ಸೂರ್ಯನು ವಸಂತ ಸಂಪಾತದ ಮೇಲೆ ಬರುತ್ತಾನೆ (ಸಂಪಾತ ಬಿಂದು ಎಂದರೆ (ಮಕರ) ಕ್ರಾಂತಿವೃತ್ತ ಮತ್ತು ವಿಷುವವೃತ್ತ (ಕರ್ಕಾಟಕ) ಈ ಎರಡು ವೃತ್ತಗಳು ಯಾವ ಬಿಂದುವಿನಲ್ಲಿ ಪರಸ್ಪರ ಬೇಧಿಸುತ್ತವೆಯೋ ಆ ಬಿಂದು) ಮತ್ತು ವಸಂತ ಋತು ಪ್ರಾರಂಭವಾಗುತ್ತದೆ. ಎಲ್ಲ ಋತುಗಳಲ್ಲಿ ‘ಕುಸುಮಾಕರಿ ವಸಂತ ಋತು ನನ್ನ ವಿಭೂತಿಯಾಗಿದೆ’ ಎಂದು ಭಗವಂತನು ಶ್ರೀಮದ್ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಈ ಸಮಯದಲ್ಲಿ ಸಮಶೀತೋಷ್ಣ, ಉತ್ಸಾಹವರ್ಧಕ ಮತ್ತು ಆಹ್ಲಾದಕರ ವಾತಾವರಣವಿರುತ್ತದೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ಕಾಲಚಕ್ರ ವಿಶ್ವದ ಉತ್ಪತ್ತಿಯ ಕಾಲಚಕ್ರಕ್ಕೆ ಸಂಬಂಧಿಸಿದೆ. ಆದುದರಿಂದ ಸೃಷ್ಟಿ ನವಚೇತನದಿಂದ ತುಂಬಿರುತ್ತದೆ.

    ಆಧ್ಯಾತ್ಮಿಕ ಕಾರಣಗಳು: ಬ್ರಹ್ಮದೇವನು ಇದೇ ದಿನದಂದು ಸೃಷ್ಟಿಯನ್ನು ನಿರ್ವಿುಸಿದ. ಅರ್ಥಾತ್ ಈ ದಿನ ಸತ್ಯಯುಗ ಪ್ರಾರಂಭವಾಯಿತು. ಆದುದರಿಂದಲೇ ಈ ದಿನದಂದು ವರ್ಷಾರಂಭವನ್ನು ಮಾಡುತ್ತಾರೆ.

    ಪಾಡ್ಯದ ಧಾರ್ವಿುಕ ಕಾರ್ಯಗಳು: ಯುಗಾದಿ ಪಾಡ್ಯದ ದಿನ ಬೆಳಗ್ಗೆ ಬೇಗನೆ ಎದ್ದು ಮೊದಲು ಅಭ್ಯಂಗಸ್ನಾನ ಮಾಡಬೇಕು. ಸ್ನಾನದ ಬಳಿಕ ಮಾವಿನ ಎಲೆಯ ತೋರಣವನ್ನು ತಯಾರಿಸಿ ಕೆಂಪು ಹೂವುಗಳೊಂದಿಗೆ ಎಲ್ಲ ಬಾಗಿಲುಗಳಿಗೆ ಕಟ್ಟಬೇಕು. ಏಕೆಂದರೆ ಕೆಂಪುಬಣ್ಣ ಶುಭಸೂಚಕವಾಗಿದೆ. ಸಾತ್ವಿಕ ತೋರಣದಿಂದ ಚೈತನ್ಯ ಪ್ರಕ್ಷೇಪಿತವಾಗಿ ಸಂರಕ್ಷಣಾಕವಚ ನಿರ್ವಣವಾಗುತ್ತದೆ. ನಿತ್ಯಕರ್ಮ ದೇವರ ಪೂಜೆಯನ್ನು ಮಾಡಬೇಕು. ವರ್ಷದ ಪಾಡ್ಯದಂದು ಮಹಾಶಾಂತಿ ಮಾಡಬೇಕು. ಶಾಂತಿಯ ಪ್ರಾರಂಭದಲ್ಲಿ ಬ್ರಹ್ಮದೇವನ ಪೂಜೆ ಮಾಡಬೇಕು, ಏಕೆಂದರೆ ಬ್ರಹ್ಮದೇವನು ವಿಶ್ವವನ್ನು ಈ ದಿನವೇ ನಿರ್ವಿುಸಿದನು. ಪೂಜೆಯಲ್ಲಿ ಅವನಿಗೆ ದವನವನ್ನು (ಸುವಾಸನೆಯ ಎಲೆಗಳನ್ನು) ಅರ್ಪಿಸಬೇಕು. ನಂತರ ಹೋಮಹವನ ಮತ್ತು ಬ್ರಾಹ್ಮಣಸಂತರ್ಪಣೆ ಮಾಡಬೇಕು. ತರುವಾಯ ಅನಂತ ರೂಪಗಳಲ್ಲಿ ಅವತರಿಸುವ ಶ್ರೀವಿಷ್ಣುವಿನ ಪೂಜೆಯನ್ನು ಮಾಡಬೇಕು. ‘ನಮಸ್ತೆ ಬಹುರೂಪಾಯ ವಿಷ್ಣವೇ ನಮಃ|’ ಎನ್ನುವ ಮಂತ್ರವನ್ನು ಹೇಳಿ ಅವನಿಗೆ ನಮಸ್ಕರಿಸಬೇಕು. ಬಳಿಕ ಬ್ರಾಹ್ಮಣರಿಗೆ ದಕ್ಷಿಣೆಯನ್ನು ನೀಡಬೇಕು.

    ಬ್ರಹ್ಮಧ್ವಜ ಏರಿಸುವುದು: ಬಿದಿರಿನ ದೊಡ್ಡ ಕೋಲಿನ ತುದಿಗೆ ಹಸಿರು ಅಥವಾ ಹಳದಿ ಬಣ್ಣದ ಜರಿಯ ಖಣವನ್ನು ಕಟ್ಟುತ್ತಾರೆ. ಅದರ ಮೇಲೆ ಸಕ್ಕರೆಯ ಗಂಟು, ಬೇವಿನ ಚಿಗುರೆಲೆ, ಮಾವಿನ ಎಲೆ ಮತ್ತು ಕೆಂಪು ಹೂವುಗಳ ಹಾರವನ್ನು ಕಟ್ಟಿ ಮೇಲೆ ಬೆಳ್ಳಿಯ ಅಥವಾ ತಾಮ್ರದ ಕಲಶದಿಂದ ಶೃಂಗರಿಸಿ ಧ್ವಜವನ್ನು ನಿಲ್ಲಿಸುತ್ತಾರೆ. ಅದರ ಮುಂದೆ ಸುಂದರವಾದ ರಂಗೋಲಿ ಹಾಕುತ್ತಾರೆ. ಇದಕ್ಕೆ ‘ಬ್ರಹ್ಮಧ್ವಜಾಯ ನಮಃ’ ಎಂದು ಹೇಳಿ ಸಂಕಲ್ಪಪೂರ್ವಕವಾಗಿ ಪೂಜೆ ಮಾಡಬೇಕು. ಎರಡನೆಯ ದಿನದಿಂದ ಈ ಕಲಶವನ್ನು ನೀರು ಕುಡಿಯಲು ಉಪಯೋಗಿಸಬೇಕು, ಸೂರ್ಯಾಸ್ತದ ಸಮಯದಲ್ಲಿ ಬೆಲ್ಲದ ನೈವೇದ್ಯ ತೋರಿಸಿ ಧ್ವಜವನ್ನು ಕೆಳಗಿಳಿಸಬೇಕು.

    ಪಂಚಾಂಗ ಶ್ರವಣ: ಅರ್ಚಕರು ಅಥವಾ ಉಪಾಧ್ಯಾಯರಿಂದ ಹೊಸ ವರ್ಷದ ಪಂಚಾಂಗವನ್ನು ಅರ್ಥಾತ್ ವರ್ಷಫಲದ ಶ್ರವಣವನ್ನು ಮಾಡಬೇಕು. ಈ ವರ್ಷಫಲದ ಶ್ರವಣದ ಫಲ ಇಂತಿದೆ. ತಿಥಿಯ ಶ್ರವಣದಿಂದ ಲಕ್ಷ್ಮೀ ಲಭಿಸುತ್ತಾಳೆ, ವಾರದ ಶ್ರವಣದಿಂದ ಆಯುಷ್ಯ ವೃದ್ಧಿಯಾಗುತ್ತದೆ, ನಕ್ಷತ್ರಶ್ರವಣದಿಂದ ಪಾಪನಾಶವಾಗುತ್ತದೆ, ಯೋಗಶ್ರವಣದಿಂದ ರೋಗಗಳ ನಿವಾರಣೆಯಾಗುತ್ತದೆ, ಕರಣ ಶ್ರವಣದಿಂದ ಇಚ್ಛಿತ ಕಾರ್ಯ ಸಾಧ್ಯವಾಗುತ್ತದೆ. ಇವು ಪಂಚಾಂಗ ಶ್ರವಣದ ಉತ್ತಮ ಫಲಗಳು. ಇದರ ನಿತ್ಯಶ್ರವಣದಿಂದ ಗಂಗಾಸ್ನಾನದ ಫಲ ಲಭಿಸುತ್ತದೆ.

    ಬೇವಿನ ಪ್ರಸಾದ: ಪಂಚಾಂಗಶ್ರವಣದ ನಂತರ ಬೇವಿನ ಪ್ರಸಾದ ಹಂಚಬೇಕು. ಈ ಪ್ರಸಾದವನ್ನು ಬೇವಿನ ಹೂವು, ಚಿಗುರೆಲೆಗಳು, ನೆನೆಸಿದ ಕಡಲೆಕಾಳು ಅಥವಾ ಬೇಳೆ, ಜೇನು, ಜೀರಿಗೆ ಇವೆಲ್ಲ ಬೆರೆಸಿ ತಯಾರಿಸುತ್ತಾರೆ.

    (ಲೇಖಕರು ಹಿಂದೂ ಜನಜಾಗೃತಿ ಸಮಿತಿಯ ಮುಖಂಡರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts