More

    ಯುವಪೀಳಿಗೆಗೆ ಸಂಸ್ಕೃತಿಯ ಅರಿವು ಮೂಡಿಸಿ

    ಶಿವಮೊಗ್ಗ: ಕ್ಯಾಲೆಂಡರ್ ಹೊಸ ವರ್ಷದ ಆಚರಣೆಯ ಬದಲು ನಮ್ಮ ಭಾರತೀಯ ಪರಂಪರೆ, ಕನ್ನಡ ಭಾಷೆಯನ್ನು ಪಸರಿಸುವ ನಿಟ್ಟಿನಲ್ಲಿ ಯುಗಾದಿ ಸಂದರ್ಭದಲ್ಲಿ ಕವಿ ಕಂಡ ಯುಗಾದಿ ಪರಿಕಲ್ಪನೆ ಮೂಲಕ ಕವನ ಸಂಕಲನ ಪ್ರಕಟಿಸುವುದು ಉತ್ತಮ ಕಾರ್ಯ ಎಂದು ಕೂಡಲಿ ಶಾರದಾ ಪೀಠದ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ಹೇಳಿದರು.

    ಸಹಚೇತನ ನಾಟ್ಯಾಲಯದಿಂದ ಯುಗಾದಿ ಅಂಗವಾಗಿ ಪ್ರಕಟಿಸಿದ 14ನೇ ವರ್ಷದ ಕವಿ ಕಂಡ ಯುಗಾದಿ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಶ್ರೀಗಳು, ತಾಯಿ, ತಾಯ್ನೆಲ ಹಾಗೂ ತಾಯ್ನುಡಿಗೆ ನಮ್ಮ ಸಂಸ್ಕೃತಿಯಲ್ಲಿ ಪರಮೋಚ್ಚ ಸ್ಥಾನ ನೀಡಲಾಗಿದೆ. ಸಹಚೇತನ 14 ವರ್ಷಗಳಿಂದ ಈ ಶ್ರದ್ಧೆಯ ಕಾರ್ಯವನ್ನು ಕೈಗೆತ್ತಿಕೊಂಡು ಯುವ ಪೀಳಿಗೆಯಲ್ಲಿ ನಮ್ಮ ಸಂಸ್ಕೃತಿಯ ಉಳಿವಿನ ಬಗ್ಗೆ ಜಾಗೃತಿ ಮೂಡಿಸುವಲ್ಲಿ ನಿರತವಾಗಿದೆ ಎಂದರು.
    ಮನುಷ್ಯ ಬರವಣಿಗೆ, ಭಾಷೆ, ಚಿಂತನೆಗಳ ಬಗ್ಗೆ ಕಾರ್ಯೋನ್ಮುಖನಾದಾಗ ಮಾತ್ರ ಯೋಗ್ಯ ಮನುಜನಾಗುತ್ತಾನೆ. ಇಲ್ಲದ ಪಕ್ಷದಲ್ಲಿ ಈ ಕಂಪ್ಯೂಟರ್ ಯುಗದಲ್ಲಿ ಅದನ್ನು ಚಾಲನೆ ಮಾಡುವ ಚಾಲಕನಾಗಿಯೇ ಉಳಿಯುತ್ತಾನೆಯೇ ಹೊರತು ಅದರ ಯೋಚನೆಯನ್ನು ಮೀರಿ ಹೊಸತನ್ನು ಕಲ್ಪಿಸಿಕೊಳ್ಳುವ ಕ್ರಿಯಾಶೀಲತೆಯನ್ನು ಸ್ವಯಂ ತಾನೇ ನಾಶಪಡಿಸಿಕೊಳ್ಳುತ್ತಾನೆ ಎಂದು ಎಚ್ಚರಿಸಿದರು.
    ಸಹಚೇತನ ನಾಟ್ಯಾಲಯದ ನೃತ್ಯಗುರು ಸಹನಾ ಚೇತನ್, ಚೇತನ್, ಪ್ರಮುಖರಾದ ಕುಮಾರ ಶಾಸ್ತ್ರಿ, ವಿನಯ್, ದಿನೇಶ್ ಆಚಾರ್ಯ, ಡಾ. ನಾಗಮಣಿ, ಆನಂದರಾಮ, ಸಿಂಧುಶ್ರೀ, ರಕ್ಷಿತಾ, ಸೇಜಲ್ ಮುಂತಾದವರಿದ್ದರು.
    95 ಕವನಗಳ ಸಂಗ್ರಹ: ಈ ಬಾರಿಯ ಕವಿ ಕಂಡ ಯುಗಾದಿ ಕವನ ಸಂಕಲನದಲ್ಲಿ ಒಟ್ಟು 95 ಅತ್ಯುತ್ತಮ ಕವನಗಳಿವೆ. ಜಿಲ್ಲೆ ಮಾತ್ರವಲ್ಲದೆ ರಾಜ್ಯ, ದೇಶ, ವಿದೇಶಗಳಿಂದಲೂ ಅನೇಕರು ಕಳಿಸಿರುವ ಕವನಗಳು ಇದರಲ್ಲಿವೆ. ಅಮೆರಿಕ, ಇಂಗ್ಲೆಂಡ್, ಪ್ಯಾರಿಸ್, ಸಿಂಗಾಪೂರ್, ನೆದರ್ಲಾಂಡ್ ಮುಂತಾದ ದೇಶಗಳಲ್ಲಿರುವ ಕನ್ನಡಿಗರ ಕವನ, 6-7ನೇ ತರಗತಿಯ ವಿದ್ಯಾರ್ಥಿಗಳು ರಚಿಸಿದ ಕವನಗಳೂ ಇವೆ. ನೃತ್ಯ ಗುರು ಸಹನಾ ಚೇತನ್ ದಂಪತಿ ಈ ಕವನ ಸಂಕಲನವನ್ನು ಸಾಹಿತ್ಯಾಸಕ್ತರಿಗೆ ಉಚಿತವಾಗಿ ಹಂಚುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts