More

    ಮಂಗಳೂರಲ್ಲಿ 15 ಹೊಸ ಪಾರ್ಕ್

    ಹರೀಶ್ ಮೋಟುಕಾನ ಮಂಗಳೂರು
    ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರು ನಗರ ಆಮೂಲಾಗ್ರ ಬದಲಾವಣೆ ಹೊಂದುತ್ತಿದ್ದು, ಈ ನಡುವೆ ಹಸಿರು ಪರಿಸರ ಕಾಯ್ದುಕೊಳ್ಳುವ ಉದ್ದೇಶದಿಂದ ಮಹಾನಗರ ಪಾಲಿಕೆಯ ಪ್ರತಿ ವಾರ್ಡ್‌ನಲ್ಲೂ ಹೊಸ ಉದ್ಯಾನವನ ನಿರ್ಮಾಣಕ್ಕೆ ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಯೋಜನೆ ರೂಪಿಸಿದೆ.

    ಮೊದಲ ಹಂತದಲ್ಲಿ 15 ಉದ್ಯಾನವನ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ನಗರದಲ್ಲಿ ಖಾಲಿ ಇರುವ ಸರ್ಕಾರಿ ಜಾಗ ಬಳಸಿಕೊಂಡು ಉದ್ಯಾನವನ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಸರ್ವೇ ಕಾರ್ಯ ನಡೆಯುತ್ತಿದ್ದು, ವಾರದೊಳಗೆ ಈ ಪ್ರಕ್ರಿಯೆ ಮುಗಿಯಲಿದೆ. ಅಭಿವೃದ್ಧಿ ಕಾಮಗಾರಿಗಳಿಂದ ನಗರದಲ್ಲಿ ಹಸಿರು ಪರಿಸರ ಮಾಯವಾಗತೊಡಗಿದ್ದು, ಎಲ್ಲ ಕಡೆ ಕಾಂಕ್ರೀಟ್ ಆಗಿ ತಾಪಮಾನ ಹೆಚ್ಚಾಗತೊಡಗಿದೆ. ಪರಿಣಾಮ ಜನರಿಗೆ ವಿರಾಮ ಮತ್ತು ವ್ಯಾಯಾಮಕ್ಕೆ ಸಾರ್ವಜನಿಕ ಪ್ರದೇಶದ ಕೊರತೆ ಕಾಡುತ್ತಿದೆ.

    ಮಿಯಾವಾಕಿ ಉದ್ಯಾನವನ: ಮಂಗಳೂರು ನಗರದಲ್ಲಿ 5 ಸೆಂಟ್ಸ್‌ಗಿಂತ ಕಡಿಮೆ ಇರುವ ಖಾಲಿ ಜಾಗಗಳಲ್ಲಿ ಮಿಯಾವಾಕಿ ಮಾದರಿಯ ಉದ್ಯಾನವನ ನಿರ್ಮಿಸಿ ಹಸಿರು ಸೌಂದರ್ಯ ಹೆಚ್ಚಿಸುವುದು ಕಾರ್ಯಯೋಜನೆಯಲ್ಲಿ ಸೇರಿದೆ. ಇದನ್ನು ವಿಶೇಷವಾಗಿ ನಿರ್ಮಿಸಲು ಮುಡಾ ಅಧ್ಯಕ್ಷರು ಚಿಂತನೆ ನಡೆಸಿದ್ದಾರೆ.

    ನಗರದಲ್ಲಿ 60 ವಾರ್ಡ್‌ಗಳಿಗೆ ಪ್ರಸ್ತುತ ಇರುವ ಪ್ರಧಾನ ಉದ್ಯಾನವನ ಕದ್ರಿ ಪಾರ್ಕ್ ಮಾತ್ರ. ಪಿಲಿಕುಳ ನಿಸರ್ಗಧಾಮವು ಉದ್ಯಾನವನ ಪರಿಕಲ್ಪನೆಗಿಂತ ಪ್ರವಾಸಿ ಮತ್ತು ಶೈಕ್ಷಣಿಕ ತಾಣವಾಗಿ ಹೆಚ್ಚು ಗುರುತಿಸಿಕೊಂಡಿದೆ. ಇವುಗಳನ್ನು ಹೊರತುಪಡಿಸಿದರೆ ಪುರಭವನದ ಮುಂಭಾಗದ ಗಾಂಧಿ ಪಾರ್ಕ್, ಬಾವುಟಗುಡ್ಡೆಯ ಟ್ಯಾಗೋರ್ ಪಾರ್ಕ್, ನೆಹರು ಮೈದಾನ ಬಳಿ ಇರುವ ಕಾರ್ಪೋರೇಶನ್ ಬ್ಯಾಂಕ್ ಪ್ರವರ್ತಿತ ಉದ್ಯಾನವನ, ಮಣ್ಣಗುಡ್ಡೆ ಪಾರ್ಕ್, ವೆಲೆನ್ಸಿಯಾ ಪಾರ್ಕ್, ಜೆಪ್ಪು ಮಾರುಕಟ್ಟೆ ಬಳಿಯ ಉದ್ಯಾನ ಸಹಿತ ಕೆಲವು ಕಿರು ಉದ್ಯಾನಗಳಿವೆ. ದೊಡ್ಡ ಗಾತ್ರದ ಉದ್ಯಾನವನಗಳಿಗೆ ಮಂಗಳೂರಿನಲ್ಲಿ ಜಾಗದ ಸಮಸ್ಯೆ ಇದೆ. ಇದಕ್ಕೆ ಪರ್ಯಾಯವಾಗಿ ಅಲ್ಲಲ್ಲಿ ಮಿನಿ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಬಹುದು. ಇಂಥ ಪ್ರಯತ್ನಗಳು ನಗರದಲ್ಲಿ ಕೆಲವು ಕಡೆ ಆರಂಭವಾಗಿವೆ. ಬಿಜೈ ವಿವೇಕಾನಂದ ಮಿನಿ ಪಾರ್ಕ್, ಕರಂಗಲ್ಪಾಡಿಯ ಅರೈಸ್ ಅವೇಕ್ ಮಿನಿ ಪಾರ್ಕ್ ಇದಕ್ಕೆ ಮಾದರಿ.

    ಸಣ್ಣ ವಾಕಿಂಗ್ ಟ್ರಾೃಕ್‌ಗಳನ್ನು ನಿರ್ಮಿಸಿದರೆ ಬೆಳಗ್ಗೆ, ಸಾಯಂಕಾಲ ಸ್ಥಳೀಯರಿಗೆ ಒಂದಷ್ಟು ಹೊತ್ತು ವಿರಾಮ, ವ್ಯಾಯಾಮಗಳಿಗೆ ಉಪಯುಕ್ತವಾಗಲಿದೆ. ಉರ್ವಸ್ಟೋರ್‌ನಲ್ಲಿ ಜಿಪಂ ಕಚೇರಿ ಬಳಿ ಮಿಯಾವಾಕಿ ಪಾರ್ಕ್ ನಿರ್ಮಾಣವಾಗುತ್ತಿದೆ. ಕದ್ರಿ ಸಿಟಿ ಆಸ್ಪತ್ರೆ ಬಳಿ ಮಿನಿ ಪಾರ್ಕ್ ತಲೆ ಎತ್ತಿದೆ.

    ನಾಲ್ಕು ವಾರ್ಡ್‌ಗೊಂದರಂತೆ ಉದ್ಯಾನವನ: ಮಂಗಳೂರು ನಗರ ದಕ್ಷಿಣ ಹಾಗೂ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಮನಪಾ ವ್ಯಾಪ್ತಿಯ 60 ವಾರ್ಡ್‌ಗಳನ್ನು ಪರಿಗಣಿಸಿಕೊಂಡು ಪ್ರಥಮ ಹಂತದಲ್ಲಿ ನಾಲ್ಕು ವಾರ್ಡ್‌ಗೊಂದರಂತೆ ಉದ್ಯಾನವನ ನಿರ್ಮಾಣ ಮಾಡಲು ಮುಡಾ ಕಾರ್ಯಯೋಜನೆ ರೂಪಿಸಿದೆ. ಶಾಸಕ ವೇದವ್ಯಾಸ ಕಾಮತ್ ಮಂಗಳೂರು ದಕ್ಷಿಣ ವ್ಯಾಪ್ತಿಯ ಪಾಲಿಕೆ ವಾರ್ಡ್‌ಗಳಲ್ಲಿ ಮಿನಿ ಹಾಗೂ ಮಧ್ಯಮ ಸಹಿತ 40 ಉದ್ಯಾನವನ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಮುಡಾಕ್ಕೆ ಸಲ್ಲಿಸಿದ್ದಾರೆ. ಇದೇ ರೀತಿ ಮಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯಿಂದಲೂ ಶಾಸಕ ಡಾ.ಭರತ್ ಶೆಟ್ಟಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಮುಡಾ ಅಧ್ಯಕ್ಷ ರವಿಶಂಕರ ಮಿಜಾರ್ ಈ ಪ್ರಸ್ತಾವನೆ ಪರಿಗಣಿಸಿ ಕಾರ್ಯಗತಗೊಳಿಸಲು ಮುಂದಾಗಿದ್ದಾರೆ.

    ಮಂಗಳೂರು ನಗರದಲ್ಲಿ ಹೊಸ ಉದ್ಯಾನವನ ನಿರ್ಮಾಣ ಮಾಡುವ ಉದ್ದೇಶದಿಂದ ಸರ್ವೇ ಕಾರ್ಯ ನಡೆಯುತ್ತಿದ್ದು, ವಾರದೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಮೊದಲ ಹಂತದಲ್ಲಿ 15 ಉದ್ಯಾನವನ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.
    ರವಿಶಂಕರ ಮಿಜಾರ್, ಮುಡಾ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts