More

    ತ್ಯಾಜ್ಯ ವಿಲೇಗೆ ಹೊಸ ಮಾದರಿ?, ಮುಂದಿನ ವರ್ಷ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್ ಗುತ್ತಿಗೆ ಅಂತ್ಯ

    ವೇಣುವಿನೋದ್ ಕೆ.ಎಸ್ ಮಂಗಳೂರು

    ಕಳೆದ ಆರು ವರ್ಷಗಳಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್ ಕಂಪನಿ ತ್ಯಾಜ್ಯ ನಿರ್ವಹಣೆ ಮಾಡುತ್ತಿದ್ದು ಮುಂದಿನ ವರ್ಷ ಅದರ ಗುತ್ತಿಗೆ ಅವಧಿ ಪೂರ್ಣಗೊಳ್ಳುತ್ತದೆ. ಆ ಬಳಿಕ ಘನತ್ಯಾಜ್ಯ ವಿಲೇವಾರಿ ಹೇಗೆ ಎಂಬ ಬಗ್ಗೆ ಮಹಾನಗರ ಪಾಲಿಕೆ ಆಡಳಿತ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ.

    ಘನತ್ಯಾಜ್ಯ ವಿಲೇವಾರಿ ನಿಯಮಾವಳಿಯಲ್ಲಿ ಮುಖ್ಯ ಬದಲಾವಣೆ ತರಲಾಗಿದ್ದು ಘನತ್ಯಾಜ್ಯ ವಿಲೇವಾರಿಯಲ್ಲಿ ಭಾಗಿಯಾಗುವ ಕಾರ್ಮಿಕರನ್ನು ಹೊರಗುತ್ತಿಗೆ ಪಡೆಯುವಂತಿಲ್ಲ ಎಂಬ ಅಂಶ ಸೇರ್ಪಡೆಯಾಗಿದೆ. ಸದ್ಯ ಆ್ಯಂಟನಿ ವೇಸ್ಟ್‌ನಲ್ಲಿ 800ಕ್ಕೂ ಹೆಚ್ಚು ಕಾರ್ಮಿಕರನ್ನು ದುಡಿಸುತ್ತಿದ್ದಾರೆ.

    2014ರಲ್ಲಿ ಮಹಾಬಲ ಮಾರ್ಲ ಮೇಯರ್ ಆಗಿದ್ದಾಗ ಏಳು ವರ್ಷದ ಗುತ್ತಿಗೆಯನ್ನು ಆ್ಯಂಟನಿ ಕಂಪನಿಗೆ ನೀಡಲಾಗಿತ್ತು. ಮುಂಬೈ ಮೂಲದ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್ ಮನೆ ಮನೆಯಿಂದ ಕಸ ಸಂಗ್ರಹವನ್ನು ಮೊದಲ ಬಾರಿ ಮಂಗಳೂರಿನಲ್ಲಿ ನಿರ್ವಹಣೆ ಮಾಡಿದ ಹಿರಿಮೆ ಹೊಂದಿದ್ದರೂ ಹಲವು ವೈಫಲ್ಯಗಳಿಗೂ ಸಾಕ್ಷಿಯಾಯಿತು. ಕಸ ಪ್ರತ್ಯೇಕಿಸಬೇಕು ಎಂಬ ಷರತ್ತಿದ್ದರೂ ಅದನ್ನು ಜಾರಿಗೊಳಿಸಿದ್ದು ಕಳೆದ ವರ್ಷವಷ್ಟೇ. ಆದರೂ ಅದು ಇನ್ನೂ ನಗರ ವ್ಯಾಪ್ತಿಯಲ್ಲಿ ಪೂರ್ತಿ ಯಶಸ್ವಿಯಾಗಿಲ್ಲ.

    ಬದಲಾದ ನಿಯಮ: 2014ರವರೆಗೆ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದಲೇ ಘನತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿತ್ತು. ಪಾಲಿಕೆ ವತಿಯಿಂದ ನಿಗದಿತ ಜಾಗದಲ್ಲಿದ್ದ ಕಸದ ತೊಟ್ಟಿಗೆ ಜನರು ಕಸ ತಂದು ಸುರಿಯುತ್ತಿದ್ದರೆ, ಸಾಧ್ಯವಾದಾಗಲೆಲ್ಲ ಪೌರಕಾರ್ಮಿಕರು ಅದನ್ನು ಸಂಗ್ರಹಿಸಿ ಪಚ್ಚನಾಡಿಯಲ್ಲಿ ಹಾಕುತ್ತಿದ್ದರು. ಕಸ ಪ್ರತ್ಯೇಕಿಸುವಿಕೆ ಆಗಲೂ ಇರಲಿಲ್ಲ.
    ಸದ್ಯ ಕಸ ಪ್ರತ್ಯೇಕಿಸುವಿಕೆ ಕಡ್ಡಾಯ ಮಾಡಿದ್ದರೂ ವಾಸ್ತವದಲ್ಲಿ ವ್ಯವಸ್ಥೆ ವಿಫಲವಾಗಿದೆ. ಘನತ್ಯಾಜ್ಯ ನಿರ್ವಹಣಾ ನಿಯಮಾವಳಿ 2016ಕ್ಕೆ ಮೂರು ವರ್ಷಗಳ ಬಳಿಕ 2019ರಲ್ಲಿ ತಿದ್ದುಪಡಿ ತರಲಾಗಿದ್ದು ಖಾಸಗಿ ಕಾರ್ಮಿಕರನ್ನು ಕಸ ವಿಲೇವಾರಿಗೆ ಬಳಸದೆ ಸ್ಥಳೀಯ ನಗರಾಡಳಿತ ಸಂಸ್ಥೆಗಳ ಪೌರಕಾರ್ಮಿಕರನ್ನೇ ಬಳಸಿಕೊಳ್ಳಬೇಕು ಎಂಬ ಅಂಶವಿದೆ. ಇದುವರೆಗೆ ಇದರಿಂದ ಮನಪಾಗೆ ವಿನಾಯಿತಿ ನೀಡಲಾಗಿತ್ತು. ಆದರೆ ಮುಂದಿನ ವರ್ಷ ಹೀಗೇ ಮುಂದುವರಿಯಲು ಆಗುವುದಿಲ್ಲ. ಲಭ್ಯ ಮಾಹಿತಿ ಪ್ರಕಾರ ಪಾಲಿಕೆ ವತಿಯಿಂದಲೇ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್‌ನ ಕಾರ್ಮಿಕರನ್ನು ಪಡೆದುಕೊಂಡು ಅವರ ವಾಹನ, ಯಂತ್ರಗಳನ್ನಷ್ಟೇ ಗುತ್ತಿಗೆಗೆ ಪಡೆದು ಕಸ ನಿರ್ವಹಣೆ ಮಾಡುವ ಬಗ್ಗೆ ಒಲವಿದೆ. ಆದರೆ ಇನ್ನೂ ಅಂತಿಮ ತೀರ್ಮಾನಕ್ಕೆ ಬರಲಾಗಿಲ್ಲ.

    ರಾಮಕೃಷ್ಣ ಮಠ ಸಲಹೆ: ಮಂಗಳೂರಿನಲ್ಲಿ ಯಶಸ್ವಿಯಾಗಿ ಸ್ವಚ್ಛ ಮಂಗಳೂರು ಅಭಿಯಾನ, ಅಲ್ಲದೆ ಉಪ್ಪಿನಂಗಡಿಯಲ್ಲಿ ಯಶಸ್ವಿಯಾಗಿ ಒಂದು ವರ್ಷದಿಂದ ಘನತ್ಯಾಜ್ಯ ನಿರ್ವಹಣೆ ನಡೆಸುತ್ತಿರುವ ರಾಮಕೃಷ್ಣ ಮಠದವರು ಮನಪಾ ಇದಕ್ಕೆ ಎನ್‌ಜಿಒ ಮಾದರಿ ಅಳವಡಿಸಬಹುದು ಎಂಬ ಸಲಹೆ ನೀಡಿದ್ದಾರೆ. ಮನಪಾ ಹಿಂದೆ ಅವರದ್ದೇ ವ್ಯವಸ್ಥೆಯಲ್ಲಿ ಕಸ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ ಎಂದು ಆ್ಯಂಟನಿ ವೇಸ್ಟ್‌ಗೆ ಹೊರಗುತ್ತಿಗೆ ನೀಡಿತ್ತು. ಈಗ ಮತ್ತೆ ಅವರೇ ಯಶಸ್ವಿಯಾಗಿ ನಿರ್ವಹಿಸಬಹುದೇ? ಅದರ ಬದಲು ಎನ್‌ಜಿಒ ಮಾದರಿಯಲ್ಲಿ ಜನರೇ ಕಸ ನಿರ್ವಹಣೆ ಮಾಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವುದು ಒಳಿತು ಎನ್ನುತ್ತಾರೆ ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ. ನಮ್ಮಲ್ಲಿ ಹಸಿಕಸ ನಿರ್ವಹಣೆಗೆ ಉತ್ತಮ ಮಾದರಿ ಇದೆ. ಉಪ್ಪಿನಂಗಡಿಯಲ್ಲಿ ಯಶಸ್ವಿಯಾಗಿದ್ದೇವೆ, ಪಚ್ಚನಾಡಿಯನ್ನು ಸ್ವಚ್ಛನಾಡಿಯಾಗಿ ಮಾಡುವುದಕ್ಕೆ ಮನಸ್ಸಿದೆ. ಮಾದರಿಯಾಗಿ ಒಂದೆರಡು ವಾರ್ಡ್ ಆದರೂ ಮಾಡಿ ನೋಡಬಹುದು, ಯಾವುದಕ್ಕೂ ನಗರ ಆಡಳಿತ ಮುಂದಾಗಬೇಕು ಎನ್ನುತ್ತಾರೆ.

    ಮುಂದಿನ ವರ್ಷಕ್ಕೆ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್ ಗುತ್ತಿಗೆ ಮುಗಿಯುತ್ತದೆ. ಆ ಬಳಿಕ ಪೌರಕಾರ್ಮಿಕರಿಂದಲೇ ಘನತ್ಯಾಜ್ಯ ವಿಲೇವಾರಿ ಆಗಬೇಕೆನ್ನುವುದು ನಿಯಮ. ಆದರೆ ಮುಂದಿನ ವ್ಯವಸ್ಥೆ ಹೇಗೆ ಎಂಬುದು ಇನ್ನೂ ತೀರ್ಮಾನ ಆಗಿಲ್ಲ. ಚರ್ಚೆಯ ಹಂತದಲ್ಲಿದೆಯಷ್ಟೇ.

    ಅಕ್ಷಿ ಶ್ರೀಧರ್
    ಮನಪಾ ಆಯುಕ್ತರು

    ಈಗಿನಷ್ಟೇ ವೆಚ್ಚದಲ್ಲಿ ಇದಕ್ಕಿಂತ ಉತ್ತಮವಾಗಿ ಕಸ ನಿರ್ವಹಣೆ ಮಾಡುವ ಮಾದರಿ ನಮ್ಮಲ್ಲಿದೆ. ಪ್ರಾಯೋಗಿಕವಾಗಿ ಕೆಲವು ವಾರ್ಡ್‌ಗಳಲ್ಲಾದರೂ ಮಾಡಬಹುದು ಎಂದು ಮನಪಾ ಆಡಳಿತ, ಶಾಸಕರೊಂದಿಗೆ ಹಿಂದೆಯೇ ತಿಳಿಸಿದ್ದೇವೆ. ಈ ಬಗ್ಗೆ ಮನಪಾ ಆಡಳಿತ ತೀರ್ಮಾನ ತೆಗೆದುಕೊಳ್ಳಬೇಕಿದೆ.

    ಸ್ವಾಮಿ ಏಕಗಮ್ಯಾನಂದ
    ರಾಮಕೃಷ್ಣ ಮಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts