More

    ಬೀಚ್ ಟೂರಿಸಂಗೆ ನೂತನ ನಕ್ಷೆ, ಮುಂದಿನ ತಿಂಗಳು ಆಗಮನ ನಿರೀಕ್ಷೆ

    ವೇಣುವಿನೋದ್ ಕೆ.ಎಸ್.ಮಂಗಳೂರು

    ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ದಿಶೆ ನೀಡಬಹುದಾದ ಸಿಆರ್‌ಝಡ್ ನೂತನ ಅಧಿಸೂಚನೆ ಆಗಮಿಸಿ ಒಂದು ವರ್ಷದ ಬಳಿಕ ನೂತನ ನಕ್ಷೆಯೂ ಅಂತಿಮಗೊಳ್ಳುವ ಸಾಧ್ಯತೆ ಇದೆ.

    ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ಅಧಿಸೂಚನೆ-2019ರ ಅನುಷ್ಠಾನ ಆಗಬೇಕಾದರೆ ಬೇಕಾಗಿರುವುದು ಹೊಸ ಕರಡು ನಕ್ಷೆ. ನಕ್ಷೆ ಬರುವವರೆಗೆ ಹಳೆಯ 2011ರ ಅಧಿಸೂಚನೆಯ ನಿಯಮಾವಳಿಗಳೇ ಚಾಲ್ತಿಯಲ್ಲಿರುತ್ತವೆ.

    ಗೋವಾ ಮಾದರಿಯಲ್ಲಿ ನಮ್ಮಲ್ಲೂ ಪ್ರವಾಸೋದ್ಯಮ ಅಭಿವೃದ್ಧಿ ಆಗಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇದೆ, ಅದಕ್ಕೆ ಪೂರಕವಾಗಿ ಸಿಆರ್‌ಝಡ್ ಅಧಿಸೂಚನೆಯಲ್ಲಿ ಹಲವು ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ಆಗಬಹುದಾದ ಬೀಚ್‌ಗಳಲ್ಲಿ ಕೆಲವೊಂದು ರಚನೆಗಳನ್ನು ನಿರ್ಮಿಸಲು ಅನುಮತಿ ಇದೆ.

    ಕೋವಿಡ್ ಬಳಿಕ ಪ್ರವಾಸೋದ್ಯಮ ಅಭಿವೃದ್ಧಿಗೆ ಬಹಳಷ್ಟು ಉತ್ಸುಕತೆ ಕಂಡುಬರುತ್ತಿದ್ದರೂ ಹೊಸ ನಕ್ಷೆ ಬಾರದ ಕಾರಣ ಹಿನ್ನಡೆಯಾಗಿದೆ. 2019ರ ಜನವರಿಯಲ್ಲಿ ಕೇಂದ್ರ ಸರ್ಕಾರ ಸಿಆರ್‌ಝಡ್ ಅಧಿಸೂಚನೆ-2019 ಪ್ರಕಟಿಸಿತ್ತು. ಕೋವಿಡ್ ಪರಿಣಾಮ, ನಿಯಮಾವಳಿ ಜಾರಿಗೆ ಅಗತ್ಯ ನಕ್ಷೆ ಜಾರಿ ಆಗಿರಲಿಲ್ಲ. ಇನ್ನೊಂದು ತಿಂಗಳಲ್ಲಿ ಅಂತಿಮಗೊಳ್ಳುವ ನಿರೀಕ್ಷೆ ಇದೆ.

    ಚೆನ್ನೈಯ ಸುಸ್ಥಿರ ಕರಾವಳಿ ನಿರ್ವಹಣೆಯ ರಾಷ್ಟ್ರೀಯ ಸಂಸ್ಥೆ(ಎನ್‌ಸಿಎಸ್‌ಸಿಎಂ)ಸಿಆರ್‌ಝಡ್ ಯೋಜನೆ ಹಾಗೂ ನಕ್ಷೆ ತಯಾರಿಗೆ ಅಧಿಕೃತ ಏಜೆನ್ಸಿ. ಸದ್ಯ ಬಿಟ್ಟು ಹೋಗಿರುವ ಕೆಲವೊಂದು ಗ್ರಾಮೀಣ ನಕ್ಷೆಗಳನ್ನು ಅವರಿಗೆ ಒದಗಿಸುವ ಕೆಲಸ ಆಗುತ್ತಿದೆ. ಇನ್ನೊಂದು ತಿಂಗಳೊಳಗೆ ಅಂತಿಮ ಕರಡು ನಕ್ಷೆ ಬರಲಿದೆ ಎಂದು ಮಂಗಳೂರಿನ ಸಿಆರ್‌ಝಡ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

    ಹೊಸ ನಕ್ಷೆಯಿಂದ ಲಾಭವೇನು?: 2019ರ ಹೊಸ ಅಧಿಸೂಚನೆ ಪ್ರಕಾರ ನಕ್ಷೆ ರಚನೆಯಾದರೆ ಕರಾವಳಿ ಭಾಗದ ಪ್ರವಾಸೋದ್ಯಮ ಹಾಗೂ ಮೀನುಗಾರರಿಗೆ ನೆರವಾಗಬಹುದು. ಪ್ರಸ್ತುತ ಕಡಲತೀರಗಳಲ್ಲಿ ಯಾವುದೇ ರಚನೆಗೆ ಅವಕಾಶವಿಲ್ಲ, ಇದರಿಂದಾಗಿ ಪ್ರವಾಸೋದ್ಯಮಕ್ಕೆ ಕಾರ್ಯಕ್ರಮ ರೂಪಿಸಲು ಸಾಧ್ಯವಾಗುತ್ತಿಲ್ಲ ಎಂದು ಪದೇಪದೆ ರಾಜ್ಯ ಸರ್ಕಾರದಿಂದ ಆಕ್ಷೇಪ ವ್ಯಕ್ತವಾಗುತ್ತಿತ್ತು. ಈ ನಕ್ಷೆ ಬರುತ್ತಿದ್ದಂತೆಯೇ ಬೀಚ್‌ಗಳಲ್ಲಿ ಗೋವಾ ಮಾದರಿಯ ಕೆಲ ರಚನೆಗಳಿಗೆ ಅವಕಾಶ ಸಿಗಲಿದೆ. ಈಗಾಗಲೇ ಸೋಮೇಶ್ವರ, ಪಣಂಬೂರು, ಇಡ್ಯಾ, ತಣ್ಣೀರು ಬಾವಿ, ಸುರತ್ಕಲ್, ಸಸಿಹಿತ್ಲು, ಬೆಂಗ್ರೆ ಸೇರಿದಂತೆ ಜಿಲ್ಲೆಯ 10 ಬೀಚ್‌ಗಳನ್ನು ನೋಟಿಫೈ ಮಾಡಿ ಕಳುಹಿಸಲಾಗಿದೆ, ಅಲ್ಲಿ ಅಭಿವೃದ್ಧಿಗೆ ಅವಕಾಶ ಸಿಗಲಿದೆ.

    ಮೀನುಗಾರರ ಮನೆ ನಿರ್ಮಾಣಕ್ಕೂ ಅನುಮತಿ: 2019ರ ಹೊಸ ಅಧಿಸೂಚನೆಯಲ್ಲಿ, ಮೀನುಗಾರರು ಮನೆ ನಿರ್ಮಿಸಲು ಅನುಮತಿ ಸಿಗಲಿದೆ. ಸದ್ಯ ನದಿಯಿಂದ 100 ಮೀಟರ್ ದೂರದವರೆಗೆ ಸಿಆರ್‌ಝಡ್ ನಿರ್ಬಂಧವಿದ್ದರೆ, ಹೊಸ ಅಧಿಸೂಚನೆ ಪ್ರಕಾರ 50 ಮೀಟರ್‌ವರೆಗೆ ಮಾತ್ರ ನಿರ್ಬಂಧ ಇರಲಿದೆ. 1991ರ ಸಿಆರ್‌ಝಡ್ ಅಧಿಸೂಚನೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ 2006ರಲ್ಲಿ ಕರಾವಳಿ ನಿರ್ವಹಣಾ ವಲಯ(ಸಿಎಂಝಡ್) ಕರಡು ಅಧಿಸೂಚನೆ ಹೊರಡಿಸಿತ್ತು. ಇದಕ್ಕೆ ವಿರೋಧವಿದ್ದ ಕಾರಣ, ಹಿಂಪಡೆದು 2011ರಲ್ಲಿ ಮತ್ತೆ ಅನುಷ್ಠಾನಕ್ಕೆ ತರಲಾಯಿತು. ಇದರ ಆಧಾರದ ಮೇಲೆ 2018ರ ಜುಲೈಯಲ್ಲಿ ಹೊಸ ಯೋಜನೆ ರೂಪಿಸಲಾಯಿತು. 2019ರ ಡಿಸೆಂಬರ್‌ನಲ್ಲಿ ಯೋಜನೆಗೆ ಅನುಮೋದನೆ ಲಭಿಸಿತು.

    ಕರಡು ಮೊದಲು: ನಕ್ಷೆಯ ಕರಡು ಸಿದ್ಧವಾದ ಬಳಿಕ ಮೂರು ಜಿಲ್ಲೆಗಳ ಸಾರ್ವಜನಿಕರಿಂದ ಆಕ್ಷೇಪಣೆ ಪಡೆಯಲಾಗುತ್ತದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಅಹವಾಲು ಸಭೆ ನಡೆಯಲಿದೆ. ಅಹವಾಲು, ಆಕ್ಷೇಪಣೆಗಳನ್ನು ದಾಖಲಿಸಿದ ಬಳಿಕ ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ವರದಿ ಕಳುಹಿಸಲಿದೆ. ರಾಜ್ಯ ಸರ್ಕಾರ ಪರಿಶೀಲನೆ ನಡೆಸಿ, ಕೇಂದ್ರಕ್ಕೆ ಕಳುಹಿಸುತ್ತದೆ. ಬಳಿಕ ಕೇಂದ್ರ ಅನುಮೋದನೆ ನೀಡಲಿದೆ.

    ಹೇಗಿರಲಿದೆ ನಕ್ಷೆ?: ಜಿಐಎಸ್ ಸಾಫ್ಟ್‌ವೇರ್ ಬಳಸಿಕೊಂಡು ಎನ್‌ಸಿಎಸ್‌ಸಿಎಂ ಸಂಸ್ಥೆ ನಕ್ಷೆ ರೂಪಿಸುತ್ತದೆ. 2011ರ ನಕ್ಷೆಯಲ್ಲಿ ಬದಲಾವಣೆ ಮಾಡಿ, ಈಗಿರುವ ವಿಲೇಜ್ ಕೆಡಸ್ಟ್ರಲ್ ನಕ್ಷೆಯ ಮೇಲೆ ಹೊಸ ನಕ್ಷೆಯನ್ನು ಹೊಂದಿಸಿ, ನೂತನ ಸಿಆರ್‌ಝಡ್ ನಕ್ಷೆ ರೂಪಿಸಲಾಗುತ್ತದೆ.

    ಸದ್ಯ ನಮಗೆ ಕರಡು ಪೂರ್ವ ನಕ್ಷೆ ಬಂದಿದೆ. ಯಾವುದಾದರೂ ದೊಡ್ಡ ತಪ್ಪುಗಳಿದ್ದರೆ ಪರಿಶೀಲಿಸಬೇಕಿದೆ. ಬಳಿಕ 15 ದಿನಗಳಲ್ಲಿ ಕರಡು ನಕ್ಷೆ ಬರಲಿದೆ. ಅದರ ಕುರಿತು ಜನರು ಅಹವಾಲು ಹೇಳಲು ಅವಕಾಶ ಸಿಗಲಿದೆ.

    ಡಾ.ವೈ.ಕೆ.ದಿನೇಶ್ ಕುಮಾರ್
    ಪ್ರಾದೇಶಿಕ ನಿರ್ದೇಶಕರು, ದ.ಕ. ಪರಿಸರ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts