More

    ನಾರಾಯಣಗುರು ವೃತ್ತಕ್ಕೆ ಶೀಘ್ರ ಹೊಸ ಲುಕ್

    ಹರೀಶ ಮೋಟುಕಾನ ಮಂಗಳೂರು
    ನಗರದ ವೃತ್ತಗಳಿಗೆ ಹೊಸ ಸ್ವರೂಪ ನೀಡಲು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮುಂದಾಗಿದ್ದು, ಮೊದಲನೇ ಹಂತದಲ್ಲಿ ಲೇಡಿಹಿಲ್‌ನಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ 40 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿದೆ.

    ಕೆಲ ತಿಂಗಳ ಹಿಂದೆಯಷ್ಟೇ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡಲಾಗಿದ್ದು, ಜು.24ರಂದು ಗುದ್ದಲಿ ಪೂಜೆ ನಡೆದು ವೃತ್ತದ ಅಭಿವೃದ್ಧಿ ಕೆಲಸ ಆರಂಭಗೊಳ್ಳಲಿದೆ. ಈ ವೃತ್ತದಲ್ಲಿ ನಾರಾಯಣ ಗುರುಗಳ 6 ಅಡಿ ಎತ್ತರದ ಕಂಚಿನ ಪ್ರತಿಮೆ ಹಾಗೂ ಸುತ್ತಲೂ ಸುಂದರ ಮಂಟಪ ನಿರ್ಮಾಣ ಮಾಡಲಾಗುತ್ತದೆ.

    ಮತ್ತಷ್ಟು ಆಕರ್ಷಣೀಯವಾಗಿಸಲು ವೃತ್ತದೊಳಗೆ ಪುಟ್ಟ ಗಾರ್ಡನ್ ನಿರ್ಮಾಣ ಮಾಡಲಾಗುತ್ತದೆ. ಬಳಿಕ ಅಲ್ಲಿ ನೀರಿನ ಚಿಲುಮೆ ನಿರ್ಮಿಸಿ, ಲೇಸರ್ ಬೆಳಕಿನ ಮೂಲಕ ಚಿತ್ತಾಕರ್ಷಕಗೊಳಿಸಲಾಗುತ್ತದೆ. ಇದಕ್ಕೆಂದು ನೀರಿನ ವ್ಯವಸ್ಥೆ ಮಾಡಬೇಕಾಗಿದೆ. ಈ ಎಲ್ಲ ವ್ಯವಸ್ಥೆಗಳನ್ನು ಮುಡಾವೇ ನಿರ್ವಹಣೆ ಮಾಡಲಿದೆ. ಕುದ್ರೋಳಿ ಶೀ ಗೋಕರ್ಣನಾಥ ಕ್ಷೇತ್ರದಲ್ಲಿ ಸದ್ಯದಲ್ಲೇ ನಡೆಯಲಿರುವ ನವರಾತ್ರಿ ಉತ್ಸವ ಮಂಗಳೂರ ದಸಾರದ ವೇಳೆ ಈ ವೃತ್ತ ಮತ್ತಷ್ಟು ಆಕರ್ಷಣೀಯವಾಗಿ ಕಾಣುವಂತೆ ಮಾಡುವುದು ಮುಡಾದ ಕನಸಾಗಿದೆ.

    2.5 ಕಿ.ಮೀ. ಮಾದರಿ ರಸ್ತೆ: ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಅಭಿವೃದ್ಧಿಯ ಜತೆಗೆ ಈ ಪ್ರದೇಶದಲ್ಲಿನ ರಸ್ತೆಗೂ ಹೊಸ ಮೆರುಗು ನೀಡಲು ಮುಡಾ ಮುಂದಾಗಿದೆ. ಸ್ಮಾರ್ಟ್‌ಸಿಟಿಯಾಗಿ ರೂಪುಗೊಳ್ಳುತ್ತಿರುವ ಮಂಗಳೂರು ನಗರದ ಪ್ರಮುಖ ರಸ್ತೆ ಎಂದೆನಿಸಿದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ಕೊಟ್ಟಾರ ಚೌಕಿ ನಡುವಣ ರಸ್ತೆಯನ್ನು ಮಾದರಿ ರಸ್ತೆಯನ್ನಾಗಿ ನಿರ್ಮಿಸಲು ಉದ್ದೇಶಿಸಲಾಗಿದೆ. ಸುಮಾರು 2.5 ಕಿ.ಮೀ. ರಸ್ತೆ ಅಭಿವೃದ್ಧಿ ಹೊಂದಲಿದ್ದು, ಸದ್ಯದ ಯೋಜನೆಯ ಪ್ರಕಾರ ಈ ರಸ್ತೆಯಲ್ಲಿ ರಸ್ತೆಯ ಡಿವೈಡರ್‌ಗಳಲ್ಲಿ ಗಿಡ ನೆಡಲು ಆದ್ಯತೆ ನೀಡಲಾಗುತ್ತದೆ. ರಸ್ತೆಯ ಎರಡೂ ಬದಿ ಹಸುರೀಕರಣಕ್ಕೆ ಯೋಜನೆ ರೂಪಿಸಲಾಗಿದೆ. ಕುಳಿತುಕೊಳ್ಳಲು ಬೆಂಚುಗಳನ್ನು ಅಳವಡಿಸಲಾಗುವುದು. ಹಂತ ಹಂತವಾಗಿ ರಸ್ತೆ ಅಭಿವೃದ್ಧಿ ನಡೆಯಲಿದೆ

    ಲೇಡಿಹಿಲ್ ಶಾಲೆ ಬಳಿಯ ನಾರಾಯಣಗುರು ವೃತ್ತ ಅಭಿವೃದ್ಧಿಗೆ ಭೂಮಿಪೂಜೆಗೆ ಜು. 24ರಂದು ಬೆಳಗ್ಗೆ 10 ಗಂಟೆಗೆ ಚಾಲನೆ ದೊರೆಯಲಿದ್ದು, 40 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ. ಈಗಾಗಲೇ ವಿನ್ಯಾಸ, ಪ್ರತಿಮೆ ಪರಿಕಲ್ಪನೆ, ಮಂಟಪ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯೋಜನೆಯ ಪೂರ್ವ ಸಿದ್ಧತೆಗಳು ನಡೆದಿದ್ದು, ದಸರಾ ಸಂದರ್ಭ ಲೋಕಾರ್ಪಣೆಗೆ ಉದ್ದೇಶಿಸಲಾಗಿದೆ.
    -ರವಿಶಂಕರ ಮಿಜಾರ್ ಮುಡಾ ನಿರ್ಗಮಿತ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts