More

    ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಎರಡು ವಸತಿ ಬಡಾವಣೆ ಅಪೂರ್ಣ

    ಶ್ರವಣ್‌ಕುಮಾರ್ ನಾಳ ಮಂಗಳೂರು

    ನಿವೇಶನ ರಹಿತರ ಬಹು ನಿರೀಕ್ಷಿತ ಮುಡಾ ವಸತಿ ಬಡಾವಣೆ ಯೋಜನೆಗೆ ಗ್ರಹಣ ಹಿಡಿದಿದೆ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಹತ್ತರ ಯೋಜನೆಗಳಲ್ಲೊಂದಾದ ಮಂಗಳ ವಸತಿ ಬಡಾವಣೆ ಯೋಜನೆ ಸದ್ಯಕ್ಕೆ ಕುಂಟುತ್ತಾ ಸಾಗಿದ್ದು, ನಿವೇಶನದ ನಿರೀಕ್ಷೆಯಿಟ್ಟು ಕಾಯುತ್ತಿರುವ ಫಲಾನುಭವಿಗಳಿಗೆ ನಿರಾಶೆಯಾಗಿದೆ.

    ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೊಣಾಜೆ, ಕುಂಜತ್ತಬೈಲ್ ಹಾಗೂ ಚೇಳ್ಯಾರು ಗ್ರಾಮದಲ್ಲಿ ಹೊಸ ಲೇಔಟ್ ಅಭಿವೃದ್ಧಿ ಯೋಜನೆಗೆ ನಿರ್ಧರಿಸಲಾಗಿತ್ತು. ಆದರೆ ಮೂರು ಯೋಜನೆಗಳು ಬೇರೆ ಬೇರೆ ಹಂತದಲ್ಲಿ ಕುಂಟುತ್ತಾ ಸಾಗುತ್ತಿದೆ. ಲಭ್ಯ ಮಾಹಿತಿ ಪ್ರಕಾರ ಮುಡಾ ಅಧಿಕಾರಿಗಳ ನಿರ್ಲಕ್ಷೃದಿಂದ ಮಂಗಳ ವಸತಿ ಬಡಾವಣೆ ಯೋಜನೆ ನಿಧಾನಗತಿಯಲ್ಲೇ ಸಾಗುತ್ತಿದೆ ಎಂಬ ಆರೋಪ ಎದುರಾಗಿದೆ.

    ಟೆಂಡರ್ ಪೂರ್ಣ: 2 ವರ್ಷದ ಹಿಂದೆ ಕುಂಜತ್ತಬೈಲ್ ಗ್ರಾಮದ 17.49 ಎಕರೆ ಜಮೀನಿನಲ್ಲಿ ಬಡಾವಣೆ ಅಭಿವೃದ್ಧಿಗೆ ಮುಡಾ ಟೆಂಡರ್ ಕಾರ್ಯ ಪೂರ್ಣಗೊಳಿಸಿದೆ, ಆದರೆ ಇಲ್ಲಿಯವರೆಗೆ ಇಲ್ಲಿ ಆಗಿರುವ ಕಾಮಗಾರಿ ಶೇ.25ರಷ್ಟು ಮಾತ್ರ. ತಾಂತ್ರಿಕ ಕಾರಣದಿಂದ ನಿಧಾನಗತಿಯಲ್ಲಿ ಯೋಜನೆ ನಡೆಯುತ್ತಿದ್ದು, ಪೂರ್ಣ ಕೆಲಸ ಪೂರ್ಣವಾಗಲು ಇನ್ನೂ 1 ವರ್ಷದ ಆವಶ್ಯಕತೆ ಇದೆ ಎಂಬುದು ಅಧಿಕಾರಿಗಳ ವಾದ. ಹೀಗಾಗಿ ಇಲ್ಲಿನ ಹೊಸ ಬಡಾವಣೆ ಮುಂದಿನ ವರ್ಷ ಲಭ್ಯವಾಗಲಿದೆ, ಒಂದು ವೇಳೆ ಈ ಬಡಾವಣೆ ಪೂರ್ಣವಾದರೆ 140 ನಿವೇಶನಗಳು ಲಭ್ಯ.

    ಚೇಳ್ಯಾರ್‌ನಲ್ಲಿ ಅಂತಿಮವಾಗದ ಟೆಂಡರ್!: ಚೇಳ್ಯಾರ್ ಗ್ರಾಮದಲ್ಲಿ 45 ಎಕರೆ ಜಮೀನಿನಲ್ಲಿ ಬಡಾವಣೆಗೆ ವಿಸ್ತೃತ ಯೋಜನಾ ವರದಿ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ ಅದು ಒಪ್ಪಿಗೆ ಪಡೆಯದೆ ಮರು ಟೆಂಡರ್‌ಗೆ ಸರ್ಕಾರ ಸೂಚಿಸಿದೆ. ಹೀಗಾಗಿ ಸರ್ಕಾರದ ಅನುಮೋದನೆಗಾಗಿ ಚೇಳ್ಯಾರ್ ಗ್ರಾಮದ ಬಡಾವಣೆ ಅಭಿವೃದ್ಧಿ ಕಾಯುತ್ತಿದೆ. ಯೋಜನೆ ಸಫಲವಾದರೆ ಚೇಳ್ಯಾರ್‌ನಲ್ಲಿ 709 ನಿವೇಶನಗಳು ದೊರೆಯಲಿದೆ.

    ಕೊಣಾಜೆಯಲ್ಲಿ ಬಹುತೇಕ ಪೂರ್ಣ: ಕೊಣಾಜೆಯ 13.11ಎಕರೆ ಜಮೀನಿನಲ್ಲಿ 10.21 ಕೋ.ರೂ ಬಡಾವಣೆ ಅಭಿವೃದ್ಧಿಗೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗಿತ್ತು. ಈ ಬಡಾವಣೆಯಲ್ಲಿ 135 ನಿವೇಶನಗಳಿವೆ. ಕರೊನಾ ಕಾರಣದಿಂದ ಕಾಮಗಾರಿ ಪೂರ್ಣವಾಗಿ ನಡೆಸಲು ಕಳೆದ 2 ವರ್ಷದಿಂದ ಸಾಧ್ಯವಾಗಿರಲಿಲ್ಲ. ಸದ್ಯ, ಶೇ.80ರಷ್ಟು ಕಾಮಗಾರಿ ಪೂರ್ಣವಾಗಿದ್ದು, 3 ತಿಂಗಳೊಳಗೆ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳುವ ಬಗ್ಗೆ ಮುಡಾ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

    ಮುಡಾದಿಂದ ವಸತಿ ಬಡಾವಣೆ ಯೋಜನೆಯನ್ನು ಕೆಲವು ಸಮಯದ ಹಿಂದೆಯೇ ಆರಂಭಿಸಿತ್ತು. ಕೊಣಾಜೆ ಹಾಗೂ ಕುಂಜತ್ತಬೈಲ್ ಬಡಾವಣೆ ಕಾಮಗಾರಿಗೆ ಚಾಲನೆಯೂ ದೊರಕಿತ್ತು. ರಸ್ತೆ, ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಸಹಿತ ಎಲ್ಲ ವಿಧದ ಮೂಲಸೌಕರ್ಯ ಅಭಿವೃದ್ಧಿಗೆ ಇಲ್ಲಿ ಗಮನಹರಿಸಲಾಗುತ್ತದೆ. ನಿಧಾನ ಹಂತದಲ್ಲಿರುವ ಮೂರು ಯೋಜನೆಗೆ ವೇಗ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
    – ವೇದವ್ಯಾಸ ಕಾಮತ್, ಶಾಸಕ

    ಮುಡಾ ವತಿಯಿಂದ ಮೂರು ಕಡೆಗಳಲ್ಲಿ ಹೊಸ ಲೇಔಟ್ ಅಭಿವೃದ್ಧಿಗೆ ಉದ್ದೇಶಿಸಲಾಗಿದೆ. ಇದರಲ್ಲಿ ಕೊಣಾಜೆ ಬಡಾವಣೆ ಕಾಮಗಾರಿ ಬಹುತೇಕ ಪೂರ್ಣವಾಗಿದೆ. ಕುಂಜತ್ತಬೈಲ್ ಬಡಾವಣೆ ನಿರ್ಮಾಣ ಯೋಜನೆಯನ್ನು ತುರ್ತಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.
    – ಡಾ.ಭಾಸ್ಕರ್ ಎನ್. ಆಯುಕ್ತರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts