More

    ಶೀಘ್ರ ಹೊಸ ಆರೋಗ್ಯ ನೀತಿ – 24X7 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ

    ಬೆಂಗಳೂರು : ದಿನದ 24 ತಾಸು ಕಾರ್ಯನಿರ್ವಹಿಸುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿ ಎಲ್ಲ ಹಂತದ ಆರೋಗ್ಯ ವ್ಯವಸ್ಥೆಗೆ ಕಾಯಕಲ್ಪ ನೀಡುವುದಕ್ಕಾಗಿ ಶೀಘ್ರವೇ ಹೊಸ ಆರೋಗ್ಯ ನೀತಿ ರೂಪಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪ್ರಕಟಿಸಿದರು.

    ವಿಶ್ವ ಬ್ಯಾಂಕ್ ನೆರವಿಗೆ ಚಿಂತನೆ

    ಆರೋಗ್ಯ ವ್ಯವಸ್ಥೆಗೆ ಕಾಯಕಲ್ಪ ಮತ್ತು ಸಮಗ್ರ ಬದಲಾವಣೆಗಾಗಿ ವಿಶ್ವ ಬ್ಯಾಂಕ್​ನಿಂದ ನೆರವು ಪಡೆಯಬೇಕು ಎಂದು ಯೋಚಿಸಿದ್ದು, ಅಧಿಕಾರಿಗಳು ಮತ್ತು ತಜ್ಞರೊಂದಿಗೆ ರ್ಚಚಿಸಿ ಪ್ರಸ್ತಾವನೆ ಸಿದ್ಧಪಡಿಸಿ ಮುಖ್ಯಮಂತ್ರಿ ಮುಂದಿಡಲಾಗುವುದು. ಪ್ರಾಥಮಿಕ ಆರೋಗ್ಯ ಕೇಂದ್ರಗಳು ದಿನದ 24 ತಾಸು ಕಾರ್ಯನಿರ್ವಹಣೆಗೆ ಪೂರಕವಾಗಿ ಸುಸಜ್ಜಿತ ಕಟ್ಟಡ, ಅಗತ್ಯ ಸವಲತ್ತು ಒದಗಿಸುವುದು. ಸಮುದಾಯ ಆರೋಗ್ಯ ಕೇಂದ್ರಗಳ ಉನ್ನತೀಕರಣ ಇತ್ಯಾದಿಗಳಿಗೆ ವಿಶ್ವ ಬ್ಯಾಂಕ್ ನೆರವು ಬಳಸಿಕೊಳ್ಳುವ ಉದ್ದೇಶವಿದೆ ಎಂದು ಡಾ.ಕೆ.ಸುಧಾಕರ್ ತಿಳಿಸಿದರು.

    ವಿಧಾನಸೌಧದಲ್ಲಿ ಗುರುವಾರ ಕರೆದಿದ್ದ ವೈದ್ಯಕೀಯ ಹಿನ್ನೆಲೆಯ ಶಾಸಕರು, ಆರೋಗ್ಯ ಇಲಾಖೆ ಮಾಜಿ ಸಚಿವರ ಜತೆಗಿನ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಿಬ್ಬಂದಿ ವೇತನ ನಿಗದಿ, ಪರಿಷ್ಕರಣೆ, ಬಡ್ತಿ, ಇನ್ಸೆಂಟಿವ್ ಮುಂತಾದ ಸವಲತ್ತುಗಳನ್ನು ನೀಡುವ ಅಂಶಗಳನ್ನೂ ಹೊಸ ನೀತಿ ಹೊಂದಿರಲಿದೆ. ಗುಣಮಟ್ಟದ ಆರೋಗ್ಯ ಸೇವೆ, ನ್ಯೂನ್ಯತೆಗಳ ನಿವಾರಣೆ, ಯೋಜನೆಗಳ ಸಮರ್ಪಕ ಅನುಷ್ಠಾನ, ಬಾಕಿ ಕಾರ್ಯಕ್ರಮಗಳ ಕುರಿತು ರ್ಚಚಿಸಲಾಗಿದ್ದು, ಸಿಎಂ ಬಿ.ಎಸ್.ಯಡಿಯೂರಪ್ಪ ಆಶಯದಂತೆ ಹೊಸ ಪರಂಪರೆ ಪ್ರಾರಂಭಿಸಲಾಗಿದೆ ಎಂದರು.

    ವಿಜನ್ ಟೀಮ್ ರಚನೆ: ಖ್ಯಾತ ತಜ್ಞರು ಮತ್ತು ಶಾಸಕರನ್ನು ಒಳಗೊಂಡ ವಿಜನ್ ಟೀಮ್ ರಚಿಸಲು ನಿರ್ಧರಿಸಲಾಗಿದೆ. ಈ ಕ್ಷೇತ್ರದಲ್ಲಿ ಕೈಗೊಂಡ ಕ್ರಮಗಳ ಪರಾಮರ್ಶೆ, ಪಾರದರ್ಶಕತೆ, ಲೋಪ-ದೋಷಗಳಿದ್ದರೆ ನಿವಾರಣೆ ಹಾಗೂ ತ್ವರಿತ ಅನುಷ್ಠಾನದ ಮೇಲೆ ಈ ತಂಡ ನಿಗಾವಹಿಸಲಿದೆ. ಯೋಜನೆ ಮತ್ತು ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸಲಹೆ-ಸೂಚನೆಗಳನ್ನು ನೀಡಲಿದ್ದು, ಪ್ರತಿ 3 ತಿಂಗಳಿಗೊಮ್ಮೆ ಸಭೆ ಏರ್ಪಡಿಸಲು ತೀರ್ವನಿಸಲಾಗಿದೆ ಎಂದು ಹೇಳಿದರು.

    ಮೈಮರೆತರೆ ಕರೊನಾ 2ನೇ ಅಲೆ

    ಕಳೆದ 15 ದಿನಗಳಿಂದ ರಾಜ್ಯದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ತಗ್ಗಿ, ಚೇತರಿಕೆ ಪ್ರಮಾಣ ಹೆಚ್ಚಿದೆ. ಅದರೊಂದಿಗೆ ಮುನ್ನೆಚ್ಚರಿಕೆ ನಿಯಮಗಳ ಪಾಲನೆಯಲ್ಲಿ ಜನರ ನಿಷ್ಕಾಳಜಿ ಕಂಡುಬರುತ್ತಿದೆ. ಈ ವಿಷಯದಲ್ಲಿ ಮೈರತರೆ ಕರೊನಾ 2ನೇ ಅಪ್ಪಳಿಸೀತು ಜೋಕೆ ಎಂದು ಡಾ.ಕೆ.ಸುಧಾಕರ್ ಎಚ್ಚರಿಕೆ ಮಿಶ್ರಿತ ಸಲಹೆ ನೀಡಿದರು. ಕರೊನಾ ಸಂಪೂರ್ಣ ನಿಯಂತ್ರಣಕ್ಕೆ ಬರುವ ತನಕ ಜನ ಸುರಕ್ಷತಾ ಕ್ರಮ ಅನುಸರಿಸಿ ಸಹಕರಿಸಬೇಕು ಎಂದು ಕೋರಿದ ಅವರು, ಚೇತರಿಕೆ ಪ್ರಮಾಣ ರಾಜ್ಯದಲ್ಲಿ ಶೇ.95.05ರಷ್ಟಿದ್ದರೆ, ರಾಷ್ಟ್ರೀಯ ಸರಾಸರಿ ಶೇ.92.87 ಇದೆ. ಬೆಂಗಳೂರಿನಲ್ಲಿ ಮರಣ ಪ್ರಮಾಣ ಶೇ.0.99ಕ್ಕೆ ಇಳಿಕಯಾಗಿದೆ ಎಂದು ವಿವರಿಸಿದರು.

    ರಾಜ್ಯದಲ್ಲಿ ಸದ್ಯಕ್ಕೆ 2,300 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. 24 ತಾಸು ಕಾರ್ಯನಿರ್ವಹಣೆಗೆ ವೈದ್ಯರು, ಸಿಬ್ಬಂದಿ, ಮೂಲಸವಲತ್ತುಗಳು ಅಗತ್ಯವಿದೆ. ನಿಯಮಾವಳಿ ಪ್ರಕಾರ 30 ಸಾವಿರ ಜನರಿಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಇರಬೇಕಾಗಿದ್ದು, ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಈ ನಿಯಮದಂತೆ ಪಿಎಚ್​ಸಿಗಳಿಲ್ಲ ಎಂಬುದನ್ನು ಬಹಿರಂಗಪಡಿಸಿದರು. ನಿಯಮಾವಳಿ ಪ್ರಕಾರ ಪಿಎಚ್​ಸಿ ಪ್ರಾರಂಭಿಸಿದರೆ ಈ ಸಂಖ್ಯೆ 2,500 ದಾಟುತ್ತದೆ. ಇದರೊಂದಿಗೆ ಸಮುದಾಯ ಆರೋಗ್ಯ ಕೇಂದ್ರಗಳ ಉನ್ನತೀಕರಣ, ಹೊಸ ತಾಲೂಕುಗಳಲ್ಲಿ ಆಸ್ಪತ್ರೆಗಳ ನಿರ್ಮಾಣ ಇತ್ಯಾದಿ ಕ್ರಮಗಳಾಗಬೇಕಿದೆ. ಅರೆ ವೈದ್ಯಕೀಯ, ಶುಶ್ರೂಷಕರು ಮತ್ತಿತರ ಸಿಬ್ಬಂದಿ ಹುದ್ದೆ ಭರ್ತಿ ಸಂಬಂಧ ಮುಖ್ಯಮಂತ್ರಿ ಜತೆಗೆ ರ್ಚಚಿಸಲಾಗುವುದು ಎಂದು ಸುಧಾಕರ್ ಹೇಳಿದರು.

    ವರ್ಷಾಂತ್ಯದೊಳಗೆ ನೇಮಕ: ಪ್ರಾಥಮಿಕ, ಸಮುದಾಯ, ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಖಾಲಿಯಿರುವ ವೈದ್ಯರ ಹುದ್ದೆಗಳ ಭರ್ತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. 1,250 ಎಂಬಿಬಿಎಸ್, 950 ವಿಶೇಷ ತಜ್ಞರು, 150 ದಂತ ವೈದ್ಯರು ಸೇರಿ 2,500 ವೈದ್ಯರನ್ನು ಡಿಸೆಂಬರ್ ಅಂತ್ಯದೊಳಗೆ ನೇಮಕ ಮಾಡಿಕೊಳ್ಳಲಾಗುವುದು. ಇದರೊಂದಿಗೆ ಖಾಸಗಿ, ಸರ್ಕಾರಿ ವೈದ್ಯಕೀಯ ಕಾಲೇಜ್​ಗಳಲ್ಲಿ ವ್ಯಾಸಂಗ ಪೂರ್ಣಗೊಳಿಸಿದ 1,500 ಹಿರಿಯ ಸ್ಥಾನಿಕ ವೈದ್ಯರ ಸೇವೆಯೂ ಲಭ್ಯವಾಗಿದೆ. ಒಟ್ಟಿನಲ್ಲಿ ಮುಂದಿನ 3 ವರ್ಷಗಳ ಒಳಗೆ ಕಾಯಕಲ್ಪ ಯೋಜನೆ ಜಾರಿಗೊಳಿಸಲಾಗುವುದು ಎಂದು ಡಾ.ಕೆ.ಸುಧಾಕರ್ ತಿಳಿಸಿದರು.

    ಸಭೆಯಲ್ಲಿ ಮಾಜಿ ಸಚಿವರಾದ ಡಾ.ಎ.ಬಿ.ಮಾಲಕರೆಡ್ಡಿ, ಶಿವಾನಂದ ಪಾಟೀಲ್, ವೈದ್ಯ ಶಾಸಕರಾದ ಶಿವರಾಜ ಪಾಟೀಲ, ಅಂಜಲಿ ನಿಂಬಾಳ್ಕರ್, ಭರತಶೆಟ್ಟಿ, ಯತೀಂದ್ರ ಸಿದ್ದರಾಮಯ್ಯ, ಶ್ರೀನಿವಾಸ ಮೂರ್ತಿ, ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಇನ್ನಿತರ ಅಧಿಕಾರಿಗಳು ಇದ್ದರು.

    ಸೋಮವಾರ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ಸಾಧ್ಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts