More

    65 ಆಯುಷ್ ವೈದ್ಯರು, ಸಿಬ್ಬಂದಿ ರಾಜೀನಾಮೆ

    ಶಿವಮೊಗ್ಗ: ವೇತನ ತಾರತಮ್ಯ ನಿವಾರಿಸುವ ಜತೆಗೆ ಸೇವಾ ಭದ್ರತೆ ಒದಗಿಸಬೇಕು. ತುರ್ತು ಸಂದರ್ಭದಲ್ಲಿ ಪ್ರಾಥಮಿಕ ಚಿಕಿತ್ಸೆಯಾಗಿ ಅಲೋಪತಿ ಪದ್ಧತಿ ಬಳಸಿಕೊಳ್ಳಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಆಯುಷ್ ಫೆಡರೇಷನ್ ಆಫ್ ಇಂಡಿಯಾದಲ್ಲಿ ನೋಂದಣಿಯಾದ ಆಯುಷ್ ವೈದ್ಯರು ರಾಜೀನಾಮೆ ಸಲ್ಲಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಸರ್ಕಾರಿ ಆಯುಷ್ ವೈದ್ಯರು ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ.

    2006ರಲ್ಲಿ ಹೊರ ಗುತ್ತಿಗೆ ನೌಕರರಾಗಿ ಜಿಲ್ಲೆಯಲ್ಲಿ 65 ಆಯುಷ್ ವೈದ್ಯರು ಹಾಗೂ ಸಿಬ್ಬಂದಿ ನೇಮಕವಾಗಿದೆ. ಇದುವರೆಗೂ ಅವರನ್ನು ಕಾಯಂಗೊಳಿಸಿಲ್ಲ. ಅಲೋಪತಿ ಗುತ್ತಿಗೆ ವೈದ್ಯರಿಗೆ ವೇತನ ಹೆಚ್ಚಳ ಮಾಡಿದಂತೆ ಆಯುಷ್ ಗುತ್ತಿಗೆ ವೈದ್ಯರಿಗೂ ವೇತನ ಹೆಚ್ಚಳ ಮಾಡಬೇಕೆಂದು ಆಯುಷ್ ಫೆಡರೇಷನ್​ನ ಜಿಲ್ಲಾ ಘಟಕದ ಗೌರವಾಧ್ಯಕ್ಷ ಡಾ. ಎಂ.ಬಿ.ಗುರುರಾಜ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

    ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಆಯುಷ್ ವೈದ್ಯರು ತುರ್ತು ಸಂದರ್ಭದಲ್ಲಿ ಅಲೋಪತಿ ವ್ಯವಸ್ಥೆ ಬಳಕೆ ಮಾಡಲು ಅನುಮತಿ ನೀಡಬೇಕು. ಮಹಾರಾಷ್ಟ್ರ, ಉತ್ತರ ಪ್ರದೇಶ, ಗುಜರಾತ್ ಮುಂತಾದ ರಾಜ್ಯಗಳಲ್ಲಿ ಇದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

    ಕಳೆದ 10 ವರ್ಷಗಳಿಂದ ವೇತನ ತಾರತಮ್ಯದ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುತ್ತಿದೆ. ನಮಗೆ ಕೇವಲ ಭರವಸೆಗಳು ಸಿಕ್ಕಿದ್ದು ಬಿಟ್ಟರೆ ವೇತನ ತಾರತಮ್ಯ ಸರಿಯಾಗಿಲ್ಲ. ಮೇ 12ರಂದು ಆಯುಷ್​ನ ಎಲ್ಲ ವಿಭಾಗದ ಗುತ್ತಿಗೆ ವೈದ್ಯರು ರಾಜೀನಾಮೆ ನೀಡಲು ತೀರ್ವನಿಸಿದ್ದೆವು. ಆದರೆ ಆರೋಗ್ಯ ಸಚಿವರು ನೀಡಿದ್ದ ಭರವಸೆ ಮೇರೆಗೆ ಅದನ್ನು ಕೈ ಬಿಟ್ಟಿದ್ದೆವು. ಈಗ ಅನಿವಾರ್ಯವಾಗಿ ರಾಜೀನಾಮೆ ನೀಡುತ್ತಿದ್ದೇವೆ ಎಂದರು.

    64 ಮಂದಿ ರಾಜೀನಾಮೆ: ಜಿಲ್ಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ 64 ಆಯುಷ್ ವೈದ್ಯರು ಹಾಗೂ ಸಿಬ್ಬಂದಿ ರಾಜೀನಾಮೆ ಪತ್ರವನ್ನು ಈಗಾಗಲೇ ಆಯುಷ್ ಫೆಡರೇಷನ್ ರಾಜ್ಯ ಪದಾಧಿಕಾರಿಗಳಿಗೆ ತಲುಪಿಸಿದ್ದೇವೆ. ಅಲ್ಲಿಂದ ರಾಜೀನಾಮೆ ಪತ್ರ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ ಎಂದು ಡಾ. ಎಂ.ಬಿ.ಗುರುರಾಜ್ ತಿಳಿಸಿದರು.

    ಕರೊನಾ ಸಮಯದಲ್ಲಿ ನಾವು ಸೇನಾನಿಗಳ ರೀತಿ ಕಾರ್ಯನಿರ್ವಹಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಜನರಿಗೆ ಸಮಸ್ಯೆಯಾಗುತ್ತದೆ ಎಂಬ ಅರಿವು ಇದ್ದರೂ ಅನಿವಾರ್ಯವಾಗಿ ಈ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

    ಆಯುಷ್ ಫೆಡರೇಷನ್ ಜಿಲ್ಲಾಧ್ಯಕ್ಷ ಡಾ. ಎಚ್.ಸಿ.ಶಶಿಕಾಂತ್, ಉಪಾಧ್ಯಕ್ಷ ಟಿ.ವಿ.ಶ್ರೀನಿವಾಸ ರೆಡ್ಡಿ, ಕಾರ್ಯದರ್ಶಿ ಡಾ. ಎಂ.ಎಸ್.ಸಂತೋಷ್ ಕುಮಾರ್, ಪ್ರಮುಖರಾದ ಡಾ. ಹೇಮಲತಾ, ಡಾ. ದತ್ತಮೂರ್ತಿ, ಡಾ. ಚಿತ್ರಲೇಖಾ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts