More

    ಫುಟ್‌ಬಾಲ್ ಆಟಗಾರ್ತಿಯರ ತಾಯ್ತನ ಹಕ್ಕು ರಕ್ಷಣೆಗೆ ಹೊಸ ನಿಯಮ

    ಜೆನೆವಾ: ಫುಟ್‌ಬಾಲ್ ಆಟಗಾರ್ತಿಯರ ತಾಯ್ತನದ ಹಕ್ಕಿನ ರಕ್ಷಣೆಗಾಗಿ ಜಾಗತಿಕ ಫುಟ್‌ಬಾಲ್ ಆಡಳಿತ ಸಂಸ್ಥೆ ಫಿಫಾ ಹೊಸ ನಿಯಮವನ್ನು ರೂಪಿಸಿದೆ. ಈ ಮೂಲಕ ವಿಶ್ವದೆಲ್ಲೆಡೆ ಫುಟ್‌ಬಾಲ್ ಆಡುವ ಮಹಿಳೆಯರಿಗೆ ಮಾತೃತ್ವವನ್ನು ಯಾವುದೇ ಅಡ್ಡಿ-ಆತಂಕಗಳಿಲ್ಲದೆ ಆನಂದಿಸುವ ಅವಕಾಶವನ್ನು ಕಲ್ಪಿಸಿದೆ.

    ಆಟಗಾರ್ತಿಯರಿಗೆ ತಾಯ್ತನದ ವೇಳೆ ಕನಿಷ್ಠ 14 ವಾರಗಳ ಕಾಲ ವೇತನ ಸಹಿತ ರಜೆಯನ್ನು ಫುಟ್‌ಬಾಲ್ ಕ್ಲಬ್‌ಗಳು ನೀಡಬೇಕೆಂದು ಫಿಫಾ ನಿಯಮ ರೂಪಿಸಿದೆ. ಇದರನ್ವಯ ಆಟಗಾರ್ತಿಯರು ಪೂರ್ಣ ವೇತನದ ಕನಿಷ್ಠ 3ನೇ 2ರಷ್ಟು ವೇತನ ಪಡೆಯಲಿದ್ದಾರೆ. ರಾಷ್ಟ್ರೀಯ ಮಹಿಳಾ ಫುಟ್‌ಬಾಲ್ ತಂಡಗಳೂ ಇಂಥದ್ದೇ ಔದಾರ್ಯ ತೋರಲು ಸೂಚಿಸಲಾಗಿದೆ.

    ತಾಯ್ತನದ ವೇಳೆ ಆಟಗಾರ್ತಿಗೆ ಕ್ಲಬ್‌ನಿಂದ ಅಗತ್ಯ ವೈದ್ಯಕೀಯ ಬೆಂಬಲವನ್ನೂ ಒದಗಿಸಬೇಕೆಂದು ಫಿಫಾ ತಿಳಿಸಿದೆ. ಆಟಗಾರ್ತಿ ಗರ್ಭಿಣಿಯಾದಾಗ ಆಕೆಯ ಒಪ್ಪಂದವನ್ನು ರದ್ದುಗೊಳಿಸುವ ಯಾವುದೇ ಕ್ಲಬ್ ಭಾರಿ ದಂಡ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಜತೆಗೆ ಆ ಆಟಗಾರ್ತಿಗೆ ಸೂಕ್ತ ಪರಿಹಾರ ಮೊತ್ತವನ್ನೂ ನೀಡಬೇಕಾಗುತ್ತದೆ. ಅಲ್ಲದೆ ಆ ಆಟಗಾರ್ತಿಯನ್ನು ಒಂದು ವರ್ಷ ಬೇರೆ ತಂಡಗಳಿಗೆ ವರ್ಗಾಯಿಸುವಂತಿಲ್ಲ ಎಂದು ಫಿಫಾ ತಿಳಿಸಿದೆ.

    ಆಟಗಾರ್ತಿಯರು ಮಗುವಿಗೆ ಜನ್ಮ ನೀಡುವುದಕ್ಕೆ ಮೊದಲಿನ ಮತ್ತು ಅನಂತರದ ಹಕ್ಕುಗಳನ್ನು ರಕ್ಷಿಸುವುದು ಈ ಹೊಸ ನಿಯಮದ ಉದ್ದೇಶವಾಗಿದೆ ಎಂದು ಫಿಫಾದ ಮುಖ್ಯ ಕಾನೂನು ಅಧಿಕಾರಿ ಎಮಿಲಿಯೊ ಗಾರ್ಸಿಯಾ ತಿಳಿಸಿದ್ದಾರೆ. ಫಿಫಾ ಕೌನ್ಸಿಲ್‌ನಿಂದ ಅಂಗೀಕಾರವಾದ ಬಳಿಕ ಮುಂದಿನ ವರ್ಷ ಜನವರಿ 1ರಿಂದ ಈ ನಿಯಮ ಅಧಿಕೃತವಾಗಿ ಜಾರಿಗೆ ಬರುವ ನಿರೀಕ್ಷೆ ಇದೆ.

    2019ರ ವಿಶ್ವಕಪ್ ಯಶಸ್ಸಿನ ಬಳಿಕ ಮಹಿಳಾ ಫುಟ್‌ಬಾಲ್‌ಗೆ ಹೆಚ್ಚಿನ ಮೊತ್ತದ ಹೂಡಿಕೆಗಳು ಬರುತ್ತಿದ್ದು, ಇದೇ ವೇಳೆ ವೃತ್ತಿಪರ ಆಟಗಾರ್ತಿಯರ ಕುಟುಂಬದ ಹಕ್ಕು ಗೌರವಿಸುವ ದೃಷ್ಟಿಯಿಂದ ಇದು ಮಹತ್ವದ ಹೆಜ್ಜೆಯಾಗಿದೆ. ಅಮೆರಿಕದ ವಿಶ್ವಕಪ್ ವಿಜೇತೆ ಫಾರ್ವರ್ಡ್ ಆಟಗಾರ್ತಿ ಅಲೆಕ್ಸ್ ಮಾರ್ಗನ್ ಮೊದಲ ಮಗುವಿಗೆ ಜನ್ಮ ನೀಡಿದ 4 ತಿಂಗಳ ಬಳಿಕ ಕಳೆದ ಸೆಪ್ಟೆಂಬರ್‌ನಲ್ಲಿ ಟೋಟೆನ್‌ಹ್ಯಾಂ ಕ್ಲಬ್ ಜತೆ ಒಪ್ಪಂದಕ್ಕೆ ಸಹಿ ಹಾಕಿದ್ದರು.

    ಕಾಮನ್ವೆಲ್ತ್ ಗೇಮ್ಸ್​ಗೆ ಮಹಿಳಾ ಕ್ರಿಕೆಟ್ ಅರ್ಹತಾ ಪ್ರಕ್ರಿಯೆ ಅನಾವರಣಗೊಳಿಸಿದ ಐಸಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts