More

    ಕಚ್ಚತೀವು ದ್ವೀಪ ಕುರಿತ ಹೊಸ ಮಾಹಿತಿ ಡಿಎಂಕೆ ಪಕ್ಷದ ದ್ವಂದ್ವ ನೀತಿಯ ಮುಖವಾಡ ಕಳಚಿದೆ: ಪ್ರಧಾನಿ ಮೋದಿ ವಾಗ್ದಾಳಿ

    ನವದೆಹಲಿ: ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ಬಿಟ್ಟುಕೊಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಕಾಂಗ್ರೆಸ್​ ಬೆನ್ನಲ್ಲೇ ಡಿಎಂಕೆ ಪಕ್ಷವನ್ನು ಸಹ ತರಾಟೆಗೆ ತೆಗೆದುಕೊಂಡಿದ್ದಾರೆ. ಮಾತನಾಡುವುದನ್ನು ಬಿಟ್ಟು ಡಿಎಂಕೆ ತಮಿಳುನಾಡಿನ ಹಿತಾಸಕ್ತಿ ರಕ್ಷಣೆಗೆ ಏನನ್ನೂ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.

    ಕಚ್ಚತೀವು ದ್ವೀಪಕ್ಕೆ ಸಂಬಂಧಿಸಿದಂತೆ ಹೊಸ ಮಾಹಿತಿಗಳು ಹೊರಬರುತ್ತಿದ್ದು, ಡಿಎಂಕೆ ಪಕ್ಷದ ದ್ವಂದ್ವ ನೀತಿಯನ್ನು ಸಂಪೂರ್ಣವಾಗಿ ಬಿಚ್ಚಿಟ್ಟಿದೆ ಎಂದು ಎಕ್ಸ್​ ಖಾತೆಯ ಮೂಲಕ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

    ಕಾಂಗ್ರೆಸ್ ಮತ್ತು ಡಿಎಂಕೆ ಕುಟುಂಬದ ಘಟಕಗಳಾಗಿವೆ. ಇವರು ತಮ್ಮ ಸ್ವಂತ ಪುತ್ರರು ಮತ್ತು ಹೆಣ್ಣುಮಕ್ಕಳು ಉನ್ನತ ಸ್ಥಾನಕ್ಕೇರಲು ಮಾತ್ರ ಕಾಳಜಿ ವಹಿಸುತ್ತಾರೆ ಹೊರತು ಬೇರೆಯವರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಕಚ್ಚತೀವು ಮೇಲಿನ ಇವರ ನಿರ್ದಾಕ್ಷಿಣ್ಯ ಕ್ರಮವು ನಮ್ಮ ಬಡ ಮೀನುಗಾರರು ಮತ್ತು ವಿಶೇಷವಾಗಿ ಮೀನುಗಾರ ಮಹಿಳೆಯರ ಹಿತಾಸಕ್ತಿಗಳಿಗೆ ಧಕ್ಕೆ ತಂದಿದೆ ಎಂದು ಪ್ರಧಾನಿ ಮೋದಿ ಟೀಕಾ ಪ್ರಹಾರ ನಡೆಸಿದ್ದಾರೆ.

    1974ರಲ್ಲಿ ಗಾಂಧಿ ಸರ್ಕಾರ ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ನೀಡಿತ್ತು ಎಂದು ಕಳೆದ ವರ್ಷ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಹೇಳಿದ್ದರು. ಇವರು ರಾಜಕೀಯಕ್ಕಾಗಿ ಭಾರತ ಮಾತೆಯನ್ನು ಮೂರು ಭಾಗ ಮಾಡಿದ್ದಾರೆ ಎಂದು ಪ್ರಧಾನಿ ಮೋದಿ ಲೋಕಸಭೆಯಲ್ಲಿ ಟೀಕಿಸಿದ್ದರು. ಕಚ್ಚತೀವು ದ್ವೀಪವು ತಮಿಳುನಾಡು ಮತ್ತು ಶ್ರೀಲಂಕಾ ನಡುವಿನ ದ್ವೀಪವಾಗಿದೆ. ಅದನ್ನು ಯಾರೋ ಬೇರೆ ದೇಶಕ್ಕೆ ನೀಡಿದ್ದಾರೆ. ಇದು ಇಂದಿರಾಗಾಂಧಿ ನೇತೃತ್ವದಲ್ಲಿ ನಡೆದಿದೆ ಎಂದು ಹೇಳಿದ್ದರು.

    1976ರಲ್ಲಿ ಸೇತುಸಮುದ್ರದ ಕಡಲತೀರದಲ್ಲಿ ಕಡಲ ಗಡಿರೇಖೆಯನ್ನು ಗುರುತಿಸುವ ಪತ್ರಗಳ ವಿನಿಮಯದ ಮೊದಲು, ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರ ನೇತೃತ್ವದಲ್ಲಿ ಭಾರತ ಸರ್ಕಾರವು 1974 ರಲ್ಲಿ ಸಿರಿಮಾವೋ ಬಂಡಾರನಾಯಕೆ ಆಡಳಿತದಲ್ಲಿ ಶ್ರೀಲಂಕಾಕ್ಕೆ ದ್ವೀಪವನ್ನು ಹಸ್ತಾಂತರಿಸಿತು. 1974ರಲ್ಲಿ ಇಂದಿರಾಗಾಂಧಿ ಸರ್ಕಾರವು ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಹಸ್ತಾಂತರಿಸುವ ಕಾರ್ಯತಂತ್ರದ ನಿರ್ಧಾರವನ್ನು ಕೈಗೊಂಡಿತ್ತು. ಇತ್ತೀಚೆಗೆ ತಮಿಳುನಾಡಿನಲ್ಲಿ ಈ ವಿಷಯ ವಿವಾದಕ್ಕೀಡಾಗಿದ್ದು ಮತ್ತೆ ಮುನ್ನೆಲೆಗೆ ಬಂದಿದೆ.

    ಡಿಎಂಕೆಯಿಂದಲೂ ವಿರೋಧ
    ಆಗಿನ ಸರ್ಕಾರದ ಏಕಪಕ್ಷೀಯ ನಿರ್ಧಾರಕ್ಕೆ ಡಿಎಂಕೆ ಪಕ್ಷವು ಸಹ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಡಿಎಂಕೆ ಸಂಸದ ಎರಾ ಸೆಝಿಯಾನ್ ಮತ್ತು ಇತರೆ ನಾಯಕರು ಆಕ್ಷೇಪಣೆಗಳನ್ನು ಎತ್ತಿದ್ದರ ಹೊರತಾಗಿಯೂ, ತಮಿಳುನಾಡಿನ ಆಗಿನ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ವಿದೇಶಿ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಒಪ್ಪಂದಕ್ಕೆ ಸಾಮಾನ್ಯ ಒಪ್ಪಿಗೆ ನೀಡಿದ್ದರು ಎಂದು ತಿಳಿದುಬಂದಿದೆ. ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ಬೆಂಬಲದೊಂದಿಗೆ ಕರುಣಾನಿಧಿ ಒಪ್ಪಿಗೆ ನೀಡಿದ್ದರು ಎಂದು ಹೇಳಲಾಗಿದೆ.

    ಆರ್​ಟಿಐ ಅರ್ಜಿ
    ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ಆರ್‌ಟಿಐ ಅರ್ಜಿಯ ಮೂಲಕ ಬಹಿರಂಗಪಡಿಸಿರುವ ದಾಖಲೆಗಳಲ್ಲಿ ಕರುಣಾನಿಧಿ ಮತ್ತು ವಿದೇಶಿ ಅಧಿಕಾರಿಗಳ ನಡುವೆ ನಡೆದ ಚರ್ಚೆಗಳ ಕುರಿತು ಹೆಚ್ಚಿನ ಒಳನೋಟಗಳನ್ನು ಒದಗಿಸಿವೆ. ಕಚ್ಚತೀವು ಒಪ್ಪಂದದ ನಿಯಮಗಳ ಬಗ್ಗೆ ಕರುಣಾನಿಧಿ ಅವರ ಅರಿವು ಮತ್ತು ಒಪ್ಪಿಗೆಯನ್ನು ಈ ದಾಖಲೆಗಳು ಸೂಚಿಸುತ್ತವೆ. ಆದರೆ, ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಕರುಣಾನಿಧಿ ಭಾಗಿಯಾಗಿರುವ ಬಗ್ಗೆ ಅರಿವಿಲ್ಲದ ಡಿಎಂಕೆ ಸಂಸತ್ತಿನಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಲೇ ಇತ್ತು.

    ಕಾಂಗ್ರೆಸ್​ ವಿರುದ್ಧ ಮೋದಿ ವಾಗ್ದಾಳಿ
    ಕಚ್ಚತೀವುವನ್ನು ಕಾಂಗ್ರೆಸ್​ ಹೇಗೆ ಸುಲಭವಾಗಿ ಶ್ರೀಲಂಕಾಗೆ ಬಿಟ್ಟುಕೊಟ್ಟಿತು ಎಂಬ ಹೊಸ ಸಂಗತಿಗಳನ್ನು ಆರ್​ಟಿಐ ವರದಿ ಬಹಿರಂಗಪಡಿಸುತ್ತಿದೆ. ಇದು ಪ್ರತಿಯೊಬ್ಬ ಭಾರತೀಯನಿಗೆ ಕೋಪ ತರಿಸುತ್ತದೆ. ಜನರ ಮನಸ್ಸಿನಲ್ಲಿ ಮತ್ತೊಮ್ಮೆ ದೃಢಪಟ್ಟಿದೆ. ನಾವು ಕಾಂಗ್ರೆಸ್ ಅನ್ನು ಎಂದಿಗೂ ನಂಬಲು ಸಾಧ್ಯವಿಲ್ಲ. ಭಾರತದ ಏಕತೆ, ಸಮಗ್ರತೆ ಮತ್ತು ಹಿತಾಸಕ್ತಿಗಳನ್ನು ದುರ್ಬಲಗೊಳಿಸುವ ಕೆಲಸವನ್ನು ಕಾಂಗ್ರೆಸ್​ 75 ವರ್ಷಗಳಿಂದ ಮಾಡುತ್ತಾ ಬರುತ್ತಿದೆ ಎಂದು ಎಕ್ಸ್​ನಲ್ಲಿ ಪ್ರಧಾನಿ ಮೋದಿ ಮೊನ್ನೆಯಷ್ಟೇ ವಾಗ್ದಾಳಿ ನಡೆಸಿದ್ದರು. (ಏಜೆನ್ಸೀಸ್​)

    ಶ್ರೀಲಂಕಾಕ್ಕೆ ಕಚ್ಚತೀವು ದ್ವೀಪ ಹಸ್ತಾಂತರ: ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts